ಆಕ್ಸಿಜಿನ್‌ ಘಟಕವಿದೆ ಆದರೆ ಉತ್ಪಾದನೆ ಇಲ್ಲ : ಡಿಸಿಎಂ ನಿರ್ಲಕ್ಷ್ಯವೇ ಕಾರಣ

ಬಾಗಲಕೋಟೆ: ರಾಜ್ಯಾದ್ಯಂತ ಮೆಡಿಕಲ್ ಆಕ್ಸಿಜನ್‌ಗೆ ಹಾಹಾಕಾರ ಶುರುವಾಗಿದೆ. ಜೀವ ವಾಯು ಸಿಗದೇ ಅದೆಷ್ಟೋ ಮಂದಿ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಆದರೆ ಡಿಸಿಎಂ ಗೋವಿಂದ್ ಕಾರಜೋಳ ರವರ ಕ್ಷೇತ್ರದಲ್ಲಿ ಆಕ್ಸಿಜನ್ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಚಿವರು ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಆಕ್ಸಿಜನ್ ಕೊರತೆ ಸದ್ಯ ರಾಜ್ಯಕ್ಕೆ ದೊಡ್ಡ ಕಂಟಕವಾಗಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದ ಪರಿಣಾಮ ಜನ ಉಸಿರಾಡಲು ಸಾಧ್ಯವಾಗದೆ ಪ್ರಾಣ ಬಿಡುತ್ತಿದ್ದಾರೆ. ಚಾಮರಾಜನಗರ, ಕಲಬುರ್ಗಿ, ಬೆಂಗಳೂರಿನಲ್ಲಿ ಆಕ್ಸಿಜನ್‌ ಕೊರತೆಯಿಂದ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ,  ಇಷ್ಟೆಲ್ಲಾ ಆದರೂ ಬಾಗಲಕೋಟೆ ಜಿಲ್ಲಾಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ. ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆಯುತ್ತಿದೆ ಬಾಗಲಕೋಟೆ ಜಿಲ್ಲಾಡಳಿತ. ಸಮಸ್ಯೆಗೆ ತಮ್ಮಲ್ಲಿ ಪರಿಹಾರವಿದ್ದರೂ ಸಮಸ್ಯೆ ಬಗೆಹರಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪರಿಣಾಮ ಆಕ್ಸಿಜನ್ ಯಂತ್ರೋಪಕರಣ ಧೂಳು ಹಿಡಿಯುತ್ತಿದೆ.

ಯಂತ್ರೋಪಕರಣ ಜೋಡಣೆ ಮಾಡದೆ ನಿರ್ಲಕ್ಷ್ಯ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ಆಸ್ಪತ್ರೆಯಲ್ಲಿರುವ ಯಂತ್ರೋಪಕರಣಗಳನ್ನು ತಂದು ತಿಂಗಳಾದ್ರೂ ಅದರ ಜೋಡಣೆಯಾಗಿಲ್ಲ. ಆಕ್ಸಿಜನ್ ಯಂತ್ರೋಪಕರಣ ಧೂಳು ಹಿಡಿಯುತ್ತಿದ್ರೂ ಜಿಲ್ಲಾಡಳಿತ ಕೈಕಟ್ಟಿ ಕುಳಿತಿದೆ. ಇಲ್ಲಿ ದಿನಕ್ಕೆ 20 ಜಂಬೋ ಸಿಲಿಂಡರ್ ಆಕ್ಸಿಜನ್ ಉತ್ಪಾದಿಸಬಹುದು. ಆದರೆ ಆಕ್ಸಿಜನ್ ಉತ್ಪಾದನೆ ಮಾಡದೆ ನಿರ್ಲಕ್ಷ್ಯವಹಿಸಲಾಗುತ್ತಿದೆ. ಈ ನಿರ್ಲಕ್ಷ್ಯಕ್ಕೆ ಯಾರೂ ಕಾರಣ? ಪರಿಕರಗಳು ಬಂದು ತಿಂಗಳಾದರೂ ಜೋಡಿಸಿಲ್ಲ ಎಂದಾದರೆ ಇದಕ್ಕೆ ಯಾರು ಹೊಣೆ,  ಡಿಸಿಎಂ ಗೆ ಮಾಹಿತಿ ಇಲ್ಲವೆ? ಅಥವಾ ಅದೇನಾಗಿದೆ ರೆಡಿ ಆಯ್ತಾ ಇಲ್ವಾ ಎಂದು ತಿಳಿಯುವ ಆಸಕ್ತಿ ಅವರಿಗಿಲ್ಲವೆ? ಜಿಲ್ಲಾಡಳಿತ, ಜಿಲ್ಲಾ ವೈದ್ಯಾದಿಕಾರಿಗಳು ನಿದ್ದೆ ಮಾಡುತ್ತಿದ್ದಾರೆಯೇ ಎಂದು ಸತೀಶ್‌ ಮಹಾಲಿಂಗಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: 50 ಸಾವಿರ ಸನಿಹಕ್ಕೆ ಕೋವಿಡ್‌ ಹೊಸ ಪ್ರಕರಣ

ಆಕ್ಸಿಜನ್ ಪಡೆಯಲು ಅವಕಾಶ ಇದ್ದರೂ ಬಾಗಲಕೋಟೆ ಜಿಲ್ಲಾಡಳಿತ ನಿದ್ದೆ ಮಾಡುತ್ತಿದೆ. ಮುಧೋಳ ತಾಲೂಕು ಆಸ್ಪತ್ರೆಯಲ್ಲಿಯೇ ಸದ್ಯ 30 ಜನ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕ್ಸಿಜನ್ ಘಟಕ ಶುರುವಾದರೆ ಇನ್ನು 20 ಜನರಿಗೆ ಪ್ರತಿ ದಿನ ಆಕ್ಸಿಜನ್‌ ನೀಡಬಹುದು. ಆಕ್ಸಿಜನ್ ಘಟಕ ಸ್ಥಾಪನೆಯಾಗದ ಕಾರಣ ಕೊವಿಡ್ ಸೋಂಕಿತರನ್ನು ವಿವಿಧ ಖಾಸಗಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಯಿಂದ ಸಚಿವರಿಗೆ, ಜಿಲ್ಲಾಡಳಿತಕ್ಕೆ ಎಷ್ಟು ಕಮಿಷನ್ ಹೋಗುತ್ತದೆ ಆ ಗೋವಿಂದನೇ ಬಲ್ಲ.

ಇತರ ಜಿಲ್ಲೆಗಳಲ್ಲಿ ಆಕ್ಸಿಜನ್ ಗಾಗಿ ಹಾಹಾಕಾರ ಕೇಳಿಬರುತ್ತದೆ. ಆದರೆ ಸೌಲಭ್ಯವಿದ್ದು ಬಾಗಲಕೋಟೆಯಲ್ಲಿ ಬಳಕೆ ಆಗದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಕುಂಭಕರಣ ನಿದ್ದೆಯಿಂದ ಎದ್ದು ಘಟಕ ಚಾಲನೆ ಮಾಡಿ ಆಕ್ಸಿಜನ್ ಉತ್ಪಾದಿಸಬೇಕಿದೆ. ಇಲ್ಲದಿದ್ದರೆ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಾವಿಗೆ ಡಿಸಿಎಂ ಗೋವಿಂದ್ ಕಾರಜೋಳ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯವೇ ಕಾರಣವಾಗಲಿದೆ ಎಂದು CITU ಮುಖಂಡ ಮಂಟನಗೌಡ ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *