ದೆಹಲಿ: ಹನುಮ ಜಯಂತಿ ಮೆರವಣೆಗೆ ನಡೆದ ಕೋಮು ಘರ್ಷಣೆಯ ನಂತರ ಜಹಾಂಗೀರಪುರಿಯಲ್ಲಿ ದೆಹಲಿ ಮುನ್ಸಿಪಲ್ ನಡೆಸುತ್ತಿದ್ದ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ನ್ಯಾಯಾಲಯದ ಆದೇಶದ ನಂತರವೂ ನೆಲಸಮ ಕಾರ್ಯಾಚರಣೆ ಮುಂದುವರೆಸಲಾಗಿತ್ತು.
ಈ ಸಂದರ್ಭದಲ್ಲಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷದ ಪಾಲಿಟ್ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಕಾರ್ಯಾಚರಣೆಗೆ ಇಳಿದ ಬುಲ್ಡೋಜರ್ ಅನ್ನು ತಡೆದು ಸುಪ್ರೀಂ ಕೋರ್ಟ್ ಆದೇಶದ ಪ್ರತಿಗಳನ್ನು ಬೀಸತೊಡಗಿದರು.
ಅಕ್ರಮ ಒತ್ತುವರಿಯನ್ನು ಕೆಡವಲು ಮುಂದಾಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಆದೇಶ ನೀಡಿತು. ಆದೇಶದ ಅನುಷ್ಠಾನಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ನಾನು ಜಹಾಂಗೀರ್ಪುರದ ಜನರಿಗೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಮತ್ತು ಸುಪ್ರೀಂ ಕೋರ್ಟಿನ ಮುಂದಿನ ಆದೇಶಕ್ಕಾಗಿ ಕಾಯುವಂತೆ ಮನವಿ ಮಾಡುತ್ತೇನೆ. ಧ್ವಂಸ ಮಾಡುವ ಕಾರ್ಯಾಚರಣೆಗಳು ಸಂವಿಧಾನಕ್ಕೆ ವಿರುದ್ಧವಾಗಿತ್ತು. ಸುಪ್ರೀಂ ಆದೇಶದ ಪ್ರಕಾರ ಯಾವುದೇ ನೆಲಸಮ ಮಾಡುವಂತಿಲ್ಲ ಎಂದರು.
ಅಕ್ರಮವನ್ನು ತೆರವು ಕಾರ್ಯಾಚರಣೆಯ ಮೂಲಕ ಕಾನೂನು ಮತ್ತು ಸಂವಿಧಾನವನ್ನು ನೆಲಸಮಗೊಳಿಸಲಾಗುತ್ತಿದೆ. ಕನಿಷ್ಠ ಸುಪ್ರೀಂ ಕೋರ್ಟ್ ಮತ್ತು ಅದರ ಆದೇಶವನ್ನು ಬುಲ್ಡೋಜರ್ ಮಾಡಬಾರದು ಎಂದು ಬೃಂದಾ ಕಾರಟ್ ಹೇಳಿದರು.
ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಅಂಗಡಿಗಳು ಮತ್ತು ಇತರೆ ಕಟ್ಟಡಗಳನ್ನು ನೆಲಸಮ ಮಾಡಲು ಮುನ್ಸಿಪಲ್ ಮುಂದಾಗಿತು. ಈ ಕಾರ್ಯಾಚಾರಣೆ ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ, ತುರ್ತು ವಿಚಾರಣೆ ಮೇರೆಗೆ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಕಾರ್ಯಾಚರಣೆಗೆ ಸ್ಥಗಿತಗೊಳಿಸಲು ತಿಳಿಸಿತು.
ಈ ಸಂಬಂಧ ಮಾತನಾಡಿದ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ನ ಮೇಯರ್ ರಾಜಾ ಇಕ್ಬಾಲ್ ಸಿಂಗ್, ಕೋರ್ಟ್ ಆದೇಶ ಇನ್ನೂ ಕೈ ಸೇರದ ಹಿನ್ನಲೆ ಅಕ್ರಮ ಕಟ್ಟಡ ನೆಲಕ್ಕೆ ಉರುಳಿಸುವ ಕಾರ್ಯ ಮುಂದುವರೆಸುವುದಾಗಿ ತಿಳಿಸಿದರು. ಅಲ್ಲದೇ ಸರ್ವೋಚ್ಛ ನ್ಯಾಯಾಲದ ಅನುಸಾರ ನಾವು ಕಾರ್ಯ ನಿರ್ವಹಿಸುತ್ತೇವೆ ಎಂದು ಕೂಡ ತಿಳಿಸಿದರು.
ಸುಪ್ರೀಂ ಕೋರ್ಟ್ ಆದೇಶಿಸಿದ ಒಂದೂವರೆ ಗಂಟೆ ಬಳಿಕವೂ ಈ ಒತ್ತುವರಿ ಕಾರ್ಯಾಚರಣೆ ಮುಂದುವರೆದಿತ್ತು.