ಕಲಬುರಗಿ: ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿ ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿದ್ದು, 402 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿ ಆಯ್ಕೆಯಾಗುವ ಬಗ್ಗೆ ಇಬ್ಬರು ಮಾತನಾಡಿರುವ ಆಡಿಯೊವೊಂದನ್ನು ಬಿಡುಗಡೆ ಮಾಡಿದರು.
ಬಿಡುಗಡೆಯಾಗಿರುವ ಆಡಿಯೋ ಸಂಭಾಷಣೆಯಲ್ಲಿ ವ್ಯಕ್ತಿಯೊಬ್ಬ ಈಗಾಗಲೇ ಪಿಎಸ್ಐ ಸಮವಸ್ತ್ರ ಧರಿಸಿ ಭಾಷಣ ಮಾಡಿದ್ದಾನೆ. ಕರೆ ಮಾಡಿದ್ದ ವ್ಯಕ್ತಿಗೆ ಪಿಎಸ್ಐ ಸಾಹೇಬ್ರೆ ಎಂದು ಹೇಳುತ್ತಾನೆ. ತಾತ್ಕಾಲಿಕ ಪಟ್ಟಿ ಪ್ರಕಟಿಸಿದ್ದರೂ ಇದೇ ಫೈನಲ್ ಎಂದು ಹೇಳ್ತಾನೆ. ಆರ್ಟಿಕಲ್ 371ಜೆ ಬಗ್ಗೆಯೂ ಉಡಾಫೆಯಾಗಿ ಮಾತಾಡಿದ್ದಾರೆ. ಯಾರಾದ್ರೂ ಕೋರ್ಟಿಗೆ ಹೋದರೆ ಏನು ಅಂತ ಅಭ್ಯರ್ಥಿ ಪ್ರಶ್ನಿಸಿದ್ದಾನೆ. ಪ್ರತಿ ಬಾರಿ ಅವರ ಗೋಳು ಇದ್ದದ್ದೇ. ಆದರೂ ಏನೂ ಆಗುವುದಿಲ್ಲ ಎಂದಿದ್ದಾರೆ. ಈ ಆಡಿಯೊ ನ್ಯಾಯಾಲಯದಲ್ಲಿ ಪುರಾವೆ ಆಗುವುದಿಲ್ಲವಾದರೂ ಇದರ ಅಧಾರದ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಸತ್ಯಾಂಶ ಹೊರಗೆಳೆಯಬೇಕು ಎಂದು ಪ್ರಿಯಾಂಕ್ ಒತ್ತಾಯಿಸಿದರು.
ಇದನ್ನು ಓದಿ: ಪಿಎಸ್‌ಐ ಪರೀಕ್ಷಾ ಅಕ್ರಮ – ಬೆಳೆಯುತ್ತಲೇ ಇದೆ ಬಿಜೆಪಿಗರ ಪಟ್ಟಿ
ಮುಂದುವರಿದು ಮಾತನಾಡಿದ ಪ್ರಿಯಾಂಕ್ ಖರ್ಗೆ, ನಮ್ಮ ಸಂಬಂಧಿಯೊಬ್ಬ ಪಿಎಸ್ಐ ಹುದ್ದೆಗೆ ಅರ್ಜಿ ಹಾಕಿದ್ದಾನೆ. ಮನೆ ಕಡೆ ಅನುಕೂಲವಾಗಿದ್ದಾರೆ, ಅಪ್ಲಿಕೇಷನ್ ನಂಬರ್ ಕಳಿಸುವೆ. 545, 402 ಪಿಎಸ್ಐ ಹುದ್ದೆಗಳಿಗೆ ಮ್ಯಾಚ್ ಫಿಕ್ಸ್ ಮಾಡಿದ್ದಾರೆ. ಈ ಮಾಹಿತಿ ಸಾರ್ವಜನಿಕ ವಲಯದಲ್ಲಿದೆ, ಅಭ್ಯರ್ಥಿಗಳ ಬಳಿಯಿದೆ. ಸರ್ಕಾರ, ತನಿಖೆ ನಡೆಸುತ್ತಿರುವವರ ಬಳಿ ಮಾಹಿತಿ ಸಿಕ್ಕಿಲ್ಲವೇ? ಎಂದು ಪ್ರಶ್ನಿಸಿದರು.
545 ಹುದ್ದೆಗಳಲ್ಲಿ 300ಕ್ಕೂ ಅಧಿಕ ಹುದ್ದೆಗಳನ್ನು ದುಡ್ಡಿಗಾಗಿ ಅಕ್ರಮವಾಗಿ ಒಎಂಆರ್ ಶೀಟ್ ತಿದ್ದಿ ಆಯ್ಕೆಯಾದ ಬಗ್ಗೆ ತನಿಖೆ ನಡೆಯುತ್ತಿದೆ. ಅಂತಹ ಸಂದರ್ಭದಲ್ಲೇ ಮುಂದೆ ನಡೆಯುವ ನೇಮಕಾತಿಯಲ್ಲಿ ಅಕ್ರಮ ಎಸಗಿ ಹುದ್ದೆಗಳನ್ನು ಕೊಡಿಸಲು ‘ಬಕ್ರಾ’ಗಳನ್ನು ಹುಡುಕುವ ಜವಾಬ್ದಾರಿಯನ್ನು ಅಕ್ರಮ ಎಸಗಿ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಬಂದಿರುವ ವ್ಯಕ್ತಿಗೆ ವಹಿಸುವ ಮಾತುಗಳು ಆಡಿಯೊದಲ್ಲಿವೆ ಎಂದರು.
ಇದನ್ನು ಓದಿ: ಪಿಎಸ್‌ಐ ಪರೀಕ್ಷಾ ಅಕ್ರಮ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಬಂಧನ
ಅಕ್ರಮ ಎಸಗಲು ನೆರವಾಗುವ ಪರೀಕ್ಷಾ ಕೇಂದ್ರ ಸಿಗಬೇಕು ಎಂದರೆ ಅರ್ಜಿ ಸಂಖ್ಯೆಯನ್ನು ಅರ್ಜಿಯ ಜೊತೆಗೆ ನೀಡಲಾದ ಮೊಬೈಲ್ ಸಂಖ್ಯೆ ಹೊರತುಪಡಿಸಿ ಬೇರೆ ಸಂಖ್ಯೆಯಿಂದ ಕೊಡುವಂತೆ ಆ ವ್ಯಕ್ತಿ ಮಾತನಾಡಿದ್ದಾನೆ. ವಿಜಯಪುರ ಜಿಲ್ಲೆಯ ಸಿಂದಗಿ ಕಡೆಯವರು ಈ ಮಾತುಕತೆ ನಡೆಸಿರುವ ಸಾಧ್ಯತೆ ಇದೆ. ಕಲಬುರಗಿ ಡಿಡಿಪಿಐ ಅವರು ಪಿಎಸ್ಐ ನೇಮಕ ಪರೀಕ್ಷೆಗೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮುಖ್ಯಸ್ಥೆ ಆಗಿರುವ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆ ಅಗತ್ಯ ಮಾನದಂಡ ಹೊಂದಿಲ್ಲ ಎಂದು ತಿರಸ್ಕರಿಸಿದ್ದರು. ಅದನ್ನು ಮೀರಿ ಆ ಸಂಸ್ಥೆ ಪರೀಕ್ಷಾ ಕೇಂದ್ರವಾಗಲು ಯಾರು ಶಿಫಾರಸು ಪತ್ರ ನೀಡಿದ್ದರು ಎಂಬುದು ಬಯಲಾಗಬೇಕು ಎಂದರು.
ಶಾಲೆ ಮುಖ್ಯಸ್ಥೆ ದಿವ್ಯಾ ಹಾಗರಗಿ ಜಾಮೀನು ಅರ್ಜಿ ತಿರಸ್ಕೃತವಾಗಿದೆ. ವಕೀಲರ ಸಂಪರ್ಕದಲ್ಲಿರುವ ದಿವ್ಯಾ ಹಾಗರಗಿ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಯಾಕೆ ಮಾಹಿತಿ ಸಿಗುತ್ತಿಲ್ಲ. ಸರ್ಕಾರ ಬೇಕಂತಲೇ ದಿವ್ಯಾ ಹಾಗರಗಿ ರಕ್ಷಿಸುವಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟರು.
ಅಕ್ರಮಕ್ಕೆ ಸಂಬಂಧಿಸಿದಂತೆ, ಈಗಾಗಲೇ ಸಿಐಡಿ ಪೊಲೀಸರು 13 ಆರೋಪಿಗಳನ್ನು ಬಂಧಿಸಿದ್ದಾರೆ. ಸಣ್ಣ ಮೀನುಗಳನ್ನು ಬಂಧಿಸಿದ್ದಾರೆ, ಆದರೆ ತಿಮಿಂಗಿಲಗಳು ಓಡಾಡುತ್ತಿವೆ. ಅಕ್ರಮದ ಹಣ ಮೇಲ್ಮಟ್ಟದವರೆಗೆ ಹೋಗುತ್ತಿದೆ ಎಂಬ ಮಾಹಿತಿ ಇದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಎಡಿಜಿಪಿ ಅವರನ್ನು ವರ್ಗಾವಣೆ ಮಾಡಿ
ಪಿಎಸ್ಐ ಅಕ್ರಮ ನೇಮಕದ ಬಗ್ಗೆ ತನಿಖೆ ನಡೆಯುತ್ತಿದ್ದರೂ ನೇಮಕಾತಿ ವಿಭಾಗದ ಎಡಿಜಿಪಿ ಅವರನ್ನು ವರ್ಗಾವಣೆ ಮಾಡಿಲ್ಲ. ಅವರು ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಕೂಡಲೇ ಅವರನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ
ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಅಫಜಲಪುರದ ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ 2019ರಲ್ಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮೊದಲು ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದು ನಿಜ. ನನ್ನ ಪಕ್ಕದಲ್ಲಿಯೂ ಕುಳಿತಿದ್ದರು. ಹಾಗಂತ ನಾನು ಅವರ ಪರ ಮಾತನಾಡುವುದಿಲ್ಲ. ಯಾವ ಪಕ್ಷದವರೇ ಆಗಿರಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.