ಬೆಂಗಳೂರು: ಸರ್ಕಾರಿ ಬಸ್ ಪ್ರಯಾಣದ ವೇಳೆ ಮೊಬೈಲಿನಲ್ಲಿ ಜೋರಾಗಿ ಮಾತನಾಡುವಂತಿಲ್ಲ. ಜೋರಾಗಿ ಮಾತನಾಡಿ ಕಿರಿಕಿರಿ ಉಂಟು ಮಾಡಿದರೆ ದಂಡ ಬೇಳಲಿದೆ. ಅಲ್ಲದೆ, ಬಸ್ಗಳಲ್ಲಿ ಜೋರಾಗಿ ಹಾಡು ಹಾಕಿದರೂ ಸಹ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಹೊಸದಾದ ನಿಯಮವೊಂದನ್ನು ಸಾರಿಗೆ ಜಾರಿಗೊಳಿಸಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಇಯರ್ಫೋನ್ ಇಲ್ಲದೆ ಜೋರಾಗಿ ಹಾಡು ಹಾಕಿದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ.
ಕೆಲ ಪ್ರಯಾಣಿಕರ ಇಂತಹ ವರ್ತನೆಯಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಸ್ಸುಗಳಲ್ಲಿ ಜೋರಾಗಿ ಹಾಡು ಹಾಕುವ ಪ್ರಯಾಣಿಕರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಚಾಲಕ ಮತ್ತು ನಿರ್ವಾಹಕರಿಗೆ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಬಸ್ಸುಗಳಲ್ಲಿ ಶಬ್ದ ಮಾಲಿನ್ಯ ಮಾಡುವವರಿಗೆ ಸಿಬ್ಬಂದಿಯು ತಿಳಿವಳಿಕೆ ನೀಡಿಬೇಕು. ಮೊಬೈಲ್ ಬಳಕೆಯ ಬಗ್ಗೆ ಸರಿಯಾದ ಮಾಹಿತಿಯನ್ನು ವಿವರಿಸಬೇಕು. ಸಿಬ್ಬಂದಿಯ ಮಾತಿಗೆ ಮನ್ನಣೆ ನೀಡದಿದ್ದರೆ ಅಂಥವರನ್ನು ಬಸ್ಸಿನಿಂದ ಕೆಳಗೆ ಇಳಿಯಲು ಸೂಚಿಸಬೇಕು. ಅವರು ಕೆಳಗೆ ಇಳಿಯುವವರೆಗೆ ವಾಹನವನ್ನು ನಿಲ್ಲಿಸಿಕೊಂಡಿರಬೇಕು. ಇಂಥವರಿಗೆ ಪ್ರಯಾಣದರವನ್ನೂ ಹಿಂದಿರುಗಿಸುವಂತಿಲ್ಲ ಎಂದು ತಿಳಿಸಲಾಗಿದೆ. ಈ ಸುತ್ತೋಲೆಯ ನಿರ್ದೇಶನಗಳು ತಕ್ಷಣದಿಂದ ಜಾರಿಗೆ ಬರುತ್ತವೆ ಎಂದು ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದರು.
ಮತ್ತೇನಾದರೂ ಸಮಸ್ಯೆಗಳು ಎದುರಾದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು. ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1989ರ ನಿಯಮ 94(1)ವಿ ಪ್ರಕಾರ ಇದು ಕಾನೂನು ಬಾಹಿರವೆಂದು ವಿವರಿಸಲಾಗಿದೆ. ಇದರಿಂದ ಶಬ್ದಮಾಲಿನ್ಯ ಉಂಟಾಗುವುದರ ಜೊತೆ ಪ್ರಯಾಣಿಕರಿಗೂ ಕಿರಿಕಿರಿ ಉಂಟು ಮಾಡಲಿದೆ.