ಮಂಡ್ಯ : ರೈತ ವಿರೋಧಿ ಕಾನೂನುಗಳು ಬದಲಾಗದಿದ್ದರೆ ಆ ಕಾನೂನುಗಳನ್ನು ತಂದ ಸರ್ಕಾರವನ್ನೇ ಬದಲಾಯಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಹನನ್ ಮೊಲ್ಲಾ ಮಹತ್ವದ ಹೇಳಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಆಯೋಜಿಸಿದ್ದ “ರೈತ ಸನ್ಮಾನ” ಗೌರವ ಸ್ವೀಕರಿಸಿ ಮಾತನಾಡಿದ ಹನನ್ ಮೊಲ್ಲಾರವರು, ಸೊನ್ನೆ ಡಿಗ್ರಿ ಚಳಿಯಲ್ಲಿ, 45 ಡಿಗ್ರಿಯ ಉರಿ ಬಿಸಿಲಿನಲ್ಲಿ, ವಾರ ಗಟ್ಟಲೆ ಸುರಿದ ಜಡಿ ಮಳೆಯನ್ನೂ ಲೆಕ್ಕಿಸದೆ ನಡೆಯುತ್ತಿರುವ ಈ ಹೋರಾಟ ಕೇಂದ್ರ ಸರ್ಕಾರ ತಂದಿರುವ ಮೂರು ಕರಾಳ, ರೈತದ್ರೋಹಿ, ಕಾರ್ಪೊರೇಟ್ ಪರವಾದ ನೀತಿಗಳು ಬದಲಾಗುವ ವರೆಗೂ ಮುಂದುವರೆಯುತ್ತದೆ, ಒಂದು ವೇಳೆ ಕಾನೂನುಗಳನ್ನು ಬದಲಾಯಿಸದಿದ್ದರೆ ಸರ್ಕಾರವನ್ನೇ ಬದಲಾಯಿಸುವ ವರೆಗೆ ಮುಂದುವರೆಯುತ್ತವೆ ಎಂದು ಹೇಳಿದರು.
ನಾನು ಲೋಕಸಭೆಯಲ್ಲಿ ಒಂಬತ್ತು ಜನ ಪ್ರಧಾನ ಮಂತ್ರಿಗಳನ್ನು ನೋಡಿದ್ದೇನೆ, ಅವರಲ್ಲೆಲ್ಲ ವಂಚಕ, ಸುಳ್ಳುಗಾರ ಪ್ರಧಾನಿಯೆಂದರೆ ಈ ನರೇಂದ್ರ ಮೋದಿ, ಇಂತಹ ಸುಳ್ಳುಗಾರನನ್ನು ನಾನು ನೋಡೇ ಇರಲಿಲ್ಲ ಎಂದು ಹೇಳಿದರು.
ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಇದೇ ಸೆಪ್ಟೆಂಬರ್ 25 ರಂದು ದೇಶಾದ್ಯಂತ ರಸ್ತೆ ತಡೆ ಮಾಡಲು ಕರೆ ನೀಡಲಾಗಿದೆ. ಇದನ್ನು ಬಂದ್ ಆಗಿ ಪರಿವರ್ತಿಸಬೇಕೆಂದು ಕರೆ ನೀಡಿದರು.
ಇದನ್ನೂ ಓದಿ : ಸಂಯುಕ್ತ ಕಿಸಾನ್ ಮೋರ್ಚಾ ಕರೆ: ಸೆಪ್ಟೆಂಬರ್ 25ರಂದು ಭಾರತ್ ಬಂದ್
ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಸನ್ಮಾನ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟಾಚಲಯ್ಯ, ಟಿ.ಎಲ್.ಕೃಷ್ಣೇಗೌಡ, ಟಿ.ಯಶವಂತ್, ಎನ್ ಎಲ್. ಭರತ್ ರಾಜ್ ಸೇರಿದಂತೆ ಜನಪರ ಸಂಘಟನೆಗಳ ಮುಖಂಡರಾದ ಜಿ. ಎನ್. ನಾಗರಾಜ್, ಸುನಂದಾ ಜಯರಾಮ್, ಸುನೀತ್ ಚೋಪ್ರಾ, ಬಿ.ವೆಂಕಟ್, ದೇವಿ, ಪುಟ್ಟಮಾದು, ನಿತ್ಯಾನಂದ ಸ್ವಾಮಿ ಹಾಜರಿದ್ದರು.
ಹನನ್ ಮೊಲ್ಲಾ ರವರು ಪಶ್ಚಿಮ ಬಂಗಾಳದ ಉಲ್ಬೇರಿಯಾ ಕ್ಷೇತ್ರದಿಂದ ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ರೈತ ನಾಯಕ ಮೊಲ್ಲಾ ದೆಹಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟವನ್ನು ರೂಪಿಸಿ, ಮುನ್ನಡೆಸುತ್ತಿರುವ ನಾಯಕರಲ್ಲೇ ಅಗ್ರಗಣ್ಯರಾಗಿದ್ದಾರೆ. ಪ್ರಸ್ತುತ ಮೊಲ್ಲಾರವರು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೂರಾರು ಸಂಘರ್ಷಾತ್ಮಕ ಹೋರಾಟಗಳ ಮೂಲಕ ರೈತಪರ ಕೆಲಸಗಳನ್ನು ಮಾಡಿದವರಾಗಿದ್ದಾರೆ.