ಬೆಂಗಳೂರು: ಉತ್ತರ ಪ್ರದೇಶದ ರಾಜ್ಯ ಲಖಿಂಪುರ ಜಿಲ್ಲೆಯ ಖೇರಿ ಎಂಬ ಗ್ರಾಮದಲ್ಲಿ ರೈತರ ಮೆರವಣಿಗೆ ಸಂದರ್ಭದಲ್ಲಿ ಅಕ್ಟೋಬರ್ 03ರಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಅಶೀಶ್ ಮಿಶ್ರಾ ಮತ್ತು ಅವನೊಟ್ಟಿಗೆ ಮೂರು ವಾಹನಗಳು ಪ್ರತಿಭಟನಾ ನಿರತ ರೈತರ ಮೇಲೆ ಹರಿಸಿದ ಪರಿಣಾಮವಾಗಿ ನಾಲ್ವುರು ರೈತರು ಮತ್ತು ಒಬ್ಬ ಪತ್ರಕರ್ತ ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದರು.
ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ದೇಶವ್ಯಾಪಿಯಾಗಿ ಎಲ್ಲಾ ಜನಚಳುವಳಿಯ ಸಂಘಟನೆಯ ಕರೆಯ ಭಾಗವಾಗಿ ರಾಜ್ಯದಲ್ಲಿಯೂ ಹಲವು ಜಿಲ್ಲೆಗಳಲ್ಲಿ ಹೋರಾಟದಲ್ಲಿ ಮಡಿದ ರೈತರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿದೆ.
ಇದನ್ನು ಓದಿ: ಲಖಿಂಪುರ ಹಿಂಸಾಚಾರದಲ್ಲಿ ಮಡಿದ ರೈತರ ‘ಅಂತಿಮ ದರ್ಶನ’ಕ್ಕೆ ಎಸ್‌ಕೆಎಂ ನಾಯಕರ ಭೇಟಿ
ಬೆಂಗಳೂರು ನಗರದ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್, ಮೀನಾಕ್ಷಿ ಸುಂದರಂ, ಜಿ.ಎನ್.ನಾಗರಾಜ್, ಕೆ.ವಿ.ಭಟ್, ಟಿ.ಸುರೇಂದ್ರ ರಾವ್, ವಿಮಲಾ ಕೆ.ಎಸ್., ಕೆ.ಎಸ್.ಲಕ್ಷ್ಮಿ, ಮತ್ತಿತರರು ಭಾಗವಹಿಸಿದ್ದರು.
ಬೆಂಗಳೂರು ನಗರದ ಬಸವನಗುಡಿಯಲ್ಲಿರುವ ಜ್ಯೋತಿ ಬಸು ಭವನದಲ್ಲಿ ಸಿಪಿಐ(ಎಂ) ಜಯನಗರ ವಲಯ, ಬಸವನಗುಡಿ ವಲಯ ಮತ್ತು ಕಚೇರಿ ಶಾಖೆಗಳು ಒಟ್ಟಾಗಿ ಲಖಿಂಪುರ ಖೇರಿಯ ಐದು ಹುತಾತ್ಮ ರೈತ ಹೋರಾಟಗಾರರ ಪೋಟೋಗಳಿಗೆ ಮಾಲಾರ್ಪಣೆ ಮಾಡಿ, ಐದು ದೀಪಗಳನ್ನು ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಸಿಪಿಐ(ಎಂ) ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಉಮೇಶ್ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು. ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ.ಪ್ರಕಾಶ್, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಭಾಗವಹಿಸಿದ್ದರು. ಜಯನಗರ ವಲಯ ಕಾರ್ಯದರ್ಶಿ ಶ್ರೀಪತಿ ಸ್ವಾಗತಿಸಿದರು. ಬಸವನಗುಡಿ ವಲಯ ಸಮಿತಿ ಸದಸ್ಯ ರವಿಚಂದ್ರನ್ ವಂದಿಸಿದರು. ಕಚೇರಿ ಶಾಖೆ ಕಾರ್ಯದರ್ಶಿ ಬಿ.ಆರ್.ದೇವಿಕ, ಜಯನಗರ ವಲಯ ಸಮಿತಿ ಸದಸ್ಯ ಬಸವರಾಜ, ಬಿ.ಎನ್.ರಘು ಮುಂತಾದವರು ಭಾಗವಹಿಸಿದ್ದರು.