ಉನ್ನಾವೋ : ಉತ್ತರ ಪ್ರದೇಶದ ಸದರ್ ಕ್ಷೇತ್ರದ ಬಿಜೆಪಿ ಶಾಸಕ ಪಂಕಜ್ ಗುಪ್ತಾಗೆ ರೈತನೋರ್ವ ಕಪಾಳಮೋಕ್ಷ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೇದಿಕೆ ಮೇಲೆ ಕುಳಿತಿದ್ದ ವೇಳೆ ಅಲ್ಲಿಗೆ ಬಂದಿರುವ ವೃದ್ಧ ರೈತನೋರ್ವ ಕೆನ್ನೆಗೆ ಹೊಡೆದಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಇದಾಗಿದೆ ಎನ್ನಲಾಗುತ್ತಿದ್ದು, ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಸಾರ್ವಜನಿಕ ಸಭೆಯಲ್ಲೇ ಈ ರೀತಿಯ ಘಟನೆ ನಡೆದಿದೆ. ರೈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ತುಣಕನ್ನು ಸಮಾಜವಾದಿ ಪಕ್ಷದ ಮಾಧ್ಯಮ ಘಟಕ ಸಹ ಶೇರ್ ಮಾಡಿಕೊಂಡಿದೆ.
ಕಪಾಳಮೋಕ್ಷಕ್ಕೆ ಕಾರಣ ಏನು?
ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ರೈತ ಕಳೆದ ಕೆಲ ದಿನಗಳ ಹಿಂದೆ ಕಾಣೆಯಾಗಿರುವ ಹಸುಗಳ ಬಗ್ಗೆ ಪೊಲೀಸ್ ಠಾಣೆ ಹಾಗೂ ಶಾಸಕರ ಮುಂದೆ ದೂರು ನೀಡಿದ್ದನಂತೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತ ಆಯೋಜನೆಗೊಂಡಿದ್ದ ಸಭೆಗೆ ಆಗಮಿಸಿ ಈ ರೀತಿಯಾಗಿ ನಡೆದುಕೊಂಡಿದ್ದಾನೆಂದು ತಿಳಿದು ಬಂದಿದೆ.
ವಿಡಿಯೋದಲ್ಲಿರುವ ಹಿರಿಯ ರೈತನನ್ನು ಛತ್ರಪಾಲ್ ಎಂದು ಗುರುತಿಸಲಾಗಿದ್ದು, ಶಾಸಕರನ್ನು ವೇದಿಕೆಯ ಮೇಲೆ ಹೊಡೆದ ನಂತರ ಪೊಲೀಸರು ಆತನನ್ನು ಕರೆದುಕೊಂಡು ಹೋಗುತ್ತಿರುವುದನ್ನು ವಿಡಿಯೋ ತುಣುಕಿನಲ್ಲಿ ತೋರಿಸಲಾಗಿದೆ.
ಕೆನ್ನೆಗೆ ಬಾರಿಸಿರುವ ವ್ಯಕ್ತಿ ನನ್ನ ಚಿಕ್ಕಪ್ಪ, ಅವರಿಗೆ ಪ್ರೀತಿಯಿಂದ ತಟ್ಟಲು ಹೇಳಿದ್ದೆ. ಆದರೆ ಯಾರೋ ಅದನ್ನು ತಿರುಚಿದ್ದಾರೆ ಎಂದು ಶಾಸಕ ಪಂಕಜ್ ಗುಪ್ತಾ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.