ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದು ನಿರೀಕ್ಷೆಯಂತೆ ಬಿಜೆಪಿಯ ಮೂವರು ಅಭ್ಯರ್ಥಿಗಳು ಹಾಗು ಕಾಂಗ್ರೆಸ್ಸಿನ ಓರ್ವ ಅಭ್ಯರ್ಥಿ ಜಯಗಳಿಸಿದ್ದಾರೆ.
ಬಿಜೆಪಿಯ ಮೊದಲನೇ ಅಭ್ಯರ್ಥಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ 46 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಎರಡನೇ ಅಭ್ಯರ್ಥಿ ಜಗ್ಗೇಶ್ 44, ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ 33 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಯಾರೆಲ್ಲಾ ರಾಜ್ಯಸಭೆಗೆ ಆಯ್ಕೆ..?
ನಿರ್ಮಲಾ ಸೀತಾರಾಮನ್ (ಬಿಜೆಪಿ)
ಜಗ್ಗೇಶ್ (ಬಿಜೆಪಿ)
ಲೆಹರ್ ಸಿಂಗ್ (ಬಿಜೆಪಿ
ಜೈರಾಂ ರಮೇಶ್ (ಕಾಂಗ್ರೆಸ್)
ಕಾಂಗ್ರೆಸ್ ಮೊದಲನೇ ಅಭ್ಯರ್ಥಿ ಜೈರಾಂ ರಮೇಶ್ 46 ಮತ ಪಡೆದು ಗೆಲುವು ಸಾಧಿಸಿದರೆ, ಎರಡನೇ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ 25 ಮತ ಪಡೆದುಕೊಂಡು ಸೋಲುಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ 30 ಮತ ಪಡೆದು ಸೋಲುಂಡಿದ್ದಾರೆ. ಇದರೊಂದಿಗೆ ಬಿಜೆಪಿ 3 ಕಾಂಗ್ರೆಸ್ 1 ಸ್ಥಾನ ಗಳಿಸಿದೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಜೆಡಿಎಸ್ 32, ಕಾಂಗ್ರೆಸ್ 70, ಬಿಜೆಪಿ 122 ಸದಸ್ಯ ಬಲ ಹೊಂದಿವೆ. ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ.
ಇಬ್ಬರ ಜಗಳ ಮೂರನೇಯವರಿಗೆ ಲಾಭ : ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ತಿಕ್ಕಾಟದಿಂದ ಬಿಜೆಪಿಯ ಲೆಹರ್ ಸಿಂಗ್ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ – ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಬಿಜೆಪಿ ಸೋಲುತ್ತಿತ್ತು. ಆದರೆ ಇವರಿಬ್ಬರ ಪ್ರತಿಷ್ಠೆಯಿಂದ ಬಿಜೆಪಿ ಗೆಲ್ಲುವಂತಾಯಿತು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.