ಸಚಿವ ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ರಾಜಭವನದ ಮುಂದೆ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು :  ಗುತ್ತಿಗೆದಾರ ಸಂತೋಷ್ ಕುಮಾರ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು, ಈಗಾಗಲೇ ದಾಖಲಾಗಿರುವ ಎಫ್‍ಐಆರ್ ಜೊತೆಗೆ ಭ್ರಷ್ಟಚಾರ ನಿಗ್ರಹ ಕಾಯ್ದೆ ಸೆಕ್ಷನ್‍ಗಳನ್ನು ಸೇರಿಸಬೇಕು ಮತ್ತು ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಇಂದು ರಾಜಭವನದ ಮುಂದೆ ಪ್ರತಿಭಟನೆ ನಡೆಸಿದೆ.

ರಾಜ್ಯಪಾಲ ಥಾವರ್ ಚೆಂದ್ ಗೆಲ್ಹೋಟ್‍ರನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ ಈಶ್ವರಪ್ಪ ಅವರ ವಿರುದ್ಧ ದೂರು ನೀಡಿದೆ. ಸರ್ಕಾರಿ ಕಾಮಗಾರಿಗಳಿಗೆ ಕಮಿಷನ್ ಪಡೆಯಲು ಈಶ್ವರಪ್ಪ , ಅವರ ಸಹಾಯಕರಾದ ಬಸವರಾಜು ಮತ್ತು ರಮೇಶ್ ಹಾಗೂ ಇತರ ಆರೋಪಿಗಳು ಪ್ರಯತ್ನಿಸಿರುವುದರಿಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 13ರ ಅಡಿಯೂ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.

ಇದೇ ವೇಳೆ ಸರ್ಕಾರದ ವಿರುದ್ಧ ಕೇಳಿ ಬಂದಿದ್ದ ಶೇ.40ರಷ್ಟು ಕಮಿಷನ್ ಆರೋಪದ ಕುರಿತು ನಿಲುವಳಿ ಸೂಚನೆಯಡಿ ಚರ್ಚೆಗೆ ವಿಧಾನಸಭೆಯಲ್ಲಿ ಅವಕಾಶ ನೀಡಿದ್ದರೆ ಸಂತೋಷ್ ಆತ್ಮಹತ್ಯೆ ನಡೆಯುತ್ತಿರಲಿಲ್ಲ. ವಿಧಾನಸಭೆ ಅಧ್ಯಕ್ಷರು ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಕಾಂಗ್ರೆಸ್ ನಾಯಕರು ಅಸಮದಾನ ವ್ಯಕ್ತ ಪಡಿಸಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಂತೋಷ್ ಬಿಜೆಪಿ ಕಾರ್ಯಕರ್ತ, ಸಚಿವ ಈಶ್ವರಪ್ಪ ಮೌಕಿಕವಾಗಿ ನೀಡಿದ ಭರವಸೆಯ ಮೇರೆಗೆ ಗ್ರಾಮೀಣ ಭಾಗದ ರಸ್ತೆ ಕಾಮಗಾರಿಗಳಲ್ಲಿ ನಾಲ್ಕು ಕೋಟಿ ರೂಪಾಯಿ ಮೊತ್ತದ ಕೆಲಸಗಳನ್ನು ಮಾಡಿದ್ದಾರೆ.

ಅದಕ್ಕಾಗಿ ಅವರು ಪತ್ನಿಯ ಚಿನ್ನಾಭರಣಗಳನ್ನು ಅಡಮಾನ ಮಾಡಿದ್ದಾರೆ, ಖಾಸಗಿಯವರ ಬಳಿಯೂ ಸಾಲ ಮಾಡಿದ್ದಾರೆ. ಕಷ್ಟಪಟ್ಟು ಹಣ ಹೊಂದಿಸಿ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಿದ್ದಾರೆ. ಮಾಡಿದ ಕೆಲಸಕ್ಕೆ ಕಾರ್ಯಾದೇಶ ನೀಡಲು ಮತ್ತು ಬಿಲ್ ಪಾವತಿಸಲು ಸಚಿವ ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಶೇ.40ರಷ್ಟು ಕಮಿಷನ್ ಕೇಳಿದ್ದಾರೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ಸಂತೋಷ್ ಕಮಿಷನ್ ಹಣ ಕೊಡಲಾಗದೆ 80ಕ್ಕೂ ಬಾರಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಆದರೂ ಬಿಲ್ ಪಾವತಿಯಾಗಿಲ್ಲ.

ನಾಲ್ಕು ಕೋಟಿಯಲ್ಲಿ ಶೇ.40 ಕಮಿಷನ್ ಎಂದರೆ 1.60 ಕೋಟಿ ಭ್ರಷ್ಟಾಚಾರಕ್ಕೆ ಖರ್ಚಾಗಲಿದೆ. ಬಾಕಿ ಉಳಿಯುವುದು 2.40 ಕೋಟಿ ಮಾತ್ರ. ಅಷ್ಟು ದೊಡ್ಡ ಪ್ರಮಾಣದ ಕಮಿಷನ್ ಕೊಡಲಾಗದೆ ಸಂತೋಷ್ ಸಣ್ಣ ಪ್ರಮಾಣದ ಹಣವನ್ನೂ ನೀಡಿರಬಹುದು. ಆದರೆ ಸಚಿವರು ಬಿಲ್ ಪಾವತಿಸದೆ ಕಿರುಕುಳ ನೀಡಿದ್ದಾರೆ. ಇದರಿಂದ ಉಡುಪಿಗೆ ಹೋಗಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಪ್ರಯತ್ನಿಸಿ, ವಿಫಲವಾಗಿ ಹತಾಶನಾಗಿ ಅಲ್ಲಿಯೇ ಹೋಟೆಲ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ, ಸಮಾಜಕಲ್ಯಾಣ, ನೀರಾವರಿ, ಲೋಕೋಪಯೋಗಿ, ನಗರಾಭಿವೃದ್ಧಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಶೇ.40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಳೆದ ಜುಲೈನಲ್ಲಿ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲರಿಗೂ ದೂರು ನೀಡಿದ್ದರು. ಅದರ ಚರ್ಚೆಗೆ ನಾವು ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ನೋಟಿಸ್ ನೀಡಿದ್ದೇವು. ಆದರೆ ಪ್ರಾಥಮಿಕ ವಾದ ಮಂಡನೆಗೂ ಅವಕಾಶ ನೀಡದೆ ವಿಧಾನಸಭಾಧ್ಯಕ್ಷರು ಇತಿಹಾಸದಲ್ಲಿ ಮೊದಲ ಬಾರಿಗೆ ಸೂಚನೆಯನ್ನು ಸ್ವಯಂ ಪ್ರೇರಿತರಾಗಿ ತಿರಸ್ಕರಿಸಿದ್ದರು. ಒಂದು ವೇಳೆ ಕಮಿಷನ್ ದಂಧೆ ಚರ್ಚೆಯಾಗಿದ್ದರೆ ಇಂದು ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಈಗ ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಕುಮಾರ್ ಪಾಟೀಲ್ ದೆಹಲಿಗೆ ಹೋಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವರಿಗೆ ದೂರು ನೀಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ದೂರು ನೀಡಿದ್ದಾರೆ.

ಆದರೆ ಯಾರು ಕ್ರಮ ಕೈಗೊಳ್ಳಲಿಲ್ಲ. ಸಂತೋಷ್ ಆತ್ಮಹತ್ಯೆ ಮೂಲಕ ಈ ಸರ್ಕಾರ ಶೇ.40ರಷ್ಟು ಕಮಿಷನ್ ದಂಧೆಯ ಸರ್ಕಾರ ಎಂಬುದು ಖಾತ್ರಿಯಾಗಿದೆ. ಆರೋಪಿ ಸ್ಥಾನದಲ್ಲಿರುವ ಈಶ್ವರಪ್ಪರನ್ನು ಬಂಧಿಸಬೇಕು, ಸಂಪುಟದಿಂದ ವಜಾ ಮಾಡಬೇಕು, ಭ್ರಷ್ಟಾಚಾರದ ಆರೋಪದ ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಘಟನೆಯ ಬಗ್ಗೆ ರಾಜ್ಯಪಾಲರು ಕಳವಳ ವ್ಯಕ್ತ ಪಡಿಸಿದ್ದಾರೆ. ನಿನ್ನೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಈಶ್ವರಪ್ಪ ಅವರೊಂದಿಗೆ ಮಾತನಾಡಿದ್ದು ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿರುವುದಾಗಿ ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಕುಮಾರ್ ಪಾಟೀಲ್ ನನಗೆ ಪರಿಚಯವೇ ಇಲ್ಲ ಎಂದು ಈಶ್ವರಪ್ಪ ರಾಜ್ಯಪಾಲರ ಬಳಿಯೂ ಹೇಳಿದ್ದಾರಂತೆ. ಮಾಧ್ಯಮಗಳಲ್ಲಿ ಈಶ್ವರಪ್ಪ-ಸಂತೋಷ್ ಭೇಟಿಯ ದೃಶ್ಯಗಳು ಪ್ರಸಾರವಾಗುತ್ತಿವೆ. ಸಂತೋಷ್ ಭ್ರಷ್ಟಚಾರಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕ, ರಾಜ್ಯ ಈ ಕಪ್ಪು ಮಸಿಯಿಂದ ಹೊರ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಒಂದು ವೇಳೆ ಹೋರಾಟ ಮಾಡುವ ನಮ್ಮನ್ನು ಸರ್ಕಾರ ಜೈಲಿಗೆ ಹಾಕಿದರು ಹೆದರುವುದಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಹರಕಲು ಬಾಯಿ ಸಚಿವ ಈಶ್ವರಪ್ಪರನ್ನು ಬಂಧಿಸಲೇಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲಿಂ ಅಹಮ್ಮದ್ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಇದ್ದರು.

Donate Janashakthi Media

Leave a Reply

Your email address will not be published. Required fields are marked *