ಬೆಂಗಳೂರು: ರಾಜ್ಯಾದ್ಯಂತ ಇಂದು ಒಂದರಿಂದ ಐದನೇ ತರಗತಿ ಆರಂಭವಾಗಿವೆ. ಇಷ್ಟು ದಿನ ಮನೆಯಲ್ಲಿದ್ದ ಮಕ್ಕಳು ಶಾಲೆಗೆ ಬಂದಿದ್ದಾರೆ. ಆನ್‌ಲೈನ್ ತರಗತಿಯಲ್ಲಿ ಭಾಗವಹಿಸುತ್ತಿದ್ದ ಮಕ್ಕಳು ಈಗ ಆಫ್‌ಲೈನ್ ತರಗತಿಗಳಿಗೆ ಇಂದಿನಿಂದ ಹಾಜರಾಗುತ್ತಿದ್ದಾರೆ. ಮಕ್ಕಳಿಗೆ ಶಾಲಾರಂಭ ಸಂತಸವನ್ನು ತಂದುಕೊಟ್ಟಿದ್ದರೆ, ಇತ್ತ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೇ 6 ರಿಂದ 10 ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು, ಇಂದಿನಿಂದ ಒಂದರಿಂದ ಐದನೇ ತರಗತಿವರೆಗೆ ಭೌತಿಕ ತರಗತಿಗಳನ್ನು ಮಾರ್ಗಸೂಚಿಗಳ ಪಾಲನೆಯೊಂದಿಗೆ ಆರಂಭಿಸಲಾಗಿದೆ. ಪೋಷಕರ ಒಪ್ಪಿಗೆ ಪತ್ರದೊಂದಿಗೆ ಮಕ್ಕಳು ಶಾಲೆಗೆ ಆಗಮಿಸಿದ್ದಾರೆ. ಅರ್ಧ ದಿನ ಶಾಲೆ ನಡೆಯಲಿದ್ದು, ಮುಂದಿನ ವಾರದಿಂದ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆಯಲಿವೆ.
ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಖುಷಿಯಿಂದಲೇ ಶಾಲೆಗೆ ಆಗಮಿಸಿದ್ದಾರೆ. ಶಾಲೆಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ಅನಾರೋಗ್ಯದ ಲಕ್ಷಣ ಇರುವ ಮಕ್ಕಳಿಗೆ ಶಾಲೆಗೆ ಪ್ರವೇಶ ಇರುವುದಿಲ್ಲ. ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಒಂದೂವರೆ ವರ್ಷದ ನಂತರ ಶಾಲೆ ಪ್ರಾರಂಭವಾಗಿದ್ದು, ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಬಂದಿದೆ.
ಅರ್ಧದಿನ ಮಾತ್ರ ಶಾಲೆ : 1ರಿಂದ 5ನೇ ತರಗತಿಗಳನ್ನು ಆರಂಭಿಸಲು ತೀರ್ಮಾನಿಸಿರುವ ಸರ್ಕಾರ ಮಾರ್ಗಸೂಚಿಯನ್ನೂ ಪ್ರಕಟಿಸಿದೆ. 20 ತಿಂಗಳ ನಂತರ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳು ಆರಂಭವಾಗುತ್ತಿದ್ದು, 3ನೇ ಹಂತದಲ್ಲಿ 1ರಿಂದ 5ನೇ ತರಗತಿ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಅಕ್ಟೋಬರ್ 30ರವರೆಗೆ ಅರ್ಧದಿನ ಮಾತ್ರ ತರಗತಿ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ, ಶನಿವಾರ ಬೆಳಗ್ಗೆ 8ರಿಂದ 11.40ರವರೆಗೆ ತರಗತಿ ನಡೆಸಬೇಕು ಎಂದು ಸರ್ಕಾರ ಸೂಚಿಸಿದ್ದು, ನ.2ರಿಂದ ಪೂರ್ಣಾವಧಿ ತರಗತಿಗಳು ಅಂದರೆ, ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ತರಗತಿಗಳು ನಡೆಯಲಿವೆ. ಮಕ್ಕಳು ಶಾಲೆಗೆ ಬರಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ. ಅಕ್ಟೋಬರ್ 30ರವರೆಗೆ ಮಧ್ಯಾಹ್ನದ ಬಿಸಿಯೂಟ ಇರುವುದಿಲ್ಲ. ನ.2ರಿಂದ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆ ಮಾಡಲಾಗುವುದು. ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳೇ ಊಟ ತರಬೇಕು. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಒಂದು ಕೊಠಡಿಯಲ್ಲಿ 15-20 ಮಕ್ಕಳ ತಂಡ ರಚಿಸಿ ಪಾಠಮಾಡಬೇಕು. ಶಾಲೆ ಗೇಟ್ ಬಳಿ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಡ್ಡಾಯ. ಯಾವುದೇ ಮಕ್ಕಳಲ್ಲಿ ಕೊರೊನಾ ಕಂಡುಬoದರೆ ಶಾಲೆಯನ್ನು ಸ್ಯಾನಿಟೈಸ್ ಮಾಡಬೇಕು. ಮುಂದಿನ ಆದೇಶದವರೆಗೆ ಎಲ್ ಕೆ ಜಿ, ಯುಕೆಜಿ ಆರಂಭಿಸುವoತಿಲ್ಲ. ಶಿಕ್ಷಕರು, ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ. ಶಿಕ್ಷಕರು 2 ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ. 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು ಎಂದು ಸರ್ಕಾರ ಆದೇಶಿಸಿದೆ.
ಶಿಕ್ಷಕರ ಪ್ರತಿಭಟನೆ :
ಇನ್ನೂ ಶಾಲೆ ಪ್ರಾರಂಭವಾಗುತ್ತಿದ್ದಂತೆ ಇತ್ತ ಸರ್ಕಾರಿ ಶಾಲಾ ಶಿಕ್ಷಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆಗೆ ಕರೆಕೊಟ್ಟಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು 1 ಲಕ್ಷ 63 ಸಾವಿರ ಶಿಕ್ಷಕರು ಇದ್ದಾರೆ. ಇವರೆಲ್ಲಾ ಇಂದು ಕೈಗೆ ಕಪ್ಪು ಪಟ್ಟಿ ಧರಿಸಿ ಶಾಲೆಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳೇನು!
– ಪದವೀಧರ ಶಿಕ್ಷಕರ ಸಮಸ್ಯೆ ಸರ್ಕಾರ ಆಲಿಸಬೇಕು
– ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಬೇಕು
– ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಭಾರಿ ವರ್ಗಾವಣೆ ಮಾಡಬೇಕು
– ಮುಖ್ಯ ಗುರುಗಳಿಗೆ 15, 20, 25 ವರ್ಷಗಳ ವೇತನ ಬಡ್ತಿ ನೀಡಬೇಕು
– ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು
– ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಆಲಿಸಿ, ಪರಿಹರಿಸಬೇಕು
– ದೈಹಿಕ ಶಿಕ್ಷಕರ ಹಾಗೂ ಹಿಂದಿ ಶಿಕ್ಷಕರ ಸಮಸ್ಯೆಗಳನ್ನ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು.
ಸರಕಾರ ಕೂಡಲೇ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕು. ಈಗ ತರಗತಿಗಳಲ್ಲಿ ಮಾತ್ರ ಕೈ ಗೆ ಕಪ್ಪುಬಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಸರಕಾರ ಸಂಪದಿಸದೆ ಹೋದರೆ ಪ್ರತಿಭಟನೆ ಜೊತೆ ತರಗತಿಗಳನ್ನು ಬಹಿಷ್ಕಾರ ಮಾಡುತ್ತೇವೆ – ಶಂಭುಲಿಂಗನಗೌಡ ಪಾಟೀಲ್, ರಾಜ್ಯಾಧ್ಯಕ್ಷರು, ಕರ್ನಾಟಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ