ಸಂಭ್ರಮ ಮುಗಿದಿದೆ ಮತ್ತು ಆರಂಭವಾಗಿದೆ!

ಇಂದರ್ ಸಾವು, ಬಿಲ್ಕಿಸ್ ನೋವು ಮತ್ತು ಅಮೃತಕಾಲದಲ್ಲಿ ಶತಮಾನದತ್ತ ನಡೆ
(ವ್ಯಂಗ್ಯಚಿತ್ರಕಾರರು ಕಂಡಂತೆ)

ವೇದರಾಜ ಎನ್.ಕೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶಾದ್ಯಂತ ಸಂಭ್ರಮೋಲ್ಲಾಸದಿಂದ ಆಚರಿಸಲಾಗಿದೆ. ಕೆಂಪು ಕೋಟೆಯಿಂದ ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯದ ಶತಮಾನೋತ್ಸವದತ್ತ ಭಾರತದ ಮುನ್ನಡೆಯ ಬಗ್ಗೆ ಮಾತಾಡಿದ್ದಾರೆ. ಇದಕ್ಕೆ ಸ್ವಲ್ಪವೇ ಮೊದಲು ರಾಜಸ್ತಾನದಲ್ಲಿ 9 ವರ್ಷದ ಬಾಲಕ ಇಂದರ್ ಮೇಘ್ವಾಲ್‍ನ ಸಾವಿನ ಸುದ್ದಿ,  ಪ್ರಧಾನಿ ಭಾಷಣ ಮುಗಿಯುವ ವೇಳೆಗೆ ಅಹಮದಾಬಾದಿನ ಗೋಧ್ರಾ ಜೈಲಿನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಅಪರಾಧ ಸಾಬೀತಾಗಿ  ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಹನ್ನೊಂದು  ಮಂದಿಗೆ  ಕ್ಷಮಾದಾನದ ಸುದ್ದಿ  ಬಂದಿವೆ. ಇದಕ್ಕೆ ಮೊದಲು ‘ಹರ್‍ ಘರ್ ತಿರಂಗಾ’ದ  ಸಂಭ್ರಮದ ನಡುವೆ, ಸರಿಯಾಗಿ  75 ವರ್ಷಗಳ ಹಿಂದೆ ಸ್ವತಂತ್ರ ಭಾರತದಲ್ಲಿ ಈಡೇರಿಸ ಬೇಕಾಗಿರುವ ಪ್ರತಿಜ್ಞೆಗಳ ಬಗ್ಗೆ ನೆನಪಿಸಿದ ದೇಶದ ಮೊದಲ ಪ್ರಧಾನ ಮಂತ್ರಿಗಳನ್ನು, ಮತ್ತು ಬಹುಶಃ ಆ ಪ್ರತಿಜ್ಞೆಗಳನ್ನೂ  ಮರೆಸುವ ಪ್ರಯತ್ನಗಳ ವರದಿಗಳು-ಇವೆಲ್ಲ ಕೇವಲ ಕಾಕತಾಳೀಯವೋ, ಅಥವ  ನಮ್ಮ ಮುಂದಿರುವ ಅಮೃತ ಕಾಲದ ಪ್ರತೀಕಗಳೋ?- ಈ ಎಲ್ಲ ಬೆಳವಣಿಗೆಗಳ ಬಗ್ಗೆ ದೇಶದ ವ್ಯಂಗ್ಯಚಿತ್ರಕಾರರ ಸ್ಪಂದನೆಗಳ ಒಂದು ನೋಟ:

ಪ್ರಧಾನ ಮಂತ್ರಿಗಳು ಕೆಂಪು ಕೋಟೆಯಿಂದ ಭ್ರಷ್ಟಾಚಾರ ಮತ್ತು ವಂಶ ರಾಜಕಾರಣ ದೇಶದ ಮುಂದಿರುವ ಎರಡು ಅತಿ ದೊಡ್ಡ ಪ್ರಶ್ನೆಗಳು ಎಂದರು.

“ನಾನು ಭ್ರಷ್ಟರನ್ನು ಬಿಡುವುದಿಲ್ಲ”

“ಅವರು ನಿಮ್ಮ ಪಕ್ಷವನ್ನು ಸೇರುವ ವರೆಗೆ?”
(ಅಲೋಕ್‍ ನಿರಂತರ್, ಫೇಸ್‍ ಬುಕ್)

“ಭ್ರಷ್ಟಾಚಾರ ದೇಶವನ್ನು ಗೆದ್ದಲುಗಳಂತೆ ಟೊಳ್ಳಾಗಿಸುತ್ತಿದೆ” ಎಂದರು ಪ್ರಧಾನಿಗಳು

“ಅವುಗಳಲ್ಲಿ ಕೆಲವು ಹೊಸದರಂತೆ ಕಾಣುತ್ತಿವೆ”
(ಆರ್. ಪ್ರಸಾದ್‍, ಇಕನಾಮಿಕ್‍ ಟೈಮ್ಸ್)

ನಿಜ, ಅಚ್ಛೇ ದಿನ್‍ಗಳ 15ಲಕ್ಷ ರೂ. ಆಗಲೇ ಜುಮ್ಲಾ ಆಗಿಬಿಟ್ಟಿದೆ. ನಂತರ ಮಧ್ಯಪ್ರದೇಶದ ವ್ಯಾಪಂ ನಿಂದ ಕರ್ನಾಟಕದ ಡಬಲ್‍ ಇಂಜಿನ್ ಸರಕಾರದ 40ಶೇ. ಕಮಿಷನ್‍ ವರೆಗೆ, ನಡುವೆ ಚುನಾವಣಾ ಬಾಂಡ್‍ಗಳಂತ ಹತ್ತು ಹಲವು ಗೆದ್ದಲುಗಳು ಹೊಸದಾಗಿ ಸೇರಿಕೊಂಡಿವೆ ಎಂದು ರಾಜಕೀಯ -ಆರ್ಥಿಕ ವಿಶ್ಲೇಷಕರು ನೆನಪಿಸಿಕೊಳ್ಳುತ್ತಿದ್ದಾರೆ.

ಡೈನೆಸ್ಟಿ ಪಾಲಿಟಿಕ್ಸ್ ವರ್ಸಸ್ ಕ್ರೋನಿಯಿಸಂ ಅಂದರೆ ವಂಶ ರಾಜಕೀಯ ಕೀಳೋ ಬಂಟ ಬಂಡವಾಳಶಾಹೀ ರಾಜಕೀಯವೋ ಎಂಬ ಚರ್ಚೆಯಂತೂ ಇತ್ತೀಚೆಗೆ ಇನ್ನೂ ಜೋರಾಗಿದೆ.

***

ಭಾರತ ಇನ್ನು 25 ವರ್ಷಗಳಲ್ಲಿ, ಅಂದರೆ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ ಎಂದು ಪ್ರಧಾನಿಗಳು ಹೇಳಿದ್ದಾರೆ.

ಇದು ಜನಗಳಿಗೆ ನೀಡಿರುವ  ಆಶ್ವಾಸನೆಯೋ  ಅಥವ…..

“ಕಾನೂನು ಸುವ್ಯವಸ್ಥೆ”ಗೆ ನೀಡಿರುವ ಗಡುವು’?

“ನೋಡ್ರಪ್ಪಾ! ನಾವೊಂದು ಸಮಯದ ಗಡುವನ್ನು ಪಾಲಿಸಬೇಕಾಗಿದೆ!”
(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

ಕೆಂಪು ಕೋಟೆಯಲ್ಲಿ ಪ್ರಧಾನ ಮಂತ್ತಿಗಳು “ಒಂದಿಲ್ಲೊಂದು ಕಾರಣದಿಂದ ನಮ್ಮೊಳಗೆ ಒಂದು ಎಂತಹ ವಿಕೃತಿ ಬಂದಿದೆಯೆಂದರೆ, ನಮ್ಮ ನಡೆ-ನುಡಿಗಳಲ್ಲಿ, ನಮ್ಮ ಕೆಲವು ಶಬ್ದಗಳಲ್ಲಿ.. ನಾವು ನಾರಿಯರ ಅಪಮಾನ ಮಾಡುತ್ತೇವೆ. ನಾವು ಸ್ವಭಾವದಿಂದ, ಸಂಸ್ಕಾರದಿಂದ, ದೈನಂದಿನ ಜೀವನದಲ್ಲಿ ನಾರಿಯರನ್ನು ಅಪಮಾನಿತರನ್ನಾಗಿ ಮಾಡುವ ಪ್ರತಿಯೊಂದು ಮಾತಿನಿಂದ ಮುಕ್ತಿಯ ಸಂಕಲ್ಪ ಮಾಡಬಲ್ಲೆವೆಯೇ?” ಎಂದು ಉದ್ಗರಿಸುತ್ತಿರುವಾಗಲೇ, ಇತ್ತ ಅವರ ಸ್ವಂತ ರಾಜ್ಯದ ಸ್ವಂತ ಪಕ್ಷದ ಸರಕಾರ 11 ಅತ್ಯಾಚಾರಿಗಳಿಗೆ ಕ್ಷಮಾದಾನ ನೀಡಿ  ಬಿಡುಗಡೆ ಮಾಡಿದೆ.

“ಬಿಜೆಪಿ ಹೇಳುವುದು : ಮಹಿಳೆಯರನ್ನು ಗೌರವಿಸಿ ಎಂದು ನಾನು ಪ್ರತಿಯೊಬ್ಬರನ್ನೂ ಕೇಳಿಕೊಳ್ಳುತ್ತೇನೆ”
“ಬಿಜೆಪಿ ಮಾಡುವುದು : ಆದ್ದರಿಂದಲೇ ಶಿಕ್ಷೆಗೊಳಗಾಗಿದ್ದ 11 ಅತ್ಯಾಚಾರಿಗಳನ್ನು ಮತ್ತು ಕೊಲೆಗಡಕರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದೇನೆ”
(ಸ್ತಾನಿಟರಿ ಪ್ಯಾನಲ್ಸ್, ಫೇಸ್‍ಬುಕ್)

ಅಚ್ಛೇ ದಿನ್‍ಗಳ ಬೇಟಿ ಬಚಾವೊ ಅಮೃತ ಕಾಲದಲ್ಲಿ,,,

(ಪಿ.ಮಹಮ್ಮದ್, ವಾರ್ತಾಭಾರತಿ)

ಈ ವ್ಯಂಗ್ಯಚಿತ್ರಕಾರರು ಬಿಂಬಿಸಿರುವಂತೆ ಆಚರಣೆಯ ಸಂಭ್ರಮ ಹೀಗೆ ಮುಗಿದಿದೆ
ಮತ್ತು ಆರಂಭವಾಗಿರುವಂತೆಯೂ ಕಾಣುತ್ತಿದೆ.

“ಸಂಭ್ರಮ ಮುಗಿಯಿತು-ಒಳ ಹೋಗು”

“ಸಂಭ್ರಮ ಆರಂಭವಾಯಿತು-ಹೊರ ಬನ್ನಿ”
(ಸತೀಶ ಆಚಾರ್ಯ, ಫೇಸ್‍ಬುಕ್)

ಇನ್ನು 75ರಿಂದ 100 ರತ್ತ  ನಡೆಯ ಸಂಭ್ರಮ….

“ಇದೇ ಅಮೃತದ ಮೊದಲ ಸವಿಯಾದರೆ, ದೂರವುಳಿಯುವುದೇ ಒಳ್ಳೆಯದು”
(.ಪಿ.ಉನ್ನಿ, ಇಂಡಿಯನ್‍ ಎಕ್ಸ್ ಪ್ರೆಸ್)

ನನಗೆ ಶಾಂತಿಯಿಂದ ಭಯವಿಲ್ಲದೆ ಬದುಕುವ ಹಕ್ಕು ಬೇಕು… ನನ್ನ ನೋವು ಮತ್ತು ನ್ಯಾಯಾಂಗದಲ್ಲಿ ನನ್ನ ವಿಶ್ವಾಸ ಅಲುಗಾಡಿರುವುದು ನನಗಾಗಿ ಮಾತ್ರವಲ್ಲ, ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಪ್ರತಿ ಮಹಿಳೆಗಾಗಿ” ಎಂಬುದು ಗುಜರಾತ್‍ ಸರಕಾರದ ಈ ನಿರ್ಣಯಕ್ಕೆ ಬಿಲ್ಕಿಸ್‍ ಬಾನೊ ಅವರ ಮೊದಲ ಪ್ರತಿಕ್ರಿಯೆ ಎಂದು ವರದಿಯಾಗಿದೆ.

***

ಮೂರು ವಾರಗಳ ಹಿಂದೆ ರಾಜಸ್ತಾನದ  ಜಲೋರ್ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯಲ್ಲೊಂದರಲ್ಲಿ ಮೇಲ್ಜಾತಿ ಶಿಕ್ಷಕರಿಗೆಂದು ಇಟ್ಟಿದ್ದ ಮಡಕೆಯಲ್ಲಿದ್ದ  ನೀರು ಕುಡಿದನೆಂದು ಅಮಾನವೀಯವಾಗಿ ಥಳಿಸಲ್ಪಟ್ಟ  9 ವರ್ಷದ ದಲಿತ ವಿದ್ಯಾರ್ಥಿ ಇಂದರ್ ಮೇಘ್ವಾಲ್  ಸಾವನ್ನಪ್ಪಿದ ಸುದ್ದಿ ದೇಶದಲ್ಲಿ ‘ಹರ್ ಘರ್ ತಿರಂಗಾ’ ದ ಸಂಭ್ರಮದ ನಡುವೆ ಬಂದಿದೆ.

“ನಾವು ಈ ಮಡಕೆಯಿಂದ ನೀರು ಕುಡಿಯುವಷ್ಟು ಸ್ವತಂತ್ರರೇ?”
(ಮಂಜುಲ್, ವೈಬ್ಸ್ ಆಫ್‍ ಇಂಡಿಯ)

ನಮ್ಮ ರಾಜಕೀಯ ಸ್ವಾತಂತ್ರ್ಯವು ಸಾಮಾಜಿಕ ಸ್ವಾತಂತ್ರ್ಯವೂ ಆಗಬೇಕು ಎಂದು 75 ವರ್ಷಗಳ ಹಿಂದೆಯೇ ನಾವು ಮನಗಂಡಿದ್ದೆವು. ಸಾಮಾಜಿಕ ಪ್ರಜಾಪ್ರಭುತ್ವದ ತಳಪಾಯವಿಲ್ಲದೆ ರಾಜಕೀಯ ಪ್ರಜಾಪ್ರಭುತ್ವ ಬಹಳ ದಿನ ಉಳಿಯದು  ಎಂದು 73 ವರ್ಷಗಳ ಹಿಂದೆಯೇ ಸಂವಿಧಾನ ಸಭೆಯಲ್ಲಿ ಬಾಬಾಸಾಹೇಬರು ಎಚ್ಚರಿಸಿದ್ದರು.  ಸಾಮಾಜಿಕ ಪ್ರಜಾಪ್ರಭುತ್ವವೆಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವವನ್ನು ಗುರುತಿಸುವ ಜೀವನ ಮಾರ್ಗ ಎಂದಿದ್ದ ಅವರು ಈ ಸುದ್ದಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು?

“ಕೊನೆಗೂ ನೀನು ಸ್ವಾತಂತ್ರ್ಯ ಗಳಿಸಿದೆ ಮಗುವೇ”
(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

ಸಾಮಾಜಿಕ ಪ್ರಜಾಪ್ರಭುತ್ವ ಕಟ್ಟುವಲ್ಲಿ 75 ವರ್ಷಗಳ ಸಾಧನೆಯೇನು?

ಅರ್ಧ ತುಂಬಿದೆ ಅಥವ ಅರ್ಧ ಖಾಲಿ?

“ನಮಗೆ ಅದು ಸದಾ ಪೂರ್ಣ ಖಾಲಿ, ಸಾರ್!”
(ಆರ್. ಪ್ರಸಾದ್, ಇಕನಾಮಿಕ್‍ ಟೈಮ್ಸ್)

5 ಜಿ ಕಾಲದ ಸಮಾಜದ ಈ ಅಸ್ಪೃಶ್ಯತೆ……

(ದಿನೇಶ್‍ ಕುಕ್ಕುಜಡ್ಕ, ಪ್ರಜಾವಾಣಿ)

ಮತ್ತು ಅಮೃತ ಕಾಲದ ಸರಕಾರದ ಈ ಡಿಜಿಟಲ್ ಶ್ರದ್ಧಾಂಜಲಿ….

ಅಮೃತ್‍ಕಾಲ್.ಗವ್.ಇನ್
(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)
***

ಗಾಂಧೀಜಿ ಕನಸಿನಂತೆ ಪ್ರತಿಯೊಂದು ಕಣ್ಣಿಂದ ಪ್ರತಿಯೊಂದು ಹನಿ ಕಣ್ಣೀರನ್ನು ಒರೆಸುವ ವರೆಗೆ ನಮ್ಮ ಕೆಲಸ ಕೊನೆಗೊಳ್ಳದು ಎಂದು ಸರಿಯಾಗಿ 75 ವರ್ಷಗಳ ಹಿಂದೆ ತಮ್ಮ ಐತಿಹಾಸಿಕ ಭಾಷಣದಲ್ಲಿ ನೆನಪಿಸಿದ್ದ ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯ ಹೆಸರು 75ನೇ ವಾರ್ಷಿಕೋತ್ಸವದ ಐತಿಹಾಸಿಕ ಸಂದರ್ಭದ ಪೂರ್ಣಪುಟದ ಸರಕಾರೀ ಜಾಹೀರಾತಿನಲ್ಲಿ ಕಾಣೆಯಾಗಿತ್ತು ಎಂಬುದನ್ನು ಹಲವರು ಗಮನಿಸಿದ್ದಾರೆಂಬುದು ನಮ್ಮ ಸಿಎಂ ಬಗ್ಗೆ ಮತ್ತು ಅಮೃತ ಕಾಲದ ಬಗ್ಗೆ ಏನನ್ನು ಹೇಳುತ್ತದೆ?

(ಪಿ.ಮಹಮ್ಮದ್)

ಅಂಡಮಾನ್‍ನಿಂದ ಬಿಡುಗಡೆಯಾಗಿ ಬಂದ ನಂತರ ಸ್ವಾತಂತ್ರ್ಯ ಹೋರಾಟದಿಂದ ದೂರವೇ ಉಳಿದಿದ್ದ ‘ವೀರ’ರಿಗೆ ಈ ಐತಿಹಾಸಿಕ ಸಂದರ್ಭದಲ್ಲಿ ಜಾಗ ಮಾಡಿಕೊಡಲು ಹಾಗೆ ಮಾಡಲಾಯಿತೇ ಎಂಬುದು ಕೆಲವರ ಊಹಾಪೋಹ.

ಆದರೆ ಬಹುಶಃ ಇದೂ ಒಳ್ಳೆಯ ಕೆಲಸವೇ …..

“ಶಿಲಾಪ್ರತಿಮೆಗಳಾಗಿರುವುದಕ್ಕಿಂತ ಇದೇ ಮೇಲು”!
(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

ಮೊದಲ ಪ್ರಧಾನಿಗಳ ನೆನಪನ್ನು ಅಳಿಸುವುದು ನಮ್ಮ ಸಿಎಂ ಉದ್ದೇಶವೂ ಆಗಿರಲಿಕ್ಕಿಲ್ಲ….
ಏಕೆಂದರೆ ಈ ಮೂಲಕ ಅವರನ್ನು ಬಹಳಷ್ಟು ಮಂದಿ ವಿಶೇಷವಾಗಿ ನೆನಪಿಸಿಕೊಳ್ಳಲು ಅವಕಾಶವಾಗಿದೆ!

***

ಅದೇ ರೀತಿ  ‘ಹರ್ ಘರ್ ತಿರಂಗಾ’ (ಮನೆ-ಮನೆಯಲ್ಲಿ ತ್ರಿವರ್ಣ ಬಾವುಟ) ಅಭಿಯಾನದ ಉದ್ದೇಶವೂ  ಕೂಡ ಕೆಲವರೆನ್ನುವಂತೆ ಕಳೆದ 8 ವರ್ಷಗಳ ವಿಫಲತೆಗಳಿಗೆ (ಬೆಲೆಯೇರಿಕೆ, ನಿರುದ್ಯೋಗ,ಕಪ್ಪು ಹಣ, ದ್ವೇಷ ಭಾಷಣ ಮುಂ.) ಪರದೆಯಾಗಿ ಎಂಬುದು ಕೂಡ ಆಗಿರಲಿಕ್ಕಿಲ್ಲ.

(ಮಂಜುಲ್‍, ವೈಬ್ಸ್ ಆಫ್‍ ಇಂಡಿಯ)

ಏಕೆಂದರೆ ಜನಗಳು (ಮನೆಗಳಿದ್ದವರು) ಸಂಭ್ರಮದಿಂದ ಈ ಅಭಿಯಾನಕ್ಕೆ ಸ್ಪಂದಿಸಿದರು.

ಮತ್ತು ಮನೆಗಳಿಲ್ಲದವರು “ 2022ರ ವೇಳೆಗೆ ಪ್ರತಿಯೊಬ್ಬ ಭಾರತೀಯರಿಗೆ ಪಕ್ಕಾ ಮನೆ ಸಿಗುತ್ತದೆ” ಎಂಬ ಆಶ್ವಾಸನೆಯನ್ನು ನೆನಪಿಸಿಕೊಂಡರು…!

“ಬಾವುಟವಂತೂ ಕೊಟ್ಟಿರಿ, ಮನೆ ಯಾವಾಗ ಕೊಡುತ್ತೀರಿ…”
(ರಾಕೇಶ್‍ ರಂಜನ್, ಮೊಲಿಟಿಕ್ಸ್.ಇನ್)

30 ಕೋಟಿ ಬಾವುಟಗಳು ಮಾರಾಟವಾಗಿ 500 ಕೋಟಿ ರೂ.ಗಳ ವ್ಯವಹಾರ ನಡೆಯಿತು ಎಂದು ವರದಿಯಾಗಿದೆ. ಆಹಾರ ವಸ್ತುಗಳ ಮೇಲೂ ಇತ್ತೀಚೆಗೆ  ಜಿಎಸ್‍ಟಿ ಹೇರಿದ/ ಏರಿಸಿದ ಸರಕಾರ ಯಂತ್ರದಲ್ಲಿ ತಯಾರಾದ ಪಾಲಿಯೆಸ್ಟರ್‍ ಬಾವುಟಗಳಿಗೂ ಅನುಮತಿ ನೀಡಿ, ಅದಕ್ಕೆ ಜಿಎಸ್‍ಟಿಯಿಂದಲೂ  ವಿನಾಯ್ತಿ ನೀಡಿತು ಎಂಬುದು ಬೇರೆ ಮಾತು. ಇದೇ ಸಮಯದಲ್ಲಿ ಅಂಬಾನಿಯ ರಿಲಯಂಸ್‍ ಜಗತ್ತಿನ ಬಹುದೊಡ್ಢ ಪಾಲಿಯೆಸ್ಟರ್ ವ್ಯಾಪಾರಿ ಎಂಬ ಗರಿ ಸಿಕ್ಕಿಸಿಕೊಂಡದ್ದು ಕೇವಲ ಕಾಕತಾಳಿಯವಿರಬಹುದು..

***

ಈ ನಡುವೆ, 20ರೂ. ಕೊಟ್ಟು ತಿರಂಗಾ ಖರೀದಿಸದಿದ್ದರೆ ರೇಷನ್‍ ಕೊಡುವುದಿಲ್ಲ ಎಂದು ಹರ್ಯಾಣದಲ್ಲಿ ಬೆದರಿಸಲಾಗಿದೆ ಎಂಬುದು ದೊಡ್ಡ ಸುದ್ದಿಯಾಯಿತು… ಉತ್ತರಾಖಂಡದ ಆಳುವ ಪಕ್ಷದ ಅಧ್ಯಕ್ಷರು ಯಾವ ಮನೆಗಳ ಮೇಲೆ ತಿರಂಗಾ ಹಾರಿಸಿಲ್ಲವೋ ಅಂತಹ ಮನೆಗಳ ಫೋಟೋ ತನಗೆ ಬೇಕು ಎಂದು ಹೇಳಿರುವುದಾಗಿಯೂ ವರದಿಯಾಗಿದೆ.

“ಕ್ಷಮಿಸು ಮಗಾ, ಇವತ್ತು ಇದನ್ನು ಮಾತ್ರ ಕೊಳ್ಳಲು ಸಾಧ್ಯವಾಯಿತು”
(ಸತೀಶ ಆಚಾರ್ಯ, ಫೇಸ್‍ಬುಕ್)

ಮಹಾತ್ಮ ಗಾಂಧೀ ಕೀ ಜೈ!
(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

ಇದೂ ಕೂಡ ಕೆಲವರ ಅಧಿಕಾರಶಾಹೀ ವರ್ತನೆಯಿಂದಾಗಿ ಇರಬಹುದೇನೋ…
ಏಕೆಂದರೆ, ಈ ವಿಷಯದಲ್ಲಿ ಬಲವಂತ ಇಲ್ಲ ಎಂದು ಕೇಂದ್ರ ಗೃಹ ಮಂತ್ರಾಲಯವೇ ಸ್ಪಷ್ಟನೆ ನೀಡಿದೆ……

ಆದರೂ… ಈ ಕಾರ್ಟೂನಿಸ್ಟರು ಬಿಂಬಿಸುವಂತೆ ಸರಕಾರೀ ಮಾರಾಟ ಈ ಅಮೃತಕಾಲದ ಪ್ರಮುಖ ಲಕ್ಷಣವಾಗಿಯೇ ಇದೆ, ಇರುತ್ತದೆ ಎಂಬುದರಲ್ಲಿ ಬಹಳಷ್ಟು ಸತ್ಯಾಂಶಗಳಿರುವಂತೆ ಕಾಣುತ್ತಿದೆಯಲ್ಲವೇ?

(ಪಂಜು ಗಂಗೊಳ್ಳಿ, ಕನ್ನಡ ಒನ್‍ ನ್ಯೂಸ್)

Donate Janashakthi Media

Leave a Reply

Your email address will not be published. Required fields are marked *