ದಲಿತ ಸಮಾಜ ಪುರುಷ ಪ್ರಾಬಲ್ಯದಿಂದ ಕೂಡಿದೆ-ಇದರ ಅರಿವು ಅಂಬೇಡ್ಕರ್‌ ಅವರಿಗಿತ್ತು: ರಮಾಬಾಯಿ ಆನಂದ್‌ ತೇಲ್ತುಂಬ್ಡೆ

ಬೆಂಗಳೂರು: ʼನಮ್ಮ ದಲಿತ ಸಮಾಜವೂ ಪುರುಷ ಪ್ರಾಬಲ್ಯದಿಂದ ಕೂಡಿದೆ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಇದನ್ನು ಅರಿತಿದ್ದರಿಂದಲೇ ದಲಿತ ಮಹಿಳೆಯರಲ್ಲಿ ಬದಲಾವಣೆ ತರುವ ಪ್ರಯತ್ನ ನಡೆಸಿದ್ದರುʼ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮೊಮ್ಮೊಗಳಾದ ರಮಾಬಾಯಿ ಆನಂದ್‌ ತೇಲ್ತುಂಬ್ಡೆ ಅವರು ಹೇಳಿದರು.

ಅವರು ಇಂದು ನಗರದ ಗಾಂಧಿ ಭವನದಲ್ಲಿ “ನಾವೂ ಇತಿಹಾಸ ಕಟ್ಟಿದೆವು” ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ʼ1989ರಲ್ಲಿ ಮರಾಠಿ ಭಾಷೆಯಲ್ಲಿ ಪ್ರಕಟವಾಗಿದ್ದ ಪುಸ್ತಕವನ್ನು 2022ರಲ್ಲಿ ದು.ಸರಸ್ವತಿಯವರು ಅನುವಾದಿಸುವ ಮೂಲಕ ಈ ಕೃತಿ  ಕನ್ನಡಕ್ಕೆ ಬರುತ್ತಿರುವುದು ಸಂತೋಷದ ಸಂಗತಿ. ಬಾಬಾಸಾಹೇಬರು ದಮನಿತ ವರ್ಗಗಳ ಚಳವಳಿಯಲ್ಲಿ ಮಹಿಳಾ ಸುಧಾರಣೆಗೆ ಬಹಳ ಒತ್ತು ನೀಡಿದ್ದರು. ಈ ಪುಸ್ತಕ ಮಹಿಳೆಯರನ್ನು ಚಳವಳಿಯ ಭಾಗವಾಗಿ ಮಾಡಲು ಬಾಬಾಸಾಹೇಬರು ಪಟ್ಟ ಪಾಡಿನ ಬಗ್ಗೆ ತಿಳಿಸುತ್ತದೆʼ ಎಂದರು.

ಅದೇ ರೀತಿ ಈ ಪುಸ್ತಕದಲ್ಲಿ ಬಾಬಾಸಾಹೇಬ ಅಂಬೇಡ್ಕರ್‌ ಅವರು ಮುನ್ನಡೆಸಿದ ಚಳವಳಿಯಲ್ಲಿ ಭಾಗವಹಿಸಿದ್ದ ಮಹಿಳೆಯರ ಅನುಭವ ಕಥನಗಳನ್ನೂ ಒಳಗೊಂಡಿದೆ. ಶೋಷಿತ ಸಮುದಾಯಗಳ ಮಹಿಳೆಯರು ಚಳವಳಿಯಲ್ಲಿ ಭಾಗವಹಿಸುವಾಗ ಅವರ ಉಡುಗೆ ತೊಡುಗೆಗಳು ಜಾತಿ ಸೂಚಕವಾಗದ ರೀತಿಯಲ್ಲಿ ಅವರನ್ನು ಮಾನಸಿಕವಾಗಿ ಸ್ವಾಭಿಮಾನಿಗಳಾಗಿ ಮಾಡುವಲ್ಲಿ ಬಾಬಾಸಾಹೇಬರು ಪ್ರೇರೇಪಣೆ ನೀಡುತ್ತಿದ್ದರುʼ ಎಂದರು.

ʻಮಹಿಳೆಯರು ಶಿಕ್ಷಣ ಹೊಂದಬೇಕು ಎಂದು ಪ್ರಯತ್ನಿಸಿದ್ದ ಅಂಬೇಡ್ಕರ್‌ ಅವರ ದಾರಿ ನಮ್ಮದಾಗಲಿ, ಇಂತಹ ಪುಸ್ತಕ ಹೆಚ್ಚಿನ ಅರಿವು ಮೂಡಿಸಲಿʼ ಎಂದು ರಮಾಬಾಯಿ ಆನಂದ್‌ ತೇಲ್ತುಂಬ್ಡೆ ಕರೆ ನೀಡಿದರು.

ಪುಸ್ತಕದ ಕುರಿತು ಮಾತನಾಡಿದ ವಿಶ್ರಾಂತ ಉಪಕುಲಪತಿ ಡಾ.ಸಬಿಹಾ ಭೂಮಿಗೌಡ ʼಈ ಪುಸ್ತಕವು 1920-1956ರ ನಡುವಿನ ಅವಧಿಯ ಘಟನಾವಳಿಗಳನ್ನು ಒಳಗೊಂಡಿದ್ದು, ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಕುರಿತು ಬಂದಿರುವ ಎಲ್ಲ ಪುಸ್ತಕಗಳ ಸಾಲಿನಲ್ಲಿ ಇದಕ್ಕೆ ಒಂದು ವಿಶೇಷ ಸ್ಥಾನವಿದೆʼ ಎಂದರು.

ʼಈ ಕೃತಿಯು ಅಕಡೆಮಿಕ್‌ ಶಿಸ್ತಿನಿಂದ ಬರೆದಿದ್ದ ಕೃತಿಯಾಗಿರದೇ ಸ್ತ್ರೀವಾದಿಗಳು ಅಂಬೇಡ್ಕರ್‌ ಅವರ ಚಳವಳಿಯಲ್ಲಿ ಮಹಿಳೆಯರ ಪಾತ್ರದ ಕುರಿತು ನಡೆಸಿದ ಅಧ್ಯಯನದ ಪರಿಣಾಮವಾಗಿ ಬಂದಂತಹದು. ಕೃತಿಯ ಲೇಖಕಿಯರಾದ ಊರ್ಮಿಳಾ ಪವಾರ್‌ ಮತ್ತು ಮೀನಾಕ್ಷಿ ಮೂನ್‌ ಹಲವು ವರ್ಷಗಳ ಕಾಲ ನಡೆಸಿದ ಶೋಧನೆಯ ಫಲʼ ಎಂದರು.

ಕೃತಿ ಕುರಿತು ಕವಿ, ಚಿಂತಕ ಪೀರ್‌ ಭಾಷಾ ಮಾತನಾಡಿ, ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಲ್ಲಿದ್ದ ಸೈದ್ದಾಂತಿಕ ಸ್ಪಷ್ಟತೆಯನ್ನು ನೋಡಿದಾಗ ಅವರು ಗಾಂಧೀಜಿಯವರಿಗಿಂತಲೂ ಎಷ್ಟೋ ಪಾಲು ದೊಡ್ಡವರಾಗಿ ಕಾಣಿಸುತ್ತಾರೆʼ ಎಂದರು.

ಕೃತಿ ಅನುವಾದಕಿ ಡಾ. ದು.ಸರಸ್ವತಿ ಮಾತನಾಡಿ, ʼಕೃತಿಯಲ್ಲಿರುವ ವಿಷಯಗಳನ್ನು ಜನರಿಗೆ ತಿಳಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ, ಮಹಿಳೆಯರಿಗೆ ಒಮ್ಮೆ ಯೋಚಿಸುವ ಶಕ್ತಿಯನ್ನು ನೀಡಿದರೆ ಯಾವುದೇ ಗುಂಪಿರಲಿ ಅಲ್ಲಿ ಅವರು ಭಿನ್ನವಾಗಿಯೇ ಯೋಚಿಸಿ ಇಡೀ ಚಳವಳಿಗೆ ಹೊಸ ಗತಿಯನ್ನು ಒದಗಿಸುತ್ತಾರೆ, 1932ರಲ್ಲಿ ಬಾಬಾಸಾಹೇಬರು ಜನತಾ ಪತ್ರಿಕೆ ಆರಂಭಿಸಿದಾಗ ಅದರಲ್ಲಿ  ಹೆಣ್ಣುಮಕ್ಕಳಿಗೆ ಉಸ್ತುವಾರಿ ನೀಡಿದ್ದರುʼ ಎಂದು ತಿಳಿಸಿದರು.

ಹಿರಿಯ ದಲಿತ ಮುಖಂಡರಾದ ಎನ್‌ ವೆಂಕಟೇಶ್‌, ಬಾಬು ಜಗಜೀವನರಾಮ್‌ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವೆಂಕಮ್ಮ, ಪುಸ್ತಕದ ಪ್ರಕಾಶಕರಾದ ಡಾ.ಎಚ್.‌ ಎಸ್‌ ಅನುಪಮಾ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯುವಸ್ಪಂದನೆಯ ಭಾಗವಾಗಿ, ಡಾ.ನೇತ್ರಾವತಿ, ಅಶ್ವಿನಿ ಬೋಧ್‌, ಭರತ್‌, ಮಲ್ಲಮ್ಮ ಕಂಬಾರ್‌, ರೂಮಿ ಹರೀಶ್‌, ಕೆಸ್ತಾರ, ವಿ ಎಲ್‌ ನರಸಿಂಹಮೂರ್ತಿ ಮಾತನಾಡಿದರು. ಡಾ.ಹುಲಿಕುಂಟೆ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

Donate Janashakthi Media

Leave a Reply

Your email address will not be published. Required fields are marked *