- 8 ರಿಂದ 10 ಹಾಗೂ ಪಿಯು ಕಾಲೇಜಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
- ಮಧ್ಯ ರಾತ್ರಿ 1 ಗಂಟೆ ಹೊತ್ತಿಗೆ ವಿದ್ಯಾರ್ಥಿನಿಯಯ ಹಾಸ್ಟೆಲ್ಗೆ ಹೋಗಿ ಕಿರುಕುಳ
- ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ, ಗೋವಾ, ದಾಂಡೇಲಿ, ರೆಸಾರ್ಟ್ಗಳಿಗೆ ಪ್ರವಾಸ
ಧಾರವಾಡ : ಧಾರವಾಡದ ಜಯನಗರದಲ್ಲಿನ ವಿಶ್ವೇಶ್ವರಯ್ಯ ಪಿಯು ವಿಜ್ಞಾನ ಕಾಲೇಜಿನಲ್ಲಿ ನಡೆಯಬಾರದ ಘಟನೆ ನಡೆದುಹೋಗಿದೆ. ವಿದ್ಯಾರ್ಜನೆ ಮಾಡೋ ಜಾಗದಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿರೋ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಸವರಾಜ ಯಡವನ್ನವರ ವಿರುದ್ಧ ವಿದ್ಯಾರ್ಥಿಗಳು ಕಿರುಕುಳ ಆರೋಪ ಮಾಡಿದ್ದಾರೆ. ನೊಂದ ವಿದ್ಯಾರ್ಥಿನಿಯರು ಉಪನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಧ್ಯ ರಾತ್ರಿ 1 ಗಂಟೆ ಹೊತ್ತಿಗೆ ವಿದ್ಯಾರ್ಥಿನಿಯಯ ಹಾಸ್ಟೆಲ್ಗೆ ಹೋಗಿ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ, ಗೋವಾ, ದಾಂಡೇಲಿ, ರೆಸಾರ್ಟ್ಗಳಿಗೆ ಬಸವರಾಜ ಕರೆದುಕೊಂಡು ಹೋಗಿದ್ದ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜ್ಯೂಸ್ ಅಂತಾ ಹೇಳಿ ಬಿಯರ್ ಕುಡಿಸಿ ವಿದ್ಯಾರ್ಥಿನಿಯರು ನಿದ್ದೆಗೆ ಜಾರಿದಾಗ ಶೋಷಣೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿಯ ನೋವು ಕೇಳಬೇಕಾದ ಪ್ರಾಚಾರ್ಯನೂ ಕೂಡಾ ಅಧ್ಯಕ್ಷನಿಗೆ ಸಾಥ್ ಕೊಟ್ಟಿದ್ದಾನೆ. ಈತನೇ ಅಧ್ಯಕ್ಷರ ಜೊತೆ ವಿದ್ಯಾರ್ಥಿನಿಯರನ್ನು ಕಳುಹಿಸಿ ಕೊಡುತ್ತಿದ್ದ ಅನ್ನೋ ಆರೋಪವೂ ಕೇಳಿ ಬಂದಿದೆ.
ಈಗ ಕಾಲೇಜು ಆವರಣದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಕಾಲೇಜಿನ ಬೋಧಕರು ಹಾಗೂ ಭೋಧಕೇತರ ಸಿಬ್ಬಂದಿ ಕಾಲೇಜಿಗೆ ಇಂದು ಹಾಜರಾಗಿಲ್ಲ. ‘ಇಡೀ ಪ್ರಕರಣದ ಕುರಿತು ತನಿಖೆ ಮಾಡಬೇಕು. ಯಾರು ತಪ್ಪಿತಸ್ಥರು ಇದ್ದಾರೆ ಅವರ ಮೇಲೆ ಕಾನೂನು ಕ್ರಮ ಆಗಲಿ’ ಎಂದು ಪೋಷಕರು & ವಿದ್ಯಾರ್ಥಿ ಸಂಘಟನೆಗಳು ಪಟ್ಟು ಹಿಡದಿವೆ.
ಕಾಲೇಜು ಅಧ್ಯಕ್ಷ ಎಸ್ಕೇಪ್, ಪ್ರಿನ್ಸಿಪಾಲ್ ಪೊಲೀಸ್ ವಶಕ್ಕೆ: ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ಕಾಲೇಜಿನ ಪ್ರಾಂಶುಪಾಲರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಮಹಾದೇವ ಕುರವತ್ತಿಗೌಡರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಈತ ಪ್ರಕರಣದ ಎರಡನೇ ಆರೋಪಿ. ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿರುವ ಆರೋಪ ಇದೆ. ಪ್ರಮುಖ ಆರೋಪಿಯಾಗಿರುವ ಬಸವರಾಜ ಯಡವಣ್ಣವರ ಎಸ್ಕೇಪ್ ಆಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಯನ್ನು ವೈದ್ಯಕೀಯ ತಪಾಸಣೆ ಒಳಪಡಿಸಿದ್ದಾರೆ. ಎರಡನೇ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲು ಪೊಲೀಸರು ಕ್ರಮವಹಿಸಿದ್ದಾರೆ.
ಘಟನೆಯಿಂದ ವಿದ್ಯಾರ್ಥಿಗಳ ಪೋಷಕರಿಗೆ ಆತಂಕ : ಧಾರವಾಡದಲ್ಲಿ 30ಕ್ಕೂ ಹೆಚ್ಚು ಖಾಸಗಿ ಕಾಲೇಜಗಳು ಇದೆ. ಧಾರವಾಡ ಹಾಗೂ ಸುತ್ತಮುತ್ತಲಿನ ಜಿಲ್ಲೆ ಮಾತ್ರವಲ್ಲ ಉತ್ತರ ಕರ್ನಾಟಕ, ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಕಲಿಯೋದಕ್ಕೆ ಅಂತಾ ತಮ್ಮ ಹೆಣ್ಣು ಮಕ್ಕಳನ್ನು ಪಾಲಕರು ಕಳುಹಿಸಿಕೊಡ್ತಾರೆ. ಮೊದಲಿನಿಂದಲೂ ಧಾರವಾಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿರೋ ನಗರ. ಹೀಗಾಗಿ ಇಲ್ಲಿ ನಮ್ಮ ಮಕ್ಕಳು ಸುರಕ್ಷಿತವಾಗಿ ಇರ್ತಾರೆ ಅನ್ನೋ ಕಾರಣಕ್ಕಾಗಿಯೇ ಇಲ್ಲಿಗೆ ಕಲಿಯಲು ಕಳುಹಿಸುತ್ತಾರೆ.
ಆದರೆ ಹಾಗೇ ಕಲಿಯಲು ಬಂದ ಕಾಲೇಜಿನ ಅಧ್ಯಕ್ಷನೇ ಹೀಗೆ ಮಾಡಿರೋದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲಿಯೂ ಅಧ್ಯಕ್ಷನ ವರ್ತನೆಯ ಬಗ್ಗೆ ನೊಂದು ವಿದ್ಯಾರ್ಥಿನಿ ಎಫ್ಐಆರ್ನಲ್ಲಿ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಘಟನೆ ಇಡೀ ಧಾರವಾಡಕ್ಕೆ ಕಪ್ಪು ಚುಕ್ಕೆಯಂತಾಗಿದೆ. ಧಾರವಾಡದಲ್ಲಿ ಒಂದು ಕಾಲೇಜಿನಲ್ಲಿ ನಡೆದ ನೀಚ ಕೃತ್ಯಕ್ಕೆ ಇಲ್ಲಿಗೆ ಕಲಿಯಲು ಬಂದಿರೋ ಹೆಣ್ಣು ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸದ್ಯಕ್ಕೆ ಆಯಾ ಕಾಲೇಜಗಳಲ್ಲಿ ವಿದ್ಯಾರ್ಥಿನಿಯರ ದೂರು ಕೇಳಲು ಮಹಿಳಾ ಸೆಲ್ ಕಡ್ಡಾಯವಾಗಿ ಮಾಡಬೇಕಿದೆ ಎಂಬ ಕೂಗು ಕೇಳಿ ಬರುತ್ತಿದೆ.