ನವದೆಹಲಿ: ಭಾರತದ ಹಣಕಾಸು ಮತ್ತು ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಯಶವಂತ್ ಸಿನ್ಹಾ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಪ್ರತಿಪಕ್ಷಗಳಿಂದ ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯಾಗಿ ಆಯ್ಕೆಯಾಗಬೇಕಿದ್ದರೆ ಪಕ್ಷದ ಸದಸ್ಯತ್ವ ತೊರೆಯಬೇಕು ಎಂದು ಕಾಂಗ್ರೆಸ್ ಮತ್ತು ಎಡಪಕ್ಷಗಳು ಆಗ್ರಹಿಸಿದ್ದವು. ಹೀಗಾಗಿ ಪ್ರತಿಪಕ್ಷಗಳ ಸಭೆಗೂ ಮುನ್ನವೇ ಯಶವಂತ್ ಸಿನ್ಹಾ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ.
ಯಶವಂತ್ ಸಿನ್ಹಾ 2018ರಲ್ಲಿ ಬಿಜೆಪಿ ತೊರೆದಿದ್ದರು. 2021ರಲ್ಲಿ ಟಿಎಂಸಿ ಪಕ್ಷವನ್ನು ಸೇರಿಕೊಂಡಿದ್ದರು. ಬಳಿಕ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ “ಟಿಎಂಸಿಯಲ್ಲಿ ಮಮತಾ ಜೀ ಅವರು ನನಗೆ ನೀಡಿದ ಗೌರವ ಮತ್ತು ಪ್ರತಿಷ್ಠೆಗೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ವಿರೋಧ ಪಕ್ಷಗಳ ಏಕತೆಗಾಗಿ ಕೆಲಸ ಮಾಡಲು ಈಗ ಒಂದು ದೊಡ್ಡ ರಾಷ್ಟ್ರೀಯ ಉದ್ದೇಶಕ್ಕಾಗಿ ನಾನು ಪಕ್ಷದಿಂದ ದೂರ ಸರಿಯಬೇಕಾದ ಸಮಯ ಬಂದಿದೆ. ಅವರು ಈ ಹೆಜ್ಜೆಯನ್ನು ಅನುಮೋದಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ”ಎಂದಿದ್ದಾರೆ.
ಗೋಪಾಲಕೃಷ್ಣ ಗಾಂಧಿ ಅವರು ರಾಷ್ಟ್ರಪತಿ ಚುನಾವಣೆಯ ಸ್ಪರ್ಧಿಸಲು ನಿರಾಕರಿಸಿದ ಒಂದು ದಿನದ ನಂತರ, ಇಂದು(ಜೂನ್ 21) ಶರದ್ ಪವಾರ್ ನಿವಾಸದಲ್ಲಿ ವಿರೋಧ ಪಕ್ಷಗಳ ನಾಯಕರು ರಾಷ್ಟ್ರಪತಿ ಚುನಾವಣೆಯ ಕುರಿತು ಚರ್ಚೆ ನಡೆಸಲು ಸಭೆ ನಡೆಸಿದರು. ಇದೇ ಸಂದರ್ಭದಲ್ಲಿ ಯಶವಂತ ಸಿನ್ಹಾ ಈ ರೀತಿ ಟ್ವೀಟ್ ಮಾಡಿದ್ದರು.
ಈ ಮೊದಲು ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ) ಶರದ್ ಪವಾರ್, ಮಹಾತ್ಮ ಗಾಂಧಿ ಅವರ ಮೊಮ್ಮಗ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸ್ಪರ್ಧಿಸುವ ಬಗ್ಗೆ ಹೆಸರುಗಳು ಸೂಚನೆ ಬಂದಿತ್ತು.
ಆದರೆ, ಗೋಪಾಲಕೃಷ್ಣ ಗಾಂಧಿ ಅವರು ಸ್ಪರ್ಧೆಸುವುದಿಲ್ಲ ಎಂದರು. ಶರದ್ ಪವಾರ್ ಸಹ ಚುನಾವಣೆಯಲ್ಲಿ ಸ್ಪರ್ಧಿಸಲು ನೀಡಿದ್ದ ಪ್ರಸ್ತಾವವನ್ನು ಈ ಹಿಂದೆಯೇ ತಿರಸ್ಕರಿಸಿದ್ದರು. ಹೀಗಾಗಿ ಪ್ರತಿಪಕ್ಷಗಳು ಯಶವಂತ ಸಿನ್ಹಾ ಅವರನ್ನು ಕಣಕ್ಕಿಳಿಸಲು ಅಂತಿಮಗೊಂಡಿವೆ.
ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣಕ್ಕಿಳಿಯಲಿದ್ದಾರೆ. ಚುನಾವಣೆಗೆ ಜೂನ್ 29ರ ಒಳಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕಿದೆ. ಜುಲೈ 18ರಂದು ಚುನಾವಣೆ ನಡೆಯಲಿದೆ. ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ವಿರೋಧ ಪಕ್ಷಗಳು ಈ ನಿಟ್ಟಿನಲ್ಲಿ ಬಿರುಸಿನ ತಯಾರಿ ನಡೆಸಿವೆ.