ದಾಂಡೇಲಿ : ಆಳುವ ಸರಕಾರಗಳು ಉಳ್ಳವರ ಪರ ಇರುವ ಕಾರಣದಿಂದಾಗಿ ಇಂದು ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ. ಕೇಂದ್ರ, ರಾಜ್ಯ ಸರಕಾರಗಳು ಅಂಗನವಾಡಿಯನ್ನು ನಿರ್ಲಕ್ಷ್ಯ ಮಾಡುತ್ತಿವೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಆರೋಪಿಸಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮೂರು ದಿನಗಳ ಕಾಲ ನಡೆಯುವ ಅಂಗನವಾಡಿ ನೌಕರರ ರಾಜ್ಯ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಂಕಷ್ಟದಲ್ಲಿ ಅಂಗನವಾಡಿ ನೌಕರರು ಸಮುದಾಯದ ಮಧ್ಯೆ ಕೆಲಸ ಮಾಡಿದ್ದನ್ನು ನಾವು ಇಲ್ಲಿ ಸ್ಮರಿಸಬೇಕು, ದೇಶದಲ್ಲಿ ಇಂದು ಉಳ್ಳವರ ಪರ ಇರುವ ಆಡಳಿತ ಪಕ್ಷ ಅಧಿಕಾರಕ್ಕೆ ಬಂದಿದೆ. ದೇಶದಲ್ಲಿ ಕೋವಿಡ್ ಬಾಧಿಸಿದ ಸಂದರ್ಭದಲ್ಲಿ ಜನಸಾಮಾನ್ಯರ ಜೊತೆಗೆ ನಿಲ್ಲಲಿಲ್ಲ, ಇಂದು ಕೂಲಿ ಕಾರ್ಮಿಕರು, ಕಾರ್ಮಿಕರು ಲಕ್ಷಾಂತರ ಸಂಖ್ಯೆಯಲ್ಲಿ ಹಾಗೂ ತಮ್ಮ ಆದಾಯವನ್ನು ಕಳೆದುಕೊಂಡಿದ್ದಾರೆ.
ಇಂದು ಅಂಗನವಾಡಿ ನೌಕರರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿದರು ಅವರಿಗೆ ಕೂಲಿ ಹೆಚ್ಚಳ ಮಾಡುವಲ್ಲಿ, ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ನಿರ್ಲಕ್ಷ ತಾಳಿದೆ. ಪೂರ್ವಯೋಜಿತವಾಗಿ ಹೋರಾಟ ಹತ್ತಿಕ್ಕುವ ಹೆಸರಿನಲ್ಲಿ ಆರ್ಥಿಕ ಬಿಕ್ಕಟ್ಟು ಎನ್ನುವ ಸರ್ಕಾರ ಶ್ರೀಮಂತರ ತೆರಿಗೆಯಲ್ಲಿ ರಿಯಾಯಿತಿ ನೀಡಿದೆ. ಅಂಬಾನಿ ಕುಟುಂಬದ ಆದಾಯ ದಿನಕ್ಕೆ 99 ಕೋಟಿಯಾಗಿದೆ. ಆದರೆ ದುಡಿಯುವ ಜನರಿಗೆ ಕೆಲಸವಿಲ್ಲ ಕೂಲಿ ಇಲ್ಲದೆ ಸಂಕಷ್ಟಕ್ಕೀಡು ಮಾಡಿದೆ. ಬಂಡವಾಳಶಾಹಿ ದೇಶಗಳಲ್ಲಿ ಕನಿಷ್ಠ ಕೂಲಿ ಹೆಚ್ಚಳ ಮಾಡಿದೆ ನಮ್ಮ ದೇಶದಲ್ಲಿ ಕೇವಲ 189 ರೂಪಾಯಿ ಒಂದು ದಿನಕ್ಕೆ ನಿಗದಿ ಮಾಡಿದ್ದಾರೆ. ಅಮೆರಿಕದಂಥ ದೇಶದಲ್ಲಿ ಒಂದು ಗಂಟೆಗೆ 15 ಡಾಲರ್ ನೀಡುತ್ತಾರೆ. ಅಂಗನವಾಡಿ ನೌಕರರು ಸರ್ಕಾರದ ಈ ನೀತಿಯನ್ನು ಅರಿಯಬೇಕಿದೆ ಎಂದರು.
ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿಯಾದ ಹೆಚ್ಎಸ್ ಸುನಂದ ರವರು ಪ್ರಸ್ತಾವಿಕವಾಗಿ ಮಾತನಾಡುತ್ತಾ, ಮೂರುದಿನಗಳ ಕಾಲ ನಡೆಯುವ ಅಧ್ಯಯನ ಶಿಬಿರದಲ್ಲಿ ಸಂಘಟನೆ ಬಲಪಡಿಸುವುದು, ಮುಂದನ ಹೋರಾಟದ ರೂಪರೇಷೆ ಕುರಿತು ಚರ್ಚಿಸಲಾಗುವುದು, ಜೊತೆಯಲ್ಲಿ ರಾಜ್ಯ, ರಾಷ್ಟ್ರದ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿ ದೇಶವನ್ನು ಕಟ್ಟುವಲ್ಲಿ ಅಂಗನವಾಡಿ ನೌಕರರು ಹೇಗೆ ತೊಡಗಿಸಿಕೊಳ್ಳಬೇಕು ಎಂದು ಅಧ್ಯಯನ ಶಿಬಿರದಲ್ಲಿ ಚರ್ಚಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದಯ ನಾಯ್ಕ ಅವರು ವಹಿಸಿದ್ದು, ಮುಖ್ಯಅತಿಥಿಗಳಾಗಿ ಸಿಐಟಿಯು ಜಿಲ್ಲಾಧ್ಯಕ್ಷರಾದ ತಿಲಕ್ ಗೌಡರು, ಮುಖಂಡರಾದ ಯಮುನಾ ಗಾಂವ್ಕರ, ಹರೀಶ್ ನಾಯ್ಕ, ಡಿ. ಸಾಮ್ಸನ್, ಡಾ. ಕೆ ಪ್ರಕಾಶ್, ಶಾಂತಾ ಘಂಟಿ, ಜಿ. ಕಮಲಾ, ಸಲೀಂ ಸಯ್ಯದ್ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳಿಂದ ನೂರಾರು ಜನ ಪ್ರತಿನಿಧಿಗಳು ಭಾಗವಹಿಸಿದ್ದರು.