ಮೈಸೂರು: ಬಿಲ್ಕಿಸ್ ಬಾನು ಮೇಲೆ 2002ರಲ್ಲಿ ಅತ್ಯಾಚಾರ ನಡೆಸಿ, ಅವರ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ್ದ 11 ಅಪರಾಧಿಗಳನ್ನು ಸನ್ನಡತೆಯ ಹೆಸರಿನಲ್ಲಿ ಬಿಡುಗಡೆಗೊಳಿಸಿದ ಗುಜರಾತ್ ಸರ್ಕಾರದ ಕ್ರಮವನ್ನು ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ನಡೆಸಲಾಯಿತು.
ಬುಧವಾರ ಗಾಂಧಿ ವೃತ್ತದ ಬಳಿ ಜಮಾವಣೆಗೊಂಡ ಸಮಿತಿ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಗುಜರಾತ್ ಸರ್ಕಾರದ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾ ಸಭೆಯಲ್ಲಿ ಜನವಾದಿ ಮಹಿಳಾ ಸಂಘದ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲ ಮಾತನಾಡಿ, ಕೊಲೆಗಾರರು ಮತ್ತು ಅತ್ಯಾಚಾರಿಗಳ ಶಿಕ್ಷೆ ಮೊಟಕುಗೊಳಿಸುವ ಮೂಲಕ ಗುಜರಾತ್ ಮತ್ತು ಕೇಂದ್ರ ಸರ್ಕಾರಗಳು ಸಂವಿಧಾನದ ಆಶಯಗಳಿಗೆ ಚ್ಯುತಿ ತಂದಿವೆ. ಆದ್ದರಿಂದ ತಕ್ಷಣವೇ ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿದರು.
ಸನ್ನಡತೆಯ ಆಧಾರದಲ್ಲಿ ಕೈದಿಗಳನ್ನು ಬಿಡುಗಡೆ ಮಾಡುವ ನಿಯಮ ಅತ್ಯಾಚಾರಿಗಳಿಗೆ ಅನ್ವಯಿಸುವುದಿಲ್ಲ. ದಿಲ್ಲಿಯ ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಗಿದೆ. ಹೈದರಾಬಾದ್ನಲ್ಲಿ ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಲಾಯಿತು. ಆದರೆ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ನಡೆಸಿ ಅವರ ಕುಟುಂಬದವರನ್ನು ಕೊಲೆ ಮಾಡಿದವರನ್ನು ಸನ್ನಡತೆಯ ಹೆಸರಿನಲ್ಲಿ ಬಿಡುಗಡೆ ಮಾಡಿರುವುದು ಸರಿಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ರಾಂತ ಕುಲಪತಿ ಡಾ.ಸಬೀಹಾ ಭೂಮಿಗೌಡ ಮಾತನಾಡಿ, ಅಪರಾಧಿಗಳನ್ನು ಸನ್ನಡತೆಯ ಹೆಸರಿನಲ್ಲಿ ಬಿಡುಗಡೆ ಮಾಡಿರುವುದು ದೇಶದ ನಾಗರಿಕರು ತಲೆತಗ್ಗಿಸುವಂತಹ ವಿಚಾರ. ನ್ಯಾಯದಾನಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಈ ಪ್ರಕರಣವನ್ನು ಅಪರೂಪದ ಪ್ರಕರಣವೆಂದು ಪರಿಗಣಿಸಿ ಶಿಕ್ಷಾ ವಿನಾಯಿತಿ ಪಡೆದು ಬಿಡುಗಡೆಯಾಗಿರುವ ೧೧ ಅಪರಾಧಿಗಳನ್ನು ನ್ಯಾಯಾಲಯದ ಆದೇಶದಂತೆ ಜೀವಿತಾವಧಿಯ ಸೆರೆವಾಸದ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಅತ್ಯಾಚಾರಿಗಳು, ಕೊಲೆಗಡುಕರನ್ನು ಸನ್ನಡತೆಯ ಹೆಸರಿನಲ್ಲಿ ಬಿಡುಗಡೆ ಮಾಡುವುದೇ ಒಂದು ದೌರ್ಜನ್ಯ. ಇದು ನ್ಯಾಯ ವ್ಯವಸ್ಥೆಯ ಅಣಕವಾಗಿದೆ. ಹಾಗಾಗಿ ಅಪರಾಧಿಗಳನ್ನು ಮತ್ತೆ ಜೈಲಿಗೆ ಹಾಕಬೇಕು. ಈ ಕೊಲೆಗಡುಕರನ್ನು ಸ್ವಾಗತಿಸಿ, ಸಿಹಿ ಹಂಚಿ, ಹಾರ ಹಾಕಿ ಮೆರವಣಿಗೆ ಮಾಡಿರುವುದು ಸ್ವತಂತ್ರ ಭಾರತಕ್ಕೆ ಮಾಡಿರುವ ಅವಮಾನವಾಗಿದೆ ಎಂದರು.
ಪ್ರತಿಭಟನೆಯಲ್ಲಿ, ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್, ರೈತ ಮುಖಂಡ ಕೆ.ಬಸವರಾಜ್, ಎನ್.ವಿಜಯ್ಕುಮಾರ್, ಸಿ.ಪಿ.ಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಎಸ್.ಯು.ಸಿ.ಐನ ಸೀಮಾ, ದಲಿತ ಸಂಘರ್ಷ ಸಮಿತಿಯ ಕಲ್ಲಳ್ಲಿ ಕುಮಾರ್, ರಂಗಕರ್ಮಿ ಸಿ.ಬಸವಲಿಂಗಯ್ಯ, ರತಿರಾವ್, ಅಭಿಲಾಷ, ಬಾಬುರಾಜ್, ಸಮತಿ, ಹೊಸೂರು ಕುಮಾರ್, ಹೊಸಕೋಟೆ ಬಸವರಾಜ್, ಪಂಡಿತಾರಾಧ್ಯ, ಧನಂಜಯ್ಯ, ಸಂಶೋಧಕರ ಸಂಘದ ಮರಿದೇವಯ್ಯ, ಲ.ಜಗನ್ನಾಥ್, ಜಯರಾಂ, ಪದ್ಮಾವತಿ, ಕಲಿಂ, ಜಲೀಲ್ ಖಾನ್, ಎಸ್ಎಫ್ಐನ ವಿಜಯ್ ಕುಮಾರ್, ಯತೀಶ್,ವೀರಭದ್ರ ಮುಂತಾದವರು ಇದ್ದರು.