ರಫೇಲ್ ಭ್ರಷ್ಟಾಚಾರ ಆರೋಪ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ : ಮಾಯಾವತಿ

ಲಖನೌ: ‘ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ತನಿಖೆ ನಡೆಸುವ ಮೂಲಕ ಈ ಪ್ರಕರಣಕ್ಕೆ ಇತಿಶೀ ಹಾಡುವುದು ಒಳ್ಳೆಯದು‘ ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಟ್ವೀಟ್ ಮಾಡಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಯಾವತಿ ಅವರು, ‘ಭಾರತ, ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಫ್ರಾನ್ಸ್ ಸರ್ಕಾರ ಈ ಪ್ರಕರಣವನ್ನು ನ್ಯಾಯಾಂಗ ವಿಚಾರಣೆಗೆ ಸೂಚಿಸಿದೆ. ಇದು ಈಗ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಕೇಂದ್ರ  ಸರ್ಕಾರ ಆರೋಪವನ್ನು ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು‘ ಎಂದು ಟ್ವೀಟ್ ಮಾಡಿದ್ದಾರೆ.

‘ರಕ್ಷಣಾ ಇಲಾಖೆಯ ಒಪ್ಪಂದಗಳಲ್ಲಿ ಕಮಿಷನ್ ಪಡೆಯುತ್ತಾರೆಂಬ ಆರೋಪ ಹಾಗೂ ಇಂಥ ಪ್ರಕರಣಗಳ ತನಿಖೆ ನಡೆಸುವ ವಿಚಾರ ಹೊಸದೇನಲ್ಲ. ಇದು ಕಾಂಗ್ರೆಸ್ ಆಡಳಿತದ ಕಾಲದಿಂದಲೂ ಜ್ವಲಂತ ವಿಷಯವಾಗಿದೆ. ಹಾಗಾಗಿ ಸರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರಫೇಲ್ ಒಪ್ಪಂದದ ಪ್ರಕರಣವನ್ನು ಪರಿಗಣಿಸಿ, ಸೂಕ್ತ ರೀತಿಯಲ್ಲಿ ಇತ್ರ‍್ಥಗೊಳಿಸುವ ನಂಬಿಕೆ ಇದೆ‘ ಎಂದು ಹೇಳಿದ್ದಾರೆ.

ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವಿನ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಪಕ್ಷಪಾತ ನಡೆದಿದೆ ಎಂಬ ಆರೋಪದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಫ್ರಾನ್ಸ್  ಸರ್ಕಾರ ನ್ಯಾಯಾಧೀಶರನ್ನು ನೇಮಿಸಿದೆ.

Donate Janashakthi Media

Leave a Reply

Your email address will not be published. Required fields are marked *