ಪೆಗಸಸ್ ಅಸಹಕಾರ, ಎನ್‌ಡಿಟಿವಿ ಖರೀದಿ, ಮತ್ತು ಬುಲ್‌ಬುಲ್‍ ಕತೆ

ವೇದರಾಜ ಎನ್.ಕೆ.

ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಎರಡು ಮುಖ್ಯ ಮಧ್ಯಪ್ರವೇಶಗಳು ಮತ್ತು ಜನಗಳು ಇನ್ನೂ “ಗೋದೀ ಮೀಡಿಯಾ”ದ ಪಟ್ಟಿಗೆ ಸೇರಿಸಿರದ ಏಕೈಕ ಮುಖ್ಯಧಾರೆಯ ಟಿವಿ ವಾಹಿನಿಯನ್ನೂ  ಖರೀದಿಸುವ ಪ್ರಯತ್ನ ಈ ವಾರ ದೇಶದ ವ್ಯಂಗ್ಯಚಿತ್ರಕಾರರ ಗಮನ ಸೆಳೆದ ಮುಖ್ಯ ವಿಷಯಗಳು. ಜತೆಗೇ ಕರ್ನಾಟಕದಲ್ಲಿ  ‘ಸಾವರ್ಕರ್ ರಥಯಾತ್ರೆ’ಯ ಸಂದರ್ಭದಲ್ಲಿ ಬಯಲಿಗೆ ಬರುತ್ತಿರುವ ಕಥನಗಳು ಉಕ್ಕಿಸುತ್ತಿರುವ ನಗೆಯತ್ತ ಒಂದು ನೋಟ:

ದೇಶದ ಮುಖ್ಯ ನ್ಯಾಯಾಧೀಶರು ನಿವೃತ್ತರಾಗುವ ಮೊದಲು ಸುಪ್ರಿಂ ಕೋರ್ಟಿನ ಮುಂದಿರುವ ಹಲವಾರು ಮುಖ್ಯ ಪ್ರಕರಣಗಳಲ್ಲಿ ಮೂರನ್ನು ಎತ್ತಿಕೊಂಡರು. ಅವುಗಳಲ್ಲಿ ಮೊದಲನೆಯದ್ದು ಪೆಗಸಸ್ ಬೇಹುಗಾರಿಕೆ ತಂತ್ರಾಂಶ ಕುರಿತಾದ ಅರ್ಜಿ. ಅರ್ಜಿದಾರರು ಎತ್ತಿದ ಪ್ರಶ್ನೆಗಳ ಬಗ್ಗೆ ಪರಿಶೀಲಿಸಲು ಸುಪ್ರಿಂ ಕೋರ್ಟ್‍ ಒಂದು ಸಮಿತಿಯನ್ನು ನೇಮಿಸಿತ್ತು, ಆ ಸಮಿತಿ ತನ್ನ ವರದಿಯನ್ನು ಮೊಹರಾದ ಕವರಿನಲ್ಲಿ ಸಲ್ಲಿಸಿದೆ. ಅದರಲ್ಲಿ ತಾನು ಪರೀಕ್ಷಿಸಿದ 29 ಮೊಬೈಲುಗಳಲ್ಲಿ 5ರಲ್ಲಿ ದ್ರೋಹತಂತ್ರಾಂಶಗಳಿದ್ದವು, ಆದರೆ ಅವು ಪೆಗಸಸ್‍ನದ್ದು ಎನ್ನುವುದಕ್ಕೆ ಪುರಾವೆ ಸಿಕ್ಕಿಲ್ಲ ಎಂದು ಹೇಳುವುದರೊಂದಿಗೇ, ತನ್ನ ಕೆಲಸದಲ್ಲಿ ಕೇಂದ್ರ ಸರಕಾರ ಸಹಕರಿಸಿಲ್ಲ ಎಂದೂ ಸಮಿತಿ ಹೇಳಿರುವುದಾಗಿ ಮುಖ್ಯ ನ್ಯಾಯಾಧೀಶರು ತಿಳಿಸಿದರೆಂದು ವರದಿಯಾಗಿದೆ.

ದ್ರೋಹ ತಂತ್ರಾಂಶ

(ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್)

ಕೆಲವೇ ದಿನಗಳ ಹಿಂದೆ, ನಿರ್ಮಾಣವಾಗುತ್ತಿರುವ ಹೊಸ ಸಂಸದ್‍ ಭವನದಲ್ಲಿ,  ಇದುವರೆಗೆ ಇರುವ  ಶಾಂತ ಸ್ವರೂಪದ ಸಿಂಹಗಳ ಬದಲು ಘರ್ಜಿಸುವ ಸಿಂಹಗಳಿರುವ ರಾಷ್ಟ್ರೀಯ ಲಾಂಛನವನ್ನು ಪ್ರತಿಷ್ಠಾಪಿಸಿದ ಸರಕಾರ ಈಗ ಗಾಂಧೀಜಿಯ ಮೂರು ಮಂಗಗಳನ್ನು ಮಾತ್ರ ಎಳ್ಳಷ್ಟೂ ಬದಲಾಯಿಸದೇ  ಹಿಂಬಾಲಿಸಿ-ನೋಡಲಾರೆ, ಕೇಳಲಾರೆ, ಹೇಳಲಾರೆ- ಎಂದು ನಿರ್ಧರಿಸಿರುವುದು ಈ ವ್ಯಂಗ್ಯಚಿತ್ರಕಾರರಿಗೆ ಆಶ್ಚರ್ಯ ಉಂಟುಮಾಡಿದೆ.

ಹೊಸ ಧೈರ್ಯಶಾಲಿ ಲಾಂಛನ ಸಿಂಹಗಳ ಬದಲು,
ಸರಕಾರ ನಾಣ್ಣುಡಿಯ ಮಂಗಗಳನ್ನು ಅನುಸರಿಸುತ್ತಿದೆಯೇ?”
(ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್ ಪ್ರೆಸ್)

ಬಹಳ ಮಂದಿಗೆ ಇಂತಹ ಆಶ್ಚರ್ಯವೇನೂ ಆಗಿಲ್ಲ, ಎದ್ದಿರುವ ಪ್ರಶ್ನೆಯೆಂದರೆ ದೇಶದ ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸಮಿತಿಯೊಂದಿಗೇ ಸಹಕರಿಸದಿರುವ ಸರಕಾರವನ್ನು ತರಾಟೆಗೆ ತಗೊಳ್ಳಲಿಲ್ಲ ಏಕೆ ಎಂಬುದು. ಮುಖ್ಯ ನ್ಯಾಯಾಧೀಶರು “ನೀವು ಹಿಂದೆ ಈ ನ್ಯಾಯಾಲಯದಲ್ಲಿ ಮಾಡಿದ ಹಾಗೆ ಸಮಿತಿಯೊಂದಿಗೂ ಮಾಡಿದ್ದೀರಿ “ ಎಂದಷ್ಟೇ ಹೇಳಿದರು ಎಂದು ವರದಿಯಾಗಿದೆ.

ಇದಕ್ಕೆ ಒಂದು ಬಲವಾದ ಸಾಂವಿಧಾನಿಕ ಕಾರಣವಿರಬಹುದೇ- ಈ ಕಾರ್ಟೂನಿಸ್ಟರು ಸೂಚಿಸುವಂತೆ?

ಸಂವಿಧಾನದ ಕಲಮು 20(3):
ಸ್ವಯಂ-ದೋಷಾರೋಪಣೆ ವಿರುದ್ಧದ ಹಕ್ಕು.
(ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್)

ದೇಶದ ಸಂವಿಧಾನವೇ ನಮಗೆಲ್ಲ ನಮ್ಮ ಮೇಲೆ ನಾವೇ ದೋಷಾರೋಪಣೆ ಮಾಡಿಕೊಳ್ಳದೇ ಇರುವ ಹಕ್ಕು ಕೊಟ್ಟಿರುವಾಗ, ಸುಪ್ರಿಂ ಕೋರ್ಟಿನ ಸಮಿತಿಯೊಂದಿಗೆ ಸಹಕರಿಸಿ ಸರಕಾರ ತನ್ನ ಮೇಲೆ ದೋಷಾರೋಪಣೆ ಮಾಡಿಕೊಳ್ಳುತ್ತದೆ ಎಂದು ಹೇಗೆ ತಾನೇ ನಿರೀಕ್ಷಿಸಲು ಸಾಧ್ಯ ಎಂಬುದು ಯೋಚಿಸಬೇಕಾದ ಸಂಗತಿಯೇ ತಾನೇ?

***

ಇಲ್ಲ, ಈ ನ್ಯಾಯಮೂರ್ತಿಗಳು ಸೆಮಿನಾರುಗಳಲ್ಲಿ, ಸಮಾರಂಭಗಳಲ್ಲಿ ನ್ಯಾಯ, ಸಮಾಜ ಮುಂತಾದವುಗಳ ಬಗ್ಗೆ ಖಂಡತುಂಡವಾದ ಮಾತುಗಳನ್ನಾಡುತ್ತಾರೆ, ಆದರೆ ಅದೇ ನಿಲುವು ಅವರ ತೀರ್ಪುಗಳಲ್ಲಿ ಪ್ರತಿಫಲನಗೊಳ್ಳುವದಿಲ್ಲ ಎಂದೊಬ್ಬ  ವಿಶ್ಲೇಷಕರು ಹೇಳುತ್ತಾರೆ.

ಉದಾಹರಣೆಗೆ, ಕಲವೇ ದಿನಗಳ ಹಿಂದೆ ಅವರು ಸಮಾರಂಭವೊಂದರಲ್ಲಿ ದೇಶದಲ್ಲಿ ‘ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಸಾಮಾಜಿಕ ಪಾತ್ರ ಇಳಿಮುಖಗೊಳ್ಳುತ್ತಿದೆ’ ಎಂದು ಖೇದ ವ್ಯಕ್ತಪಡಿಸಿದರಂತೆ. ಹಾಗೆ ಹೇಳುವಾಗ ರಾಜದ್ರೋಹದ ಕೇಸಿನಲ್ಲಿ ವರ್ಷಗಳೇ ಆದರೂ ಜಾಮೀನು ಸಿಗದೆ ಜೈಲಿನಲ್ಲಿರುವ ಉಮರ್ ಖಾಲೀದರಂತವರು ಇವರಿಗೆ ನೆನಪಾಗಿಲ್ಲವೇ ಎಂಬ ಇದೇ ವ್ಯಂಗ್ಯಚಿತ್ರಕಾರರ ಖೇದವೂ ಯೋಚಿಸಬೇಕಾದ ಸಂಗತಿಯೇ.

ಟೈ ಬದಲು, ಈ (ನ್ಯಾಯಮೂರ್ತಿಗಳ) ಪಟ್ಟಿ ಕಟ್ಟಿಕೊಂಡು
ಇದೇ ಖೇದವನ್ನು ಪುನರುಚ್ಛರಿಸಬೇಕೆಂದು ಪ್ರಾರ್ಥನೆ”!
(ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್)

***

ಇವರ  ನೇತೃತ್ವದ ಇನ್ನೊಂದು ಪೀಠ ಬಿಲ್ಕಿಸ್‍ ಬಾನೋರವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಸದಸ್ಯರ ಹತ್ಯಾಕಾಂಡ ನಡೆಸಿ ಜೀವಾವಧಿ  ಶಿಕ್ಷೆಗೊಳಗಾಗಿದ್ದ 11 ಅಪರಾಧಿಗಳನ್ನು ಸ್ವಾತಂತ್ರ್ಯೋತ್ಸವ ಸಂದರ್ಭದ ಕ್ಷಮಾದಾನದ ಹೆಸರಿನಲ್ಲಿ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿದ ಅರ್ಜಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿ ಗುಜರಾತ್‍ ಸರಕಾರಕ್ಕೆ ಎರಡು ವಾರಗಳೊಳಗೆ ಉತ್ತರಕೊಡುವಂತೆ ನಿರ್ದೇಶನ ನೀಡಿದೆ. ಗುಜರಾತ್‍ ಸರಕಾರ ಸುಪ್ರಿಂ ಕೋರ್ಟ್‍ನ ನಿರ್ದೇಶನದಂತೆ ಕ್ರಮ ಕೈಗೊಂಡಿದೆ ಎಂದು ಕೆಲವು ಆಳುವ ಪಕ್ಷದ ಮುಖಂಡರು, ಸಮರ್ಥಕರು ಹೇಳುತ್ತಿದ್ದಾರೆ. ಆದರೆ ತಾನು ಕ್ಷಮಾದಾನ ನೀಡುವಂತೇನೂ ಆದೇಶ ನೀಡಿಲ್ಲ ಎಂದು ಪೀಠ ಸ್ಪಷ್ಟೀಕರಿಸಿದೆ.

ಆಳುವ ಪಕ್ಷದ ವಕ್ತಾರರು ಈ ಬಗ್ಗೆ ಪ್ರತಿಪಕ್ಷಗಳು ಕ್ಷಮೆ ಕೋರಬೇಕು ಎಂದಿದ್ದಾರೆ. ಆದರೆ, ವಾಸ್ತವವಾಗಿ ಈ ಎರಡು ನಿರ್ದೇಶನಗಳು ಆಳುವ ಪಕ್ಷ ತಲೆ ತಗ್ಗಿಸುವಂತೆ ಮಾಡಬೇಕಿತ್ತು ಎಂದು ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ಈ ನಡುವೆ ಗುಜರಾತ್‍ ಸರಕಾರದ ಈ ಕ್ರಮಕ್ಕೆ ವಿರೋಧ-ಪ್ರತಿಭಟನೆಗಳು ವ್ಯಾಪಕಗೊಳ್ಳುತ್ತಿವೆ. ಆಳುವ ಪಕ್ಷದ ಬೆಂಬಲಿಗರು, ಸಮರ್ಥಕರು ಕೂಡ ಈ ಬಗ್ಗೆ ಯೋಚಿಸುವಂತೆ ಮಾಡಿರುವುದು ವ್ಯಕ್ತವಾಗುತ್ತಿದೆ. ಉದಾಹರಣೆಗೆ,  ಅಳುವ ಪಕ್ಷದ ಕಡೆಗೆ ವಾಲಿರುವ ಖುಷ್ಬೂ ಸುಂದರ್ “ಇದು ಮಾನವ ಕುಲಕ್ಕೆ ಮಾಡಿರುವ ಅವಮಾನ” ಎಂದು  ಟೀಕಿಸಿರುವುದಾಗಿ ವರದಿಯಾಗಿದೆ”

ನೀನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಬಲ್ಲೆಯಾ?”
(ಸಂದೀಪ ಅಧ್ವರ್ಯು, ಟೈಮ್ಸ್ ಆಫ್‍ ಇಂಡಿಯಾ)

ಬಿಡುಗಡೆ ಪಡೆದವರು ಬ್ರಾಹ್ಮಣರು, ಸಂಸ್ಕಾರವಂತರು ಎಂದು ಕ್ಷಮಾದಾನ ಪರಿಶೀಲನಾ ಸಮಿತಿಯಲ್ಲಿದ್ದ ಆಳುವ ಪಕ್ಷದ ಶಾಸಕರೊಬ್ಬರು ಹೇಳಿರುವುದು ಆಳುವ ಪಕ್ಷದ ಬೆಂಬಲಿಗರನ್ನು ಮತ್ತಷ್ಟು ಮುಜುಗರಕ್ಕೆ ತುತ್ತಾಗಿಸಿರಬೇಕೇನೋ. ಈ ‘ಸಂಸ್ಕಾರವಂತರು’ ಈ ಹೀನ ಸಾಮೂಹಿಕ ಅಪರಾಧ ಎಸಗಿಲ್ಲ ಎಂದೋ, ಅಥವ ಅದಕ್ಕಾಗಿ ಪಶ್ಚಾತ್ತಾಪ ಪಟ್ಟಿದ್ದಾರೆ ಎಂದೋ ಯಾರೂ ಏನೂ ಹೇಳಿದಂತಿಲ್ಲ.

(ಪಿ.ಮಹಮ್ಮದ್, ವಾರ್ತಾಭಾರತಿ)

ಈ ಅಪರಾಧಿಗಳು 14 ವರ್ಷ ಶಿಕ್ಷೆ ಅನುಭವಿಸಿದ ನಂತರ ಕ್ಷಮಾದಾನ ಪಡೆದಿದ್ದಾರೆ, ಆದರೆ ಅವರನ್ನು ಸ್ವಾಗತಿಸುವ, ಸನ್ಮಾನಿಸುವ ಅಗತ್ಯವಿರಲಿಲ್ಲ ಎಂದು ಪಕ್ಕದ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳೂ ಹೇಳಿದ್ದಾರಂತೆ.

ಬಿಲ್ಕಿಸ್‍ ಬೇನ್, ಅವರು ಜೈಲಿನಿಂದ ಹೊರಬಂದಿರುವುದು ನಿಮಗೆ ಹೆದರಿಕೆಯುಂಟು ಮಾಡಿದ್ದರೆ,
ನಿಮ್ಮ ಸುರಕ್ಷತೆಗಾಗಿ, ನಿಮ್ಮನ್ನು ಜೈಲಿಗೆ ಹಾಕಲು ನಾವು ಸಿದ್ಧ”!
(ಮಂಜುಲ್, ನ್ಯೂಸ್‍ ಲಾಂಡ್ರಿ.ಕಾಂ)

ಆದರೂ, ಆಳುವ ಮಂದಿಯಲ್ಲಿ ಅಮೃತ ಮಹೋತ್ಸವದ ಸಂಭ್ರಮಕ್ಕಿಂತ ಕ್ಷಮಾದಾನದ ಸಂಭ್ರಮವೇ ಈಗಲೂ ಹೆಚ್ಚಿರುವಂತೆ ಕಾಣುತ್ತದೆ. ಅಲ್ಲದೆ, “ಈ ಎಲ್ಲಾ ವರ್ಷಗಳಲ್ಲಿ ಮಡಕೆಯಲ್ಲಿ ಅನ್ನ ಬೇಯುತ್ತಲೇ ಇರುವಂತೆ ಮಾಡಿದ್ದಾರೆ” ಎಂದು ಸುಪ್ರಿಂ ಕೋರ್ಟಿನ ಒಂದು ಪೀಠದ ಟಿಪ್ಪಣಿಗೊಳಗಾದವರು ಇನ್ನೂ ಜಾಮೀನು ಸಿಗದೆ ಜೈಲಿನಲ್ಲೇ ಇದ್ದಾರೆ. ಆದರೆ ನಿಜವಾಗಿಯೂ ಹಾಗೆ ಎರಡು ದಶಕಗಳ ಕಾಲ ಬೇಯುತ್ತಲೇ ಇರುವಂತೆ ಮಾಡಿರುವವರು ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಂತಾಗಿದೆ ಎನ್ನುತ್ತಾರೆ ಈ ವ್ಯಂಗ್ಯಚಿತ್ರಕಾರರು.

ಬಿಲ್ಕಿಸ್‍ ಬಾನೊ ಅತ್ಯಾಚಾರಿಗಳಿಗೆ ಬಿಡುಗಡೆ

ಈ ಎಲ್ಲಾ ವರ್ಷಗಳಲ್ಲಿ ಮಡಕೆಯಲ್ಲಿ ಅನ್ನ ಬೇಯುತ್ತಲೇ ಇರುವಂತೆ ಇಟ್ಟದ್ದಕ್ಕಾಗಿ ಕೃತಜ್ಞತೆಗಳು”!
(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

ಇಂತವರನ್ನು  ಸ್ವಾಗತಿಸದಿರಲು, ಸನ್ಮಾನಿಸದಿರಲು ಸಾಧ್ಯವಿತ್ತೇ?

ಆದರೂ , “ನಮಗೆ ಸಮರೂಪದ ನಾಗರಿಕ ಸಂಹಿತೆ ಬೇಕು” ಎಂದು ಆಗ್ರಹಿಸುವವರು  “..ಆದರೆ, ಪ್ರತ್ಯೇಕ ಕ್ರಿಮಿನಲ್‍ ಕೋಡ್‍(ಸಂಹಿತೆ)ಗಳು ಬೇಕು” ಎಂದು ಆಗ್ರಹಿಸಬಹುದೇ?

(ರಾಜೇಂದ್ರ ಧೋಡಪ್‍ಕರ್, ಫೇಸ್‍ಬುಕ್)

***

ಈ ವಾರದ ಇನ್ನೊಂದು ಗಮನಾರ್ಹ ಬೆಳವಣಿಗೆಯೆಂದರೆ ಎನ್‍.ಡಿ.ಟಿ.ವಿ. ವಾಹಿನಿಯನ್ನು ವಶಪಡಿಸಿಕೊಳ್ಳುವ ಅತ್ಯಂತ ಸಿರಿವಂತ ಉದ್ಯಮಿಗಳಲ್ಲೊಬ್ಬರಾದ ಅಡಾನಿ ಗುಂಪಿನ ಪ್ರಯತ್ನ, ಅಕ್ಷರಶಃ ‘ಬ್ರೇಕಿಂಗ್‍ ನ್ಯೂಸ್’!

(ಸಜಿತ್ ಕುಮಾರ್, ಡೆಕ್ಕನ್‍ ಹೆರಾಲ್ಡ್)

 ಈ ಹಿಂದೆ ಇನ್ನೊಬ್ಬ ಸೂಪರ್ ಶ್ರೀಮಂತ ಉದ್ಯಮಿ ಅಂಬಾನಿಯವರ ಸಹಯೋಗಿಯೊಬ್ಬರ ಒಡೆತನದಲ್ಲಿದ್ದ  ಮತ್ತು ಎನ್‍ಡಿಟಿವಿ ಮಾಲಕರು ಸಾಲ ಪಡೆದಿದ್ದ ಸಂಸ್ಥೆಯೊಂದನ್ನು ಖರೀದಿಸುವ ಮೂಲಕ ಎನ್‍ಡಿಟಿವಿಯಲ್ಲಿ 29.17% ಪಾಲುದಾರಿಕೆ ಪಡೆದು, ನಂತರ ಇನ್ನೂ 26% ಶೇರು ಕೊಳ್ಳುವುದಾಗಿ ಅಡಾಣಿ ಗುಂಪು ಕೇಳಿದೆಯಂತೆ. ಇದನ್ನು ಪಡೆಯುವುದು ಸಾಧ್ಯವಾದರೆ ಎನ್‍.ಡಿ.ಟಿವಿ, ಅಡಾಣಿ ಗುಂಪಿನ ಪಾಲಾಗುತ್ತದೆ.

ಹೀಗಾದರೆ, 2014 ರ ನಂತರ ಇದುವರೆಗೂ, ಎಲ್ಲ ಬಂಡವಾಳಶಾಹೀ ಮಿತಿಗಳ ನಡುವೆಯೂ ‘ಗೋದೀ ಮೀಡಿಯಾ’ ಆಗದೇ ಉಳಿದಿದ್ದ ಮುಖ್ಯಧಾರೆಯ ಮಾಧ್ಯಮ ಲೋಕದ  ಏಕೈಕ ವಾಹಿನಿಯೂ  ಇನ್ನು ಇಲ್ಲವಾಗುತ್ತದೆ ಎಂದು ಪತ್ರಕರ್ತರ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಇನ್ನು ಮುಂದೆ ಅದು ನರೇಂದ್ರದಾಸ್ ದಾಮೋದರದಾಸ್ ಟಿವಿ ಎಂದೊಬ್ಬರು ಟಿಪ್ಪಣಿ ಮಾಡಿದ್ದಾರೆ.

ಭಾಯ್, ನಿಮಗೆ ಈ ದನಿಯನ್ನು ಖರೀದಿಸಲು ಆಗಲಿಲ್ಲವೇ?”

(ಸತೀಶ್ ಆಚಾರ್ಯ, ಫೇಸ್‍ಬುಕ್)

ದನಿ ಮಾತ್ರ ಏಕೆ, ಇಡೀ ಪೆಟ್ಟಿಗೆಯನ್ನೇ ಕೊಡಿಸಲು ಸಾಧ್ಯವಿರುವಾಗ….

ನಾನು ನಿನಗೆ ಬೇಕಾಗಿರುವ ಏನನ್ನು ಬೇಕಾದರೂ
ಖರೀದಿಸಿ ಕೊಡುತ್ತೇನೆ, ಮಗಾ…
(ಎಂಅಲಿ, ಫೇಸ್‍ಬುಕ್)

***

ಇತ್ತ ಕರ್ನಾಟಕದಲ್ಲಿ ಸರ್ಕಾರಿ ಕಾಮಗಾರಿಗಳಿಗೆ 40% ಕಮಿಷನ್ನಿನ  ಕೂಗು ಇನ್ನಷ್ಟು ಗಟ್ಟಿಯಾಗಿದೆ, ರಾಜಧಾನಿ ಬೆಂಗಳೂರಿನಲ್ಲಿ ಅದು 50%ದ ವರೆಗೂ ಇದೆ ಎಂದೂ ಹೇಳಲಾಗುತ್ತಿದೆ. ಆದರೂ ಸಾಕ್ಷ್ಯ ಕೊಡಿ ಎಂದು ಹೇಳುವುದನ್ನು ಬಿಟ್ಟು ಮುಖ್ಯಮಂತ್ರಿಗಳು ಬೇರೇನೂ ಮಾಡುತ್ತಿಲ್ಲ, ನ್ಯಾಯಾಂಗ ತನಿಖೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಗುತ್ತಿಗೆದಾರರ ಸಂಘದ ಖೇದ.

(ಪಂಜು ಗಂಗೊಳ್ಳಿ, ಕನ್ನಡ ಒನ್‍ ನ್ಯೂಸ್)

ಹಿಂದೆ ಸ್ವತಃ ಪ್ರಧಾನಿಗಳೇ 10% ಕಮಿಷನ್ನಿನನ ಸರಕಾರ ಎಂದು ಟೀಕಿಸಿದಾಗ ಸಾಕ್ಷ್ಯ ಕೊಟ್ಟಿದ್ದರೇನು ಎಂದು ಹಲವರು ಕೇಳುತ್ತಿದ್ದಾರೆ.

ಇದು ‘ಹರ್ ಘರ್ ತಿರಂಗಾ’ಕ್ಕಿಂತಲೂ ಮೊದಲೇ ಆರಂಭವಾದ “ಅಭಿಯಾನ”!

(ದಿನೇಶ್ ಕುಕ್ಕುಜಡ್ಕ, ಪ್ರಜಾವಾಣಿ)

***

ಜನಗಳ, ವಿಶೇಷವಾಗಿ ಯುವಜನರ, ಗಮನವನ್ನು ಈ ಗಂಭೀರ ಪ್ರಶ್ನೆಯಿಂದ ಬೇರೆಡೆಗೆ ಸೆಳೆಯಲೋ ಎಂಬಂತೆ ಟಿಪ್ಪು-ವಿರೋಧದ ಜೊತೆಗೆ ಈಗ ಆರಂಭವಾಗಿರುವ ಸಾವರ್ಕರ್ ಮಾದರಿ ದೇಶಭಕ್ತಿಯ ‘ರಥಯಾತ್ರೆ’ ಇಡೀ ದೇಶದ ಗಮನ ಸೆಳೆದಿದೆ.

ಸಾವರ್ಕರ್ ವರ್ಸಸ್ ಟಿಪ್ಪು

ಅಮೃತ ಕಾಲದ ಉದ್ಯೋಗ ಯೋಜನೆಯಲ್ಲಿ ನೋಂದಾಯಿಸಿಕೊಂಡದ್ದಕ್ಕೆ ಧನ್ಯವಾದಗಳು”
(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

 ದೇಶದ ಐಟಿ ಕೇಂದ್ರವೆಂಬ ರಂಗಸ್ಥಳದಲ್ಲಿ ಹೊಸದೊಂದು ನಾಟಕ

ಟಿಪ್ಪು-ಸಾವರ್ಕರ್ ಭೂತಕಾಲ ವರ್ಸಸ್  ದಯೆ ತೋರಿ ಎಂಬ ಅರ್ಜಿಗಳ ಭವಿಷ್ಯತ್‍ ಕಾಲ!

ಭೂತ ವರ್ಸಸ್ ಭವಿಷ್ಯ
(ಸಂದೀಪ ಅಧ್ವರ್ಯು, ಟೈಮ್ಸ್‌ ಆಫ್‍ ಇಂಡಿಯ)

ಈ “ರಥಯಾತ್ರೆ”ಯ ವೇಳೆ ಅಸಂಭವವನ್ನು ಸಂಭವಗೊಳಿಸುವ ಭರದಲ್ಲಿ ವ್ಯಂಗ್ಯಚಿತ್ರಕಾರರೂ ಅವಾಕ್ಕಾಗುವಂತಹ ಕಥನಗಳು ಎದ್ದು ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.

ಅಂತವುಗಳಲ್ಲೊಂದು- ‘ವೀರ’ ಸಾವರ್ಕರ್ ಕರಿನೀರಿನ ಕರಾಳ ಶಿಕ್ಷೆ ಅನುಭವಿಸುತ್ತಿದ್ದಾಗಲೂ ಕಿಟಕಿ-ಬಾಗಿಲುಗಳೇ ಇಲ್ಲದ ಸೆಲ್‍ನಿಂದ ಬುಲ್‍ ಬುಲ್‍ ಹಕ್ಕಿಯ ಬೆನ್ನ ಮೇಲೇರಿ ಪ್ರತಿದಿನ ತಾಯ್ನಾಡನ್ನು ವೀಕ್ಷಿಸಿ ಬರುತ್ತಿದ್ದರು ಎಂಬ ಪಾಟ!

(ಪಿ.ಮಹಮ್ಮದ್, ವಾರ್ತಾಭಾರತಿ)

***

ಕೊನೆಯದಾಗಿ, ಕಳೆದ ವಾರದ ಕೊನೆಯ ವೇಳೆಗೆ,  ರಾಷ್ಟ್ರಮಟ್ಟದಲ್ಲಿಯೂ ಇದನ್ನು ಸರಿಗಟ್ಟುವ  ಸುದ್ದಿಯೊಂದು ಅಹಮದಾಬಾದಿನಿಂದ ಪ್ರಕಟವಾಗಿದೆ.

“ಖಾದಿಯನ್ನು ಸ್ವಾತಂತ್ರ್ಯದ ನಂತರ ಉಪೇಕ್ಷಿಸಲಾಯಿತು. ಅದೀಗ ‘ಆತ್ಮನಿರ್ಭರ್‍ ಭಾರತ್‍’ನ ಪ್ರೇರಣಾ ಸ್ರೋತವಾಗಬಲ್ಲದು” ಎಂದು ಸಾಬರಮತಿ ದಂಡೆಯಲ್ಲಿ ‘ಖಾದಿ ಉತ್ಸವ’ದಲ್ಲಿ ಮಾತಾಡುತ್ತ ಪ್ರಧಾನಿಗಳು ಹೇಳಿದ್ದಾರಂತೆ.

(ದಿನೇಶ್‍ ಕುಕ್ಕುಜಡ್ಕ, ಫೇಸ್‌ಬುಕ್)

ಕೆಲವು ದಿನಗಳ ಹಿಂದೆಯಷ್ಟೇ, ಅವರದ್ದೇ ಸರಕಾರ ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡಿ, ಇನ್ನು ಮುಂದೆ ಕೈಗಳಿಂದ ತಯಾರಿಸಿದ ಖಾಧಿ ಮಾತ್ರವೇ ಅಲ್ಲ, ಯಂತ್ರದಲ್ಲಿ ತಯಾರಾದ ಪಾಲಿಯೆಸ್ಟರ್‍ ಬಾವುಟಗಳಿಗೂ ಅನುಮತಿ ಇದೆ ಎಂದಿತು; ಅದಕ್ಕೆ, ಆಹಾರ ವಸ್ತುಗಳ ಮೇಲೂ ಇತ್ತೀಚೆಗೆ  ಜಿಎಸ್‍ಟಿ ಹೇರಿದ/ ಏರಿಸಿದ ಅದೇ ಸರಕಾರ,  ಜಿಎಸ್‍ಟಿಯಿಂದಲೂ  ವಿನಾಯ್ತಿ ನೀಡಿತು:, ಕಾಕತಾಳೀಯವೋ ಎಂಬಂತೆ, ಇದೇ ಸಮಯದಲ್ಲಿ ಅಂಬಾನಿಯ ರಿಲಯಂಸ್‍ ಜಗತ್ತಿನ ಬಹುದೊಡ್ಢ ಪಾಲಿಯೆಸ್ಟರ್ ವ್ಯಾಪಾರಿ ಎಂಬ ಗರಿ ಸಿಕ್ಕಿಸಿಕೊಂಡಿತು -ಎಂಬ ಸುದ್ದಿಗಳನ್ನು ಓದಿದ್ದು ನೆನಪಾಗುತ್ತದೆಯೇ?

Donate Janashakthi Media

Leave a Reply

Your email address will not be published. Required fields are marked *