ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು, ಗಾಯಗೊಂಡಿದ್ದ 44 ವರ್ಷದ ಬೈಕ್ ಸವಾರನೋರ್ವ ಸೋಮವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಆಗಸ್ಟ್ 18 ರಂದು ಈ ಘಟನೆ ನಡೆದಿತ್ತು.
ಮೃತ ವ್ಯಕ್ತಿಯನ್ನು ಸುಪ್ರೀತ್ ರಾಜ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ತನ್ನ ಕುಟುಂಬದೊಂದಿಗೆ ಹೇರೋಹಳ್ಳಿಯಲ್ಲಿ ವಾಸವಾಗಿದ್ದರು. ಆಗಸ್ಟ್ 18 ರಂದು ಸುಪ್ರೀತ್ ರಾಜ್ ಆಫೀಸ್ ಗೆ ಹೋಗುವಾಗ ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ್ ರಾಜ್ ಗ್ರನೇಟ್ ಮೂಲಕ ಹೋಗುವಾಗ ರಸ್ತೆ ಮೇಲಿನ ಗುಂಡಿಯಿಂದ ತನ್ನ ವಾಹನದ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದಿದ್ದರು. ನಂತರ ಸ್ಥಳೀಯ ಆಸ್ಪತ್ರೆಯೊಂದಕ್ಕೆ ತದನಂತರ ಬಸವೇಶ್ವರ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಅವರನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅವರು ಮೃತಪಟ್ಟಿದ್ದಾರೆ.
ರಸ್ತೆ ಗುಂಡಿ ಬಗ್ಗೆ ಪದೇ ಪದೇ ದೂರು ಸಲ್ಲಿಸುತ್ತಿದ್ದರೂ ಇನ್ನೂ ಅನೇಕ ಗುಂಡಿಗಳನ್ನು ಮುಚ್ಚಿಲ್ಲ ಎಂಬ ಆರೋಪ ಕೇಳಿಬಂದಿದೆ. ರಸ್ತೆ ಮೇಲಿನ ಗುಂಡಿಗಳನ್ನು ಮುಚ್ಚದ ಕಾರಣ ತನ್ನ ಸಹೋದರ ಸಾವನ್ನಪ್ಪಿರುವುದಾಗಿ ಆರೋಪಿಸಿ ರಾಜ್ ಸಹೋದರ ಜೋಯಿಲ್ ಸುಮಂತ್ ಬಿಬಿಎಂಪಿ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದಾರೆ.
ಸುಂಕದಕಟ್ಟೆ ಹಾಗೂ ಹೇರೋಹಳ್ಳಿ ಸಂಪರ್ಕಿಸುವ ರಸ್ತೆ ಗುಂಡಿ ಮುಚ್ಚುವಂತೆ ಬ್ಯಾಡರಹಳ್ಳಿ ಪೊಲೀಸರು ಬಿಬಿಬಿಎಂಪಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅಧಿಕಾರಿಗಳು ಮಾತ್ರ ರಸ್ತೆ ರಿಪೇರಿ ಬಗ್ಗೆ ಏನನ್ನೂ ಹೇಳುತ್ತಿಲ್ಲ.
ಹೆಚ್ಚಾದ ರಸ್ತೆಗುಂಡಿಗಳು : ರಾಜಧಾನಿ ಬೆಂಗಳೂರನ್ನು ರಸ್ತೆ ಗುಂಡಿಗಳಿಂದ ಮುಕ್ತಿ ಮಾಡಲು ಬಿಬಿಎಂಪಿ ಶತಾಯಗತಾಯ ಪ್ರಯತ್ನಿಸುತ್ತಿದ್ದರೂ ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. ಜೂನ್ ತಿಂಗಳವರೆಗೆ ಸುಮಾರು 11 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಪಾಲಿಕೆ ಮುಚ್ಚಲಾಗಿತ್ತು.
ಆದರೆ, ಮಳೆಯಿಂದಾಗಿ ಮತ್ತೆ ರಸ್ತೆ ಗುಂಡಿಗಳಾಗಿದ್ದು, ಹೊಸದಾಗಿ 4545 ರಸ್ತೆ ಗುಂಡಿಗಳನ್ನು ಪತ್ತೆ ಮಾಡಲಾಗಿದೆ. ಬೆಸ್ಕಾಂ, ಬೆಂಗಳೂರು ಜಲಮಂಡಳಿಯ ವಿವಿಧ ಕಾಮಗಾರಿಗಾಗಿ ರಸ್ತೆ ಅಗೆಯುತ್ತಿರುವುದು ಮತ್ತು ರಸ್ತೆ ಗುಂಡಿಗಳಿಗೆ ತೇಪೆ ಹಾಕುತ್ತಿರುವುದು ಮತ್ತೆ ಮತ್ತೆ ರಸ್ತೆ ಗುಂಡಿಗಳಾಗಲು ಕಾರಣವಾಗಿದೆ. ಜೊತೆಗೆ ಮಳೆಯು ನಿರಂತರವಾಗಿ ಬರುತ್ತಿರುವುದರಿಂದ ರಸ್ತೆಗಳಲ್ಲಿ ಗುಂಡಿಗಳಾಗುತ್ತಿವೆ. ಈ ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ನಿತ್ಯವೂ ನರಕಯಾತನೆ ಅನುಭವಿಸುವುದು ತಪ್ಪುತ್ತಿಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಅನೇಕ ಸಾವು, ನೋವಿಗೆ ಕಾರಣವಾಗುತ್ತಿದೆ.
ಬೆಂಗಳೂರು ಸಂಚಾರಿ ಪೊಲೀಸರು ಜಿಯೋ ಮ್ಯಾಪ್ ಹಾಗೂ ಫಿಕ್ಸ್ಮೈ ಸ್ಟ್ರೀಟ್ ಮೂಲಕ ನಡೆಸಿರುವ ಸಮೀಕ್ಷೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಬರೋಬ್ಬರಿ 4545 ರಸ್ತೆ ಗುಂಡಿಗಳನ್ನು ಪತ್ತೆ ಮಾಡಿದ್ದಾರೆ. ಫಿಕ್ಸ್ಮೈ ಸ್ಟ್ರೀಟ್ ಆಯಪ್ಗೆ ಜನರು ಕಳುಹಿಸಿಕೊಟ್ಟಿರುವ ರಸ್ತೆ ಗುಂಡಿಗಳ ಲೆಕ್ಕ ನೋಡಿ ಬಿಬಿಎಂಪಿ ಅಧಿಕಾರಿಗಳ ತಲೆ ಬಿಸಿಯಾಗಿದೆ. ರಸ್ತೆಗುಂಡಿ ಮುಕ್ತವಾಗಿ ಮಾಡುವುದು ಹೇಗೆಂಬುದು ಗೊತ್ತಾಗುತ್ತಿಲ್ಲ. ಮಳೆಯಿಂದ ರಸ್ತೆ ಗುಂಡಿಗಳಾಗುತ್ತಿವೆ. ಜೊತೆಗೆ ವಾಹನಗಳ ನಿರಂತರ ಸಂಚಾರದಿಂದ ಈಗಾಗಲೇ ಮುಚ್ಚಲಾದ ರಸ್ತೆ ಗುಂಡಿಗಳು ಪುನಃ ಬಾಯ್ತೆರೆದುಕೊಂಡಿವೆ. ಸದ್ಯ ಮಳೆ ನಿಲ್ಲದೇ ರಸ್ತೆ ಗುಂಡಿ ಮುಚ್ಚುವುದು ಕಷ್ಟ ಎನ್ನುತ್ತಿದ್ದಾರೆ ಅಧಿಕಾರಿಗಳು.
ಆರ್ಆರ್ ನಗರದಲ್ಲಿ ಹೆಚ್ಚು ಗುಂಡಿ: ಆರ್ಆರ್ ನಗರ 1068, ಬೊಮ್ಮನಹಳ್ಳಿ ವಲಯ 1076, ದಾಸರಹಳ್ಳಿ 867, ಪೂರ್ವ 566, ದಕ್ಷಿಣ 414, ಮಹದೇವಪುರ 329, ಪಶ್ಚಿಮದಲ್ಲಿ 225 ರಸ್ತೆ ಗುಂಡಿಗಳು ಇವೆ. ಬೆಂಗಳೂರಿನ 5 ವಿಧಾನಸಭಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಯನ್ನು ಮುಚ್ಚಲು ಗುತ್ತಿಗೆದಾರರಿಗೆ ಕಾರ್ಯಾದೇಶವನ್ನು ನೀಡಲಾಗಿದೆ. ಉಳಿದ 22 ಕಡೆ ಪಾಲಿಕೆಯಿಂದಲೇ ರಸ್ತೆ ಗುಂಡಿಗಳನ್ನು ಮುಚ್ಚಲು ತೀರ್ಮಾನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನ್ಮ ಜಾಲಾಡಿದ್ದ ನ್ಯಾಯಾಲಯ: ನಗರದ ರಸ್ತೆ ಗುಂಡಿಗಳಿಂದ ಹಲವಾರು ಅಮಾಯಕ ಜೀವಗಳು ಬಲಿಯಾಗುತ್ತಿದ್ದರೂ ಕಣ್ಮುಚ್ಚಿ ಕುಳಿತ ಬಿಬಿಎಂಪಿಯವರನ್ನು ಹೈ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಕೂಡಲೇ ರಸ್ತೆಗುಂಡಿ ಮುಚ್ಚಿ ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಗಟ್ಟದಿದ್ದರೆ, ನಿಮ್ಮ ವಿರುದ್ಧವೇ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿತ್ತು.
ರಸ್ತೆ ಗುಂಡಿ ವಿಚಾರದಲ್ಲಿ ತಟಸ್ಥವಾಗಿದ್ದ ಬಿಬಿಎಂಪಿಯವರಿಗೆ ನ್ಯಾಯಾಲಯ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು 15 ದಿನಗಳ ಒಳಗೆ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವ ಭರವಸೆ ನೀಡಿದ್ದರು.
ಆರಂಭದಲ್ಲಿ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದರೂ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಮುಚ್ಚುವ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದರ ಜೊತೆಗೆ ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ನಗರದ ಹಲವಾರು ರಸ್ತೆಗಳು ಹಾಳಾಗಿದ್ದವು.ಆದರಲ್ಲೂ ಸುಂಕದಕಟ್ಟೆಯಿಂದ ಹೇರೋಹಳ್ಳಿಗೆ ಸಾಗುವ ದಾರಿಯಂತೂ ತೀರ ಹಾಳಾಗಿತ್ತು. ಬೆಂಗಳೂರಿನಲ್ಲಿ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಬಿಬಿಎಂಪಿ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಜನರ ಪ್ರಾಣವನ್ನು ರಕ್ಷಿಸಬೇಕಿದೆ.