ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಪ್ರಕರಣ ದಾಖಲು: ಮುಖಂಡರ ಆಕ್ರೋಶ

ಶಿವಮೊಗ್ಗ: ಜಿಲ್ಲೆಯಲ್ಲಿ ಮಾರ್ಚ್‌ 20ರಂದು ಕೃಷಿ ಕಾಯ್ದೆಗಳ ರದ್ದತಿಗಾಗಿ ನಡೆದ ಮಹಾಪಂಚಾಯತ್‌ ಸಮಾವೇಶದಲ್ಲಿ ಭಾಗವಹಿಸಿದ ರೈತ ನಾಯಕ ರಾಕೇಶ್‌ ಟಿಕಾಯತ್‌ ವಿರುದ್ಧ ಪ್ರಚೋದನಾಕಾರಿ ಆರೋಪದ ಮೇಲೆ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲೆಯ ಬಿ.ಎಚ್‌.ರಸ್ತೆಯ ಸೈನ್ಸ್ ಮೈದಾನದಲ್ಲಿ ರೈತರ ಮಹಾ ಪಂಚಾಯತ್‌ನಲ್ಲಿ ಕಾರ್ಯಕ್ರಮ ನಡೆದಿತ್ತು.

ಇದನ್ನು ಓದಿ : ದೆಹಲಿಯಂತೆ ಬೆಂಗಳೂರಿನಲ್ಲಿ ಹೋರಾಟ ಆರಂಭಿಸುವಂತೆ ಟಿಕಾಯತ್ ಕರೆ

ಕೇಂದ್ರದ ಬಿಜೆಪಿ ಸರಕಾರವು ತಂದಿರುವ ದೇಶದ ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳು ಸರಕಾರ ವಾಪಸ್ಸು ಪಡೆಯುವವರೆಗೂ ರೈತರು ಬೆಂಗಳೂರಿಗೆ ದಿಗ್ಬಂಧನ ಹಾಕಬೇಕು. ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡು ತೀವ್ರತರವಾದ ಹೋರಾಟಗಳನ್ನು ರೂಪಿಸಬೇಕೆಂದು ಕರೆ ನೀಡಿದ್ದರು. ಈ ಹೇಳಿಕೆ ಆಧರಿಸಿ ಅವರ ವಿರುದ್ಧ ಐಪಿಸಿ ಕಲಂ 153ರ ಅಡಿ ಕೋಟೆ ಠಾಣೆಯ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : ರಾಜಧಾನಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ರೈತ ಕಹಳೆ

ಐಕ್ಯ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಶಿವಮೊಗ್ಗ, ಹಾವೇರಿ ಹಾಗೂ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ‌ ಹಮ್ಮಿಕೊಂಡಿತ್ತು. ರಾಕೇಶ್ ಟಿಕಾಯತ್ ಸೇರಿದಂತೆ ರೈತ ನಾಯಕರಾದ ದರ್ಶನ್‌ ಪಾಲ್, ಯುದ್ಧ್‌ವೀರ್ ಸಿಂಗ್ ಭಾಗವಹಿಸಿದ್ದರು.

ಇದನ್ನು ಓದಿ : ಕೇಂದ್ರ ಸರಕಾರ ದೇಶವನ್ನು ಮಾರಲು ಹೊರಟಿದೆ – ಯುದ್ಧವೀರ ಸಿಂಗ್

ರಾಕೇಶ್‌ ಟಿಕಾಯತ್‌ ರವರ ಮೇಲೆ ಮಾತ್ರ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾ ಪಂಚಾಯತ್ ಸಂಘಟಕರಾದ ಕೆ.ಎಲ್‌.ಅಶೋಕ್, ಕೆ.ಪಿ.ಶ್ರೀಪಾಲ್, ಎಂ.ಶ್ರೀಕಾಂತ್ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಕ್ರಮ. ಇಂತಹ ಹೇಳಿಕೆಗಳು ಚಳವಳಿಯ ಒಂದು ಭಾಗ. ಅವರ ಭಾಷಣದಲ್ಲಿ ಸಂವಿಧಾನಕ್ಕೆ ವಿರುದ್ಧವಾದ ಯಾವ ಅಂಶಗಳೂ ಇಲ್ಲ. ಬಿಜೆಪಿ ಭಿನ್ನಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆ’ ಎಂದರು.

Donate Janashakthi Media

Leave a Reply

Your email address will not be published. Required fields are marked *