ಬೆಂಗಳೂರು: “ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕಾರಣಕ್ಕೆ ಮಕ್ಕಳ ಕಲಿಕೆಯ ಅಂತರ ಹೆಚ್ಚಾಗಿದೆ. ಇದರಿಂದಾಗಿ ಕಲಿಕೆಯ ನಷ್ಟವಾಗಿದೆ. ಇಂತಹ ಬಿಕ್ಕಟ್ಟಿನಲ್ಲಿ ಪಠ್ಯಕ್ರಮ ಮರು ರಚನೆಯಂತಹ ಯಾವುದೇ ಬಗೆಯ ಪ್ರಯೋಗಗಳಿಗೆ ಕೈ ಹಾಕದೆ ಮತ್ತು ಆ ಮೂಲಕ ಇನ್ನಷ್ಟು ಕಲಿಕೆಯ ನಷ್ಟಕ್ಕೆ ಕಾರಣವಾಗದೆ ಈ ಒಂದು ವರ್ಷ ಯಥಾಸ್ಥಿತಿಯನ್ನು ಮುಂದುವರೆಸಿಕೊಂಡು” ಹೋಗಬೇಕೆಂದು ಸರಕಾರವನ್ನು “ಜಾಗೃತ ನಾಗರಿಕರು” ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪಠ್ಯ ಪುಸ್ತಕ ಮರು ಪರಿಷ್ಕರಣೆಯ ಹೆಸರಲ್ಲಿ ನಡೆದ ವಿದ್ಯಮಾನಗಳು ತೀವ್ರ ವಿವಾದಕ್ಕೆ ಎಡೆ ಮಾಡಿದ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞರು, ಅಧ್ಯಾಪಕರು, ಲೇಖಕರು, ಸಾಮಾಜಿಕ ಕಾರ್ಯಕರ್ತರ ಸಭೆಯನ್ನು “ಜಾಗೃತ ನಾಗರಿಕರು” ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದು, ಆ ಸಭೆ ಚರ್ಚೆಯ ನಂತರ ಅಂಗೀಕರಿಸಿದ ನಿರ್ಣಯದಲ್ಲಿ ಈ ರೀತಿ ಒತ್ತಾಯಿಸಲಾಗಿದೆ.
ರೋಹಿತ ಚಕ್ರತೀರ್ಥ ಅದ್ಯಕ್ಷತೆಯ ಮರು ಪರಿಶೀಲನ ಸಮಿತಿ ವಿವಾದ ಮತ್ತು ಗೊಂದಲಗಳನ್ನು ಹುಟ್ಟು ಹಾಕಿದ್ದು ಇದನ್ನು ತಕ್ಷಣವೇ ರದ್ದುಗೊಳಿಸಬೇಕು, ಅದರ ಎಲ್ಲಾ ಶಿಫಾರಸ್ಸುಗಳನ್ನು ಈ ಕೂಡಲೆ ಜಾರಿಗೆ ಬರುವಂತೆ ತಿರಸ್ಕರಿಸಬೇಕು ಎಂದೂ ನಿರ್ಣಯದಲ್ಲಿ ತಿಳಿಸಿದೆ. ಅನಗತ್ಯವಾಗಿ ಮರು ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಮುಖ್ಯಮಂತ್ರಿಗಳು ವಜಾ ಮಾಡಬೇಕು ಎಂದೂ ಸಭೆ ಒತ್ತಾಯಿಸಿತು.
‘ಇದೊಂದು ಟೆಸ್ಟ್ ಡೋಸ್’
ಪಠ್ಯ ಪುಸ್ತಕಗಳ ರಚನೆ ಹೇಗೆ ನಡೆಯುತ್ತದೆ, ಪರಿಷ್ಕರಣೆ ಬೇಕಾದರೆ ಅದಕ್ಕೆ ಮಾನದಂಡಗಳೇನು, ಈ ಹಿಂದಿನ ಪಠ್ಯ ಪುಸ್ತಕ ರಚನೆ ಮತ್ತು ಪರಿಷ್ಕರಣಾ ಸಮಿತಿಗಳು ಯಾವ ಮಾದರಿಯನ್ನು ಅನುಸರಿಸಿದ್ದವು. ಈಗಿನ ಮರು ಪರಿಶೀಲನಾ ಸಮಿತಿ ಏನು ಮಾಡಿದೆ, ಯಾಕೆ ಮಾಡಿದೆ ಮತ್ತು ಯಾಕದು ಸರಿಯಲ್ಲ ಎಂಬುದನ್ನು ಕುರಿತು ಶಿಕ್ಷಣ ತಜ್ಙ ನಿರಂಜನಾರಾಧ್ಯ ಅವರು ಮೊದಲಿಗೆ ವಿವರಿಸಿದರು. ಪ್ರಸಕ್ತ ಪಠ್ಯ ಪುಸ್ತಕ ಪರಿಷ್ಕರಣೆಯ ‘ಟೆಸ್ಟ್ ಡೋಸ್’ ಅಷ್ಟೇ. ಇದಕ್ಕೆ ಸಮಾಜ ಪ್ರತಿರೋಧ ಬರದಿದ್ದರೆ ಸಂವಿಧಾನ ಬುಡಮೇಲು ಮಾಡಿ ಹಿಂದೂರಾಷ್ಟ್ರ ಕಟ್ಟುವ ‘ಫುಲ್ ಡೋಸ್’ ಗೆ ತಯಾರಿಯಷ್ಟೇ. ಶಿಕ್ಷಣ ಸಚಿವರು ಮತ್ತು ಆಳುವ ಪಕ್ಷದ ಬೆಂಬಲಿಗರು ಹೇಳುವಂತೆ ಇದು ಎಡ-ಬಲದ ಪ್ರಶ್ನೆಯಲ್ಲ. ಇದು ವಾಸ್ತವವಾಗಿ ಸಂವಿಧಾನಕ್ಕೆ ಬದ್ಧರಾಗಿರುವವರು ಮತ್ತು ಅದಕ್ಕೆ ವಿರೋಧಿಗಳ ನಡುವೆ ವಿವಾದ. ಇದು ಸ್ವಾತಂತ್ರ್ಯ ಚಳುವಳಿಯ ಕಾಲದಿಂದಲೂ ನಂತರವೂ ನಡೆದುಕೊಂಡು ಬಂದ ವಿವಾದ. ಪಠ್ಯಪುಸ್ತಕಗಳ ಪ್ರಧಾನ ನೆಲೆ ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ನಮ್ಮ ಸಂವಿಧಾನದ ಆಶಯಗಳು. ಇವನ್ನು ತಿರಸ್ಕರಿಸುವ ಈ ಪರಿಷ್ಕರಣೆಯನ್ನು ತಿರಸ್ಕರಿಸಬೇಕು ಎಂದು ನಿರಂಜನಾರಾಧ್ಯ ಹೇಳಿದರು.
ಪಠ್ಯಪುಸ್ತಕ ಪರಿಷ್ಕರಣೆ ನಿರ್ವಾತದಲ್ಲಿ ಆಗುತ್ತಿಲ್ಲ. ಈಗ ಅಸ್ತಿತ್ವಕ್ಕೆ ಬಂದಿರುವ ಬಹುಸಂಖ್ಯಾತವಾದಿ ಪ್ರಭುತ್ವದ ಅಜೆಂಡಾದ ಭಾಗ.
ಸಂವಿಧಾನವನ್ನು ನಿಷ್ಕ್ರಿಯಗೊಳಿಸುವುದು, ತನ್ನ ಸಿದ್ಧಾಂತವನ್ನು ಪ್ರಚಾರ ಮಾಡುವುದು ಅದರ ಅಜೆಂಡಾ ಎಂದು ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು. ಈ ಪ್ರಭುತ್ವದ ಪ್ರಕಾರ, ಪಠ್ಯ ಒಂದು ಕಲಿಕೆಯ ಸಾಧನವಲ್ಲ, ಒಂದು ಸೈದ್ಧಾಂತಿಕ ಅಸ್ತ್ರ. ಅದು ವಿಮರ್ಶಾತ್ಮಕ ಯೋಚನಾ ವಿಧಾನ ಮತ್ತು ‘ಜ್ಞಾನ ಸೃಷ್ಟಿಯ ಕಲ್ಪನೆಗಳಿಗೆ ಬದ್ಧ ವೈರಿ. ಮಕ್ಕಳ ತಲೆ ಖಾಲಿ ಡಬ್ಬ, ಅದನ್ನು ತನ್ನ ಸಿದ್ಧಾಂತದಿಂದ ತುಂಬಬೇಕು ಎಂಬುದು ಅದರ ಧೋರಣೆ. ಅದು ಪಠ್ಯ ಪರಿಷ್ಕರಣೆ ನಿಲ್ಲಿಸದಿದ್ದರೆ ಏನು ಮಾಡಬೇಕು ಎಂಬ ಪ್ರಶ್ನೆ ಹಾಕಿಕೊಂಡು ತಮ್ಮ ಸೂಚನೆಗಳನ್ನು ಮಂಡಿಸಿದರು. ಪಠ್ಯವನ್ನು ವಿಮರ್ಶಿಸಿ, ಚರ್ಚಿಸಿ ತಮಗೆ ಸ್ವೀಕೃತವಾಗುವ ಪಠ್ಯವನ್ನು ಅಂಗೀಕರಿಸುವ ಪೋಷಕರಾಗಿ ಎಲ್ಲರು ತಮ್ಮ ನಾಗರಿಕ ಹಕ್ಕನ್ನು ಚಲಾಯಿಸಬೇಕು. ಅದಕ್ಕೂ ಒಪ್ಪದಿದ್ದರೆ ಸಂವಿಧಾನ ಮೌಲ್ಯಗಳು ಇರುವ ನಾಗರಿಕ ಅಪೇಕ್ಷೆಯ ಪರ್ಯಾಯ ಪಠ್ಯಗಳನ್ನು ತಯಾರಿಸಬೇಕು. ಕಲಿಕೆಯನ್ನು ಸಂಸ್ಕೃತಿಯನ್ನು ಪಠ್ಯಗಳಾಚೆಗೆ ವಿಸ್ತರಿಸಬೇಕು ಎಂದು ಚೆನ್ನಿ ಸೂಚಿಸಿದರು.
ಸಂವಾದದಲ್ಲಿ ಪ್ರೊ.ಟಿ.ಆರ್.ಚಂದ್ರಶೇಖರ್, ಡಾ.ಪ್ರಜ್ವಲ್ ಶಾಸ್ತ್ರಿ, ಇಂದೂಧರ ಹೊನ್ನಾಪುರ, ಎಚ್.ಎಸ್.ರಾಘವೆಂದ್ರ ರಾವ್, ಬಂಜಗೆರೆ ಜಯಪ್ರಕಾಶ್, ಕುಮಾರ್, ಬಿ,ರಾಜಶೇಖರ್ ಮೂರ್ತಿ ಭಾಗವಹಿಸಿದರು.
ಎಸ್.ಜಿ.ಸಿದ್ದರಾಮಯ್ಯ, ಡಾ. ವಸುಂಧರಾ ಭೂಪತಿ, ಕೆ.ಶರೀಫಾ, ಬಿ.ಟಿ.ಲಲಿತಾ ನಾಯಕ್, ಇಂದಿರಾ ಕೃಷ್ಣಪ್ಪ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಪ್ರೊ.ಕೆ.ಮರುಳಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂವಾದ, ಪ್ರತಿಕ್ರಿಯೆಗಳ ನಂತರ ಸಭೆಯ ಮೊದಲಿಗೆ ಬಿ.ಶ್ರೀಪಾದ ಭಟ್ ಮಂಡಿಸಿದ ನಿರ್ಣಯವನ್ನು ಅಂಗೀಕರಿಸಲಾಯಿತು. ಕೆ.ಎಸ್. ವಿಮಲ ಅವರು ಸಮಾಲೋಚನೆಯ ನಿರ್ವಹಣೆ ಮಾಡಿದರು.
ನಿರ್ಣಯ ರಾಜ್ಯವ್ಯಾಪೀ ಈ ಮರು ಪರಿಷ್ಕರಣೆಯನ್ನು ವಿವಿಧ ನೆಲೆಯಲ್ಲಿ ಪ್ರಶ್ನಿಸಿ ಅದನ್ನು ನಿಲ್ಲಿಸುವಂತೆ ಒತ್ತಾಯಿಸಬೇಕು ಎಂದು ಕರೆ ಕೊಟ್ಟಿದೆ… ಪೋಷಕರ ಜೊತೆ, ಸ್ಥಳೀಯ ಸಂಸ್ಥೆಗಳ ಜೊತೆ, ಎಸ್‌ಡಿಎಂಸಿಗಳ ಜೊತೆ, ಶಿಕ್ಷಣದ ಭಾಗೀದಾರರ ಜೊತೆಗೆ ನಿರಂತರವಾಗಿ ಸಮಾಲೋಚನೆ, ಚರ್ಚೆ, ಸಂವಾದ ನಡೆಸಬೇಕು ಮತ್ತು ಅವರಿಗೆ ಈ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯ ಶಿಫಾರಸ್ಸುಗಳ ಅಪಾಯಗಳನ್ನು ಮನವರಿಕೆ ಮಾಡಿಕೊಡಬೇಕು. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಈ ಪಠ್ಯಕ್ರಮಗಳನ್ನು ಮನಸೋ ಇಚ್ಚೆ ಬದಲಾಯಿಸದಂತೆ ಒಂದು ವ್ಯವಸ್ಥೆಯನ್ನು ರೂಪಿಸಬೇಕು ಎಂದೂ ನಿರ್ಣಯ ಹೇಳಿದೆ.
ಜನತೆಗೆ ನಿಜಾರ್ಥದಲ್ಲಿ ಸಂವಿಧಾನದ ಆಶಯಗಳನ್ನುಳ್ಳ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಂಡ, ಸಾಮಾಜಿಕ ನ್ಯಾಯವನ್ನು ಪಾಲಿಸುವ, ಲಿಂಗ ಸಮಾನತೆಯನ್ನು ಗೌರವಿಸುವ, ಬಹುಸಂಸ್ಕೃತಿಯನ್ನು, ಕನ್ನಡದ ಅಸ್ಮಿತೆಯನ್ನು ಒಳಗೊಂಡ ಒಂದು ಮಾದರಿ ಪರ್ಯಾಯ ಪಠ್ಯಕ್ರಮವನ್ನು ರೂಪಿಸಬೇಕಾಗಿದೆ. ಈ ಕಾರ್ಯ ಯೋಜನೆಗಾಗಿ ಒಂದು ತಜ್ಞರ ಸಮಿತಿ ರಚಿಸಬೇಕು. ನಿರ್ದಿಷ್ಠ ಕಾಲಮಿತಿಯೊಳಗಡೆ ಈ ‘ಮಾದರಿ ಪರ್ಯಾಯ ಪಠ್ಯಕ್ರಮ’ವನ್ನು ಅಂತಿಮಗೊಳಿಸಿ ಸಾರ್ವಜನಿಕ ಚರ್ಚೆಗೆ ಬಿಡಬೇಕು ಎಂದೂ ಸಮಾಲೋಚನೆ ಸಭೆ ನಿರ್ಧರಿಸಿತು.
ಈಗಷ್ಟೇ ಶಿಕ್ಷಣಕ್ಕೆ ತೆರೆದುಕೊಂಡಿರುವ ಬಹುಸಂಖ್ಯಾತ ದಲಿತರು, ದಮನಿತ ಸಮುದಾಯಗಳವರು ಈ ಎರಡು ವರ್ಷಗಳಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು. ಪಠ್ಯ ಪರೀಷ್ಕರಣೆಯ ವ್ಯರ್ಥ ಪ್ರಯೋಗಕ್ಕೆ ಶಿಕ್ಷಣ ಕ್ಷೇತ್ರ ತಯಾರಿಲ್ಲ
ಪ್ರೊ.ಟಿ.ಆರ್.ಚಂದ್ರಶೇಖರ್
ಇದು ವೈದಿಕ ಬ್ರಾಹ್ಮಣಶಾಹಿ ಪುನರ್ ಸ್ಥಾಪಿಸುವ ಕುತಂತ್ರ. ಹೆಡ್ಗೆವಾರ್ ಲೇಖನ ಸಿದ್ಧಾಂತ ಕೇಂದ್ರಿತ ಮನುಷ್ಯ ಕೇಂದ್ರಿತವಲ್ಲ. ಈ ಪಠ್ಯಕ್ರಮ ಪರಿಷ್ಕರಣೆ ನಿಲ್ಲಿಸುವ ಧೋರಣೆಯನ್ನು ಜನಸಮೂಹದ ಬಳಿ ತೆಗೆದುಕೊಂಡು ಹೋಗಬೇಕು
ಇಂದೂಧರ ಹೊನ್ನಾಪುರ