ಇಂದೋರ್: ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪ್ರಸಂಗ ಬಂದರೆ, ಅಗ್ನಿವೀರರಿಗೆ ನಾನು ಆದ್ಯತೆ ನೀಡುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ವಿವಾದಕ್ಕೀಡಾಗಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪ್ರಸಂಗ ಬಂದರೆ, ಅಗ್ನಿವೀರರಿಗೆ ನಾನು ಆದ್ಯತೆ ನೀಡುತ್ತೇನೆ’ ಎಂದು ವಿಜಯವರ್ಗೀಯ ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾನುವಾರ ಹೇಳಿದ್ದಾರೆ. ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ವಿಜಯವರ್ಗೀಯ ಅವರು ನೀಡಿದ ಹೇಳಿಕೆಗೆ ವಿವಿಧ ವಲಯಗಳಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಪಕ್ಷಗಳಿಂದ ತೀವ್ರ ವಿರೋಧ : ಸಾಮಾಜಿಕ ಜಾಲತಾಣಗಳಲ್ಲಿ ವಿಜಯವರ್ಗೀಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಮುಖಂಡ ವರುಣ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ರಾಜಕೀಯ ಮುಖಂಡರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ರಕ್ಷಣಾ ಪಡೆಗಳನ್ನು ಅಪಮಾನಿಸಿದ ವಿಜಯವರ್ಗೀಯ ಕ್ಷಮೆ ಕೇಳಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಘಟಕ ಆಗ್ರಹಿಸಿದೆ.
‘ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ‘ಸೆಕ್ಯುರಿಟಿ ಗಾರ್ಡ್’ ಕೆಲಸ ನೀಡುವುದಾಗಿ ವಿಜಯವರ್ಗೀಯ ಹೇಳಿದ್ದಾರೆ. 2019ರಲ್ಲಿ ಬಿಜೆಪಿ ಆರಂಭಿಸಿದ್ದ ‘ನಾನೂ ಚೌಕಿದಾರ’ ಅಭಿಯಾನದ ಅರ್ಥ ಏನು ಎಂಬುದು ಈಗ ಸ್ಪಷ್ಟಗೊಂಡಿದೆ’ ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಹೇಳಿದ್ದಾರೆ.
ಕ್ಷೌರಿಕ ಅಂಗಡಿ ತೆರಯಲು ಅವಕಾಶ : ಕೇಂದ್ರ ಸರ್ಕಾರದ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ಅನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕೇಂದ್ರ ನಾಯಕರು ನೀಡುತ್ತಿರುವ ಹೇಳಿಕೆಗಳು ವಿವಾದಕ್ಕೀಡಾಗುತ್ತಿದ್ದು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಬೆನ್ನಲ್ಲೇ ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿಕೆ ವಿವಾದಕ್ಕೆ ಗ್ರಾಸವಾಗಿದೆ.
ಅಗ್ನಿವೀರರು ಸೇನೆಯಿಂದ ಹೊರಬಂದ ಬಳಿಕ ಅವರಿಗೆ ವಾಹನ ಚಾಲನೆ, ಎಲೆಕ್ಟ್ರಿಷಿಯನ್, ಪ್ಲಂಬಿಂಗ್ ಹಾಗೂ ಕ್ಷೌರಿಕರ ತರಬೇತಿ ನೀಡಲಾಗುವುದು ಎಂದು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರು ಹೇಳಿಕೆ ನೀಡಿದ್ದು, ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಕಿಶನ್ ರೆಡ್ಡಿ ಅವರ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ‘ಇದು ದೇಶದ ನಿರುದ್ಯೋಗಿ ಯುವಕರು ಹಾಗೂ ಸೇನಾಪಡೆಯ ಶೌರ್ಯಕ್ಕೆ ಮಾಡಿದ ದೊಡ್ಡ ಅಪಮಾನ ಎಂದು ಟೀಕಿಸಿವೆ.