ರಾಜ್ಯಸಭೆ ಚುನಾವಣಾ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಕುಮಾರಸ್ವಾಮಿ

ಬೆಂಗಳೂರು: ರಾಜ್ಯಸಭೆ ಚುನಾವಣಾ ಕಣದಿಂದ ತಮ್ಮ ಪಕ್ಷದ ಅಭ್ಯರ್ಥಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಪಕ್ಷದ ನಾಯಕ ಹೆಚ್. ಡಿ. ಕುಮಾರಸ್ವಾಮಿ ಖಡಕ್‌ ಆಗಿ ಉತ್ತರಿಸಿದ್ದಾರೆ.

ಜೆಪಿ ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರು ಹೇಳಿದ್ದೆಲ್ಲವನ್ನೂ ಒಪ್ಪಿಕೊಳ್ಳಬೇಕೆ?. ನಾವು 32 ಮಂದಿ ಶಾಸಕರು ಇದ್ದೇವೆ. ಕಾಂಗ್ರೆಸ್ ನವರು 25 ಜನ. ಯಾರ ಬಳಿ ಹೆಚ್ಚು ಮತಗಳು ಇವೆ ಹೇಳಿ, ಇವರ ದಬ್ಬಾಳಿಕೆಗೆಲ್ಲಾ ನಾವು ಬಗ್ಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ನಮ್ಮ ಅಭ್ಯರ್ಥಿ ಚುನಾವಣಾ ಕಣದಿಂದ ಯಾಕೆ ಹಿಂದೆ ಸರಿಯಬೇಕು? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನಾವೇನು ಸಂಧಾನ ಮಾಡುತ್ತಿಲ್ಲ. ನನ್ನ ಬಳಿ ಯಾರು ಸಂಧಾನಕ್ಕೆ ಬಂದಿದ್ದಾರೆ ಅನ್ನುವುದನ್ನು ಅವರೇ ಹೇಳಲಿ ಎಂದರು.

ಅವರು, ನಮ್ಮ ಜೊತೆ ಸಮಾಲೋಚನೆ ಮಾಡಿ ಅಭ್ಯರ್ಥಿ ಕಣಕ್ಕೆ ಇಳಿಸಿದರಾ?. ಬೆಂಬಲ ಕೊಡಿ ಎಂದು ನಮ್ಮ ಪಕ್ಷದ ಅಧ್ಯಕ್ಷರನ್ನು ಕೇಳಬಹುದಾಗಿತ್ತಲ್ಲವೇ, ಅವರು ಸಿ.ಎಂ.ಇಬ್ರಾಹಿಂ ಅವರಿಗೆ ಹಳೆಯ ಸ್ನೇಹಿತರು ಕೂಡ. ಆದರೆ, ಈಗ ವಾಪಸ್ಸು ತೆಗೆದುಕೊಳ್ಳಲಿ ಎಂದು ಹೇಳುವುದು ಬಂಡತನ. ನಾವೇನು ಇವರ ಗುಲಾಮರ?. ಅವರು ಕಾಂಗ್ರೆಸ್​​ಗೆ ಹೋದ ಬಳಿಕ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲು ಎಷ್ಟು ಬಾರಿ ಬೆಂಬಲ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ನಾವು ಇಬ್ರಾಹಿಂ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದೇವೆ. ಇವರು ಎಷ್ಟು ಜನ ಅಲ್ಪಸಂಖ್ಯಾತರ ಕುತ್ತಿಗೆ ಕೊಯ್ದಿಲ್ಲ ಹೇಳಿ ಎಂದು ಹೆಚ್​ ಡಿ ಕೆ ಕುಮಾರಸ್ವಾಮಿ ಕಿಡಿಕಾರಿದರು.

ಬಿಜೆಪಿಯನ್ನು ಸೋಲಿಸಲು ಎಲ್ಲದಕ್ಕೂ ಸಿದ್ದನಿದ್ದೇನೆ. ಇದಕ್ಕಿಂತ ಓಪನ್ ಆಫರ್ ಏನು ಕೊಡಲಿ. ಯಾರಿಗಿದೆ ಇಲ್ಲಿ ಆತ್ಮಸಾಕ್ಷಿ. ನಾಳೆ ಮಧ್ಯಾಹ್ನದ ವೇಳೆಗೆ ಎಲ್ಲವೂ ಬಹಿರಂಗೊಳ್ಳಲಿದೆ. ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಎಲ್ಲಾ ಶಾಸಕರ ಬೆಂಬಲ ಕೋರಿದ್ದಾರೆ. ನಮ್ಮ ಪಕ್ಷದ 32 ಶಾಸಕರು ಒಟ್ಟಾಗಿ ಮತ ನೀಡುತ್ತಾರೆ, ಒಟ್ಟಾಗಿ ತೀರ್ಮಾನ ಮಾಡುತ್ತಾರೆ.‌ ಜಿ.ಟಿ. ದೇವೇಗೌಡ, ಶ್ರೀನಿವಾಸಗೌಡ, ಶಿವಲಿಂಗೇಗೌಡ ಸೇರಿದಂತೆ ಎಲ್ಲರೊಂದಿಗೂ ಮಾತನಾಡಿದ್ದೇವೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಬಂಡೆಪ್ಪ ಖಾಶೇಂಪೂರ್, ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ರಾಜ್ಯಸಭೆ ಅಭ್ಯರ್ಥಿ ಕುಪೇಂದ್ರ ರೆಡ್ಡಿ, ಶಾಸಕ ಅನ್ನದಾನಿ ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *