ನಮ್ಮ ಆದ್ಯತೆ ನೈತಿಕ-ರಾಷ್ಟ್ರೀಯವಾದಿ ಶಿಕ್ಷಣ : ಸಚಿವ ಬಿ.ಸಿ.ನಾಗೇಶ್‌

ಬೆಂಗಳೂರು: ‘ಸರಕಾರದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಅಂಶಗಳನ್ನು ಅಳವಡಿಸಲು ಮುಂದಾಗುತ್ತಿದೆ. ಎಷ್ಟೇ ಸಮಸ್ಯೆ ಎದುರಾದರೂ ರಾಷ್ಟ್ರೀಯವಾದಿ ಶಿಕ್ಷಣ ನೀಡುವ ಸರಕಾರದ ನಿಲುವಿನಿಂದ ವಿಮುಖವಾಗುವುದಿಲ್ಲ. ಪ್ರಸಕ್ತ ವರ್ಷ ಒಂದು ಪಠ್ಯವಾಗಿ ನೈತಿಕ ಶಿಕ್ಷಣವನ್ನು ಜಾರಿಗೊಳಿಸುತ್ತೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಚಾಮರಾಜಪೇಟೆ ಉದಯ ಭಾನು ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಇಂದು(ಮೇ 23) ಆಚಾರ್ಯ ನವರತ್ನ ಸುರಿಜಿ ಮಹಾರಾಜ್ ನೇತೃತ್ವದಲ್ಲಿ ನಡೆದ ಬಾಲಕರು ಮತ್ತು ಬಾಲಕಿಯರಿಗೆ ಸನ್ಯಾಸ ಧೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರಕಾರ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತರುತ್ತಿದ್ದು, ರಾಷ್ಟ್ರೀಯವಾದಿ ಸಮಾಜ ನಿರ್ಮಿಸಲು ಪ್ರತಿಯೊಬ್ಬರಿಗೂ ದೇಶ ಪ್ರೇಮ ಮೂಡಿಸುವ ಶಿಕ್ಷಣದ ಅಗತ್ಯವಾಗಿದೆ. ನಾವು ಬ್ರಿಟಿಷ್ ಮಾದರಿಯ ಶಿಕ್ಷಣ ವ್ಯವಸ್ಥೆಯಿಂದ ಇನ್ನೂ ಮುಕ್ತವಾಗಿಲ್ಲ. ಹೀಗಾಗಿ ಒಂದು ಅಥವಾ 2ನೆ ತರಗತಿಯಲ್ಲಿ ನೈತಿಕ ಶಿಕ್ಷಣದ ಪಾಠಗಳನ್ನು ಅಳವಡಿಸುತ್ತೇವೆ. ಹೀಗಾಗಿ ರಾಷ್ಟ್ರೀಯವಾದಿ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದರು.

‘ಶಿಕ್ಷಣ ವ್ಯವಸ್ಥೆಯನ್ನು ಬದಲಾವಣೆ ಮಾಡದಿದ್ದರೆ ಜನಜೀವನದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಪಾದನೆಯಾಗಿದ್ದು, ಇದೇ ಹಾದಿಯಲ್ಲಿ ರಾಜ್ಯ ಸರಕಾರ ಮುನ್ನಡೆಯುತ್ತಿದೆ. ನಮಗೆ ದೇಶದಲ್ಲಿ ಔಪಚಾರಿಕ ಶಿಕ್ಷಣ ಬಹಳಷ್ಟು ಕಡೆಗಳಲ್ಲಿ ಸಿಗುತ್ತದೆ. ತಾಯಿ, ನಂತರ ಗುರುಗಳಿಂದಲೂ ಶಿಕ್ಷಣ ದೊರೆಯುತ್ತಿದೆ. ಆದರೆ ನೈತಿಕ ಶಿಕ್ಷಣ ಮತ್ತು ರಾಷ್ಟ್ರೀಯವಾದಿ ಶಿಕ್ಷಣ ದೊರೆಯುವುದಿಲ್ಲʼ ಎಂದು ಅವರು ತಿಳಿಸಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ‘ಮೋದಿ ಅವರ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಧಾರ್ಮಿಕ ಸಮುದಾಯ ಒಳಗೊಂಡಂತೆ ಎಲ್ಲರ ಸಹಕಾರ ಅಗತ್ಯ. ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ಇವೆಲ್ಲವುಗಳಿಗೂ ಪರಿಹಾರಗಳಿವೆ. ಜೈನಧರ್ಮ ಹಾಗೂ ಮೋದಿಯವರು ಸ್ವಾವಲಂಬಿ ಭಾರತದ ಚಿಂತನೆಗಳನ್ನು ನೀಡಿದ್ದಾರೆ. ಇಂತಹ ಚಿಂತನೆಗಳನ್ನು ಸಾಕಾರಗೊಳಿಸಲು ಧಾರ್ಮಿಕ ವರ್ಗ ಕೈಜೋಡಿಸಬೇಕು’ ಎಂದು ಹೇಳಿದರು.

‘ಹಿಂಸೆಯಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಅಹಿಂಸೆಯೇ ಎಲ್ಲದಕ್ಕೂ ಮದ್ದು ಎಂದು ಜೈನ ಧರ್ಮ ನಮಗೆ ಕಲಿಸಿಕೊಟ್ಟಿದೆ. ಇದೇ ಉದ್ದೇಶದಿಂದ ನಮ್ಮ ಪೂರ್ವಜರು ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ನೀಡಿದ್ದಾರೆ. ಇಡೀ ವಿಶ್ವ, ಇಡೀ ಬ್ರಹ್ಮಾಂಡ ನಮ್ಮ ಪರಿವಾರವಾಗಿದ್ದು, ಇದೇ ಮಾರ್ಗದಲ್ಲಿ ನಡೆಯುವುದು ನಮ್ಮ ಧ್ಯೇಯ ಎಂದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕರಾದ ಜಮೀರ್ ಅಹಮದ್ ಖಾನ್, ಉದಯ್ ಗರುಡಾಚಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ರೋಹಿತ್‌ ಚಕ್ರತೀರ್ಥ ಐಐಟಿ ಪ್ರೊಫೆಸರ್‌‌ : ರೋಹಿತ್ ಚಕ್ರತೀರ್ಥ ಯಾರು? ಅವರ ಅರ್ಹತೆಯೇನು? ಅವರು ಶಿಕ್ಷಣ ತಜ್ಞರಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್, “ರೋಹಿತ್ ಚಕ್ರತೀರ್ಥ ಐಐಟಿ ಪ್ರೊಫೆಸರ್ ಆಗಿದ್ದರು” ಎಂದಿದ್ದಾರೆ. ಶಿಕ್ಷಣ ತಜ್ಞ ಎಂಬುದಕ್ಕೆ ಸರ್ಟಿಫಿಕೇಟ್ ಕೊಡುವವರು ಯಾರು? ಎಂದಿದ್ದಾರೆ.

ಬೆಂಗಳೂರಿನಲ್ಲಿ ಪಠ್ಯ ಪರಷ್ಕರಣೆ ಕುರಿತು ಎದ್ದಿರುವ ವಿವಾದಗಳಿಗೆ ಸ್ಪಷ್ಟೀಕರಣ ನೀಡಿದ ಅವರು, “ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ಹಲವಾರು ಪಠ್ಯಗಳನ್ನು ಕೈಬಿಟ್ಟಿದೆ. ಆಗ ಏಕೆ ಯಾರು ಪ್ರಶ್ನಿಸಲಿಲ್ಲ? ಮೈಸೂರು ಮಹರಾಜರ ಬಗ್ಗೆ 5 ಪುಟಗಳ ಪಾಠ ಇತ್ತು, ಅದನ್ನು ತೆಗೆದು ಸಾಲುಗಳಿಗೆ ಇಳಿಸಿತ್ತು. ಅದರ ಬದಲು ಟಿಪ್ಪು ಸುಲ್ತಾನ್ ಪಾಠ ಹಾಕಿದ್ದರು. ಟಿಪ್ಪು ಸುಲ್ತಾನ್ ಒಬ್ಬರೆ ಬ್ರೀಟಿಷರ ವಿರುದ್ಧ ಮಾತನಾಡಿದರೆ?” ಎಂದಿದ್ದಾರೆ.

ನಮ್ಮ ಈ ಪಠ್ಯಗಳನ್ನು ಬುದ್ದಿಜೀವಿಗಳು ವಿರೋಧಿಸುತ್ತಾರೆ. ಅವರು ರಾವಣ ವಂಶಸ್ಥರಿಗೆ ಸೇರಿರಬೇಕು. ಕುವೆಂಪು ಬಗ್ಗೆ ಪಾಠ ತೆಗೆದಿಲ್ಲ, ಹಿಂದಿನ ಸರ್ಕಾರ ತೆಗೆದಿತ್ತು. ನಾವು ಸೇರಿಸಿದ್ದೇವೆ ಎಂದರು. ಅಲ್ಲದೆ ಸಾಹಿತಿಗಳ ಜಾತಿ ಹುಡಕಬೇಡಿ, ದಯವಿಟ್ಟು ವಿಷಯದ ಕುರಿತು ಮಾತನಾಡಿ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *