ಕೊಪ್ಪಳ: ‘ಮೋದಿ ನಾಯಕತ್ವದಲ್ಲಿ’ ನಾವು ಚುನಾವಣೆಯನ್ನ ಗೆಲ್ತೀವಿ ಅನ್ಕೊಂಡ್ರೆ ಅದು ನಮ್ಮ ಮೂರ್ಖತನ ಎಂದು ಸಂಸದ ಕರಡಿ ಸಂಗಣ್ಣ ಹೇಳಿದ್ದಾರೆ.
ಕಾರಟಗಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ನಾಯಕ್ವತದ ಬಗ್ಗೆ ಮಾತನಾಡಿರುವ ಕರಡಿ ಸಂಗಣ್ಣ, ಮೋದಿ ನಾಯಕತ್ವದಲ್ಲಿ ಚುನಾವಣೆ ಗೆಲ್ತೀವಿ ಅನ್ನೋದು ಮೂರ್ಖತನ ಇದು ನನ್ನ ಭಾವನೆ. ಯಾವುದೇ ಕಾರ್ಯಕ್ರಮ ಇರಲಿ ರಾಷ್ಟ್ರೀಯ ನಾಯಕರ ಫೊಟೋ ಹಾಕ್ತಾರೆ. ಇದು ಹುಚ್ಚತನ. ಯಾರು ಹೇಳಿದ್ದಾರೋ ಏನೋ,ಯಾವುದೇ ಪಟ್ಟಣದಲ್ಲಿ ಕಾರ್ಯಕ್ರಮ ನಡೆದರೂ ರಾಷ್ಟ್ರೀಯ ನಾಯಕರ ಬ್ಯಾನರ್ ಕಾಣುತ್ತದೆ. ಹಾಕಿಕೊಳ್ಳೋದ್ರಲ್ಲಿ ಯಾವುದೇ ತಪ್ಪಿಲ್ಲ. ಅದಕ್ಕೂ ಒಂದು ನೀತಿ, ನಿಯಮ ಇರುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕೊಪ್ಪಳ ಜಿಲ್ಲೆಯ ಸಚಿವರು, ಶಾಸಕರು ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡೇ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಬಲ್ಲೆವು ಎನ್ನುವ ಉಮೇದಿನಲ್ಲಿದ್ದಾರೆ. ಆ ಭ್ರಮೆಯಿಂದ ಮೊದಲು ಹೊರಬನ್ನಿ. ಮದುವೆ, ನಾಮಕರಣ, ಗೃಹ ಪ್ರವೇಶ, ಸಾವು, ನೋವಿನಲ್ಲಿ ಭಾಗಿಯಾಗುವುದನ್ನೇ ಅಭಿವೃದ್ಧಿ ಕೆಲಸ ಎನ್ನುವ ರೀತಿಯಲ್ಲಿ ಶಾಸಕರು ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು. ಮೊದಲು ಈ ಜಿಲ್ಲೆಗೆ ರಾಜ್ಯ ಸರಕಾರ ಘೋಷಿಸಿರುವ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿ ಮುಂದಾಗಬೇಕು. ಅದು ಬಿಟ್ಟು ನಾವು ಪ್ರಧಾನಿ ಮೋದಿ ಹೆಸರಿನಡಿ ಗೆಲ್ಲುತ್ತೇವೆ ಎನ್ನುವ ಭ್ರಮೆಯಿಂದ ಹೊರಬರಬೇಕು ಎಂದರು.
ಜಿಲ್ಲೆಯವರೇ ಆದ ಮಾಜಿ ಸಚಿವ ಬಸವರಾಜ ರಾಯರೆಡ್ಡಿಯವರಾಗಲಿ, ಮೂರು ಬಾರಿ ಸಂಸದರಾಗಿದ್ದ ಎಚ್ಜಿ ರಾಮುಲು ಅವರು ಎಂದೂ ಕೂಡ ಈ ತರಹ ಸಮಯ ವ್ಯರ್ಥ ಮಾಡಿದವರಲ್ಲ ಎಂದು ಕೈ ನಾಯಕರ ಗುಣಗಾನ ಮಾಡಿದ್ದು ವೇದಿಕೆಯಲ್ಲಿದ್ದವರಿಗೆ ಇರುಸು ಮುರುಸಾದಂತೆ ಕಂಡುಬಂತು.
ಸಂಸದ ಸಂಗಣ್ಣ ಕರಡಿ ಮೋದಿ ಮೋಡಿಯ ಬಗ್ಗೆ ಹಾಗೂ ಪಕ್ಷದ ಜಿಲ್ಲಾ ಮುಖಂಡರಿಗೆ ಕ್ಲಾಸ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.