ಬೆಂಗಳೂರು: ‘ಕೋವಿಡ್ ಎರಡನೇ ಅಲೆಯೂ ನಿರೀಕ್ಷೆಗಿಂತ ದೊಡ್ಡ ಪ್ರಮಾಣದಲ್ಲಿ ಬಾಧಿಸುತ್ತಿದೆ. ಆದರೆ, ಈಗ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಕೈಕಟ್ಟಿ ಕುಳಿತುಕೊಳ್ಳುವಂತೆಯಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಿದೆ. ಈ ಕುರಿತು ಹೆಚ್ಚಿನ ಗಮನ ಹರಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಸೋಂಕಿತರಿಗೆ ಮನೆಯಲ್ಲೇ ಆರೈಕೆ ನೀಡುವ ಬದಲು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲು ಮನವೊಲಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕೋವಿಡ್ ಪ್ರಕರಣಗಳು ಹೆಚ್ಚಾಗಿ ಬಾಧಿಸುತ್ತಿರುವ ಜಿಲ್ಲೆಗಳಾದ ಮೈಸೂರು, ಹಾಸನ, ಬೆಳಗಾವಿ, ಕಲಬುರ್ಗಿ ಮತ್ತು ವಿಜಯಪುರದ ಸಂಸದರು ಮತ್ತು ಶಾಸಕರ ಜೊತೆ ಇಂದು ವಿಡಿಯೊ ಸಂವಾದ ನಡೆಸಿದ ಬಳಿಕ ಮುಖ್ಯಮಂತ್ರಿಗಳು ಸುದ್ದಿಗಾರರ ಜೊತೆ ಮಾತನಾಡಿದರು.
ಇದನ್ನು ಓದಿ: ಜೂನ್ 7ರ ನಂತರವೂ ಲಾಕ್ಡೌನ್ ವಿಸ್ತರಣೆ ಸಾಧ್ಯತೆ: ಬಸವರಾಜ ಬೊಮ್ಮಾಯಿ
‘ಸಂವಾದದಲ್ಲಿ ಭಾಗವಹಿಸಿದ ಸಂಸದರು, ಶಾಸಕರು ಕೋವಿಡ್ ನಿರ್ವಹಣೆಯ ಜೊತೆಗೆ ತಳಹಂತದ ಹಲವು ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದಾರೆ. ಅವುಗಳನ್ನು ಶೀಘ್ರವೇ ಬಗೆಹರಿಸಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದರು.
‘ಸಂಸದರು ಮತ್ತು ಶಾಸಕರು ಅವರವರ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕು. ಸೋಂಕಿತರನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಬೇಕು. ಇದರಿಂದ ಮರಣ ಪ್ರಮಾಣ ಕಡಿಮೆ ಆಗಲಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳು, ಔಷಧ, ಆಮ್ಲಜನಕ, ವಿವಿಧ ಉಪಕರಣಗಳು ಅಗತ್ಯಕ್ಕೆ ಅನುಗುಣವಾಗಿ ಸಮರ್ಪಕವಾಗಿ ಹಂಚಿಕೆಯಾಗಬೇಕು. ಎಲ್ಲಿಯೂ ಸಮಸ್ಯೆ ತಲೆದೋರದಂತೆ ಸಂಪನ್ಮೂಲಗಳ ದಕ್ಷ ಬಳಕೆಯನ್ನು ಖಾತರಿಪಡಿಸಬೇಕು’ ಎಂದೂ ಮುಖ್ಯಮಂತ್ರಿ ಸಲಹೆ ನೀಡಿದರು.
‘ಜೂನ್ 7ರವರೆಗೆ ಲಾಕ್ಡೌನ್ ಜಾರಿಯದೆ. ಅಲ್ಲಿಯವರೆಗಿನ ಸ್ಥಿತಿಗತಿ ಅವಲೋಕಿಸಿ ಲಾಕ್ಡೌನ್ ವಿಸ್ತರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ವೈದ್ಯರ ಕೊರತೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ‘ಈಗಾಗಲೇ 1,200 ವೈದ್ಯರ ನೇಮಕ ಮಾಡಿಕೊಳ್ಳುತ್ತಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಯಲಿದೆʼ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪಿಎಂ ಕೇರ್ಸ್ ವೆಂಟಿಲೇಟರ್ನಲ್ಲಿ ಕೆಲವೊಂದು ಸಮಸ್ಯೆ ಇದೆ. ಸಮಸ್ಯೆ ಸರಿಪಡಿಸುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗ ಸಮಸ್ಯೆ ಸರಿಪಡಿಸಲಾಗುತ್ತದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಲಸಿಕೆ ಪೂರೈಕೆ ಬಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಜೊತೆ ಮಾತನಾಡಿದ್ದೇವೆ. ಆದಷ್ಟು ಬೇಗ ಲಸಿಕೆ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿ: ಕಳಪೆ ವೆಂಟಿಲೇಟರ್ಗಳ ಪೂರೈಕೆ : ಕೇಂದ್ರದ ʼಅಸೂಕ್ಷ್ಮತೆʼ ಬಗ್ಗೆ ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್
‘ಆಶಾ ಕಾರ್ಯಕರ್ತೆಯರ ಬಾಕಿ ವೇತನ ಬಿಡುಗಡೆಗೆ ಕ್ರಮ ವಹಿಸಲಾಗಿದೆ. ಎರಡು ಮೂರು ದಿನಗಳಲ್ಲಿಯೇ ವೇತನ ಪಾವತಿ ಮಾಡಲಾಗುವುದು.’ ಎಂದು ಅವರು ತಿಳಿಸಿದರು.
‘ಕೋವಿಡ್ ಸಕ್ರಿಯ ಪ್ರಕರಣಗಳ ದರದಲ್ಲಿ ಶೇ 10 ಕ್ಕಿಂತ ಕಡಿಮೆ ಮಾಡಲು ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, ಮರಣ ಪ್ರಮಾಣ ರಾಜ್ಯದಲ್ಲಿ ಶೇ 1.7 ರಷ್ಟಿದ್ದು, ಅದನ್ನು ಕಡಿಮೆ ಮಾಡಬೇಕು’ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.
‘ರಾಜ್ಯದಲ್ಲಿ ಒಟ್ಟು ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳ ಪೈಕಿ, ಬೆಂಗಳೂರು ನಗರ, ಮೈಸೂರು, ತುಮಕೂರು, ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶೇ 60 ವರದಿಯಾಗುತ್ತಿದೆ. ಇದನ್ನು ಕಡಿಮೆಗೊಳಿಸಬೇಕು. ಸೋಂಕು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದೂ ಸೂಚಿಸಿದರು.
ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ, ಪ್ರತಿ ತಾಲ್ಲೂಕಿಗೆ ತಲಾ ₹ 25 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಅದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಗಳು ‘ಈಗಾಗಲೇ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹ 50 ಲಕ್ಷವನ್ನು ಕೋವಿಡ್ ನಿರ್ವಹಣೆಗೆ ಬಳಕೆ ಮಾಡಲು ಅನುಮತಿಸಲಾಗಿದೆ. ಅಲ್ಲದೆ ಗ್ರಾಮ ಪಂಚಾಯಿತಿಗಳಿಗೆ ತಲಾ ₹ 50 ಸಾವಿರ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ ಎನ್ ಅಶ್ವಥನಾರಾಯಣ, ಸಚಿವರಾದ ಆರ್ ಅಶೋಕ್, ಅರವಿಂದ ಲಿಂಬಾವಳಿ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.