ನವದೆಹಲಿ : ರಾಜ್ಯಸಭೆಯ ಮೂರು ಸ್ಥಾನಗಳಿಗೆ ಕೇರಳ ವಿಧಾನಸಭೆಯಿಂದ ಮಾರ್ಚ್ 24ರಂದು ಆರಂಭವಾಗಬೇಕಾಗಿದ್ದ ಚುನಾವಣಾ ಪ್ರಕ್ರಿಯೆಯನ್ನು, ಕೊನೆಯ ಗಳಿಗೆಯಲ್ಲಿ ತಡೆಹಿಡಿದದ್ದರ ಕುರಿತು ಆಘಾತ ವ್ಯಕ್ತಪಡಿಸಿ, ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯ ನೀಲೋತ್ಪಲ ಬಸು ಮುಖ್ಯ ಚುನಾವಣಾ ಕಮಿಶನರ್ ಗೆ ಪತ್ರ ಬರೆದಿದ್ದಾರೆ.
ಈ ಕುರಿತು ಚುನಾವಣಾ ಕಮಿಶನ್ ಪತ್ರಿಕಾ ಹೇಳಿಕೆ ನೀಡಿದ ಕೂಡಲೇ ಸಂಪರ್ಕಿಸಿ ಭೇಟಿ ಮಾಡುವ ಪ್ರಯತ್ನ ವಿಫಲವಾದ್ದರಿಂದ ಈ ಪತ್ರ ಬರೆಯಬೇಕಾಯಿತು ಎಂದು ಹೇಳಲಾಗಿದೆ. ಈಗಾಗಲೇ ಕಮಿಶನ್ ಘೋಷಿಸಿದ ವೇಳಾಪಟ್ಟಿಯ ಪ್ರಕಾರ ಮಾರ್ಚ್ 24ರಂದು ಅಧಿಕೃತ ನೋಟಿಫಿಕೇಶನ್ ಜಾರಿಯಾಗಬೇಕಿತ್ತು, ಮಾರ್ಚ್ 31 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು ಮತ್ತು ಎಪ್ರಿಲ್ 12ರಂದು ಚುನಾವಣೆ ನಡೆಯಬೇಕಾಗಿತ್ತು.
ಜನ ಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 12ರ ಪ್ರಕಾರ ರಾಜ್ಯಸಭೆಯ ಸದಸ್ಯರ ಅವಧಿ ಮುಗಿಯುವ 3 ತಿಂಗಳು ಮೊದಲು ಚುನಾವಣೆಯ ಪ್ರಕ್ರಿಯೆ ಆರಂಭವಾಗಬೇಕು. ಇದರ ಉದ್ದೇಶ ಸದಸ್ಯರ ಅವಧಿ ಮುಗಿಯುವ ಮೊದಲು ಚುನಾವಣೆ ಪ್ರಕ್ರಿಯೆ ಮುಗಿದಿರಬೇಕು ಎಂದು. ಕೇರಳ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾಗಿರುವಾಗ ರಾಜ್ಯಸಭೆಯ ಚುನಾವಣೆಯನ್ನು ನಡೆಸಲು ಸಹ ಯಾವುದೇ ಅಡ್ಡಿಯಿಲ್ಲ. ಮಾರ್ಚ್ 2016ರಲ್ಲಿ ಕೇರಳ ವಿಧಾನಸಭೆ ಚುನಾವಣೆ ನಡೆಯುತ್ತಿರುವಾಗ ಮಾರ್ಚ್ 19, 2016ರಂದು ರಾಜ್ಯಸಭಾ ಚುನಾವಣೆಗಳನ್ನು ನಡೆಸಲಾಗಿತ್ತು ಎಂದು ಬಸು ಪತ್ರದಲ್ಲಿ ಕಮಿಶನ್ ನ ಗಮನ ಸೆಳೆದಿದ್ದಾರೆ.
ಕೇರಳ ವಿಧಾನಸಭೆ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದ್ದು ಚುನಾವಣಾ ಸಂಹಿತೆ ಜಾರಿಯಲ್ಲಿದೆ. ಇದರಿಂದಾಗಿಯೂ ಭಾರತ ಸರಕಾರ ಚುನಾವಣಾ ಕಮಿಶನ್ ಆರಂಭಿಸಿದ ಯಾವುದೇ ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವಂತಿಲ್ಲ. ರಾಜ್ಯಸಭೆಯಲ್ಲಿ ತನ್ನ ಪ್ರತಿನಿಧಿಗಳ ಅವಧಿ ಮುಗಿಯುವ ಮೊದಲು ಹೊಸ ಪ್ರತಿನಿಧಿಗಳನ್ನು ಚುನಾಯಿಸುವುದು ಕೇರಳ ವಿಧಾನಸಭೆಯ ಸಾರ್ವಭೌಮ ಹಕ್ಕಾಗಿದ್ದು ಕಮಿಶನ್ ನ ಈ ಕ್ರಮವು ಅದರ ಹಕ್ಕುಗಳಿಗೆ ಚ್ಯುತಿ ತಂದಂತಾಗಿದೆ. ಆದ್ದರಿಂದ ಚುನಾವಣಾ ಕಮಿಶನ್ ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಸ್ವತಂತ್ರವಾಗಿ ನಡೆಸುವ ಕುರಿತು ತನ್ನ ವಿಶ್ವಾಸಾರ್ಹತೆ, ನೈತಿಕ ಮತ್ತು ಸಾಂವಿಧಾನಿಕ ಅಧಿಕಾರವನ್ನು ಎತ್ತಿ ಹಿಡಿಯಲು ಕೇರಳ ರಾಜ್ಯಸಭೆಯ ಚುನಾವಣಾ ಪ್ರಕ್ರಿಯೆಯನ್ನು ತಡೆಹಿಡಿಯುವ ಕ್ರಮವನ್ನು ಹಿಂತೆಗೆಯಬೇಕು ಎಂದು ನೀಲೋತ್ಪಲ ಬಸು ಒತ್ತಾಯಿಸಿದ್ದಾರೆ.