ಬೆಂಗಳುರು: ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ರಾತ್ರಿ ಕರ್ಪ್ಯೂ ಹಾಗೂ ವಾರಾಂತ್ಯ ಕರ್ಪ್ಯೂ ಜಾರಿಗೊಳಿಸಿದೆ. ಈ ಆದೇಶಕ್ಕೆ ಬಿಜೆಪಿ ಪಕ್ಷದ ಅನೇಕ ಶಾಸಕರು, ಸಚಿವರು, ಕೇಂದ್ರ ಸಚಿವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಾರಿಗೊಂಡಿರುವ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಸಡಿಲಿಸಬೇಕೇ ಬೇಡವೇ ಎಂಬ ಬಗ್ಗೆ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ.
ಈ ಹಿನ್ನಲೆಯಲ್ಲಿ ನಾಳೆ ಮಧ್ಯಾಹ್ನ 1 ಗಂಟೆಗೆ ಕೋವಿಡ್ ನಿಯಂತ್ರಣದ ಬಗ್ಗೆ ಮಹತ್ವದ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ವಾರಾಂತ್ಯ ಕರ್ಪ್ಯೂ ಆದೇಶ ವಾಪಾಸ್ಸು ನಿರ್ಧಾರಕ್ಕೆ ಬರಲಾಗುವುದು ಎನ್ನಲಾಗಿದೆ.
ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ. ಸಂಸದ ಪ್ರತಾಪಸಿಂಹ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ವಾರಾಂತ್ಯ ಕರ್ಫ್ಯೂ ಬೇಡ ಎಂದು ಹೇಳಿದ್ದಾರೆ. ಆದರೆ, ಸಚಿವರಾದ ಡಾ. ಕೆ. ಸುಧಾಕರ್, ಆರ್. ಅಶೋಕ್ ಸರ್ಕಾರಕ್ಕೆ ಜನರ ಪ್ರಾಣ ಮುಖ್ಯ. ಹಾಗಾಗಿ, ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನವಾಗುತ್ತದೆ ಎಂದು ಹೇಳುವ ಮೂಲಕ ರಾತ್ರಿ ಕರ್ಫ್ಯೂ ಜಾರಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ವಾರಾಂತ್ಯ ಕರ್ಪ್ಯೂ ಜಾರಿಯಲ್ಲಿದೆ. ಈಗಾಗಲೇ 2 ವಾರ ಮುಕ್ತಾಯಗೊಂಡು ಈ ವಾರ ಜಾರಿಯಾದರೆ ಮೂರನೇ ವಾರದ ವಾರಾಂತ್ಯ ಕರ್ಪ್ಯೂ ನಡೆಯಲಿದೆ. ವಾರಾಂತ್ಯ ಕರ್ಫ್ಯೂವನ್ನು ರದ್ದು ಮಾಡಿ ಎಂಬ ಒತ್ತಡ ಹೆಚ್ಚಿದ್ದರೆ, ಮತ್ತೊಂದೆಡೆ ತಜ್ಞರು ಸೋಂಕು ನಿಯಂತ್ರಣಕ್ಕೆ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂವಿನಂತಹ ನಿರ್ಬಂಧಗಳು ಅವಶ್ಯ ಎನ್ನುತ್ತಿದ್ದಾರೆ. ಜನರ ಪ್ರಾಣರಕ್ಷಣೆ ಮುಖ್ಯ ಎಂದು ಪ್ರತಿಪಾದಿಸುತ್ತಿದ್ದಾರೆ. ಹಾಗಾಗಿ, ನಿರ್ಬಂಧಗಳ ಸಡಿಲಿಕೆ ವಿಚಾರದಲ್ಲಿ ಸರ್ಕಾರ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದೆ.
ಕೊರೊನಾ ಮೂರನೇ ಅಲೆಯ ಸೋಂಕು ಅಷ್ಟೇನೂ ಗಂಭೀರ ಸ್ವರೂಪದಲ್ಲಿ ಜನರನ್ನು ಬಾಧಿಸುತ್ತಿಲ್ಲ. ಹಾಗಾಗಿ, ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ದೈನಂದಿನ ಜೀವನ ನಡೆಸಬಹುದಾಗಿದೆ ಎಂಬ ವಾದಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿರುವುದು ನಾಳಿನ ಸಭೆಯ ತೀರ್ಮಾನಗಳ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚುವಂತೆ ಮಾಡಿದೆ.
ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಶಿಫಾರಸಿನಂತೆ ಕೆಲವು ನಗರಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ನಾಳೆ ನಡೆಯುವ ಸಭೆಯಲ್ಲಿ ತೀರ್ಮಾನಗೊಳ್ಳಲಿದೆ. ಬೆಂಗಳೂರು ಸೇರಿದಂತೆ ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಕ್ಷಿಣ ಕನ್ನಡ ಸೇರಿದಂತೆ ಪ್ರಮುಖ ನಗರಗಳಲ್ಲೂ ಶಾಲೆಗಳನ್ನು ತೆರೆಯಲು ಸರ್ಕಾರ ಸಿದ್ಧವಿದೆ ಎನ್ನಲಾಗುತ್ತಿದೆ.
ಈ ಎಲ್ಲಾ ಹಿನ್ನಲೆಯಲ್ಲಿ ನಾಳಿನ ಸಭೆ ಮಹತ್ವವನ್ನು ಪಡೆದುಕೊಂಡಿದೆ. ಈ ಸಭೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಸಚಿವರು ಸೇರಿದಂತೆ ಅನೇಕ ತಜ್ಞರು ಭಾಗಿಯಾಗಲಿದ್ದಾರೆ.