ಬಸವಣ್ಣನವರ ಕುರಿತು ತಪ್ಪು ಮಾಹಿತಿ ಸೇರ್ಪಡೆ : ಪಠ್ಯ ಸರಿಪಡಿಸದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ

ಬೆಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಜಾಗೊಳಿಸುವಂತೆ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಯುತ್ತಿವೆ.

ಹಿರಿಯ ಸಾಹಿತಿ ದೇವನೂರು ಮಹಾದೇವ ಮತ್ತು ಜಿ ರಾಮಕೃಷ್ಣ, ಎಸ್.ಜಿ.ಸಿದ್ದರಾಮಯ್ಯ ಅವರು ಪಠ್ಯದಿಂದ ತಮ್ಮ ಲೇಖನವನ್ನು, ಕವಿತೆಯನ್ನು ಕೈ ಬಿಡುವಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆದುರುವ ಬೆನ್ನಲ್ಲೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆಯು ಕೇವಲ ಒಂದು ಜಾತಿ, ಧರ್ಮಕ್ಕೆ ಮೀಸಲಿರಿಸಿದ ಪಠ್ಯಗಳನ್ನು ಹಾಕುತ್ತಿದೆ. ಬಸವಣ್ಣನವರನ್ನು ಅವಮಾನಿಸಿದೆ. ಕೂಡಲೆ ದೋಷವನ್ನು ಸರಿಪಡಿಸಬೇಕು. ಮೊದಲಿದ್ದ ಪಠ್ಯವನ್ನೆ ಬೋಧಿಸಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರಿಗೆ ಪತ್ರ ಬರೆದಿದ್ದಾರೆ.

ಪಠ್ಯಪುಸ್ತಕ ರಚನಾ ಸಮಿತಿ ಮತ್ತು ಅದು ಬದಲಾಯಿಸಿರುವ ಪಠ್ಯ ಕುರಿತು ಸಾಕಷ್ಟು ಆಕ್ಷೇಪ ಮತ್ತು ಆಪಾದನೆ ಕೇಳಿಬರುತ್ತಿವೆ. ಯಾವ ಹಂತದಲ್ಲಿ ಏನೇನು ಬದಲಾಯಿಸಿದ್ದಾರೆ, ಸೇರಿಸಿದ್ದಾರೆ. ಎನ್ನುವುದನ್ನು ಗಮನಿಸೋಣ ಎಂದರೆ ಪಠ್ಯಪುಸ್ತಕಗಳೇ ಎಲ್ಲೂ ದೊರೆಯುತ್ತಿಲ್ಲ. ಈಗಾಗಲೇ ಶಾಲೆಗಳು ಪ್ರಾರಂಭವಾಗಿ 15 ದಿನಗಳಾಗಿವೆ. ಆದರೂ ಪಠ್ಯಪುಸ್ತಕಗಳಿಲ್ಲ ಎಂದರೆ ಶಿಕ್ಷಕರು ಏನು ಪಾಠ ಮಾಡಬೇಕು? ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

 

ಈಗಿನ ಪಠ್ಯಸಮಿತಿಯಲ್ಲಿರುವವರು ಒಂದು ವರ್ಗಕ್ಕೆ ಸೇರಿದವರೆಂಬುದು ಮೇಲ್ನೋಟಕ್ಕೆ ಎದ್ದು ತೋರುವುದು. ಶಿಕ್ಷಣ ಕ್ಷೇತ್ರದಲ್ಲಿ ದುಡಿದವರು, ಶಿಕ್ಷಣ ತಜ್ಞರು, ಸಾಮಾಜಿಕ ಕಾಳಜಿಯುಳ್ಳ ದೂರದೃಷ್ಟಿಯುಳ್ಳವರು ಪಠ್ಯರಚನಾ ಸಮಿತಿಯಲ್ಲಿರಬೇಕಾದ್ದು ಅಪೇಕ್ಷಣೀಯ. ಅಲ್ಲಿ ಜಾತಿ, ಪಕ್ಷ ರಾಜಕಾರಣ ಹೆಡೆಯಾಡಬಾರದು.

ವಾಟ್ಸಾಪ್‌ನಲ್ಲಿ ನಾವು ನೋಡಿರುವಂತೆ 9ನೆಯ ತರಗತಿಯ ‘ಸಮಾಜ ವಿಜ್ಞಾನ’ ಪಠ್ಯಪುಸ್ತಕ (ಪರಿಷ್ಕೃತ-2022) ಭಾಗ-1 ರಲ್ಲಿ ಬಸವಣ್ಣನವರನ್ನು ಕುರಿತ ಪಾಠವಿದೆ. ಕಳೆದ ವರ್ಷವೂ ಈ ಪಾಠವಿತ್ತು. ಆದರೆ ಅದರಲ್ಲಿನ ಪ್ರಮುಖ ಸಾಲುಗಳನ್ನು ತೆಗೆದು ತಮಗೆ ಬೇಕಾದವುಗಳನ್ನು
ಸೇರಿಸಿದ್ದಾರೆ. ಕಳೆದ ವರ್ಷದ ಪಾಠದಲ್ಲಿ ‘ಮಧ್ಯಕಾಲದ ಕರ್ನಾಟಕದ ಸಮಾಜವನ್ನು ಸುಧಾರಿಸಲು
ಹೋರಾಡಿದ ಆದ್ಯ ಪ್ರವರ್ತಕರಲ್ಲಿ ಬಸವೇಶ್ವರರು ಒಬ್ಬರಾಗಿದ್ದಾರೆ. ವೈದಿಕ ಮೂಲ ಧರ್ಮದಲ್ಲಿ ಬೇರೂರಿದ್ದ ಅಸಂಖ್ಯ ಧಾರ್ಮಿಕ ಆಚರಣಾ ವಿಧಿ ವಿಧಾನಗಳನ್ನು ಬದಿಗೊತ್ತಿ ಮಾನವೀಯ ಮೌಲ್ಯ ಆಧಾರಿತ ಸರಳ ವೀರಶೈವ ಸಿದ್ಧಾಂತವನ್ನು ಬಸವೇಶ್ವರರು ಹಾಗೂ ಅವರ ಅನುಯಾಯಿಗಳಾದ ಪ್ರಚಾರಪಡಿಸಿದರು. ‘ಜಾತಿವ್ಯವಸ್ಥೆಯ ಕಡುವಿರೋಧಿಯಾಗಿದ್ದ ಬಸವೇಶ್ವರರು ತಮ್ಮ ಉಪನಯನದ ನಂತರ ಯಜ್ಯೋಪವೀತವನ್ನು ಕಿತ್ತೆಸೆದು ಕೂಡಲಸಂಗಮಕ್ಕೆ “ಉನ್ನತಾಧಿಕಾರದಲ್ಲಿದ್ದರೂ ಹಣ, ಅಧಿಕಾರ, ಅಧಿಪತ್ಯ ಇವ್ಯಾವುದರಿಂದಲೂ ಇವರು ವಿಚಲಿತರಾಗಲಿಲ್ಲ. ತಮ್ಮ ಇಡೀ ಜೀವನವನ್ನು ಸಮಾಜ ಮತ್ತು ಧರ್ಮದಲ್ಲಿನ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಮೀಸಲಿರಿಸಿದರು.

ಸಮಾಜ, ಧರ್ಮದ ಪುನಶ್ಚತನಕ್ಕೆ ಟೊಂಕಕಟ್ಟಿದರು’. ‘ಸ್ವಾವಲಂಬನೆಯ ತತ್ವವನ್ನು, ‘ದೇಹವೇ ದೇಗುಲ’, ‘ಈ ಬಗೆಯ ಸಂವೇದನೆಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪಗಳಾಗಿವೆ’,`ಅವರು ಸರಳ ಕನ್ನಡವನ್ನು ಬಳಸುವ ಮೂಲಕ ತಮ್ಮ ಚಳವಳಿಯನ್ನು ಜನಮುಖಿಯಾಗಿಸಿದರು. ಇಂಥ ಅನೇಕ ಮಹತ್ವದ ಅಂಶಗಳನ್ನೇ ತೆಗೆದುಹಾಕಿ ತಮಗೆ ಬೇಕಾದಂತೆ ತಿರುಚಿದ್ದಾರೆ. ಬಸವಣ್ಣನವರ ಮತ್ತು ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದಾರೆ.

ಈ ಬದಲಾವಣೆ ನಿಜಕ್ಕೂ ಖಂಡನಾರ್ಹ. ಬಸವಣ್ಣನವರ ಶುದ್ಧ, ಪಾರದರ್ಶಕ ಬದುಕಿಗೆ ಕಲಂಕ ತಂದಂತೆ, ‘ವಚನಕಾರರು ವೀರಶೈವ ಮತವನ್ನು ಸುಧಾರಿಸಿದರು’ ಎನ್ನುವುದು ಶುದ್ಧ ಸುಳ್ಳು. ಅವರು ‘ಲಿಂಗಾಯತ ಧರ್ಮವನ್ನು ಜಾರಿಯಲ್ಲಿ ತಂದರು’ ಎಂದಾಗಬೇಕಿತ್ತು. ಇಂತಹ ಹಲವು ದೋಷಗಳಾಗಿವೆ. ಆದುದರಿಂದ ತಕ್ಷಣ ಇಡೀ ಪಠ್ಯವನ್ನೇ ತಡೆಹಿಡಿದು ಎಲ್ಲಿಯೂ ದೋಷವಾಗದಂತೆ ಪರಿಷ್ಕರಣೆ ಮಾಡಬೇಕು. ಇಲ್ಲವೇ ಹಿಂದಿನ ಪಠ್ಯವನ್ನೇ ಮುಂದುವರಿಸಬೇಕು. ಈ ಬಗ್ಗೆ ಕೂಡಲೇ ಕ್ರಮ ಜರುಗಿಸದಿದ್ದರೆ ನಾಡಿನಾದ್ಯಂತ ಹೋರಾಟ ನಡೆಯುವುದು ಅನಿವಾರ್ಯವಾಗಬಹುದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ. ಇದರ ಪ್ರತಿಯನ್ನು ಶಿಕ್ಷಣ ಸಚಿವರಿಗೂ ರವಾನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *