ಹರ್ಷ ಕೊಲೆಗೆ ಪ್ರತೀಕಾರ: ಕೊಲೆ ಯತ್ನ ಸಂಚು ವಿಫಲಗೊಳಿಸಿದ ಪೊಲೀಸರು

ಶಿವಮೊಗ್ಗ: ಭಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ ನಂತರ ಮತ್ತೊಂದು ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬ ಅಂಶ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ 13 ಯುವಕರನ್ನು ಬಂಧಿಸಲಾಗಿದೆ.

ಕಳೆದ ಫೆಬ್ರವರಿ 20ರಂದು ಸೀಗೆಹಟ್ಟಿಯಲ್ಲಿ ಹರ್ಷನ ಕೊಲೆ ನಡೆದಿತ್ತು. ಹರ್ಷನ ಕೊಲೆಗೆ ಪ್ರತೀಕಾರವಾಗಿ ಅನ್ಯಕೋಮಿನ ರೌಡಿಶೀಟರ್ ಒಬ್ಬನನ್ನು ಹತ್ಯೆಗೆ ಸಂಚು ರೂಪಿಸಿತ್ತು ಎಂಬ ಅಂಶ ಪೊಲೀಸರ ತನಿಖೆ ಮೂಲಕ ಬಹಿರಂಗವಾಗಿದೆ.

ಇದನ್ನು ಓದಿ: ಹರ್ಷ ಕೊಲೆ: ಸಚಿವ ಈಶ್ವರಪ್ಪ, ಪಾಲಿಕೆ ಸದಸ್ಯ ಚನ್ನಬಸಪ್ಪ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

ಈ ಸಂದರ್ಭದಲ್ಲಿ ವಿಶ್ವಾಸ್‌ ಎಂಬ ಯುವಕನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಪೊಲೀಸರ ಮುಂದೆ ಹರ್ಷನ ಹತ್ಯೆಗೆ ಪ್ರತೀಕಾರವಾಗಿ ಮತ್ತೊಂದು ಹತ್ಯೆಯ ಸಂಚು ರೂಪಿಸಿರುವುದನ್ನು ಬಾಯ್ಬಿಟ್ಟಿದ್ದಾನೆ. ಈ ವಿಷಯ ತಿಳಿದ ನಂತರ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರು ಕುಂಸಿ ಠಾಣೆ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು.

ಯಾರಿಗೂ ಅನುಮಾನವೇ ಬಾರದ ರೀತಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಈ ಬಗ್ಗೆ ಅಗತ್ಯ ಮಾಹಿತಿ ದಾಖಲೆ ಸಂಗ್ರಹಿಸಿತ್ತು. ಪೊಲೀಸರ ತಂಡ ರಾಖಿ, ವಿಶ್ವಾಸ್, ನಿತಿನ್, ಯಶವಂತ್, ಕಾರ್ತಿಕ್, ಆಕಾಶ್, ಪ್ರವೀಣ್, ಸುಹಾಸ್, ಸಚಿನ್, ಸಂಕೇತ್, ರಾಘು, ಮಂಜು, ವಿಶ್ವಾಸ್ ಆರೋಪಿಗಳನ್ನು ವಶಕ್ಕೆ ಪಡೆದು ಎಫ್‍ಐಆರ್ ದಾಖಲಿಸಿದ್ದಾರೆ. ಅಲ್ಲದೇ ಬಂಧಿತರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *