ಮೈಸೂರು: ಟಿಪ್ಪು ಸುಲ್ತಾನ್ ಈ ನಾಡಿನ ಮಣ್ಣಿನ ಮಗ. ಅವರನ್ನು ಕಾಮಾಲೆ ಮತ್ತು ಮತಾಂಧತೆಯ ಪೊರೆ ಕಳಚಿ ಶುದ್ಧ ಕಣ್ಣುಗಳಿಂದ ನೋಡಿ. ಆತ ಜಗತ್ತಿನ ಮಾನ್ಯತೆಗೆ ಒಳಗಾದ ಚಕ್ರವರ್ತಿವಾಗಿದ್ದವನು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಿಳಿಸಿದ್ದಾರೆ.
ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಅಭಿರುಚಿ ಪ್ರಕಾಶನ, ಭಾರತೀಯ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ನಡೆದ ಪ್ರೊ.ಪಿ.ವಿ.ನಂಜರಾಜ ಅರಸ್ ಅವರ ‘ಟಿಪ್ಪು ಮಾನ್ಯತೆ ಸಿಗದ ಸುಲ್ತಾನ್: ಅಂದು-ಇಂದು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ವಿಶ್ವನಾಥ್ ಮಾತನಾಡಿದರು.
ಟಿಪ್ಪು ಸುಲ್ತಾನ್ ಯಾರಿಗೂ ತಲೆಬಾಗಲಿಲ್ಲ. ಮಂಡಿಯೂರಲಿಲ್ಲ. ಪಠ್ಯದಿಂದ ಟಿಪ್ಪು ಚರಿತ್ರೆ ತೆಗೆದ ಮಾತ್ರಕ್ಕೆ ಭಾರತೀಯರ ಹೃದಯ ಸಾಮ್ರಾಜ್ಯದಲ್ಲಿ ಇರುವ ಟಿಪ್ಪು ಸುಲ್ತಾನ್ ಮರೆಯಾಗುವನೇ? ಎಂದು ವಿಶ್ವನಾಥ್ ಪ್ರಶ್ನಿಸಿದರು.
‘ಕೊಡಗಿನಲ್ಲಿ 80 ಸಾವಿರ ಮಂದಿಯನ್ನು ಕೊಂದಿದ್ದ ಎಂದು ಆತನ ಟೀಕಾಕಾರರು ಆರೋಪಿಸುತ್ತಾರೆ. ಕೊಡಗಿನ ಈಗಿನ ಜನಸಂಖ್ಯೆ ಸುಮಾರು 4 ಲಕ್ಷ. ಎರಡೂವರೆ ಶತಮಾನದ ಹಿಂದೆಯೇ 80 ಸಾವಿರ ಮಂದಿಯನ್ನು ಕೊಲ್ಲಬೇಕಿದ್ದರೆ ಅಲ್ಲಿನ ಜನಸಂಖ್ಯೆ ಎಷ್ಟಿತ್ತು’ ಎಂದು ಪ್ರಶ್ನಿಸಿದರು.
ಟಿಪ್ಪು ಸುಲ್ತಾನ್ ಮುಸ್ಲಿಂನಾಗಿ ಹುಟ್ಟಿದ ರಾಷ್ಟ್ರೀಯನಾಗಿ ಬದುಕಿ ಭಾರತಕ್ಕೆ ಗೌರವ ತಂದುಕೊಟ್ಟಿದ್ದು, ಇದನ್ನು ಸುಳ್ಳು ಎನ್ನಲಾಗುವುದಿಲ್ಲ. ರಾಜ್ಯದಲ್ಲಿ ಮೂರು ಪಕ್ಷಗಳು ಮತವನ್ನು ಮುಂದಿಟ್ಟುಕೊಂಡು ಮಾತಾಡುತ್ತಿವೆ. ರಾಜಕಾರಣಿಗಳ ಮಾತು, ಚರ್ಚೆ, ವಿವಾದ, ವಾಗ್ವಾದದಲ್ಲಿ ಜನಹಿತ ಇರಬೇಕು. ಒಬ್ಬರ ಅನ್ನ ಕಿತ್ತುಕೊಳ್ಳುವಂತಹ ಕೆಟ್ಟ ಬೆಳವಣಿಗೆ ರಾಜ್ಯದಲ್ಲಿ ನಡೆಯುತ್ತಿದೆ. ಆದರೂ ವಿವಿಧ ಧರ್ಮಗಳ ಗುರುಗಳು ಮಾತನಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ಬೆಲೆ ಏರಿಕೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಮಾತನಾಡಿ, ಪ್ರಸ್ತುತ ಸಮಾಜ ಕತ್ತಲೆಯಲ್ಲಿದ್ದು, ಸಾಹಿತಿಗಳು, ಚಿಂತಕರು ಬೆಳಕು ಚೆಲ್ಲಬೇಕಿದೆ. ಭಾವನಾತ್ಮಕ ಸಂಗತಿಗಳಾದ ಭಗವದ್ಗೀತೆ ರಾಷ್ಟ್ರೀಯ ಗ್ರಂಥ, ಘರ್ ವಾಪಸ್ಸಿ, ದನದ ಮಾಂಸ, ಲವ್ ಜಿಹಾದ್, ಹಲಾಲ್, ಅಜಾನ್, 15 ದಿನದಲ್ಲಿ ಮತ್ತೊಂದು ಮುನ್ನೆಲೆಗೆ ಬರಲಿದೆ. ಆದರೆ ಬದುಕಿಗೆ ಬೇಕಾದ ಅನ್ನ, ಅಕ್ಷರ, ಉದ್ಯೋಗ, ಬೆಲೆ ಏರಿಕೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶಚಂದ್ರ ಗುರು, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಲೇಖಕ ಪ್ರೊ.ನಂಜರಾಜ ಅರಸ್, ಭಾರತೀಯ ಪರಿವರ್ತನ ಸಂಘ ಜಿಲ್ಲಾ ಸಂಚಾಲಕ ಸೋಸಲೆ ಸಿದ್ದರಾಜು, ಪ್ರಕಾಶಕ ಅಭಿರುಚಿ ಗಣೇಶ್ ಉಪಸ್ಥಿತರಿದ್ದರು.