ಬೆಳಗಾವಿ: ‘ರಮೇಶ ಅಥವಾ ಬಾಲಚಂದ್ರ ಜಾರಕಿಹೊಳಿ ಯಾವ ಪಕ್ಷದಲ್ಲಿದ್ದಾರೆಯೋ ಅವರ ಪರವಾಗಿ ನಾನು ಇರಬೇಕು. ನಾನು ಇನ್ನು ಚಿಕ್ಕವನಾಗಿರುವೆ ಆದರೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ದೊಡ್ಡ ನಾಯಕರು ನಮ್ಮ ಮನೆಗೆ ಬಂದಿದ್ದಾರೆ. ಅವರು ಹೇಳಿದಂತೆ ಮಾಡಬೇಕಾಗುತ್ತದೆ. ದೊಡ್ಡವರು ಬಂದಾಗ ಇಲ್ಲ ಎನ್ನಲಾಗುವುದಿಲ್ಲ. ಬಿಜೆಪಿ ಪರವಾಗಿ ಕೆಲಸ ಮಾಡೇ ಮಾಡುತ್ತೇವೆʼʼ ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿರುವ ಲಖನ್ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವರುಗಳಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ ಹಾಗೂ ಭೈರತಿ ಬಸವರಾಜ್ ಸೇರಿದಂತೆ ಇನ್ನು ಪ್ರಮುಖರು ಭೇಟಿಯಾದರು. ಲಖನ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿರುವ ಸತೀಶ ಜಾರಕಿಹೊಳಿ ಸಹೋದರ ಕೂಡ.
ಇದನ್ನು ಓದಿ : ಭ್ರಷ್ಟಾಚಾರ ಆರೋಪ : ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ರಾಜೀನಾಮೆ
ಸಚಿವ ಜಗದೀಶ್ ಶೆಟ್ಟರ್ ಅವರು ‘ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಮಂಗಳ ಅಂಗಡಿ ಪರವಾಗಿ ಎಲ್ಲ ಕಡೆಯೂ ಪ್ರಚಾರ ಕೈಗೊಂಡಿದ್ದೇವೆ. ಹಾಗೆಯೇ ಲಖನ್ ಜಾರಕಿಹೊಳಿ ಅವರ ಮನೆಗೂ ಪ್ರಚಾರಕ್ಕೆ ಬಂದೇವು. ಕಾಂಗ್ರೆಸ್ ಬಗ್ಗೆ ಅವರಲ್ಲಿ ಅಸಮಾಧಾನವಿದೆ. ಅವರು ಹೇಳಿಕೊಂಡಿದ್ದರು. ಹೀಗಾಗಿ, ಅವರೊಂದಿಗೆ ಮಾತನಾಡಿ ನಿರ್ಧರಿಸಲಾಗಿತ್ತು. ಈ ಬಗ್ಗೆ ನಿರ್ಧಾರವನ್ನು ಅವರೇ ಕೈಗೊಳ್ಳಬೇಕು’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಇದನ್ನು ಓದಿ : ಸತೀಶ್ ಜಾರಕಿಹೊಳಿ ಮತ್ತು ಮಂಗಳಾ ಅಂಗಡಿ ಕೋಟಿ ಒಡೆಯರು
‘ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಲಖನ್ ನನ್ನು ಗೋಕಾಕ ಕ್ಷೇತ್ರದಲ್ಲಿ ನಿಲ್ಲಿಸುತ್ತೇನೆ. ನಾನು ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಸ್ಪರ್ಧಿಸಿ, ಸೋಲಿಸುತ್ತೇನೆ’ ಎಂದು ರಮೇಶ ಜಾರಕಿಹೊಳಿ ಇತ್ತೀಚಿಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಲಖನ್ ನಡೆ ಕುತೂಹಲ ಮೂಡಿಸಿದೆ.
ಸಚಿವರುಗಳಲ್ಲದೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಕೂಡ ಇದ್ದರು. ಮನೆಗೆ ಬಂದ ಅವರನ್ನು ಲಖನ್ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.