ಹಿಜಾಬ್ ವಿವಾದ: ಶುಕ್ರವಾರ ರಾಜ್ಯ ಸರ್ಕಾರದ ಪರ ವಾದ ಮಂಡನೆ

ಬೆಂಗಳೂರು: ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ವಿದ್ಯಾರ್ಥಿನಿಯರು ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ತ್ರಿಸದಸ್ಯ ಪೀಠದಲ್ಲಿ ಸತತ ಆರನೇ ದಿನವಾದ ಇಂದು ಮುಂದುವರೆಯಿತು. ಅರ್ಜಿದಾರರ ಪರ ಮತ್ತು ವಿರುದ್ದವಾಗಿ ವಕೀಲರ ವಾದ-ಪ್ರತಿವಾದ ಮಂಡಿಸಿದರು. ಇದೇ ವೇಳೆ ನ್ಯಾಯಪೀಠದತ್ತ ಎರಡು ಕಡೆಗಳ ವಕೀಲರು ಕೆಲವು ಮಹತ್ವದ ಮಾಹಿತಿಗಳನ್ನು ತಿಳಿಸಿದರು.

ಸಲ್ಲಿಕೆಯಾಗಿರುವ 8 ರಿಟ್ ಅರ್ಜಿಗಳು ಹಾಗೂ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು  ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್​ರ ವಿಸ್ತೃತ ಪೀಠ ವಿಚಾರಣೆ ನಡೆಸಿತು. ಇಂದು ಸಹ ಅರ್ಜಿದಾರರ ಪರವಾದ ವಕೀಲರು ವಾದ ಮಂಡಿಸಿದರು.

ವಿಚಾರಣೆ ನಾಳೆ (ಫೆಬ್ರವರಿ 18) ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ. ನಾಳೆ  ರಾಜ್ಯ ಸರ್ಕಾರದ ಪರ ವಾದಮಂಡನೆ ನಡೆಯಲಿದೆ. ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿ ಕೋರ್ಟ್ ಆದೇಶ ಹಿನ್ನೆಲೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲಾ ಕಾಲೇಜುಗಳು, ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ, ತರಗತಿಗಳಲ್ಲಿ ಕೇಸರಿ ಶಾಲು, ಸ್ಕಾರ್ಫ್, ಹಿಜಾಬ್, ಧಾರ್ಮಿಕ ಬಾವುಟ ಧರಿಸದಂತೆ ಸೂಚನೆ ನೀಡಲಾಗಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.

ಕಲಾಪದಲ್ಲಿ ವಾದ-ಪ್ರತಿವಾದಗಳ ಕೆಲವು ಪ್ರಮುಖ ಅಂಶಗಳು

ಒಂದು ಅರ್ಜಿಗೆ ಒಬ್ಬರೇ ವಾದಿಸಬೇಕು. ಒಂದೇ ವಾದವನ್ನು ಪುನರಾವರ್ತನೆ ಮಾಡಬಾರದು. ಎಲ್ಲಾ ಮಧ್ಯಂತರ ಅರ್ಜಿ ವಿಚಾರಣೆ ಅಗತ್ಯವಿಲ್ಲ. ಈ ಅರ್ಜಿಗಳಿಂದ ಕೋರ್ಟ್ ಸಮಯ ವ್ಯರ್ಥವಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಪರ ಜಿ.ಆರ್.ಮೋಹನ್ ವಾದ ಮಂಡಿಸಿದರು. ಮಧ್ಯಂತರ ಅರ್ಜಿದಾರರ ಪರವಾಗಿ ಸುಭಾಷ್ ಝಾ ವಾದ ಮಂಡಿಸಲು ಮನವಿ ಕೊಂಡಿದ್ದರು. ಮತ್ತೊಂದು ಪಿಐಎಲ್ ಸಲ್ಲಿಸಿರುವ ವಿನೋದ್ ಜಿ ಕುಲಕರ್ಣಿ ವಾದ ಮಂಡಿಸಿ, ಕನಿಷ್ಠ ಪಕ್ಷ ಶುಕ್ರವಾರದಂದು ಹಿಜಾಬ್ ಧರಿಸಲು ಅನುಮತಿ ಕೊಡಿ ಎಂದು ಮನವಿ ಮಾಡಿದರು.

ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರಿಫ್ ಜಮೀಲ್ ಎಂಬುವರು ನಿಯಮದಂತೆ ಅರ್ಜಿ ಸಲ್ಲಿಸದ ಕಾರಣ ವಜಾಗೊಳಿಸಿದ ಹೈಕೋರ್ಟ್ ವಿಸ್ತೃತ ಪೀಠ. ಅರ್ಜಿದಾರರ ಪರ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಧಾರ್ಮಿಕ ಆಚರಣೆಗಳ ಕುರಿತಂತೆ ಅಂತಾರ್ರಾಷ್ಟ್ರೀಯ ಒಡಂಬಡಿಕೆಗಳನ್ನು ಉಲ್ಲೇಖಿಸಲು ಮುಂದಾಗಿದ್ದರು.

ವಕೀಲ ಎ.ಎಂ. ಧರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ, ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದರು.

ಹಿಜಾಬ್ ಅರ್ಜಿದಾರರ ಪರ ವಕೀಲ ರವಿವರ್ಮಕುಮಾರ್ ಕಾಲೇಜು ಅಭಿವೃದ್ಧಿ ಸಮಿತಿಗೆ ಸರ್ಕಾರದ ಅಧಿಕಾರ ಹಸ್ತಾಂತರವೇ ಕಾನೂನುಬಾಹಿರವಾಗಿದ್ದು, ವಸತಿ ಯೋಜನೆಯ ಫಲಾನುಭವಿ ಗುರುತಿಸಲು ಶಾಸಕರಿಗೆ ಅಧಿಕಾರ ನೀಡಲಾಗಿತ್ತು. ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಸರ್ಕಾರದ ಆದೇಶಕ್ಕೆ ತಡೆ ಸಿಕ್ಕಿದೆ. ಶಾಸಕರಾದವರಿಗೆ ಆಡಳಿತಾಧಿಕಾರ ನೀಡಬಾರದು. ನೀಡಿದರೆ ಅದು ಪ್ರಜಾಪ್ರಭುತ್ವದ ಮರಣಶಾಸನ ಆಗಲಿದೆ. ಯಾರೇ ಶಾಸಕರಾದರೂ ಅವರು ಪಕ್ಷದ ಪ್ರತಿನಿಧಿಯಾಗಿರುತ್ತಾರೆ. ಪಕ್ಷಕ್ಕೆ ಶಾಲೆಯ ಉಸ್ತುವಾರಿ ನೀಡುವುದು ಸರಿಯಲ್ಲ. ವಿದ್ಯಾರ್ಥಿಗಳ ಯೋಗ ಕ್ಷೇಮವನ್ನು ಶಾಸಕರು ನೋಡಿಕೊಳ್ಳಬಾರದು ಎಂದು ವಾದ ಮಂಡಿಸಿದ್ದರು.

ನಾಳೆ ಸರ್ಕಾರದ ಪರವಾಗಿ ವಾದಿಸುತ್ತೇವೆ ಎಂದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ತಿಳಿಸಿದರು. ಆಗ ತ್ರಿಸದಸ್ಯ ಪೀಠ, ಸರ್ಕಾರ ಆದೇಶ ಬದಲಿಸಬೇಕಿದ್ದರೆ ನೀವು ಸಮಯ ಕೇಳಿ ಎಂದು ತಿಳಿಸಿದರು.

ಸರ್ಕಾರದ ಪರವಾಗಿ ವಾದ ಮಂಡಿಸಿದ ನಂತರ ನಾನು ವಾದ ಮಂಡಿಸುತ್ತೇನೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಪರ ವಕೀಲ ಸಜನ್ ಪೂವಯ್ಯ ತಿಳಿಸಿದರು.

ರಾಜಿ ಸಂಧಾನಕ್ಕೆ ಸಲಹೆ

ಕಲಾಪದ ಕೊನೆಯಲ್ಲಿ ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿರುವ ವಕೀಲೆಯೊಬ್ಬರು, ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಮಧ್ಯಸ್ಥಗಾರರಿಗೆ ವಹಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಮೊದಲು ಪಕ್ಷಗಾರರನ್ನು ಒಪ್ಪಿಸಿ ನಂತರ ಪೀಠಕ್ಕೆ ಮನವಿ ಮಾಡಿ. ನಂತರ ರಾಜಿ ಮೂಲಕ ಬಗೆಹರಿಯುತ್ತದೆಯೇ ಎಂಬುದನ್ನು ಪರಿಶೀಲಿಸೋಣ ಎಂದಿತು.

Donate Janashakthi Media

Leave a Reply

Your email address will not be published. Required fields are marked *