ನವದೆಹಲಿ : ಲೋಕಸಭೆಯಲ್ಲಿ ಮಂಡಿಸಲು ಉದ್ದೇಶಿಸಲಾದ ವಿದ್ಯುತ್ (ತಿದ್ದುಪಡಿ) ಮಸೂದೆ, 2022 ನ್ನು ಶಾಸನವಾಗಿಸುವುದರ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ‘ರಾಷ್ಟ್ರೀ ಯ ವಿದ್ಯುತ್ ನೌಕರರು ಮತ್ತು ಎಂಜಿನಿಯರ್‌ಗಳ ಸಮನ್ವಯ ಸಮಿತಿ’ (ಎನ್‌ಸಿಸಿಒಇಇಇ) ನೀಡಿರುವ ಕರೆಗೆ ಓಗೊಟ್ಟು ಆಗಸ್ಟ್ 8 ರಂದು ಕಾಶ್ಮೀರದಿಂದ ತಮಿಳುನಾಡು ಮತ್ತು ತ್ರಿಪುರದಿಂದ ಕೇರಳದವರೆಗೆ ದೇಶದಾದ್ಯಂತ 9608 ಸ್ಥಳಗಳಲ್ಲಿ ಒಟ್ಟಾರೆಯಾಗಿ ಹತ್ತು ಲಕ್ಷ ವಿದ್ಯುತ್ ನೌಕರರು ಮತ್ತು ಎಂಜಿನಿಯರ್‌ಗಳು ಕೆಲಸ ನಿಲುಗಡೆ ಮಾಡಿ ಭಾಗವಹಿಸಿದರು.
ಎನ್‌ಸಿಸಿಒಇಇಇ ಆಗಸ್ಟ್ 2, 2022 ರಂದು ನವದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ವಿದ್ಯುತ್ ನೌಕರರು ಮತ್ತು ಇಂಜಿನಿಯರ್‌ಗಳ ರಾಷ್ಟ್ರೀಯ ಸಮಾವೇಶವನ್ನು ಸಂಘಟಿಸಿತು. ಬೃಹತ್ ಉದ್ಯಮಿಗಳಿಗೆ ಅನುಕೂಲವಾಗುವಂತೆ ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ 2022 ಅನ್ನು ಜಾರಿಗೊಳಿಸುವ ಮೂಲಕ ರೈತರು ಮತ್ತು ಸಣ್ಣ ಉದ್ಯಮಿಗಳು ಸೇರಿದಂತೆ ಬಡ ಮತ್ತು ಗ್ರಾಮೀಣ ಜನರಿಗೆ ವಿದ್ಯುತ್ ಹಕ್ಕುಗಳನ್ನು ನಿರ್ಬಂಧಿಸುವ ಸ್ಪಷ್ಟ ಉದ್ದೇಶದಿಂದ ಭಾರತವು ಸಂಸತ್ತಿನಲ್ಲಿ ಈ ಮಸೂದೆಯನ್ನು ಮಂಡಿಸುತ್ತಿದೆ ಎಂದು ಈ. ಸಮಾವೇಶವು ಅಂಗೀಕರಿಸಿದ ನಿರ್ಣಯ ಹೇಳಿತ್ತು. “ಆಜಾದಿ ಕಾ ಅಮೃತ್ ಮಹೋತ್ಸವ” ಎಂದು ಆಚರಿಸುತ್ತಲೇ, “ಆತ್ಮನಿರ್ಭರ ಭಾರತ್” ಮುಂತಾದ ದೊಡ್ಡ-ದೊಡ್ಡ ಮಾತುಕತೆಗಳ ಮರೆಯಲ್ಲಿ ಸ್ವಾತಂತ್ರ‍್ಯದ ನಂತರ ಏಳು ದಶಕಗಳಲ್ಲಿ ನಿರ್ಮಿಸಲಾದ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಜಾಲದ ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಕೈಗಳಿಗೆ ವರ್ಗಾಯಿಸುವ ಸರ್ಕಾರದ ಅಂತಿಮ ಉದ್ದೇಶವನ್ನು ಬಯಲಿಗೆಳೆಯಬೇಕು ಎಂದು ಆ ಸಮಾವೇಶ ನಿರ್ಧರಿಸಿತ್ತು. ಜನರು ತಮ್ಮ ತಾಯ್ನಾಡನ್ನು ಅದರ ಶ್ರೀಮಂತ ಸಂಪನ್ಮೂಲಗಳು ಮತ್ತು ಸ್ವಾವಲಂಬನೆಯನ್ನು ಅದರ ನಿಜವಾದ ಅರ್ಥದಲ್ಲಿ ಗೌರವಿಸಲು ಮತ್ತು ಪ್ರೀತಿಸಲು ಬಯಸುತ್ತಾರೆ. ವ್ಯಾಪಾರ ಸಮುದಾಯಕ್ಕೆ “ಭಾರತ ಮಾತೆ”ಯ ಮಾರಾಟವನ್ನು ಅವರು ಇಷ್ಟಪಡುವುದಿಲ್ಲ. ಆದ್ದರಿಂದ “ವಿದ್ಯುತ್ ವಲಯವನ್ನು ಉಳಿಸಿ, ಭಾರತ ಉಳಿಸಿ” ಎಂಬ ಕರೆಯನ್ನು ನೀಡುವುದಾಗಿ ಎನ್‌ಸಿಸಿಒಇಇಇ ಸಮಾವೇಶ ಹೇಳಿತ್ತು.
ಸರ್ಕಾರವು ಈ ಮಸೂದೆಯನ್ನು ಯಾವುದೇ ಚರ್ಚೆಯಿಲ್ಲದೆ ತರಾತುರಿಯಲ್ಲಿ ಅಂಗೀಕರಿಸುವ ಉದ್ದೇಶ ಹೊಂದಿತ್ತು. ಆದರೆ ಸಂಸತ್ತಿನ ಒಳಗೆ ಮತ್ತು ಹೊರಗೆ ವಿರೋಧದಿಂದಾಗಿ ಅದನ್ನು ವ್ಯಾಪಕ ಸಮಾಲೋಚನೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲು ಸರ್ಕಾರ ಒಪ್ಪಿಕೊಳ್ಳಬೇಕಾಗಿ ಬಂದಿದೆ. ಇದು ಮೊದಲ ವಿಜಯ ಎಂದಿರುವ ಎನ್‌ಸಿಸಿಒಇಇಇ ಅದಕ್ಕಾಗಿ ತನ್ನ ಘಟಕಗಳು, ಇತರ ಕಾರ್ಮಿಕ ಸಂಘಟನೆಗಳು ¸ಮತ್ತು ಎಸ್‌ಕೆಎಂ ನೇತೃತ್ವದ ರೈತ ಸಂಘಟನೆಗಳನ್ನು ಅಭಿನಂದಿಸಿದೆ.