ಗುರಿ ಮುಟ್ಟಲು ಮೋದಿ ಬಹಳ ದೂರ ಕ್ರಮಿಸಬೇಕಿದೆ

ಭಾರತದ ಅರ್ಥವ್ಯವಸ್ಥೆಗೆ ಹೊಸ ಅರ್ಥಿಕ ನೀತಿ ಬೇಕಿದೆ ಅಸಂಬದ್ಧ ಘೋಷಣೆಗಳಲ್ಲ

ಸುಬ್ರಮಣ್ಯನ್‌ ಸ್ವಾಮಿ
ಅನುವಾದ: ನಾ ದಿವಾಕರ

ಮೇ 31 2022ರಂದು ರಾಷ್ಟ್ರೀಯ ಆದಾಯದ ತಾತ್ಕಾಲಿಕ ಅಂದಾಜು ಪ್ರಕಟಿಸಿದ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) 2021-22ರ ಆರ್ಥಿಕ ವರದಿಯನ್ನು ಬಿಡುಗಡೆ ಮಾಡಿದೆ. 2020-21ರ ಹಣಕಾಸು ವರ್ಷಕ್ಕೆ ಹೋಲಿಸಿದರೆ, ವಾರ್ಷಿಕ ಸಮಾನಾರ್ಥಕವಾಗಿ ಏಪ್ರಿಲ್‌ 1-ಮಾರ್ಚ್‌ 31 2022 ರ ಹಣಕಾಸು ವರ್ಷದಲ್ಲಿ ನಾಲ್ಕನೆ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ದರ ಶೇ 4.1ರಷ್ಟಿರುತ್ತದೆ ಎಂದು ಹೇಳಿದೆ. 2020-21ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌ 1 ರಿಂದ ಜೂನ್‌ 30) ಎನ್‌ಎಸ್‌ಒ ಮಾಹಿತಿಯ ಅನುಸಾರ ಜಿಡಿಪಿ ಬೆಳವಣಿಗೆಯ ದರ ಶೇ -23.8 ರಷ್ಟಿತ್ತು. ಇದು ಕೋವಿದ್‌ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿದ್ದ ಅವಧಿಯಾಗಿತ್ತು. ಇದರ ನಂತರದ ಮೂರು ತ್ರೈಮಾಸಿಕ ಅವಧಿಯಲ್ಲಿ ಒಟ್ಟು ಬೆಳವಣಿಗೆಯ ದರ ನಕಾರಾತ್ಮವಾಗಿಯೇ ಮುಂದುವರೆದಿತ್ತು.  ಹಾಗಾಗಿಯೇ 2020-21ರ ಹಣಕಾಸು ವರ್ಷದಲ್ಲಿ ನಾಲ್ಕು ತ್ರೈಮಾಸಿಕಗಳ ವಾರ್ಷಿಕ ಜಿಡಿಪಿ ಬೆಳವಣಿಗೆ ಶೇ -4.8ರಷ್ಟಿತ್ತು.

ಇಲ್ಲಿ ನರೇಂದ್ರ ಮೋದಿ ಸರ್ಕಾರ ಅವಶ್ಯವಾಗಿ ಗಮನಿಸಲೇಬೇಕಾದ ಎರಡು ವಾಸ್ತವ ಸಂಗತಿಗಳಿವೆ. ಮೊದಲನೆಯದಾಗಿ, ಭಾರತದ ಆರ್ಥಿಕತೆಯು 2016ರಿಂದಲೂ ಸತತವಾಗಿ ಕುಸಿಯುತ್ತಲೇ ಇದೆ.  ಅರ್ಥಶಾಸ್ತ್ರಜ್ಞರು 1950-77ರ ಅವಧಿಯ ಕಾಂಗ್ರೆಸ್‌ ಆಡಳಿತಾವಧಿಯ ಜಿಡಿಪಿ ಬೆಳವಣಿಗೆಯನ್ನು  “ ಹಿಂದೂ ಬೆಳವಣಿಗೆಯ ದರ ” ಎಂದು ಗುರುತಿಸಿದ್ದಾರೆ. ಇದು ಶೇ 3.5 ರಿಂದ ಶೇ 4ರವರೆಗೆ ಜಿಡಿಪಿ ಬೆಳವಣಿಗೆಯನ್ನು ಸೂಚಿಸುತ್ತದೆ. 2016ರ ನಂತರದ ಬೆಳವಣಿಗೆ ಇದಕ್ಕಿಂತಲೂ ಕಡಿಮೆ ಇರುವುದನ್ನು ಗಮನಿಸಬೇಕಿದೆ. ಎರಡನೆಯದಾಗಿ, 2014ರಿಂದ ಬಿಜೆಪಿ ಆಡಳಿತಾವಧಿಯಲ್ಲಿ ನರೇಂದ್ರ ಮೋದಿ ಅನುಸರಿಸಿದ `ವಿಕಾಸʼದ ಮಾರ್ಗ ಬಹುಪಾಲು ಜವಹರಲಾಲ್‌ ನೆಹರೂ ಅವರ  `ಹಿಂದೂ ಬೆಳವಣಿಗೆಯ ದರ ʼದ  ಯೋಜನೆಯನ್ನೇ ಹೋಲುತ್ತದೆ. ಪಿ ವಿ ನರಸಿಂಹರಾವ್‌ ಅವರ ಅವಧಿಯಲ್ಲಿ ಜಾರಿಗೊಳಿಸಿದ ರಾಚನಿಕ ಸುಧಾರಣೆಗಳನ್ನು ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಿದಂತೆ ಕಾಣುವುದಿಲ್ಲ. 2016ರಿಂದ ಈವರೆಗೆ ಜಿಡಿಪಿ ಬೆಳವಣಿಗೆಯ ದರದಲ್ಲಿ ಕುಸಿತವನು ಗಮನಿಸಿದರೆ, ವಿಕಾಸದ ಮಾರ್ಗ ಅನುಸರಿಸುತ್ತಿರುವ ಸರ್ಕಾರದ ಮಟ್ಟಿಗೆ ನಾಚಿಕೆಗೇಡಿನ ಸಂಗತಿ ಎನಿಸುತ್ತದೆ.

2016ರಿಂದ ಜಿಡಿಪಿ ಬೆಳವಣಿಗೆಯ ದರ ನಿರಂತರವಾಗಿ ಕುಸಿಯುತ್ತಿರುವುದೇ ಅಲ್ಲದೆ, ಪ್ರಮುಖ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸದೆ ಸಾಧಿಸಲು ಅಸಾಧ್ಯವಾದ ನಿರೀಕ್ಷೆಗಳನ್ನು ಅಬ್ಬರದಿಂದ ಪ್ರಚಾರ ಮಾಡಲಾಗಿದೆ. ಉದಾಹರಣೆಗೆ 2024-25ರ ವೇಳೆಗೆ ಭಾರತ ಐದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗುತ್ತದೆ ಎಂದು 2019ರಲ್ಲೇ ಘೋಷಿಸಲಾಗಿದೆ. ಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಪಡೆದ ಈ ನಿರೀಕ್ಷಿತ ಬೆಳವಣಿಗೆಯನ್ನು ಸಾಕಾರಗೊಳಿಸಬೇಕಾದರೆ ಭಾರತದ ಆರ್ಥಿಕತೆ ವಾರ್ಷಿಕ ಶೇ 14.8ರಷ್ಟು ಜಿಡಿಪಿ ಬೆಳವಣಿಗೆಯನ್ನು ಸಾಧಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ನರೇಂದ್ರ ಮೋದಿಯವರ ನಿರೀಕ್ಷಿತ ʼ ಮೋದಿನಾಮಿಕ್ಸ್‌ ʼ ಬಗ್ಗೆ ಸಾರ್ವಜನಿಕ ಚರ್ಚೆಗೆ ಯಾವುದೇ ಸರ್ಕಾರಿ ಅಧಿಕಾರಿ ಮುಂದಾದರೂ ನಾನು ತಯಾರಿದ್ದೇನೆ. ಒಟ್ಟಾರೆ ಹೇಳುವುದಾದರೆ 2014 ರಿಂದ ಇಲ್ಲಿಯವರೆಗೆ ತಮ್ಮ ಆಡಳಿತಾವಧಿಯಲ್ಲಿ ಪ್ರಧಾನಿ ಮೋದಿ ಯಾವುದೇ ಘೋಷಿತ ಬೃಹದಾರ್ಥಿಕ ಗುರಿಯನ್ನು ತಲುಪುವ ಪ್ರಯತ್ನಗಳನ್ನು ಮಾಡಿಲ್ಲ.

ಏನು ಮಾಡಬೇಕು ?

ಭಾರತದ ಆರ್ಥಿಕತೆಗೆ ಇಂದು ಅಗತ್ಯವಾಗಿರುವುದು ನಿರ್ದಿಷ್ಟ ವಸ್ತುನಿಷ್ಠ ಗುರಿ ಹೊಂದಿರುವ, ಸ್ಪಷ್ಟ ಆದ್ಯತೆಗಳನ್ನು ಹೊಂದಿರುವ ಮತ್ತು ಗುರಿ ಸಾಧಿಸಲು ಸ್ಪಷ್ಟ ರಣತಂತ್ರವನ್ನು ಹೊಂದಿರುವಂತಹ ಒಂದು ಹೊಸ ಆರ್ಥಿಕ ನೀತಿ. ಇದಕ್ಕೆ ಪೂರಕವಾಗಿ ಜಾಣ್ಮೆಯ, ಪಾರದರ್ಶಕವಾದ ಸಂಪನ್ಮೂಲ ಕ್ರೋಢೀಕರಣದ ಯೋಜನೆಯೂ ಅತ್ಯವಶ್ಯ. 2004ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರವು ತಮ್ಮ ಭ್ರಮಾತ್ಮಕ “ಭಾರತ ಪ್ರಕಾಶಿಸುತ್ತಿದೆ” ಎಂಬ ಘೋಷಣೆಯನ್ನೇ ಮುಂದಿಟ್ಟುಕೊಂಡು, ಆರು ತಿಂಗಳು ಮುಂಚಿತವಾಗಿಯೇ ಲೋಕಸಭಾ ಚುನಾವಣೆಗಳನ್ನೆದುರಿಸಿ ದಯನೀಯವಾಗಿ ಸೋಲು ಅನುಭವಿಸಿತ್ತು. ಇದರ ನಂತರ ಹತ್ತು ವರ್ಷಗಳ ಕಾಲ ಬಿಜೆಪಿ ಅಧಿಕಾರಕ್ಕೆ ಬರಲಾಗಲಿಲ್ಲ. 2014ರಲ್ಲಿ ೨ಜಿ ತರಂಗಾಂತದ ಹಗರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪು, ಮಂಜೂರಾದ ಪರವಾನಗಿಯ ರದ್ದತಿ, ರಾಮಮಂದಿರ ನಿರ್ಮಾಣದ ಭರವಸೆ ಮತ್ತು ಕುಸಿಯುತ್ತಿದ್ದ ಆರ್ಥಿಕತೆಯ ಪರಿಣಾಮವಾಗಿ ಬಿಜೆಪಿ ಮರಳಿ ಅಧಿಕಾರದ ಗದ್ದುಗೆ ಏರಿತ್ತು.

ಇಂದು ಬಿಜೆಪಿ ಎಂಟು ವರ್ಷಗಳ ಆಡಳಿತವನ್ನು ಪೂರೈಸಿದೆ. ಕೊಂಚ ಮಟ್ಟಿಗೆ ಸಾಮಾಜಿಕ-ಧಾರ್ಮಿಕ ನೆಲೆಯಲ್ಲಿನ ಸಾಫಲ್ಯ ಬಿಜೆಪಿಯ ಕಾರ್ಯಕರ್ತರ ಉತ್ಸಾಹವನ್ನು ಉದ್ದೀಪನಗೊಳಿಸಿದ್ದರೂ, 2024ರ ಚುನಾವಣೆಯ ಫಲಿತಾಂಶವನ್ನು ಖಚಿತವಾಗಿ ನಿರೀಕ್ಷಿಸಲಾಗುವುದಿಲ್ಲ. ಪಂಜಾಬ್‌ ಮತ್ತು ಪಶ್ಚಿಮ ಬಂಗಾಲದ ಚುನಾವಣಾ ಫಲಿತಾಂಶಗಳೂ ಸಹ ಶುಭಸೂಚನೆಯನ್ನೇನೂ ನೀಡಿಲ್ಲ. ಇತ್ತೀಚೆಗೆ ನಡೆದ ಉತ್ತರಪ್ರದೇಶ ಚುನಾವಣೆಗಳಲ್ಲಿ ಬಹುತೇಕ ಸ್ಥಾನಗಳಲ್ಲಿ ಬಿಜೆಪಿಯ ಗೆಲುವಿನ ಅಂತರ ಕಡಿಮೆಯಾಗಿದೆ. ನನ್ನ ಅಭಿಪ್ರಾಯದಲ್ಲಿ, ಈಗ ಕಂಡುಬರುತ್ತಿರುವ ಆರ್ಥಿಕ ವೈಫಲ್ಯಗಳೂ 2024ರ ಚುನಾವಣೆಯ ಬಗ್ಗೆ ಇರುವ ನಿರೀಕ್ಷೆಗಳನ್ನು ಹುಸಿಗೊಳಿಸಲು ನೆರವಾಗಬಹುದು. ಹತಾಶ ರಾಜಕೀಯ ತೀವ್ರಗಾಮಿಗಳಿಂದ ಪ್ರಜಾತಂತ್ರ ವ್ಯವಸ್ಥೆಯೇ ಅಪಾಯ ಎದುರಿಸಬಹುದು.

ಪ್ರತಿಯೊಂದು ದೇಶದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯು ನಾಲ್ಕು ಸ್ತಂಭಗಳನ್ನು ಆಶ್ರಯಿಸುತ್ತದೆ. ಚುನಾಯಕ ರಾಜಕಾರಣದ ಔಚಿತ್ಯ, ಸಾಂವಿಧಾನಿಕ ರಕ್ಷಣಾ ಕ್ರಮಗಳು, ಕಾರ್ಯತಃ ಸ್ವತಂತ್ರವಾಗಿರುವ ಸಂಸ್ಥೆಗಳು ಮತ್ತು ವಿಶ್ವಾಸಾರ್ಹ ಉತ್ತರದಾಯಿತ್ವ.  ಕೇವಲ ಚುನಾವಣೆಗಳು ಮಾತ್ರವೇ ಪ್ರಜಾಪ್ರಭುತ್ವದ ಉಳಿವಿಗೆ ಸಾಕಾಗುವುದಿಲ್ಲ. ಇಲ್ಲಿ ಮಾರುಕಟ್ಟೆ ಮತ್ತು ಪ್ರಜಾತಂತ್ರದ ನಡುವೆ ಇರುವ ಸಂಘರ್ಷವನ್ನು ನಿವಾರಿಸಬೇಕಾಗುತ್ತದೆ. ಭ್ರಷ್ಟತೆಗೆ ಒಳಗಾಗದ ಬಹುಸಂಖ್ಯಾತ ಬಡ ಜನತೆಯ ಸಬಲೀಕರಣದ ಮೂಲಕ ಚಾಲ್ತಿಯಲ್ಲಿರಬಹುದಾದ ಒಂದು ಅತ್ಯುತ್ಸಾಹಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಅಲ್ಪಸಂಖ್ಯೆಯಲ್ಲಿರುವ ಶ್ರೀಮಂತ ಬಂಡವಾಳಶಾಹಿಗಳ  ಮತ್ತು ಉದ್ಯಮಿಗಳ ಹಿತಾಸಕ್ತಿಗೆ ವ್ಯತಿರಿಕ್ತವಾದ ಶಾಸನಗಳನ್ನು ಜಾರಿಗಳಿಸುವ ಒತ್ತಡಗಳು ಸಹಜವಾಗಿಯೇ ಹೆಚ್ಚಾಗಿರುತ್ತದೆ. ಮತ್ತೊಂದೆಡೆ ಸಬಲೀಕರಣಗೊಂಡ ಅಲ್ಪಸಂಖ್ಯೆಯ ಶ್ರೀಮಂತ ವರ್ಗಗಳಿಗೆ ಬಂಡವಾಳವನ್ನು ಸುಲಭವಾಗಿ ಎಟುಕುವಂತೆ ಮಾಡುವ ಮಾರುಕಟ್ಟೆ ಆರ್ಥಿಕತೆಯಲ್ಲಿ ಮಾಧ್ಯಮ, ಕೌಶಲ್ಯ ಮತ್ತು ಇತರ ಜಾಲಗಳ ಮೇಲೆ ಸುಲಭವಾಗಿ ನಿಯಂತ್ರಣ ಸಾಧಿಸುವ ಬಂಡವಳಿಗ ವರ್ಗವು ಚುನಾವಣಾ ವ್ಯವಸ್ಥೆಗೆ ಹಣಕಾಸು ನೆರವು ಒದಗಿಸುತ್ತಲೇ ಅದನ್ನು ನಗಣ್ಯಗೊಳಿಸುವ ಸಾಧ್ಯತೆಗಳೂ ಇರುತ್ತವೆ. ಆದುದರಿಂದ ಪ್ರಜಾತಂತ್ರ ವ್ಯವಸ್ಥೆಯ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ನರಸಿಂಹರಾವ್‌ ಅವರಂತಹ ಆರ್ಥಿಕ ಸುಧಾರಣೆಯ ಹರಿಕಾರರೂ ಭಾರತದಲ್ಲಿ ಚುನಾವಣಾ ವೈಫಲ್ಯ ಎದುರಿಸಿರುವುದನ್ನು ಗಮನಿಸಬೇಕಿದೆ.

ಹಾಗಾಗಿ ಸುಧಾರಣೆಗಳ ಮಾದರಿ ಮುಖ್ಯವಾಗುತ್ತದೆ. ಈ ಸುಧಾರಣೆಗಳನ್ನು ಜಾರಿಗೊಳಿಸುವವರು ಚುನಾವಣೆಗಳಲ್ಲಿ ಗೆಲ್ಲಬೇಕಾಗುತ್ತದೆ. ಇಲ್ಲಿ ಕೆಲವು ಉದಾಹರಣೆಗಳನ್ನು ಗಮನಿಸುವುದಾದರೆ, ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿರುವ ಜಪಾನ್‌ ಯಾವುದೇ ರೀತಿಯ ವಿವೇಕಯುತ ನಿಯಮಗಳಿಲ್ಲದ ಉತ್ತರದಾಯಿತ್ವ ಇಲ್ಲದ ಅಪಾರದರ್ಶಕ ಹಣಕಾಸು ವ್ಯವಸ್ಥೆಯನ್ನು ಸ್ಥಾಪಿಸಲು ಹೇಗೆ ಬಂಡವಾಳ ಸ್ನೇಹಿ ವಾತಾವರಣವನ್ನು ಸೃಷ್ಟಿಸಬೇಕಾಯಿತು ಎಂದು ಗಮನಿಸಬೇಕು. ಹಾಗೆಯೇ ನೂತನ ಹಣಕಾಸು ಉತ್ಪನ್ನಗಳನ್ನು ನಿಯಂತ್ರಿಸುವ ಯಾವುದೇ ಸ್ಪಷ್ಟ ಶಾಸನಗಳನ್ನು ಹೊಂದಿರದಿದ್ದರೂ ಅಮೆರಿಕ ಮಾರುಕಟ್ಟೆ ದುರಾಸೆಯ ಹಾದಿಗಳಿಗೆ ಮುಕ್ತ ಅವಕಾಶ ನೀಡಿದ್ದರಿಂದ 2007-09ರ ಹಣಕಾಸು ಬಿಕ್ಕಟ್ಟನ್ನು ಎದುರಿಸಿತ್ತು ಎನ್ನುವುದನ್ನೂ ಗಮನಿಸಬೇಕು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ, ದಲ್ಲಾಳಿಗಳು ಚುನಾವಣೆಗಳ ಮೇಲೆ ಪಾರಮ್ಯ ಸಾಧಿಸದಿರುವಂತೆ ಎಚ್ಚರ ವಹಿಸಬೇಕಾಗುತ್ತದೆ. (ಸಾಮಾನ್ಯವಾಗಿ ಶ್ರೀಮಂತ ಬಂಡವಳಿಗರಿಗೆ ಪರವಾನಗಿ, ಮಂಜೂರಾತಿಯನ್ನು ಒದಗಿಸಲು ದಲ್ಲಾಳಿಗಳಂತೆ ಕಾರ್ಯನಿರ್ವಹಿಸುವವರು ಆರ್ಥಿಕ ನಿಬಂಧನೆಗಳಿಲ್ಲದ ಸುಧಾರಣಾ ನೀತಿಯಿಂದ ತಮ್ಮ ಆದಾಯವನ್ನು ಕಳೆದುಕೊಳ್ಳುತ್ತಾರೆ.) ಹಾಗೆಯೇ ಸುಧಾರಣಾ ಕ್ರಮಗಳಿಂದ ತಕ್ಷಣಕ್ಕೆ ಯಾವುದೇ ಉಪಯೋಗ ಪಡೆಯದ ಅಸಂಘಟಿತ ವಲಯದ ಬಡ ಜನರನ್ನು ಸಂತೃಪ್ತಿಪಡಿಸಲು ಹಣದುಬ್ಬರ ನಿಯಂತ್ರಿಸಿ ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಬೇಕಾಗುತ್ತದೆ. ಆರ್ಥಿಕ ನಿಬಂಧನೆಗಳನ್ನು ತೆರವುಗೊಳಿಸುವುದೆಂದರೆ ಸರ್ಕಾರಗಳು ಸಕಾರಾತ್ಮಕ ಕ್ರಮಗಳಿಂದ ಹಿಂದೆಗೆಯಬೇಕಿಲ್ಲ. ಜನತೆಯ ಸುರಕ್ಷತಾ ಜಾಲಗಳನ್ನು ದುರ್ಬಲಗೊಳಿಸಬೇಕಿಲ್ಲ. ಸಮಾನ ಅವಕಾಶಗಳನ್ನು ಕಲ್ಪಿಸುವುದಕ್ಕೆ ಹಿಂಜರಿಯಬೇಕಿಲ್ಲ. ಮಾರುಕಟ್ಟೆ ವೈಫಲ್ಯಗಳನ್ನು ಸಹಿಸಿಕೊಳ್ಳಬೇಕೆಂದೂ ಇಲ್ಲ.

ನಿಬಂಧನೆಗಳನ್ನು ಸಡಿಲಗೊಳಿಸುವ ಪ್ರಕ್ರಿಯೆಯು ತೀವ್ರಗೊಂಡಂತೆಲ್ಲಾ ಉಲ್ಬಣಿಸಬಹುದಾದ ಸಾಮಾಜಿಕ ಕ್ಷೋಭೆಯನ್ನು ನಿಭಾಯಿಸಲು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಸಜ್ಜುಗೊಳಿಸಿ ಬಲಪಡಿಸಬೇಕಾಗುತ್ತದೆ. 1991ರ ನಂತರದಲ್ಲಿ ರಷ್ಯಾ ಇಂತಹ ಪರಿಸ್ಥಿತಿಯನ್ನು ಎದುರಿಸಿದೆ. ರಷ್ಯಾದಲ್ಲಿ ಸಾಮಾಜಿಕ ಕ್ಷೋಭೆ ಮತ್ತು ದುರವಸ್ಥೆ ಪರಾಕಾಷ್ಠೆ ತಲುಪಿದ್ದರಿಂದಲೆ ಸರ್ವಾಧಿಕಾರ ಮರಳಿ ಬಂದಿದೆ. ಆದುದರಿಂದ ಸಾರ್ವಜನಿಕ ಸುವ್ಯವಸ್ಥೆ ಮತ್ತು ಅನಿಯಂತ್ರಿತ ಆರ್ಥಿಕತೆಯ ನಡುವೆ ಏರ್ಪಡುವ ಸಂಘರ್ಷವನ್ನು ಸಕಾರಾತ್ಮಕ ಕ್ರಮಗಳ ಮೂಲಕ ಸರಿಪಡಿಸಬೇಕಾಗುತ್ತದೆ.  ವ್ಯವಸ್ಥೆಯಲ್ಲಿ ಬಡಜನತೆಗೆ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸುರಕ್ಷತಾ ಜಾಲಗಳನ್ನು ಮತ್ತು ಸಾಮಾಜಿಕ ಭದ್ರತೆಯನ್ನು ಕಲ್ಪಿಸಬೇಕಾಗುತ್ತದೆ. ಸಮಾನ ಅವಕಾಶದ ನೆಲೆಗಳನ್ನು ಕಲ್ಪಿಸುವ ಮೂಲಕ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಮೂಲಕ, ಧರ್ಮದರ್ಶಿತ್ವವನ್ನು ಉತ್ತೇಜಿಸುವ ಮೂಲಕ, ಮಾರುಕಟ್ಟೆ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಪೋರೇಟ್‌ ಆಡಳಿತವನ್ನು ನ್ಯಾಯಸಮ್ಮತಗೊಳಿಸಬೇಕಾಗುತ್ತದೆ.

ಮಾರುಕಟ್ಟೆ ವ್ಯವಸ್ಥೆ ಎಂದರೆ ಸರ್ವ ಸ್ವತಂತ್ರ ಮುಕ್ತ ಅವಕಾಶದ ನೆಲೆ ಅಲ್ಲ. ವ್ಯಾಪಾರ ವಹಿವಾಟುಗಳನ್ನು ಇಲ್ಲಿ ಬಂಡವಾಳಶಾಹಿಯೇ ನಿಯಂತ್ರಿಸುತ್ತದೆ. ಈ ನಿಯಮದೊಂದಿಗೆ, ಬಂಡವಾಳಶಾಹಿಯ ಮಾರುಕಟ್ಟೆ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಮುಖ್ಯ ಚಾಲಕ ಶಕ್ತಿ ಬಂಡವಾಳವೇ ಆಗಿರುವುದರಿಂದ ಬಂಡವಾಳ ಹೂಡಿಕೆಯ ಮೂಲಕ ಉತ್ಪಾದಕೀಯತೆಯನ್ನು ಹೆಚ್ಚಿಸುವುದು ಮುಖ್ಯವಾಗುತ್ತದೆ.

(ಲೇಖಕರು ಮಾಜಿ ಕೇಂದ್ರ ಸಚಿವರು ಮತ್ತು ಆರು ಅವಧಿಯ ಲೋಕಸಭಾ ಸದಸ್ಯರು)
ಮೂಲ: Modinomics and the long distance to finish, ದ ಹಿಂದೂ 06-06-2022

Donate Janashakthi Media

Leave a Reply

Your email address will not be published. Required fields are marked *