ಚಂಡಿಘಡ: ಕೃಷಿಕಾಯ್ದೆ ವಿರೋಧಿಸಿ ಹಾಗೂ ಹರ್ಯಾಣ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ತಲೆಗೆ ಹೊಡೆಯುವಂತೆ ಹರಿಯಾಣದ ಉನ್ನತ ಜಿಲ್ಲಾ ಅಧಿಕಾರಿಯೊಬ್ಬರು ಪೊಲೀಸರಿಗೆ ನಿರ್ದೇಶಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅಧಿಕಾರಿಯ ವಿರುದ್ದ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದ್ದು. ಇವರ ವಿರುದ್ಧ ಕ್ರಮ ಜರುಗಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ.
ಬಿಜೆಪಿ ಸಭೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಶನಿವಾರ ಹರಿಯಾಣ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಘಟನೆಯಲ್ಲಿ ಸುಮಾರು 10 ರೈತರು ಗಾಯಗೊಂಡಿದ್ದಾರೆ. ಈ ಮಧ್ಯೆ ಕರ್ನಾಲ್ ಉಪ ವಿಭಾಗಧಿಕಾರಿ ಆಯುಷ್ ಸಿನ್ಹಾ, ಯಾವುದೇ ಪ್ರತಿಭಟನಾಕಾರರು ಆ ಪ್ರದೇಶದಲ್ಲಿ ನಿರ್ದಿಷ್ಟ ಬ್ಯಾರಿಕೇಡ್ನಿಂದ ಆಚೆ ಹೋಗಬಾರದು ಎಂದು ಪೊಲೀಸರಿಗೆ ಸೂಚಿಸುವುದು ವಿಡಿಯೋದಲ್ಲಿದೆ.
ಇದು ಅತ್ಯಂತ ಸರಳ ಮತ್ತು ಸ್ಪಷ್ಟವಾಗಿದೆ. ಅವರು ಯಾರೇ ಆಗಿರಲಿ, ಎಲ್ಲಿಂದಲೇ ಬಂದವರಾಗಿರಿ, ಯಾರೊಬ್ಬರೂ ಅಲ್ಲಿಗೆ ತಲುಪಲು ಅವಕಾಶ ನೀಡುವಂತಿಲ್ಲ. ಯಾವುದೇ ಸಂದರ್ಭದಲ್ಲಿಯೂ ಈ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಲು ನಾವು ಅವಕಾಶ ಕೊಡುವುದಿಲ್ಲ, ಹಾಗೇನಾದರೂ ಆದರೆ ನಿಮ್ಮ ಲಾಠಿಯಿಂದ ಅವರ ತೆಲೆಗೆ ಒಡೆಯಿರಿ. ಇದು ಅತ್ಯಂತ ಸ್ಪಷ್ಟವಾಗಿದೆ. ನಿಮಗೆ ಇನ್ಯಾವುದೇ ಸೂಚನೆಯ ಅಗತ್ಯವಿಲ್ಲ ಎಂದು ಸಿನ್ಹಾ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : ರೈತರ ಮೇಲೆ ಲಾಠಿ ಪ್ರಹಾರ: ಕುಪಿತ ರೈತ ಸಂಘಟನೆಗಳಿಂದ ಹೆದ್ದಾರಿ ತಡೆ
ಈ ಘಟನೆಯನ್ನು ಅಖಿಲ ಭಾರತ ಕಿಸಾನ್ ಸಭಾ ಖಂಡಿಸಿದ್ದು (AIKS), ಪೊಲೀಸರು ರೈತರ ತಲೆಗೆ ಹೊಡೆಯುತ್ತಿರುವ ದೃಶ್ಯಗಳನ್ನು ನೋಡಿದರೆ ಪೊಲIಸರು ಸ್ಪಷ್ಟವಾದ ಉದ್ದೇಶವನ್ನು ಹೊಂದಿದ್ದರು ಎಂಬುದು ಗೊತ್ತಾಗುತ್ತದೆ. ಈ ರೀತಿ ಹಿಂಸೆಗಳನ್ನು ನಡೆಸುವ ಮೂಲಕ ಹೋರಾಟಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈ ಘಟನೆಯನ್ನು ಖಂಡಿಸಿ ದೇಶವ್ಯಾಪಿ ರಸ್ತೆ ತಡೆ ನಡೆಸುವಂತೆ ಕರೆ ನೀಡಲಾಗಿದೆ ಎಂದು ಎಐಕೆಎಸ್ ತಿಳಿಸಿದೆ. ಇನ್ನೂ ಈ ಘಟನೆ ಅಮಾನೀಯವಾದ್ದು ಪೊಲೀಸರು ಹಾಗೂ ಬಿಜೆಪಿ ನೀತಿಗಳು ಹೇಗಿವೆ ಎಂಬುದನ್ನು ಇದು ತೋರಿಸುತ್ತದೆ. ಸುಪ್ರೀಂ ಕೋರ್ಟ್ ಸುಮೋಟೊ ಕೇಸ್ ದಾಖಲಿಸಿಕೊಳ್ಳಬೇಕು ಎಂದು ಸೀತಾರಾಮ್ ಯೆಚೂರಿ ಟ್ವಿಟ್ ಮೂಲಕ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಿಂಸಾತ್ಮಕ ಛಾಯಾಚಿತ್ರವನ್ನು ಟ್ವೀಟ್ ಮಾಡಿದ್ದು, ಆ ಚಿತ್ರದಲ್ಲಿ ಬಿಳಿ ಕುರ್ತಾ ಪೈಜಾಮಾ ರಕ್ತದಿಂದ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಹಾಗೆಯೇ ರೈತರ ತಲೆಯ ಮೇಲೆ ಗಾಯವಾಗಿದ್ದು, ಬಟ್ಟೆಯು ರಕ್ತದಿಂದ ತೋಯ್ದು ಹೋಗಿದೆ. ಇನ್ನಿಬ್ಬರು ಆ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಿರುವುದು ಚಿತ್ರದಲ್ಲಿ ಕಂಡು ಬಂದಿದೆ. ಈ ಚಿತ್ರದೊಂದಿಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಮತ್ತೊಮ್ಮೆ ರೈತರ ರಕ್ತ ಹರಿದಿದೆ ಮತ್ತು ಭಾರತ ನಾಚಿಕೆಯಿಂದ ತಲೆ ಬಾಗಿದೆ,” ಎಂದು ಹೇಳಿದ್ದಾರೆ.
ಮೇಘಾಲಯ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ಪ್ರತಿಕ್ರಿಯೆ ನೀಡಿದ್ದು, “ಮೂರು ಕೃಷಿ ಕಾನೂನುಗಳ ವಿರುದ್ದ ಪ್ರತಿಭಟಿಸುತ್ತಿರುವ ರೈತರನ್ನು ಮತ್ತೊಮ್ಮೆ ಬೆಂಬಲಿಸಿದ್ದಾರೆ” ಹಾಗೂ ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿದ್ದಾರೆ. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಿನ್ನೆ ಕರ್ನಾಲ್ ನಲ್ಲಿ ನಡೆದ “ಕ್ರೂರ” ಪೊಲೀಸ್ ಲಾಠಿ ಚಾರ್ಜ್ ಗೆ ಕ್ಷಮೆ ಕೇಳಬೇಕು ಎಂದು ಮಲಿಕ್ ಆಗ್ರಹಿಸಿದ್ದಾರೆ.
ರೈತರ “ತಲೆ ಒಡೆಯಲು” ಪೊಲೀಸರಿಗೆ ಆದೇಶಿಸಿದ ವೀಡಿಯೊ ಆನ್ಲೈನ್ನಲ್ಲಿ ಹೊರಹೊಮ್ಮಿದ ನಂತರ ಜಿಲ್ಲೆಯ ಉನ್ನತ ಅಧಿಕಾರಿಯನ್ನು ವಜಾಗೊಳಿಸುವಂತೆ ರಾಜ್ಯಪಾಲ ಮಲಿಕ್ ಒತ್ತಾಯಿಸಿದ್ದಾರೆ. “ಮನೋಹರ್ ಲಾಲ್ ಖಟ್ಟರ್ ರೈತರ ಕ್ಷಮೆ ಕೇಳಲೇಬೇಕು, ರೈತರ ಮೇಲೆ ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಕೇಂದ್ರ ಸರಕಾರ ತಮ್ಮ ಬಲ ಬಳಸಬಾರದು, ಬಲ ಬಳಸಬೇಡಿ ಎಂದು ನಾನು ಹೇಳುತ್ತಿದ್ದೇನೆ ಎಂದು ಮಲಿಕ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.