ಅಕ್ಕಿ ಕೇಳಿದ ರೈತನಿಗೆ ‘ಸತ್ತು ಹೋದರೆ ಒಳ್ಳೆಯದು’ ಎಂದ ಸಚಿವ ಉಮೇಶ್ ಕತ್ತಿ

ಬೆಳಗಾವಿ: ರಾಜ್ಯ ಸರಕಾರವು ಪಡಿತರ ಚೀಟಿದಾರರಿಗೆ ನೀಡಲಾಗುತ್ತಿರುವ ಅಕ್ಕಿ ಕಡಿತ ಮಾಡಿರುವುದರ ಬಗ್ಗೆ ಫೋನ್‌ ಮೂಲಕ ಪ್ರಶ್ನಿಸಿದ  ರೈತರೊಬ್ಬರಿಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅವರು ‘ಸತ್ತು ಹೋದರೆ ಒಳ್ಳೆಯದು’ ಎಂದು ಹೇಳಿರುವ ಆಡಿಯೊ ಸಾಕಷ್ಟು ವೈರಲ್‌ ಆಗಿದೆ.

ಕೊರೋನಾ ಸಂಕಷ್ಟದಲ್ಲೂ ರಾಜ್ಯ ಸರ್ಕಾರ ಪಡಿತರ ಅಕ್ಕಿ ಕಡಿತಗೊಳಿಸಿದನ್ನು ಸಚಿವರಿಗೆ ಕರೆ ಮಾಡಿ ಪ್ರಶ್ನಿಸಿದ ಗದಗ ಜಿಲ್ಲೆ ರೈತ ಸಂಘದ ಕಾರ್ಯಕರ್ತನಾಗಿರುವ ಈಶ್ವರ ಎಂಬುವವರು ಸಚಿವರಿಗೆ ಮೊಬೈಲ್‌ ಫೋನ್‌ಗೆ ಕರೆ ಮಾಡಿದ್ದರು.

ಇದನ್ನು ಓದಿ: ಮಂತ್ರಿಗಳಿಗೆ ಸಿಗದ ಬೆಡ್‌, ಸಾಮಾನ್ಯರ ಸ್ಥಿತಿ ಹೇಗೆ: ಕಾಂಗ್ರೆಸ್ ಆರೋಪ

‘ಲಾಕ್‌ಡೌನ್‌ ಸಂದರ್ಭದಲ್ಲೂ ಕೇವಲ 2 ಕೆ.ಜಿ. ಅಕ್ಕಿ ಕೊಡುತ್ತಿದ್ದೀರಿ. ಇಷ್ಟು ಕಡಿಮೆ ಅಕ್ಕಿಯಲ್ಲಿ ನಾವು ಬದುಕುವುದಾದರೂ ಹೇಗೆ?’ ಎಂದು ಪ್ರಶ್ನಿಸಿದರು.

ಅದಕ್ಕೆ ಸಚಿವ ಉಮೇಶ್‌ ಕತ್ತಿ ಉತ್ತರಿಸಿ ‘2 ಕೆ.ಜಿ. ಅಕ್ಕಿ ಜೊತೆಗೆ 3 ಕೆ.ಜಿ. ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ 3 ಕೆ.ಜಿ. ಜೋಳ ನೀಡುತ್ತಿದ್ದೇವೆ. ಒಟ್ಟು 5 ಕೆ.ಜಿ. ಪಡಿತರ ವಿತರಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ಇದನ್ನು ಓದಿ: ಕೋವಿಡ್‌ ಬಿಕ್ಕಟ್ಟು: ಜನವಾದಿಯಿಂದ ಮುಖ್ಯಮಂತ್ರಿಗೆ ಪತ್ರ ಚಳವಳಿ

ಸಂಭಾಷಣೆಯ ಮಾತುಗಳು ಹೀಗಿವೆ

ರೈತ: 2.ಕೆ.ಜಿ. ಅಕ್ಕಿ ಮಾಡಿದ್ದೀರಲ್ಲಾ ಸಾಲುತ್ತಾ ಸರ್‌ ಅದು?

ಸಚಿವ: 3 ಕೆ.ಜಿ. ರಾಗಿ ಕೊಡ್ತಿದ್ದೀವಿ.

ರೈತ: ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ರಾಗಿ ಎಲ್ಲಿ ಕೊಡುತ್ತೀರಾ?

ಸಚಿವ: ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಮತ್ತು ಅಕ್ಕಿ ಮಾಡಿದ್ದೀವಿ.

ರೈತ: ಸಾಲುತ್ತಾ ಸಾರ್? ಈಗ ಲಾಕ್‌ಡೌನ್‌ ಬೇರೆ ಇದೆ. ದುಡಿಮೆ ಇಲ್ಲ.

ಸಚಿವ: ಕೇಂದ್ರ ಸರ್ಕಾರ ಕೊಡ್ತಿದೆ. ಮೇ, ಜೂನ್‌ನಲ್ಲಿ 5 ಕೆ.ಜಿ. ಅಕ್ಕಿ ಕೊಡುತ್ತದೆ.

ರೈತ: ಯಾವಾಗ ಕೊಡ್ತಿರಾ?

ಸಚಿವ: ಬರುವ ತಿಂಗಳು.

ರೈತ: ಅಲ್ಲಿವರೆಗೆ ಉಪವಾಸ ಇರದಾ ಸರ್? ಸತ್ತು ಹೋಗಿಬಿಡೋದ?

ಸಚಿವ: ಸತ್ತು ಹೋದರೆ ಒಳ್ಳೆಯದು. ಅದಕ್ಕಿಂತ, ಅಕ್ಕಿ ಮಾರುವ ದಂದೆ ಬಂದ್ ಮಾಡಿ. ಮತ್ತೆ ಫೋನ್ ಮಾಡಬೇಡಿ.

ರೈತ: ಸರ್‌ ಫೋನ್‌ ಮಾಡ್ಬೇಡಿ ಅಲ್ಲ. ನೀವು ಪ್ರತಿನಿಧಿಗಳು. ಏನು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮಾತ್ನಾಡಿದ್ರೆ ಆನ್ಸರ್‌ ಮಾಡ್ಬೇಕು

ಎಂದು ಸಂಭಾಷಣೆ ವಿವರಗಳು ವೈರಲ್‌ ಆಗುತ್ತಿವೆ.

Donate Janashakthi Media

Leave a Reply

Your email address will not be published. Required fields are marked *