ಪ್ಯಾರಿಸ್ ಕಮ್ಯೂನ್ -150 ಪುಸ್ತಕ ಬಿಡಗಡೆ
ಬೆಂಗಳೂರು: ಮಾನವ ಕುಲವನ್ನು ಎಲ್ಲಾ ಬಗೆಯ ಶೋಷಣೆ ಯಿಂದ ಮುಕ್ತಿ ಗೊಳಿಸುವುದು ಕಾರ್ಮಿಕ ವರ್ಗದ ಜವಾಬ್ದಾರಿ ಯಾಗಿದೆ ಹಾಗೂ ಕಾರ್ಮಿಕ ವರ್ಗವೇ ಇಂತಹ ಜವಾಬ್ದಾರಿ ನಿರ್ವಹಿಸಲು ಸಾಧ್ಯ ಎಂಬುದನ್ನು ‘ ಪ್ಯಾರಿಸ್ ಕಮ್ಯೂನ್’ ಚರಿತ್ರೆ ತೋರಿಸಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮೀನಾಕ್ಷಿ ಸುಂದರಂ ತಿಳಿಸಿದರು
ಕ್ರಿಯಾ ಪ್ರಕಾಶನ ಹೊರ ತಂದಿರುವ 150 ವರ್ಷಾಚರಣೆಯ ಸಂಭ್ರಮದಲ್ಲಿರುವ ʻಪ್ಯಾರಿಸ್ ಕಮ್ಯೂನ್ʼ ಕನ್ನಡ ಅನುವಾದಿತ ಪುಸ್ತಕವನ್ನು ಆನ್ಲೈನ್ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ʻಪ್ಯಾರಿಸ್ ನಗರದಲ್ಲಿ ಚೆಲ್ಲಿದ ರಕ್ತ ನಮ್ಮ ರಕ್ತ, ಚಿಕಾಗೋ ನಗರದಲ್ಲಿ ಹಾರಾಡಿದ ಬಾವುಟ ನಮ್ಮ ಬಾವುಟ ಎಂದು ಸದಾಕಾಲ ಘೋಷಣೆಗಳ ಮೂಲಕ ನಾವು ಮೊಳಗಿಸುತ್ತೇವೆ. ಇಂದಿಗೂ ಪ್ಯಾರಿಸ್ ಕಮ್ಯೂನ್ ಹೋರಾಟ ಅತ್ಯಂತ ಪ್ರಸ್ತುತವಾಗಿದೆ. 1871ರ ಮಾರ್ಚ್ 18ರಿಂದ ಮೇ 28ರವರೆಗೆ 72 ದಿನಗಳ, ಅತ್ಯಂತ ಸಮರಶೀಲವಾಗಿ ಇಡೀ ಪ್ಯಾರಿಸ್ ನಗರ ಸಂಪೂರ್ಣವಾಗಿ ದುಡಿಯುವ ಕೈಗಳಲ್ಲಿ ಇಡೀ ಪ್ರಭುತ್ವದ ಅಧಿಕಾರ ಸ್ಥಾಪನೆಯಾಗಿತ್ತು. ದುಡಿಯುವ ವರ್ಗಕ್ಕೆ ಶೋಷಣೆ ಮುಕ್ತ ಸಮಾಜವನ್ನು, ದುಡಿಯುವ ಕೈಯಲ್ಲಿ ಅಧಿಕಾರ ಸಾಧ್ಯವೆಂದು ತೋರಿಸಿಕೊಟ್ಟಿದ್ದು ಪ್ಯಾರಿಸ್ ಕಮ್ಯೂನ್ʼ ಎಂದು ಹೇಳಿದರು.
ಇದನ್ನು ಓದಿ: ಕಾರ್ಮಿಕರ ಮೊದಲ ಕ್ರಾಂತಿಗೆ 150ರ ಸಂಭ್ರಮ
ಜರ್ಮನಿ ಮತ್ತು ಫ್ರಾನ್ಸ್ ಅತ್ಯಂತ ಕಡುವೈರಿಗಳಾಗಿದ್ದಂತ ಆ ಸಂದರ್ಭದಲ್ಲಿ ಅಂದಿನ ಬಲಾಢ್ಯ ಜರ್ಮನಿಯ ಫ್ರಾನ್ಸ್ ಅನ್ನು ವಶಕ್ಕೆ ಪಡೆಯಬೇಕಾದ ಸಂದರ್ಭದಲ್ಲಿ ಮಿಲಿಟರಿ ಯುದ್ಧವನ್ನು ಆರಂಭಿಸುತ್ತದೆ. ಫ್ರಾನ್ಸ್ನಲ್ಲಿನ ಆಳುವ ಬೂರ್ಷ್ವಾ ಪ್ರಭುತ್ವದ ನೆಪೊಲಿಯನ್-3 ಬಂಧನಕ್ಕೆ ಒಳಗಾಗುತ್ತಾರೆ. ಇಡೀ ಪ್ರಾನ್ಸ್ ಜನತೆ ಗಣರಾಜ್ಯಕ್ಕೆ ಬೇಡಿಕೆ ಇಟ್ಟರು. ಆಗ ಇಡೀ ದುಡಿಯುವ ವರ್ಗ ಪ್ಯಾರಿಸ್ ಅನ್ನು ವಶಕ್ಕೆ ಪಡೆಯುವ ಮೂಲಕ ಅಧಿಕಾರವನ್ನು ಸ್ಥಾಪನೆ ಮಾಡುತ್ತಾರೆ. ನಂತರದಲ್ಲಿ ಫ್ರಾನ್ಸ್ನ ಬೂರ್ಷ್ವಾ ವರ್ಗ ಮತ್ತು ಜರ್ಮನಿಯ ಸೈನ್ಯದ ಒಳಒಪ್ಪಂದ ಭಾಗವಾಗಿ ನಂತರ ನಡೆದ ಯುದ್ಧ ಹಾಗೂ ಅಂತರ್ಯುದ್ಧದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಜನರು ಬಂಡವಾಳ ವರ್ಗದ ಧಾಳಿಯಿಂದ ಮರಣ ಹೊಂದುತ್ತಾರೆ. ಎದುರಿಗೆ ಕಾಣಸಿಗುವ ಎಲ್ಲ ದುಡಿಯುವ ವರ್ಗದ ನಾಯಕರನ್ನು ಕೊಲ್ಲಲಾಗುತ್ತದೆ.
ಪ್ರೆಂಚ್ ಕ್ರಾಂತಿಯ ಬಗ್ಗೆ ನಮಗೆ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಆದರೆ ಪ್ಯಾರಿಸ್ ಕಮ್ಯೂನ್ ಕುರಿತ ಮಾಹಿತಿಗಳು ಅಷ್ಟಾಗಿ ಸಿಗುವುದಿಲ್ಲ. ವ್ಯವಸ್ಥಿತವಾಗಿ ಮಾಹಿತಿಗಳನ್ನು ಮುಚ್ಚಿಹಾಕಲಾಗಿದೆ. ಕಾರ್ಮಿಕರು ತಮ್ಮ ದೈನಂದಿನ ಆರ್ಥಿಕ ಅಗತ್ಯಗಳಿಗೆ ಮಾತ್ರ ಸೀಮಿತಗೊಳ್ಳದೇ ಶೋಷಣೆಯ ಕಪಿಮುಷ್ಠಿಯಿಂದ ವಿಮೋಚನೆಗೊಳ್ಳುವ ಬಗ್ಗೆ ಚಿಂತಿಸಬೇಕಿದೆ.ಪ್ಯಾರಿಸ್ ಕಮ್ಯೂನ್ ನಂತಹ ಚರಿತ್ರೆಗಳು ಈಗಿನ ಕಾರ್ಮಿಕರಿಗೆ ದಾರಿದೀಪವಾಗಲಿ ಎಂದು ಅವರು ಆಶಿಸಿದರು.
ಕಾರ್ಮಿಕರು ಅಧಿಕಾರ ಹಿಡಿದಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಜಾರಿಗೆ ಬರುತ್ತದೆ. ಉಳಿದೆಲ್ಲವೂ ಪ್ರಜಾಪ್ರಭುತ್ವ ದ ಹೆಸರಿನ ಬೆರಳೆಣಿಕೆಯ ಶ್ರೀಮಂತರ ಸರ್ವಾಧಿಕಾರ ಎಂದು ಬಣ್ಣಿಸಿದ ಅವರು ಕಾರ್ಮಿಕರನ್ನು ಶೋಷಣೆ ಮಾಡುವ ಪ್ರತಿಯೊಂದು ಬಂಡವಾಳಶಾಹಿ ಯಂತ್ರಾಂಗಗಳನ್ನು ತಕ್ಷಣವೇ ಕಾರ್ಮಿಕರು ವಶಕ್ಕೆ ತೆಗೆದುಕೊಂಡಿದ್ದರೆ ಪ್ರತಿ ಕ್ರಾಂತಿಗೆ ಅವಕಾಶ ಸಿಗುತ್ತಿರಲಿಲ್ಲ. ಇದು ಪ್ಯಾರಿಸ್ ಕಮ್ಯೂನ್ ನ ಪಾಠ ಎಂದು ವಿವರಿಸಿದರು.
ಪುಸ್ತಕ ಕುರಿತು ಲೇಖಕರು, ಚಿಂತಕರೂ ಆದ ಡಾ. ಬಿ.ಆರ್. ಮಂಜುನಾಥ್ ಅವರು ಮಾತನಾಡಿ ʼದುಡಿಯುವ ವರ್ಗದ ಪ್ರಭುತ್ವದ ಬಗ್ಗೆ ʻಸ್ವರ್ಗದ ಬಾಗಿಲು ತೆಗೆದರುʼ ಎಂಬ ಕಾರ್ಲ್ಮಾರ್ಕ್ಸ್ ಅವರ ಅತ್ಯಂತ ಮೆಚ್ಚಿಗೆಯನ್ನು ಪಡೆದುಕೊಂಡ ಪ್ಯಾರಿಸ್ ಕಮ್ಯೂನ್ನ 150ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಅಂದಿನ ದುಡಿಯುವ ವರ್ಗದ ಚಳುವಳಿಯ ಬಗ್ಗೆ ಮತ್ತೆ ಮತ್ತೆ ನೆನಪು ಮಾಡಿಕೊಳ್ಳತ್ತಾ ಮುಂದಿನ ದಿನಗಳಲ್ಲಿಯೂ ದುಡಿಯುವ ವರ್ಗದ ಚಳುವಳಿಯ ಮಹತ್ವದ ಅನಿವಾರ್ಯ ಈ ಪುಸ್ತಕ ಅತ್ಯಂತ ಮಹತ್ವವಾದ್ದಾಗಿದೆʼ ಎಂದು ಹೇಳಿದರು.
ʻಕ್ರಾಂತಿಯ ಕಾಲಘಟ್ಟದ ಮೂಲಕ ಪ್ರಮುಖವಾಗಿ ಎದುರಾಗುವುದು ನಮಗೆ ಫ್ರೆಂಚ್ ಕ್ರಾಂತಿ ಅತ್ಯಂತ ಪ್ರಮುಖವಾಗಿದೆ. 1789ರ ಆ ಸಂದರ್ಭದ ಕ್ರಾಂತಿಯು ಇಡೀ ವಿಶ್ವಕ್ಕೆ ಅತ್ಯಂತ ಬದಲಾವಣೆಯ ಪ್ರಮುಖವಾದ ಅಂಶ. ಆದರೂ, ಅಂದಿನ ಫ್ರೆಂಚ್ ಕ್ರಾಂತಿ ಬಂಡವಾಳಶಾಹಿ ನೇತೃತ್ವದ ಕ್ರಾಂತಿಯಾಗಿದೆ. ನಂತರದಲ್ಲಿ ಮತ್ತೆ ಮತ್ತೆ ದುಡಿಯುವ ವರ್ಗದ ಆಕ್ರೋಶಭರಿತ ಹೋರಾಟಗಳು ಸಂಭವಿಸಿದೆ. ಆದರೂ, ಪ್ಯಾರಿಸ್ ಕಮ್ಯೂನ್ ಪೂರ್ವದ ಹೋರಾಟಗಳೆಲ್ಲವೂ ಅಂತಹ ಮಹತ್ವವೇನು ಪಡೆದುಕೊಂಡಿರಲಿಲ್ಲ. ಆದರೆ, ಪ್ಯಾರಿಸ್ ಕಮ್ಯೂನ್ ಕ್ರಾಂತಿ ಇಡೀ ದುಡಿಯುವ ವರ್ಗಕ್ಕೆ ಹೊಸದೊಂದು ದಿಕ್ಕನ್ನೇ ತೋರಿಸಿಕೊಟ್ಟಿದೆ. ದುಡಿಯುವ ವರ್ಗ ಕೇವಲ ಪ್ರತಿರೋಧವನ್ನು ಒಡ್ಡುವುದಷ್ಟೆ ಅಲ್ಲ. ಅವರು ರಾಜ್ಯ(ಪ್ರಭುತ್ವ)ವನ್ನು ಸ್ಥಾಪಿಸುತ್ತಾರೆ ಮತ್ತು ಅವರೇ ಮುನ್ನಡೆಸುತ್ತಾರೆ ಎಂಬ ಅರಿವು ಇಡೀ ವಿಶ್ವಕ್ಕೆ ಸಂದೇಶವನ್ನು ಪ್ಯಾರಿಸ್ ಕಮ್ಯೂನ್ ಸಾರುತ್ತದೆʼ ಎಂದು ಹೋರಾಟಗಳ ಮಹತ್ವದ ಬಗ್ಗೆ ವಿವರಿಸಿದರು.
ಇದನ್ನು ಓದಿ: ಜೂನ್ 5 : ಮೊದಲ ಕಾರ್ಮಿಕ ಸರಕಾರದ ನೆನಪಿನ “ಪ್ಯಾರಿಸ್ ಕಮ್ಯೂನ್ 150” ಪುಸ್ತಕದ ಬಿಡುಗಡೆ
`ಇಂದಿಗೂ ಜಗತ್ತಿನಲ್ಲಿ ಹೋರಾಟಗಳ ನಗರವೆಂದ ಪ್ರಸಿದ್ದಿಯನ್ನು ಪ್ಯಾರಿಸ್ ನಗರ ಪಡೆದುಕೊಂಡಿದೆ. ಅಲ್ಲಿ ಹೋರಾಟವೆಂದರೆ ಲಕ್ಷಾಂತರ ಮಂದಿ ಧುಮುಕುವುದಿದೆ. ಮಾನವ ನಿರ್ಮಿತ ಅತ್ಯಂತ ಗಟ್ಟಿ ಮತ್ತು ಬಲಿಷ್ಠವಾದ ತಡೆಗೋಡೆಗಳನ್ನು ನಿರ್ಮಿಸಿ ಹೋರಾಟವನ್ನು ಮುನ್ನಡೆಸುವ ವೈಶಿಷ್ಠತೆಯನ್ನು ಪಡೆದುಕೊಂಡಿದೆ. ದುಡಿಯುವ ವರ್ಗ ಪ್ರಭುತ್ವವನ್ನು ವಶಕ್ಕೆ ಪಡೆದುಕೊಂಡ ನಂತರ ಬೇಕರಿಗಳಲ್ಲಿ ರಾತ್ರಿಪಾಳಿ ಕೆಲಸವನ್ನು ನಿಷೇಧಿಸಲಾಯಿತು. ಇಡೀ ನಗರದ ಕಾರ್ಖಾನೆಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಮಾಲೀಕರಿಗೆ ದಂಡವನ್ನು ವಿಧಿಸುವುದು. ಇಡೀ ಜನತೆಯೇ ಶಾಶ್ವತವಾದ ಸೈನ್ಯ ನಿರ್ಮಿಸಿಕೊಂಡರು. ಅಷ್ಟು ಮಾತ್ರವಲ್ಲದೆ, ಎಲ್ಲಾ ಅಧಿಕಾರ ಕೇಂದ್ರೀತ ಸ್ಥಾನಗಳೆಲ್ಲವೂ ದುಡಿಯುವ ವರ್ಗವೇ ನಡೆಸಲು ಪ್ರಾರಂಭಿಸಿದವು. ಯಾವುದೇ ಸ್ಥಾನಮಾನಗಳು ಇದ್ದರೂ ಕಾರ್ಮಿಕ ವೇತನದಲ್ಲಿ ತಾರತಮ್ಯವನ್ನು ತೋರಲಿಲ್ಲʼ ಎಂದು ಡಾ. ಬಿ.ಆರ್. ಮಂಜುನಾಥ್ ಅವರು ಹೇಳಿದರು.
ಪ್ಯಾರಿಸ್ ಕಮ್ಯೂನ್ ವೈಫಲ್ಯದ ಬಗ್ಗೆ ವಿವರಿಸಿದ ಡಾ. ಬಿ.ಆರ್. ಮಂಜುನಾಥ್ ಅವರು ʻಪ್ರಮುಖವಾಗಿ ಪ್ಯಾರಿಸ್ ಕಮ್ಯೂನ್ ವಿಫಲವಾಗಲು ಮೊದಲಿಗೆ ದುಡಿಯುವ ವರ್ಗದಲ್ಲಿ ಸಂಪೂರ್ಣವಾಗಿ ಅಧಿಕಾರ ಹಿಡಿದರೂ ಸಹ ಹಣಕಾಸು ಸಂಸ್ಥೆಗಳಾದ ಬ್ಯಾಂಕ್ಗಳನ್ನು ವಶಕ್ಕೆ ಪಡೆದುಕೊಂಡಿರಲಿಲ್ಲ. ಇದರ ಲಾಭವನ್ನು ಬೂರ್ಷ್ವಾ ವರ್ಗ ಪಡೆದುಕೊಂಡಿತು. ಅದೇ ರೀತಿಯಲ್ಲಿ ಕೆಲವು ವಿಚಾರಗಳಲ್ಲಿ ಉದಾರತೆಯನ್ನು ತೋರಿಸಿದ್ದು ಬುರ್ಷ್ವಾಶಾಹಿಗಳ ಸೈನ್ಯ ಮಾರ್ಕ್ಸ್ಲೆಸ್ಗೆ ಸ್ಥಳಾಂತರಗೊಳ್ಳಲು ಅವಕಾಶ ಮಾಡಿಕೊಟ್ಟಿತು. ಜೊತೆಯಲ್ಲೇ ಅಂತರ್ಯದ್ಧವನ್ನು ಸಹ ಎದುರಾಯಿತು. ಗ್ರಾಮೀಣ ಭಾಗದಲ್ಲಿನ ಪ್ರತಿಗಾಮಿಶಕ್ತಿಗಳು ಪ್ರಬಲಗೊಳ್ಳಲು ಸಹಕಾರಿಯಾದ ಪರಿಣಾಮವಾಗಿ ಇವೆಲ್ಲವನ್ನು ಎದುರಿಸಬೇಕಾದ ಸಂದರ್ಭ 72 ದಿನಗಳ ದುಡಿಯುವ ವರ್ಗದ ಪ್ರಭುತ್ವವನ್ನು ಅಂದರೆ, ಮೇ 28 1871ರಂದು ಬಂಡವಾಳಶಾಹಿ ವರ್ಗ ನಾಶಪಡಿಸಿದವು.
ʻಇದರಿಂದ ಇಡೀ ಜಗತ್ತಿಗೆ ಕಾರ್ಮಿಕ ವರ್ಗದ ಪ್ರಣಾಳಿಕೆಯನ್ನು ನೀಡಿದ ಕಾರ್ಲ್ಮಾರ್ಕ್ಸ್ ಅವರು ಪ್ಯಾರಿಸ್ ಕಮ್ಯೂನ್ ಹೋರಾಟ ಮತ್ತು ವೈಫಲ್ಯಗಳ ಕುರಿತು ʻಫ್ರಾನ್ಸ್ನಲ್ಲಿ ಅಂತರ್ಯುದ್ಧʼ ಎಂಬ ಪುಸ್ತಕವನ್ನು ಜಗತ್ತಿಗೆ ಪರಿಚಯಿಸಿದರು. ನಂತರದ ಶತಮಾನದಲ್ಲಿ 1917ರಲ್ಲಿ ಸಂಭವಿಸಿದ ರಷ್ಯಾದಲ್ಲಿ ನಡೆದ ಸಮಾಜವಾದಿ ಕ್ರಾಂತಿಯಲ್ಲಿ ದುಡಿಯುವ ವರ್ಗದ ಸ್ಥಾಪಿತ ಪ್ರಭುತ್ವವನ್ನು ಶೋಷಿತ ವರ್ಗಕ್ಕೆ ಲಭಿಸಿದವು. ನಂತರದಲ್ಲಿ ನಡೆದ ಚೀನಾ, ಕ್ಯೂಬಾ, ಇತ್ಯಾದಿ ದೇಶಗಳಲ್ಲಿನ ಕ್ರಾಂತಿಗಳು ಮತ್ತು ವಿಯೆಟ್ನಾಂನಲ್ಲಿ ಕ್ರಾಂತಿಯೊಂದಿಗೆ ದುಡಿಯುವ ವರ್ಗದ ಅಧಿಕಾರ ಸ್ಥಾಪಿಸಲು ಸಾಧ್ಯವಾಗಿದೆ.
ಪ್ರಸಕ್ತ ಭಾರತದಲ್ಲಿ ಪ್ರಭುತ್ವದ ಅಧಿಕಾರ ಅತ್ಯಂತ ಪ್ರತಿಗಾಮಿ ಮತ್ತು ಬಂಡವಾಳಶಾಹಿಗಳ ಶೋಷಕರ ಅಡಿಯಲ್ಲಿ ಸಿಲುಕಿಕೊಂಡಿರುವ ಸನ್ನಿವೇಶದಲ್ಲಿ ದುಡಿಯುವ ವರ್ಗದ ಹೋರಾಟಗಳು ಮತ್ತಷ್ಟು ಬಲಿಷ್ಠಗೊಳ್ಳುವ ಅವಶ್ಯಕತೆ ಇದೆʼ ಎಂದು ಡಾ. ಬಿ.ಆರ್. ಮಂಜುನಾಥ್ ಅವರು ತಿಳಿಸಿದರು.
ಪುಸ್ತಕದಲ್ಲಿ ಐದು ಲೇಖನಗಳು ಇವೆ. ಪ್ಯಾರಿಸ್ ಕಮ್ಯೂನ್ನ ಹೋರಾಟ, ಕಾರ್ಲ್ಮಾರ್ಕ್ಸ್ ಅವರ ಪ್ಯಾರಿಸ್ ಕಮ್ಯೂನ್ ವಿಜಯ ಮತ್ತು ಪರಿಷ್ಕರಣವಾದಿಗಳ ವಿಫಲತೆಯ ಬಗ್ಗೆ ಲೆನಿನ್ ಅವರ ರಾಜ್ಯ ಮತ್ತು ಕ್ರಾಂತಿ ಬಗ್ಗೆ ಲೇಖನ, ಹಾಗೂ ವಿಜಯ್ ಪ್ರಸಾದ್ ಅವರ ವಿಸ್ತಾರವಾದ ವಿಶ್ಲೇಷಣೆಯ ಅಂಶಗಳು ಒಳಗೊಂಡಿದೆ ಎಂದು ಹೇಳಿದರು.
ಆರಂಭದಲ್ಲಿ ಕ್ರಿಯಾ ಮಾಧ್ಯಮದ ಪರವಾಗಿ ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಂಡಿಸಿದ ವಸಂತರಾಜ ಎನ್ ಎಕೆ ಅವರು ʻಪ್ಯಾರಿಸ್ ಕಮ್ಯೂನ್ ಕ್ರಾಂತಿ ಇಡೀ ದುಡಿಯುವ ವರ್ಗ ನೇತೃತ್ವ ನೀಡಿದ ಕ್ರಾಂತಿಯಾಗಿದೆ. ಈ ಕ್ರಾಂತಿಯಲ್ಲಿ ಬಂಡವಾಳಶಾಹಿ ಪ್ರಭುತ್ವವನ್ನು ಕೈವಶ ಮಾಡಿಕೊಂಡ ದುಡಿಯುವ ವರ್ಗ ನಿಜವಾದ ಪ್ರಜಾಪ್ರಭುತ್ವದ ಸ್ಥಾಪನೆಗೆ ಮುಂದಾಯಿತು. ಎಲ್ಲವನ್ನು ಇಡೀ ಕಾರ್ಮಿಕ ವರ್ಗವೇ ನಿರ್ಧರಿಸುವ ಅತ್ಯಂತ ಮಹತ್ವದ ಕ್ಷಣ ಅದಾಗಿತ್ತು. 72 ದಿನಗಳ ದುಡಿಯುವ ವರ್ಗದ ಕ್ರಾಂತಿಯು ಮುಂಬರುವ ದಿನಗಳ ಇಡೀ ವಿಶ್ವದಲ್ಲಿ ಸಂಭವಿಸಿದ ಎಲ್ಲೆಡೆಯ ವಿಮೋಚನಾ ಹೋರಾಟದ ಕ್ರಾಂತಿಗಳಿಗೆ ಹೊಸದಾದ ಪಾಠವನ್ನೇ ನೀಡಿದವು. ರಾಜಕೀಯದ ಪರಿಸ್ಥಿತಿ ಮತ್ತು ಪ್ರಜ್ಞೆಯನ್ನು ಮೈಗೂಡಿಸಿಕೊಂಡ ಪ್ಯಾರಿಸ್ ಕಮ್ಯೂನ್ ದುಡಿಯುವ ವರ್ಗದ ಅನುಭವ ಎಲ್ಲೆಡೆ ಪಾಠವಾಗಿ ಪರಿಣಮಿಸಿದೆ. ರಷ್ಯಾದಲ್ಲಿನ ದುಡಿಯುವ ವರ್ಗ ಸಮಾಜವಾದಿ ಕ್ರಾಂತಿಯ ಮೂಲಕ ಶೋಷಿತರ ಕೈಗೆ ಅಧಿಕಾರ ಎಂಬುದು ಸ್ಥಾಪನೆಯಾಯಿತು. ಲೆನಿನ್ ಅವರು ಪ್ಯಾರಿಸ್ ಕಮ್ಯೂನ್ ಬಗ್ಗೆ ತಮ್ಮ ರಾಜ್ಯ ಮತ್ತು ಕ್ರಾಂತಿ ಪುಸ್ತಕದಲ್ಲಿ ವಿವರಣೆ ನೀಡಿದ್ದಾರೆ.
150ನೇ ವರ್ಷಾಚರಣೆ ಸಂದರ್ಭದಲ್ಲಿ ಶೋಷಿತ ವರ್ಗದ ವಿನೋಚನೆಗಾಗಿ ಕನ್ನಡದಲ್ಲಿಯೂ ಇಂತಹ ಮಹತ್ವದ ಕ್ರಾಂತಿಕಾರಿ ಪುಸ್ತಕವನ್ನು ಹೊರತರುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ. ವಿವಿಧ ದೇಶಗಳ ಹಲವು ಭಾಷೆಗಳಲ್ಲಿ ಒಂದೇ ರಕ್ಷಾಪುಟ ಒಳಗೊಂಡ ಪುಸ್ತಕ ಬಿಡುಗಡೆ. ಈಗಾಗಲೇ ಅಂತರರಾಷ್ಟ್ರೀಯವಾಗಿ ಕಲಾಸ್ಪರ್ಧೆಯನ್ನು ಏರ್ಪಿಸಲಾಗಿತ್ತು. ಅದರಲ್ಲಿ ಕ್ಯೂಬಾದ ಕಲಾವಿದ ಮುಖಪುಟ ಹಾಗೂ ಕೇರಳದ ಕಲಾವಿದನ ಹಿಂಬದಿ ಪುಟದ ಚಿತ್ರ ಆಯ್ಕೆಯಾಗಿದೆ. ಕರ್ನಾಟಕದಿಂದಲೂ ಕ್ರಿಯಾ ಮಾಧ್ಯಮದ ಎಂ. ರಾಮು ಹಾಗೂ ಜನಪರ ಚಳುವಳಿಯ ನಾಯಕ ಹೆಚ್ ಆರ್ ನವೀನ್ ಕುಮಾರ್ ಅವರ ಕಲಾಕೃತಿಗಳು ಸಹ ಆಯ್ಕೆಯಾಗಿವೆ ಎಂದು ತಿಳಿಸಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಮಾಡಿದ ಕೆ.ಎಸ್. ವಿಮಲಾ ಅವರು ʻದುಡಿಯುವ ವರ್ಗ ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಆಳುವ ವರ್ಗ ಅನುಸರಿಸುತ್ತಿರುವ ನೀತಿಗಳ ಭಾಗವಾಗಿ ಪ್ರಭುತ್ವ ಎಂಬುದು ದುಡಿಯುವ ಕೈಯಲ್ಲಿದ್ದರೆ ಎಂತಹದ್ದನ್ನು ಸಾಧಿಸಬಹುದಾಗಿತ್ತು. ಶ್ರಮಜೀವಿಗಳನ್ನು ಶೋಷಣೆಗೆ ಒಳಪಡಿಸುತ್ತಿರುವ ಬಂಡವಾಳಶಾಹಿ ವರ್ಗ ಮತ್ತು ಅವರ ಬೆಂಬಲಿತ ಪ್ರಭುತ್ವವನ್ನು ದುಡಿಯುವ ವರ್ಗದ, ಶೋಷಿತರ ಪರವಾಗಿ ಬದಲಿಸುವ ತುರ್ತು ಅನಿರ್ವಾಯ ಎದುರಾಗಿರುವ ಸಂದರ್ಭದಲ್ಲಿ ನಾವು 150 ವರ್ಷಾಚರಣೆಯ ಪ್ಯಾರಿಸ್ ಕಮ್ಯೂನ್ ಕ್ರಾಂತಿ ಮಹತ್ವ ಅತ್ಯಂತ ಅಗತ್ಯವಾಗಿದೆʼ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೇಖಕರಾದ ಬಿ. ಪೀರ್ ಬಾಷ ಅವರು ಬ್ರೆಕ್ಟ್ ಅವರ ಕವನ ʻಕಮ್ಯೂನ್ ಧೀರರ ಸಂಕಲ್ಪʼ ವಾಚನ ಮಾಡಿದರು. ಕೆ. ನೀಲಾ ಅವರು ‘ಇಂಟರ್ ನ್ಯಾಸನಾಲ್’ ಎಂದು ಪ್ರಸಿದ್ಧವಾದ ಜಗತ್ತಿನ ದುಡಿಯುವ ಜನರ, ಚಳುವಳಿಗಳ, ಕಮ್ಯುನಿಸ್ಟರ ‘ನಾಡಗೀತೆ’ಯ ಬಹುಶಃ ಮೊದಲ ಕನ್ನಡ ಅನುವಾದವನ್ನು ವಾಚನ ಮಾಡಿದರು. ಇದರೊಂದಿಗೆ ಪ್ಯಾರಿಸ್ ಕಮ್ಯೂನ್ ಸಂಬಂಧಿಸಿದ ಕಿರುಚಿತ್ರ ಹಾಗೂ ಇ-ಪುಸ್ತಕ ಖರೀದಿಯ ಬಗೆಗೆಗಿನ ಮಾಹಿತವುಳ್ಳ ವಿಡಿಯೋವನ್ನು ಪ್ರದರ್ಶಿಸಲಾಯಿತು.
ಕ್ರಿಯಾ ಮಾಧ್ಯಮ ಹೊರತಂದಿರುವ ಪ್ಯಾರಿಸ್ ಕಮ್ಯೂನ್ ಪುಸ್ತಕವು ಮುದ್ರಣದಲ್ಲಿಯೂ ಲಭ್ಯವಿದೆ ಮತ್ತು ಇ-ಪುಸ್ತಕವಾಗಿಯೂ ಋತುಮಾನ ಸ್ಟೋರ್ನಲ್ಲಿಯೂ ಲಭ್ಯವಾಗಲಿದೆ.
ವರದಿ: ವಿನೋದ ಶ್ರೀರಾಮಪುರ