ಹಿಂದಿನ ಘಟನೆಗಳನ್ನು ಕೆದಕಿ ಲಾಲ್‌ ಸಿಂಗ್‌ ಚೆಡ್ಡಾ ಸಿನಿಮಾ ಬಹಿಷ್ಕರಿಸಲು ಆಗ್ರಹ

ಮುಂಬೈ: ಅಮೀರ್‌ಖಾನ್‌ ನಟನೆಯ ʻಲಾಲ್‌ ಸಿಂಗ್‌ ಚೆಡ್ಡಾʼ ಸಿನಿಮಾ ಬಿಡುಗಡೆಗೆ ಮುನ್ನವೇ ವಿವಾದಕ್ಕೀಡಾಗಿದೆ. ಐಪಿಎಲ್ ಫೈನಲ್ ಪಂದ್ಯದದ ವೇಳೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಅಮೀರ್‌ ಖಾನ್‌ ಚಿತ್ರವನ್ನು ಬಹಿಷ್ಕರಿಸುವಂತೆ ಬಲಪಂಥೀಯರು ಆಗ್ರಹಿಸುತ್ತಿದ್ದಾರೆ.

ಈ ಚಿತ್ರವು  ಟಾಮ್‌ ಹಾಂಕ್ಸ್‌ ನಟಿಸಿರುವ ಹಾಲಿವುಡ್‌ ನ ಜನಪ್ರಿಯ ಚಿತ್ರ, ಆಸ್ಕರ್‌ ವಿಜೇತ ʼಫಾರೆಸ್ಟ್‌ ಗಂಪ್ʼನ ರಿಮೇಕ್‌ ಆಗಿದೆ. ಚಿತ್ರದ ಟ್ರೇಲರ್‌ ನಲ್ಲಿ ತೆಲುಗು ನಟ ನಾಗಚೈತನ್ಯ ಕೂಡಾ ಕಾಣಿಸಿಕೊಂಡಿದ್ದಾರೆ. ಲಾಲ್‌ ಸಿಂಗ್‌ ಚಡ್ಡಾ ಚಿತ್ರದ ಟ್ರೈಲರ್‌ಗೆ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.

ಚಿತ್ರದ ಟ್ರೇಲರ್ ಬಿಡುಗಡೆಗೆ ಮುನ್ನವೇ ಟ್ವಿಟರ್‌ನಲ್ಲಿ ಆರೋಪಗಳನ್ನು ಮಾಡಿರುವ ಕೆಲವು ಮಂದಿ, ಅಮೀರ್‌ ಖಾನ್‌ ಭಾರತದಲ್ಲಿ ಅಸಹಿಷ್ಣತೆ ಇದೆ ಎಂದು ಈ ಹಿಂದೆ ಹೇಳಿದ್ದರು. ಅದೇ ರೀತಿ, ದೇವರಿಗೆ ಹಾಲಿನ ಅಭಿಷೇಕ ಮಾಡುವ ಬದಲು ಅದೇ ಹಾಲನ್ನು ಬಡಮಕ್ಕಳಿಗೆ ನೀಡಿ ಎಂದು ಹೇಳಿಕೆ ನೀಡಿದ್ದರು. ಇತರ ಕೆಲವು ವಿಷಯಗಳನ್ನು ಇಟ್ಟುಕೊಂಡು ಅಮೀರ್‌ ಖಾನ್‌ ಸಿನಿಮಾದ ವಿರುದ್ಧ ಅಭಿಯಾನ ಮಾಡಿದ್ದಾರೆ.

ಬಾಲಿವುಡ್‌ ಗೆ ಫಾರೆಸ್ಟ್‌ ಗಂಪ್‌ ಅನ್ನು ರಿಮೇಕ್‌ ಮಾಡಲು 14 ವರ್ಷ ಬೇಕಾಯಿತು ಎಂದು ಕೆಲವರು ಕಮೆಂಟ್‌ ಮಾಡಿದ್ದರೆ, ಬಾಲಿವುಡ್‌ನವರಿಗೆ ಸ್ವಂತ ಕ್ರಿಯಾಶೀಲತೆಯಿಲ್ಲ. ಎಲ್ಲವನ್ನು ಕಾಪಿ ಮಾಡುವುದೊಂದೆ ಬರುವುದು ಎಂದು ಟ್ವೀಟ್‌ ಮಾಡಿದ್ದಾರೆ.

ಲಾಲ್‌ ಸಿಂಗ್‌ ಚಡ್ಡಾ ಚಿತ್ರದಲ್ಲಿ, ತುರ್ತು ಪರಿಸ್ಥಿತಿ, 1983 ಕ್ರಿಕೆಟ್ ವಿಶ್ವಕಪ್, ಆಪರೇಷನ್ ಬ್ಲೂ ಸ್ಟಾರ್, ರಥಯಾತ್ರೆ, ಮತ್ತು 1999 ರ ಕಾರ್ಗಿಲ್ ಯುದ್ಧದಂತಹ ಭಾರತೀಯ ಇತಿಹಾಸದ ಪ್ರಮುಖ ಘಟನೆಗಳನ್ನು ಅಮೀರ್ ಖಾನ್ ದೃಷ್ಟಿಕೋನದಿಂದ ವಿವರಿಸಲಾಗಿದೆ ಎಂದು ವರದಿಯಾಗಿದೆ.

‘ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದು, ಪ್ರೀತಂ ಸಂಗೀತ ನೀಡಿದ್ದಾರೆ. ಸಾಹಿತ್ಯವನ್ನು ಅಮಿತಾಭ್ ಭಟ್ಟಾಚಾರ್ಯ ಬರೆದಿದ್ದಾರೆ. ಮುಖೇಶ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಸಮೂಹದ ವಿಯಾಕಾಂ18 ಸ್ಟುಡಿಯೋಸ್‌ ಬಂಡವಾಳ ಹೂಡಿದೆ. ಚಿತ್ರವು ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ  ಬಿಡುಗಡೆಯಾಗಲಿದೆ.

Donate Janashakthi Media

Leave a Reply

Your email address will not be published. Required fields are marked *