ಯಾದಗಿರಿ: ಬೂಸ್ಟರ್‌ಡೋಸ್ ನೀಡುವ ವಿಚಾರದಲ್ಲಿ ಆರೋಗ್ಯ ಇಲಾಖೆಯು ಮಹಾ ಎಡವಟ್ಟು ಮಾಡಿಕೊಂಡಿದೆ. ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗೆ ಬೂಸ್ಟರ್ ಡೋಸ್ ನೀಡಲಾಗಿದೆ ಎಂಬ ಸಂದೇಶಗಳು ಈಗ ಮೃತ ಕುಟುಂಬಸ್ಥರ ಬರುತ್ತಿದ್ದು, ಅಕ್ರೋಶಕ್ಕೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮುರಾರಿ ರಾವ್ ಶಿಂಧೆ ಹೆಸರಿನಲ್ಲಿ ಬೂಸ್ಟರ್ ಡೋಸ್ ಪಡೆದ ಬಗ್ಗೆ ಸಂದೇಶ ಬಂದಿದೆ. ಜಿಲ್ಲೆಯಲ್ಲಿ ಕೋವಿಡ್ ಬೂಸ್ಟರ್‌ಡೋಸ್ ಲಸಿಕೆಗೆ ನಿಗದಿಪಡಿಸಿಕೊಂಡ ಸಂಖ್ಯೆಯನ್ನು ಪೂರ್ಣಗೊಳಿಸುವ ಧಾವಂತದಲ್ಲಿ ಆರೋಗ್ಯ ಇಲಾಖೆಯು ಮುಂದಾಗಿದ್ದು, ಇಲಾಖೆ ಸತ್ತವರಿಗೂ ಕೊವೀಡ್ ಲಸಿಕೆ ನೀಡಿದೆಯೇ ಎಂಬ ಪ್ರಶ್ನೆ ಎದುರಾಗಿದೆ ಅಥವಾ ಸತ್ತವರಿಗೂ ಬೂಸ್ಟರ್ ಲಸಿಕೆ ನೀಡುತ್ತಿದ್ದೆಯೇ ಎಂಬ ಅನುಮಾನ ಕಾಡುತ್ತಿದೆ.
2021ರ ಮೇ 23ರಂದು ಕೋವಿಡ್‌ನಿಂದಾಗಿ ಮೃತಪಟ್ಟ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಮುರಾರಿರಾವ್ ಶಿಂಧೆ ಎಂಬವರಿಗೆ ಮೂರನೇ ಡೋಸ್ ಲಸಿಕೆ ನೀಡಿರುವುದಾಗಿ ಸಂದೇಶ ಬಂದಿದೆ. ಕಳೆದ ವರ್ಷ ಮುರಾರಿರಾವ್ ಶಿಂಧೆ ಅವರು ಮೃತಪಟ್ಟ ಮೂರು ತಿಂಗಳಿಗೇ ಅವರಿಗೆ ಎರಡನೇ ಡೋಸ್ ಹಾಕಿರುವ ಬಗ್ಗೆಯೂ ಸಂದೇಶ ಬಂದಿತ್ತು. ಆಗ ಕುಟುಂಬಸ್ಥರು ಅಚ್ಚರಿಗೊಂಡು ಇಲಾಖೆಯ ಗಮನಕ್ಕೆ ತಂದಿದ್ದರು.
ಇದೀಗ ಮತ್ತೆ ಮುರಾರಿರಾವ್ ಶಿಂಧೆ ಅವರ ಮೊಬೈಲ್ ಸಂಖ್ಯೆಗೆ ಮೂರನೇ ಲಸಿಕೆ ಪಡೆದುಕೊಂಡಿರುವ ಬಗ್ಗೆ ಸಂದೇಶ ಬಂದಿದೆ. ‘ನೀವು ಬೂಸ್ಟರ್ ಡೋಸ್ ಗೆ ಅರ್ಹರಿದ್ದೀರೆಂದು’ ಇದೇ ಮೇ 4ರಂದು ಮೊಬೈಲಿಗೆ ಸಂದೇಶ ಬಂದಿತ್ತು. ಬಳಿಕ ಮೇ 9ರಂದು ನಿಮಗೆ ಕೋವಿಶೀಲ್ಡ್ ಲಸಿಕೆ ಯಶಸ್ವಿಯಾಗಿ ಹಾಕಲಾಗಿದೆ ಎಂಬ ಸಂದೇಶ ಬಂದಿದೆ.
ನಿಜವಾಗಿಯೂ ಕೊವೀಡ್ ಲಸಿಕೆ ನೀಡಿ ತನ್ನ ಗುರಿ ಸಾಧಿಸಬೇಕಾದ ಆರೋಗ್ಯ ಇಲಾಖೆ ಲಸಿಕೆ ನೀಡದೆಯೇ ಲಸಿಕೆ ನೀಡಲಾಗಿದೆ ಎಂದು ಸುಳ್ಳು ಹೇಳಿ ನಿರ್ದಿಷ್ಠ ಗುರಿಯಲ್ಲಿ ತಲುಪಲಾಗಿದೆ ಎಂದು ಸಾಧಿಸಲು ಮುಂದಾಗಿದೆ. ಒಂದು ವರ್ಷದ ಹಿಂದೆ ಕೋವಿಡ್‌ನಿಂದ ಸತ್ತ ವ್ಯಕ್ತಿಗೆ ಮೂರನೇ ಲಸಿಕೆ ನೀಡಲಾಗಿದೆ ಎಂದು ಸಂದೇಶ ಬಂದಿದ್ದು, ಅದು ಹೇಗೆ ಲಸಿಕೆ ನೀಡಲಾಗಿದೆ ಎಂಬುದು ಜನರ ಪ್ರಶ್ನೆಯಾಗಿದೆ.
ಕೊರೊನಾ ಲಸಿಕೆಗೆಂದೇ ಕೇಂದ್ರ ಸರಕಾರ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಆದರೆ, ಆರೋಗ್ಯ ಇಲಾಖೆಯ ತಪ್ಪಿನ ಮೇಲೆ ತಪ್ಪು ಮಾಡುತ್ತಿದೆ. ಆದರೆ ಈ ತಪ್ಪು ಮೊದಲನೆಯದೇನಲ್ಲ !. ಕೋವಿಡ್-19 ಶುರುವಾದ ಹಿನ್ನಲೆ ಕೋವಿಡ್ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ಕೆಲವೊಂದು ನಿಯಮಗಳನ್ನ ಹಾಕಿಕೊಂಡಿತ್ತು.
ನಿಯಮವಳಿಗಳಂತೆ, ಕೋವಿಡ್ ಲಸಿಕೆ ನೀಡಿಕೆಯಲ್ಲಿ ಆದ್ಯತೆಗಳನ್ನು ಮಾಡಿಕೊಂಡಿತ್ತು. ಆದರೆ ಕೊವೀಡ್ ಲಸಿಕೆ ಎರಡು ಡೋಸ್ ಲಸಿಕೆ ನೀಡುವ ವೇಳೆಯುಲ್ಲಿ ಆರೋಗ್ಯ ಇಲಾಖೆ, ಮೊದಲನೆ ಡೋಸ್ ಹಾಕಿಸಿಕೊಂಡ ಎಷ್ಟೂ ವ್ಯಕ್ತಿಗಳಿಗೆ ಎರಡನೆ ಡೋಸ್ ಹಾಕಿಸಿಕೊಳ್ಳದಿದ್ದರೂ ಸಹ ಲಸಿಕೆ ಹಾಕಲಾಗಿದೆ ಎಂದು, ಹಲವು ಜನರ ದೂರವಾಣಿ ಸಂಖ್ಯೆಗಳಿಗೆ ಸಂದೇಶ ಕಳುಹಿಸಿತ್ತು. ಈ ವಿಚಾರ ಕುರಿತು ದೇಶದಾದ್ಯಂತ ಟೀಕೆಗಳು ವ್ಯಕ್ತವಾಗಿತ್ತು.
ಈ ನಡುವೆ ಕೇಂದ್ರ ಸರ್ಕಾರ ಹೊರಡಿಸಿದ ಮಾಹಿತಿಯಲ್ಲಿ ಭಾರತ ದೇಶವು 100 ಕೋಟಿ ಕೊರೊನಾ ಲಸಿಕೆಯನ್ನು ಪಡೆದುಕೊಳ್ಳುವುದರಲ್ಲಿ ಯಶಶ್ವಿಯಾಗಿದೆ ಎಂದು ಹೇಳಿತ್ತು. ಈ ವೇಳೆ ಎರಡನೆ ಡೋಸ್ ಲಸಿಕೆ ಹಾಕಿಸಿಕೊಳ್ಳದೆ ಇದ್ದರು, ನೀವು ಎರಡನೇ ಡೋಸ್ ಲಸಿಕೆಯನ್ನ ಹಾಕಿಸಿಕೊಂಡಿದದ್ದೀರಿ ಎಂದು ಸಂದೇಶ ಬಂದವರು, ಸರ್ಕಾರದ ವಿರುದ್ದ ಆರೋಗ್ಯ ಇಲಾಖೆಯ ತಪ್ಪನ್ನು ಎತ್ತಿ ಹಿಡಿದು ಟೀಕಿಸಿದ್ದರು.
ಇಷ್ಟಾದರು ಕೂಡ, ಆರೋಗ್ಯ ಇಲಾಖೆ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಮತ್ತೆ ಬೂಸ್ಟರ್ ಡೋಸ್ ನೀಡುವಲ್ಲಿ ತಪ್ಪು ಕಂಡುಬರುತ್ತಿದೆ. ಹೀಗಾಗಿ ಎಲ್ಲೋ ಕಚೇರಿಯಲ್ಲಿ ಕುಳಿತು ಸಿಕ್ಕ ಸಿಕ್ಕವರ ಮೊಬೈಲ್ ನಂಬರ್ ಪಡೆದು ಲಸಿಕೆ ನೀಡಿದ ಬಗ್ಗೆ ದಾಖಲೆ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರಾ ಎಂಬ ಶಂಕೆ ಸೃಷ್ಟಿಯಾಗಿದೆ. ಕೇಂದ್ರ ಸರಕಾರ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಕಳೆದ ಕೆಲವು ದಿನಗಳ ಹಿಂದೆ ರಾಮನಗರದಲ್ಲಿಯೂ ಇದೇ ಮಾದರಿ ಪ್ರಕರಣ ಕಂಡು ಬಂದಿತ್ತು. ಈಗ ಯಾದಗಿರಿಯಲ್ಲಿ ಕಂಡು ಬಂದಿದೆ. ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.