ಬೆಂಗಳೂರು : 40 ವರ್ಷಗಳ ನಂತರ ನನ್ನ ಕಾದಂಬರಿಯ ಪಾತ್ರವೊಂದು ಕಟ್ಟಿದ್ದ ʼನಗರಿಗೀತೆʼ ಗೆ ಈಗ ಆಕ್ಷೇಪ ಕೇಳಿ ಬಂದಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ಖ್ಯಾತ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಹೇಳಿದ್ದಾರೆ.
ಮಂಗಳವಾರ ಈ ಕುರಿತು ಪ್ರತಿಕ್ರಿಯಿಸಿದ ಅವರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದು ಆಕಸ್ಮಿಕವೊ, ಹುನ್ನಾರವೊ ನನಗೆ ತಿಳಿಯುತ್ತಿಲ್ಲ, ಕೆಲವು ತಿಂಗಳ ಹಿಂದೆ ನನ್ನ ಸಮಗ್ರ ಸಾಹಿತ್ಯದ ಸಂಪುಟಗಳು ಹೊರ ಬಂದಿದ್ದು, ಪರಿಷ್ಕರಿಸುವ ವೇಳೆ ರಾಷ್ಟ್ರಗೀತೆಯ ಲಯದಲ್ಲಿದ್ದ ಗೀತೆಗಳನ್ನು ಬಿಟ್ಟಿದ್ದೇನೆ. ಹೀಗಿರುವಾಗ 40 ವರ್ಷಗಳ ಹಿಂದಿನ ಪಠ್ಯವನ್ನು ಇಟ್ಟುಕೊಂಡು ಅಪಾರ್ಥ ಮಾಡಿ ವಿವಾದ ಮಾಡುವುದೇ ಅಪ್ರಸ್ತುತ ಎಂದು ಸಾಹಿತಿ ಬರಗೂರು ಅವರು ಪ್ರತಿಕ್ರಿಯೆಯನ್ನು ಹೊರಹಾಕಿದ್ದಾರೆ.
ಬರಗೂರು ಅವರು ತಮ್ಮ ಕಾದಂಬರಿ ಭರತ ನಗರಿ ಯಲ್ಲಿ ರಾಷ್ಟ್ರಗೀತೆಯನ್ನು ಅವಹೇಳನ ಮಾಡಿದ್ದು, ಭಾರತವನ್ನು ಜಡ ಭರತ ಎಂದು ಗಂಗಾನದಿಯನ್ನು ಹಾದರ ಎಂದು ಕರೆದಿದ್ದು, ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬಿಜೆಪಿಯ ಕಾನೂನು ಪ್ರಕೋಷ್ಠ ದೂರು ನೀಡಿದ ಬೆನ್ನಲ್ಲೆ ಬರಗೂರು ಈ ಸ್ಪಷ್ಟನೆಯನ್ನು ನೀಡಿದ್ದಾರೆ.
ಸ್ಪಷ್ಟನೆಯಲ್ಲಿ ಏನಿದೆ ?
ಈ ಕಾದಂಬರಿಯನ್ನು ನಾನು ಸುಮಅರು 40 ವರ್ಚಗಳ ಹಿಂದೆ ಬರೆದಿದ್ದೆ.ಆಗ ಈ ದೇಶವನ್ನು ಕಾಂಗ್ರೆಸ್ ಪಕ್ಷ ಆಳುತ್ತಿತ್ತು,ಹದಗೆಟ್ಟ ರಾಜಕೀಯ ವ್ಯವಸ್ಥೆಯನ್ನು ವ್ಯಂಗ್ಯ, ವಿಡಂಬನೆಗಳಿಂದ ಚಿತ್ರಿಸಿದ ಈ ರೂಪಾತ್ಮಕ ಕಾದಂಬರಿಯಲ್ಲಿ ಒಬ್ಬ ಕ್ರಾಂತಿಕಾರಿ ಯುವಕನ ಪಾತ್ರವಿದೆ. ಆತನನ್ನು ಜೈಲಿಗೆ ಹಾಕಿ ಆಳುವ ವರ್ಗವು ತಮ್ಮ ಆಡಳಿತವನ್ನು ಹೊಗಳುವ ಗೀತೆಯನ್ನು ಹಾಡಲು ಒತ್ತಾಯಿಸಿದಾಗ ಚಲನಶೀಲತೆಯನ್ನು ಕಳೆದುಕೊಂಡ ಭಾರತದ ಆಡಳಿತವನ್ನು ವಿಡಂಬಿಸಲು ʼಜನಗಣಮನ” ದ ಲಯವನ್ನು ಬಳಸಿಕೊಳ್ಳುತ್ತಾನೆ. ಇದು ಆ ಪಾತ್ರದ ಸ್ವಭಾವ ಮತ್ತು ನಡವಳಿಕೆಯಾಗಿದೆ.ಇಷ್ಟಕ್ಕೂ ಹೀಗೆ ಗೀತೆ ಹಾಡಿದ ಆ ಯುವಕ ಗುಂಡೇಟಿಗೆ ಸಾಯುತ್ತಾನೆ. ಆಡಳಿತದ ಶಿಕ್ಷೆಗೆ ಗುರಿಯಾಗುತ್ತಾನೆ.
ಕೃತಿಕಾರನಾದ ನಾನು ಕಾದಂಬರಿಯ ಎಲ್ಲಾಪಾತ್ರಗಳನ್ನು ಆಯಾ ಪಾತ್ರಗಳ ಗುಣಧರ್ಮ, ಸ್ವಭಾವಕ್ಕೆ ತಕ್ಕಂತೆ ಚಿತ್ರಿಸಬೇಕಾಗಿದೆ. ಆ ಪಾತ್ರಗಳ ಮಾತು ಮತ್ತು ನಡವಳಿಕೆ ಕೃತಿಕಾರರದಾಗುವುದಿಲ್ಲ. ಅದು ಆ ಪಾತ್ರದ ಅಭಿಪ್ರಾಯವೇ ಹೊರತು ನನ್ನದಲ್ಲಿ ಎಂದು ಹೇಳಿದ್ದಾರೆ.