ಕಳೆದ 44 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಇಪಿಎಫ್‍ ಬಡ್ಡಿದರ ಇಳಿಕೆ: ಸಿಐಟಿಯು ಖಂಡನೆ

ನೌಕರರ ಭವಿಷ್ಯ ನಿಧಿ ಸಂಘಟನೆ(ಇ.ಪಿ.ಎಫ್.ಒ.) ಟ್ರಸ್ಟಿಗಳ ಕೇಂದ್ರ ಮಂಡಳಿಯಲ್ಲಿ ಸರ್ಕಾರದ ಪ್ರತಿನಿಧಿಗಳು ಮತ್ತು ಮಾಲಕರು ಇಪಿಎಫ್ ಬಡ್ಡಿದರವನ್ನು ಕಡಿತಗೊಳಿಸುವಂತೆ ಆಗ್ರಹಿಸಿದ್ದಾರೆ. ಹೀಗಾಗಿ ಈಗಿರುವ ಬಡ್ಡಿದರವನ್ನು ಈಗಿರುವ ಶೇ.8.5ರಿಂದ ಶೇ.8.1ಕ್ಕೆ ಇಳಿಸಬೇಕು ಎಂದು ಶಿಫಾರಸು ಮಾಡಲು ಮಂಡಳಿ ನಿರ್ಧರಿಸಿದೆ. 2021-22ರ ಆರ್ಥಿಕ ವರ್ಷಕ್ಕೆ ಇ.ಪಿ.ಎಫ್ ಬಡ್ಡಿದರಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡುವ ಮಂಡಳಿಯ ತಥಾಕಥಿತ “ಬಹುಮತ” ನಿರ್ಧಾರವನ್ನು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿ.ಐ.ಟಿ.ಯು.) ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮತ್ತೊಂದು ಕಾರ್ಮಿಕ ವಿರೋಧಿ ನಡೆ ಎಂದು ಖಂಡಿಸಿದೆ.

2022ರ ಮಾರ್ಚ್ 11 ಮತ್ತು 12ರಂದು ಗುವಾಹಟಿಯಲ್ಲಿ ನಡೆದ ಕೇಂದ್ರ ಮಂಡಳಿಯ ಸಭೆಯಲ್ಲಿ ಸಿ.ಐ.ಟಿ.ಯು. ಸೇರಿದಂತೆ ಕೇಂದ್ರೀಯ ಕಾರ್ಮಿಕ ಸಂಘಗಗಳನ್ನು ಪ್ರತಿನಿಧಿಸುವ ಎಲ್ಲಾ ನೌಕರರ ಪ್ರತಿನಿಧಿಗಳು ಒಗ್ಗಟ್ಟಿನಿಂದ ಇದನ್ನು ವಿರೋಧಿಸಿದ್ದಾರೆ, ಇದರ ಹೊರತಾಗಿಯೂ ಮಂಡಳಿಯು ಸರ್ಕಾರ ಮತ್ತು ಮಾಲಕರ ಪ್ರತಿನಿಧಿಗಳ ಪ್ರಸ್ತಾವನೆಯನ್ನು ಆಧರಿಸಿ ಬಡ್ಡಿದರವನ್ನು ಕಡಿಮೆ ಮಾಡುವಂತೆ ಶಿಫಾರಸು ಮಾಡಲು ನಿರ್ಧರಿಸಿದೆ. ಇದು ಕಳೆದ 44 ವರ್ಷಗಳಲ್ಲೇ ಅತ್ಯಂತ ಕಡಿಮೆ ಬಡ್ಡಿದರವಾಗಿದೆ.

ಭವಿಷ್ಯ ನಿಧಿ ಎಂಬುದು ಸಾಮಾಜಿಕ ಭದ್ರತೆಯ ಭಾಗವಾಗಿ ನೌಕರರ ಭವಿಷ್ಯಕ್ಕಾಗಿ ಒಂದು ಪುನರಾವರ್ತಿತ ಜೀವಿತಾವಧಿ ಉಳಿತಾಯವಾಗಿರುವುದರಿಂದ ಅದಕ್ಕೆ  ದೇಣಿಗೆಗಳನ್ನು ಬ್ಯಾಂಕ್‌ಗಳಲ್ಲಿನ ಯಾವುದೇ ಇತರ ಠೇವಣಿಗಳ ಬಡ್ಡಿದರಗಳಿಗೆ ಸಮಾನವಾಗಿ ಪರಿಗಣಿಸುವ ಕೇಂದ್ರ ಸರ್ಕಾರದ ವಾದವನ್ನು ಕಾರ್ಮಿಕ ಸಂಘಟನೆಗಳು ಎಂದೂ ಸ್ವೀಕರಿಸುವುದಿಲ್ಲ. ಇದನ್ನು ಬ್ಯಾಂಕಿಂಗ್ ವಲಯದ ಯಾವುದೇ ಇತರ ಠೇವಣಿಗಳ ಬಡ್ಡಿದರಗಳಿಗಿಂತ ಭಿನ್ನವಾಗಿಯೇ ಪರಿಗಣಿಸಬೇಕು ಎಂದು ಸಿಐಟಿಯು ಹೇಳಿದೆ.

ಈ ಇಪಿಎಫ್ ಬಡ್ಡಿದರ ಕಡಿತ ಸೇರಿದಂತೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕಾರ್ಮಿಕ ವರ್ಗ ವಿರೋಧಿ ಮತ್ತು ನೀತಿಗಳಿಗೆ ತಕ್ಕ ಪ್ರತ್ಯುತ್ತರವಾಗಿ ಮಾರ್ಚ್ 28 ಮತ್ತು 29ರಂದು ಮುಂಬರುವ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಸಿಐಟಿಯು ಕಾರ್ಮಿಕರಿಗೆ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *