ನವದೆಹಲಿ: ಜೆನ್‌ಯು ಮಾಜಿ ವಿದ್ಯಾರ್ಥಿ ಮುಖಂಡ ಕನ್ನಯ್ಯ ಕುಮಾರ್ ಹಾಗೂ ಗುಜರಾತ್ ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.
#BREAKING | @KanhaiyaKumar, Jignesh Mevani (@jigneshmevani80) to join Congress on October 2: Congress sources pic.twitter.com/KKN0O5hbXu
— NDTV (@ndtv) September 20, 2021
ಅಕ್ಟೋಬರ್ 2ರ ಮಹಾತ್ಮ ಗಾಂಧಿ ಜನ್ಮ ಜಯಂತಿಯಂದು ಇಬ್ಬರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಸೆಪ್ಟೆಂಬರ್ 28ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಈ ಮೊದಲು ನಿಗದಿಯಾಗಿತ್ತು. ಆದರೆ ಇದೀಗ ದಿನಾಂಕ ಮುಂದೂಡಿಕೆಯಾಗಿದೆ ಎಂದು ವರದಿ ಹೇಳಿದೆ.
ಜಿಗ್ನೇಶ್ ಮೇವಾನಿ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ ನ ಸಂಚಾಲಕರಾಗಿದ್ದಾರೆ. 2004ರಲ್ಲಿ ಮೇವಾನಿ ಮುಂಬೈನಲ್ಲಿ ಗುಜರಾತ್ ಭಾಷೆಯ ಅಭಿಯಾನ್ ಮ್ಯಾಗಜಿನ್ ನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತರಾಗುವ ಮೊದಲು ಮೇವಾನಿ ಮೂರು ವರ್ಷ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಬಾರಿ ಗುಜರಾತ್‌ನಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕನ್ನಯ್ಯ ಕುಮಾರ್ ಸಿಪಿಐ ಪಕ್ಷದಲ್ಲಿದ್ದು, ತಮ್ಮ ಬೆಂಬಲಿಗರೊಂದಿಗೆ ಕುಮಾರ್ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ ಇವರಿಬ್ಬರು ಕಾಂಗ್ರೆಸ್ ಸೇರುವುದು ಖಚಿತ ಎನ್ನಲಾಗುತ್ತಿದೆ. ಎರಡು ವಾರಗಳಲ್ಲಿ ಎರಡು ಬಾರಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕನ್ನಯ್ಯ ಕುಮಾರ್ ಮುಂದಿನ ಬಾರಿಯ ಲೋಕಸಭಾ ಕ್ಷೇತ್ರದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕನ್ನಯ್ಯ ಕಾಂಗ್ರೆಸ್ ಸೇರ್ಪಡೆ ಸುಳ್ಳು ಸುದ್ದಿ : ಕನ್ನಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆ ಗೊಳ್ಳಲಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ಸಿಪಿಐ ಹಿರಿಯ ನಾಯಕ ಸಿದ್ಧನಗೌಡ ಪಾಟೀಲ್ ತಿಳಿಸಿದ್ದಾರೆ. ಕಳೆದ ವಾರ ನಡೆದ ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ ಕನ್ನಯ್ಯ ಭಾಗವಹಿಸಿದ್ದಾರೆ ಹಾಗಾಗಿ ಅವರು ಪಕ್ಷ ಬಿಡುವ ಮಾತೇ ಇಲ್ಲ. ಮುಂಬರುವ ಬಿಹಾರ, ಗುಜರಾತ್ ಚುನಾವಣೆಯ ಕುರಿತು ಚರ್ಚೆ ನಡೆಸಲು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ಮಾಧ್ಯಮಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ ಎಂದಿರುವ ಅವರು ಕನ್ನಯ್ಯ ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ನಿರಾಕರಿಸಿದ್ದಾರೆ.