ಉದ್ಧಟತನ ಮಾತುಗಳಿಗೆ ಕುಖ್ಯಾತರಾಗಿರುವ ಆಹಾರ ಮತ್ತು ನಾಗರಿಕ ಪೂರೈಕೆ ಮಂತ್ರಿಗಳಾದ ಉಮೇಶ್ ಕತ್ತಿಯವರು ಇತ್ತೀಚೆಗೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇವರು ಉತ್ತರ ಕರ್ನಾಟಕದ ಹಿರಿಯ ಸಚಿವರೂ ಹೌದು. ಪಡಿತರ ಅಕ್ಕಿಯನ್ನು 2 ಕೆ.ಜಿ.ಗೆ ಇಳಿಸಿಬಿಟ್ಟಿದ್ದಿರಲ್ಲಾ ಅದು ಸಾಕಾಗುತ್ತಾ ಎಂದು ಗದಗ ಜಿಲ್ಲೆಯ ಸಾಮಾನ್ಯ ವ್ಯಕ್ತಿಯೊಬ್ಬರು ಅವರನ್ನು ಪ್ರಶ್ನೆ ಮಾಡಿದಾಗ, ನಿನಗೆ ಸಾಕಾಗದಿದ್ದರೆ ಎಲ್ಲಾದರೂ ಹೋಗಿ ಸತ್ತು ಬಿಡು ಎಂದು ಕತ್ತಿಯವರು ದುರಂಕಾರದ ಮಾತುಗಳನ್ನು ಹೇಳಿದ್ದಾರೆ. ಸಚಿವರ ಈ ಉದ್ಧಟತನದ ಮಾತುಗಳು ವ್ಯಾಪಕ ಖಂಡನೆಗೆ ಗುರಿಯಾಗಿವೆ.
ಸಚಿವರಾದ ಉಮೇಶ್ ಕತ್ತಿಯವರು ಈ ರೀತಿ ಬೇಜವಾಬ್ದಾರಿಯುತ ಮಾತನಾಡುವುದು ಇದೇ ಮೊದಲ ಸಲವಲ್ಲ. ಮನೆಯಲ್ಲಿ ದ್ವಿಚಕ್ರ ವಾಹನ ಹೊಂದಿದವರಿಗೆ ಪಡಿತರ ಚೀಟಿಯನ್ನು ಕೊಡಲಾಗುವುದಿಲ್ಲ ಎಂದು ಹೇಳಿದವರು ಇವರೇ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂದು ಆಗಾಗ ಪ್ರಸ್ತಾಪಿಸಿ ಕನ್ನಡಿಗರ ಖಂಡನೆಗೆ ಒಳಗಾಗುತ್ತಿರುವವರು ಇವರೇ.
ಇದನ್ನು ಓದಿ: ಅಕ್ಕಿ ಕೇಳಿದ ರೈತನಿಗೆ ‘ಸತ್ತು ಹೋದರೆ ಒಳ್ಳೆಯದು’ ಎಂದ ಸಚಿವ ಉಮೇಶ್ ಕತ್ತಿ
ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಜನಜೀವನ ಚಿಂತಾಜನಕವಾಗುತ್ತಿದೆ. ಜನಸಾಮಾನ್ಯರು ಪೌಷ್ಠಿಕ ಆಹಾರದ ಕೊರತೆಯನ್ನು ಅನುಭವಿಸುತ್ತಿದ್ದು ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗುಣಮಟ್ಟದ ಆಹಾರವನ್ನು ಪೂರೈಸಿ ಜನರನ್ನು ಕಾಪಾಡುವುದು ಸರ್ಕಾರದ ಆಧ್ಯತೆಯ ಕರ್ತವ್ಯ. ಈಗ ನೀಡಲಾಗುತ್ತಿರುವ ಪಡಿತರವನ್ನು ಅಗತ್ಯ ಪ್ರಮಾಣದಲ್ಲಿ ಹೆಚ್ಚಿಸುವುದನ್ನು ಬಿಟ್ಟು ಪಡಿತರ ಅಕ್ಕಿಯನ್ನು ಕಡಿತ ಮಾಡಲು ಮಂತ್ರಿಗಳು ಯೋಚಿಸುತ್ತಿರುವುದು ಅಕ್ಷಮ್ಯವಾಗಿದೆ.
ಸಾವಿರಾರು ಜನ ಸಾವನ್ನಪ್ಪುತ್ತಿರುವುದಕ್ಕೆ ಸರ್ಕಾರದ ಬೇಜವಾಬ್ದಾರಿತನವೇ ಕಾರಣವಾಗಿದೆ. ಒಳ್ಳೆಯ ಹಾಗೂ ಅಗತ್ಯ ಪ್ರಮಾಣದಲ್ಲಿ ಆಹಾರ ದೊರೆಯದೆ ಜನಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಹೇಗೆ ಸಾಧ್ಯ? ಕಳೆದ ಸಲ ಕೋವಿಡ್ ಸೋಂಕಿತರು ದೊಡ್ಡ ಪ್ರಮಾಣದಲ್ಲಿ ಮರಣ ಹೊಂದಲು ಒಳ್ಳೆಯ ಗುಣಮಟ್ಟ ಆಹಾರ ಅಗತ್ಯ ಪ್ರಮಾಣದಲ್ಲಿ ದೊರೆಯದಿರುವುದು ಒಂದು ಪ್ರಮುಖ ಕಾರಣವಾಗಿದೆ. ಇದರಿಂದ ಸರ್ಕಾರ ಪಾಠ ಕಲಿತು ಜನರಿಗೆ ನೀಡುವ ಪಡಿತರವನ್ನು ಕಡಿತ ಮಾಡುವ ಬದಲಾಗಿ ಅದರ ಪ್ರಮಾಣ ಹೆಚ್ಚಿಸಬೇಕು. ಒಂದು ಕುಟುಂಬಕ್ಕೆ 10 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಬೇಕು. ಹಾಗೂ ಅವರವರ ಬೇಡಿಕೆಯಂತೆ ಗೋಧಿ, ಜೋಳ, ರಾಗಿ ಅಲ್ಲದೆ ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಮೊದಲಾದ ಅಗತ್ಯ ವಸ್ತುಗಳನ್ನು ಪೂರೈಸಬೇಕು. ಆಹಾರದ ಕಿಟ್ಗಳನ್ನು ಹಾಗೂ ಔಷಧಿ ಕಿಟ್ಗಳನ್ನು ನೀಡಬೇಕು. ಕೇವಲ ಆಹಾರದಾನ್ಯ ಕೊಟ್ಟರೆ ಸಾಲದು ತಿಂಗಳಿಗೆ ಕನಿಷ್ಟ ರೂ. 7500 ದರದಲ್ಲಿ ಆರ್ಥಿಕ ನೆರವು ನೀಡಬೇಕು.
ಇದನ್ನು ಓದಿ: ಎರಡು ಲಕ್ಷ ಬಿಪಿಎಲ್ ಕಾರ್ಡ್ ರದ್ದು – ಸಚಿವ ಉಮೇಶ್ ಕತ್ತಿ
ಹಲವಾರು ತಿಂಗಳುಗಳಿಂದ ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರಿಗೆ ಬಾಕಿ ಇರುವ ವೇತನವನ್ನು ಸಂದಾಯ ಮಾಡಬೇಕು. ಕತ್ತಿಯವರ ಬೇಜವಾಬ್ಧಾರಿತನದ ಮಾತುಗಳಿಗೆ ವ್ಯಕ್ತವಾದ ಜನರ ಆಕ್ರೋಶವನ್ನು ಗಂಭೀರವಾಗಿ ಪರಿಗಣಿಸಬೇಕು. ಕತ್ತಿಯವರ ಪರ ಮುಖ್ಯಮಂತ್ರಿ ಕ್ಷಮೆ ಕೇಳಿರುವುದು ಸಾಲದು: ಇದು ಕತ್ತಿಯವರ ಹುಟ್ಟುಗುಣ್ಣ ಎಂಬಂತೆ ಕಾಣುತ್ತದೆ; ಮುಖ್ಯಮಂತ್ರಿಗಳು ಕತ್ತಿಯವರನ್ನು ಮುಲಾಜಿಲ್ಲದೆ ಸಚಿವ ಸಂಪುಟದಿಂದ ಕೈಬಿಡಬೇಕು.