ದೆಹಲಿ ರೈತ ಚಳುವಳಿ ನೇರ ಅನುಭವ – 1 : ಮೋದಿಯವರ ಅಡ್ಡಗೋಡೆಗಳನ್ನು ದಾಟಿದ ದೇಶಪ್ರೇಮಿ ಹೋರಾಟ

ದೆಹಲಿ ರೈತ ಚಳುವಳಿಯಲ್ಲಿ ಭಾಗವಹಿಸಿರುವ ರೈತ ನಾಯಕ ನವೀನ್ ಕುಮಾರ್ ಹಂಚಿಕೊಂಡಿರುವ ಹೋರಾಟದ ಅನುಭವದ ಮಾತುಗಳು

ನವದೆಹಲಿಯಿಂದ 40 ಕಿಲೋಮೀಟರ್ ದೂರ ಇರುವ ಹರಿಯಾಣ ಪಂಜಾಬ್ ನಡುವಣ ಇರುವ ಸಿಂಗು ಬಾರ್ಡರ್ ಗೆ ಸುಮಾರು 4 ಗಂಟೆಗೆ ತಲುಪಿದೆವು. ಗಡಿ ತಲುಪಿದ ಕೂಡಲೇ ನಮಗೆ ನಿಜವಾದ ಗಡಿಗಳ ಚಿತ್ರಣದಂತೆ ಕಂಡಿತು. ಗಡಿಗಳು ನಿರ್ಮಾಣಗೊಂಡಿವೆ.

ಇವು ದೇಶದ ಗಡಿಬಾಗಗಳಲ್ಲಿ ನಿರ್ಮಾಣಗೊಂಡವುಗಳಲ್ಲ ಬದಲಿಗೆ ದೇಶದ ಒಳಗೆ, ದೇಶದ ರಾಜಧಾನಿ ದೆಹಲಿಗೆ ಅನ್ನದಾತ ರೈತರು ಬರಬಾರದೆಂದು ಮೋದಿ ಸರ್ಕಾರ ನಿರ್ಮಾಣ ಮಾಡಿರುವ ಗಡಿಗಳಿವೆ. ತಂತಿಬೇಲಿಗಳಿವೆ, ದೊಡ್ಡ ದೊಡ್ಡ ಸಿಮೆಂಟ್ ಬ್ಲಾಕ್ ಗಳಿವೆ, ಕಂಟೈನರ್ ಗಳಿವೆ, ಮಣ್ಣು ತುಂಬಿದ ಟ್ರಕ್ ಗಳಿಂದ ಗಡಿಗಳನ್ನು ನಿರ್ಮಿಸಲಾಗಿದೆ. ದೆಹಲಿಯಿಂದ ಪ್ರವೇಶ ಪಡೆಯುವವರಿಗೆ ಇವುಗಳೇ ಮೊದಲಿಗೆ ಸ್ವಾಗತವನ್ನು ಕೋರುತ್ತವೆ. ಇವುಗಳ ಅಕ್ಕಪಕ್ಕದಲ್ಲಿ ನಿಂತಿರುವ ದೆಹಲಿ ಪೋಲೀಸರು ಮತ್ತು ಆರ್ಮಿಯವರು ಹಾಗೂ ಸಿ ಆರ್ ಪಿ ಎಫ್ ನವರು ತಮ್ಮ ವಾಹನಗಳ ಜೊತೆ ಟಿಯರ್ ಶೆಲ್ಸ್ ಮತ್ತು ಜಲಫಿರಂಗಿ ವಾಹನಗಳೊಂದಿಗೆ ಶಸ್ತ್ರಸಜ್ಜಿತರಾಗಿ ನಿಂತಿದ್ದರು… ಇವರ ಲಾಠಿಗಳು ಬಂದೂಕುಗಳು ದೇಶಕ್ಕೆ ಅನ್ನ ಬೆಳೆದು ಕೊಡುವ ಅನ್ನದಾತನ ಎದೆಯಕಡೆಗೆ ಗುರಿಮಾಡಿದ್ದವು ಹೇಗಿದೆ ಭಾರತದ ವಾಸ್ತವ.

 

 

ಈ ಅಡ್ಡಗೋಡೆಗಳನ್ನ ದಾಟಿಕೊಂಡು‌ ಮುಂದೆ ಹೋದರೆ ಮೊದಲಿಗೆ‌ ಒಂದು ವೇದಿಕೆ‌ ಆ ವೇದಿಕೆಯಲ್ಲಿ ಒಬ್ಬಳು ಹೆಣ್ಣುಮಗಳು ಭಾಷಣ ಮಾಡುತ್ತಿದ್ದಳು ನೂರಾರು ಜನ ಕುಳಿತು ಕೇಳುತ್ತಿದ್ದರು. ಆಕೆಯ ಒಂದು‌ ಮಾತು ನನ್ನ ಗಮನ ಸೆಳೆಯಿತು “ಇಲ್ಲಿ ಪ್ರಧಾನಿ, ರಾಷ್ಟ್ರಪತಿಗಳು ಎಷ್ಟು ಜನ ಬೇಕಾದರು ಬಂದು ಹೋಗಬಹುದು ಆದರೆ ದೇಶ ಮಾತ್ರ ಒಂದೇ. ಅದು ಹಾಗೆ ಇರುತ್ತದೆ. ಆ ದೇಶಕ್ಕಾಗಿ‌ ನಮ್ಮ ಹೋರಾಟ”.

ಅಲ್ಲಿಂದ ಮುಂದೆ ಹೋದರೆ ಪ್ರತಿಭಟನೆಯ ನಿಜವಾದ ದರ್ಶನ ನಮಗಾಗುತ್ತದೆ ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿಯನ್ನ ಸಂಪೂರ್ಣ ತಮ್ಮ ವಶಕ್ಕೆ ಪಡೆದಿರುವ ರೈತರು ಆ ರಸ್ತೆಗಳ ಮೇಲೆ ತಮ್ಮ ಟ್ರ್ಯಾಕ್ಟರ್ ಗಳನ್ನ ನಿಲ್ಲಿಸಿಕೊಂಡು ಅವುಗಳನ್ನೇ ಮನೆಗಳನ್ನಾಗಿ ಮಾಡಿಕೊಂಡಿದ್ದಾರೆ. ಇಡೀ ಪ್ರತಿಭಟನೆಯ ಜಾಗ ಅಕ್ಷರಶಃ ಕದನಕಣವಾಗಿ ಮಾರ್ಪಟ್ಟಿತ್ತು. ಈ ಕದನ ಕಣ ನಿರ್ಮಾಣವಾಗಿ ಇಂದಿಗೆ ಸರಿಯಾಗಿ 50 ದಿನಗಳು ಕಳೆದಿದ್ದವು… ಕರ್ನಾಟಕದಲ್ಲಿ ಎಲ್ಲರೂ ಇಂದು ಸಂಭ್ರಮದಿಂದ ಸಂಕ್ರಾಂತಿ ಆಚರಿಸಿದರೆ ಇಲ್ಲಿಯ ಪ್ರತಿಭಟನಾಕಾರ ರೈತರು ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಪ್ರತಿಗಳನ್ನ ಸುಟ್ಟು ಆಚರಿಸಿದ್ದರು.

 

 

 

 

ಚಳುವಳಿಯ ಸಂಭ್ರಮ : ಚಳುವಳಿಯನ್ನೂ ಸಂಭ್ರಮಿಸಬಹುದೆಂದು ನನಗೆ ಗೊತ್ತಾಗಿದ್ದೇ ಇಲ್ಲಿಗೆ ಬಂದು ಎಲ್ಲವನ್ನ ನೋಡಿದ ಮೇಲೆ. ನಮ್ಮ ಊರುಗಳಲೆಲ್ಲ ಕೇವಲ ಜಾತ್ರಾ ಮಹೋತ್ಸವಗಳಲ್ಲಿ ಮಾತ್ರ ನಾನು ಅಂತಹ ವಾತಾವರಣವನ್ನು ನೋಡಿದ್ದೇನೆ ಬಿಟ್ಟರೆ ಕೇರಳದಲ್ಲಿ ನಡೆದ ಸಿಪಿಐಎಂ ನ ಮಹಾಧಿವೇಶನದ ಬಹಿರಂಗ ಸಭೆಗಳಲ್ಲಿ ಭಾಗವಹಿಸಲು ಹೋದಾಗ ನನಗೆ ಈ ರೀತಿಯ ಅನುಭವವಾಗಿತ್ತು.
ಇಲ್ಲಿ ನಿರಂತರ ಅನ್ನ ದಾಸೋಹ ನಡೆಸಲು ಲೆಕ್ಕವಿಲ್ಲದಷ್ಟು ಅಡುಗೆ ಮನೆಗಳು (ಲಂಗರ್) ಗಳನ್ನ ನಿರ್ಮಿಸಿಕೊಳ್ಳಲಾಗಿದೆ. (ಲಂಗರ್ ಸಂಸ್ಕೃತಿ ಮತ್ತು ಅದರ ಇತಿಹಾಸದ ಬಗ್ಗೆ ಪ್ರತ್ತೇಕವಾಗಿ ಹೇಳುತ್ತೇನೆ) ಇಡೀ ಸಿಂಗು ಬಾರ್ಡರ್ ನಲ್ಲಿ ಸರಿ ಸುಮಾರು 22 ಕಿಲೋಮೀಟರ್ ಗಳ ಉದ್ದಕ್ಕೆ ಸುಮಾರು 60 ಸಾವಿರಕ್ಕೂ ಹೆಚ್ಚು ಟ್ರಾಕ್ಟರ್ ಗಳು ಬೀಡು ಬಿಟ್ಟಿವೆ. ಇದರಲ್ಲಿ ಬಂದಿರುವ ರೈತರು ತಮ್ಮ ತಮ್ಮ ಟ್ರ್ಯಾಕ್ಟರ್ ಗಳನ್ನು ಚಿಕ್ಕ ಮತ್ತು ಚೊಕ್ಕವಾದ ಮನೆಗಳನ್ನಾಗಿ ಪರಿವರ್ತಿಸಿಕೊಂಡು‌ ಅವರ ವಾಸಕ್ಕೆ ಬೇಕಾದ ಎಲ್ಲ ಅಗತ್ಯತೆಗಳನ್ನು ಪೂರೈಸಿಕೊಂಡಿದ್ದಾರೆ.

 

ಇಲ್ಲಿ ಹೆಜ್ಜೆ ಹೆಜ್ಜೆಗೂ ಕೇವಲ ಅಡುಗೆಯ ಲಂಗರ್ ಗಳು ಮಾತ್ರವಲ್ಲ, ಆರೋಗ್ಯ ಚಿಕಿತ್ಸಾ ಕೇಂದ್ರಗಳು, ಮೆಡಿಕಲ್ ಶಾಪ್ ಗಳು, ಟೀ ಸ್ಟಾಲ್, ಪಾಯಸದ ಸ್ಟಾಲ್, ಬಟ್ಟೆಗಳನ್ನ ತೊಳೆದುಕೊಡುವುದು, ಸಾಮೂಹಿಕವಾಗಿ ಉಳಿದುಕೊಳ್ಳುವವರಿಗೆ ವ್ಯವಸ್ಥೆ, ಹೀಗೆ ಇವೆಲ್ಲವುಗಳನ್ನು ಮಾಡುತ್ತಿರುವವರು ಸ್ವಯಂ ಸೇವಕರು ಸೇವೆಯ ಹೆಸರಿನಲ್ಲಿ. ಸಿಂಗು ಗಡಿಯಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಿಕ್ ಸಮುದಾಯದಲ್ಲಿ ಸೇವೆ ಮಾಡುವುದೆಂದರೆ ಅದೊಂದು‌ ಪುಣ್ಯದ‌ ಕೆಲಸವಿದ್ದಂತೆ ಅದಕ್ಕಾಗಿ ಜನ ಸ್ವಯಂ ಸ್ಪೂರ್ತಿಯಿಂದ ಈ ಹೋರಾಟದಲ್ಲಿ ಭಾಗವಹಿಸಿ ತಮ್ಮ ಕೈಲಾದ ರೀತಿಯಲ್ಲಿ ಸಹಾಯ ಮಾಡುತ್ತಾರೆ. ಇದಕ್ಕಾಗಿ ತಮ್ಮ ಮನೆಮಂದಿ ಮಕ್ಕಳನ್ನೆಲ್ಲಾ ತೊಡಗಿಸುತ್ತಾರೆ. ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಸೇವಾ ಮನೋಭಾವವನ್ನು ಕಲಿಸುತ್ತಾರೆ.

 

ನಾವು ಸುತ್ತಾಡಿದ 4-5 ಕಿಲೋಮೀಟರ್ ನಲ್ಲೇ ಸುಮಾರು 15 ಕ್ಕೂ ಹೆಚ್ಚು ಊಟದ ಮನೆಗಳು (ಲಂಗರ್), 2 ಹತ್ತು ಹಾಸಿಗೆಗಳ ಟೆಂಟ್ ಆಸ್ಪತ್ರೆ, 5-6 ಔಷದ ಕೇಂದ್ರಗಳು, ಎರಡು ಸಾಮೂಹಿಕ ಉಳಿಯುವ ವ್ಯವಸ್ಥೆ ಮತ್ತು ನಾಲ್ಕು ಬಹಿರಂಗ ವೇದಿಕೆಗಳು ಎರಡು ವೇದಿಕೆಯಲ್ಲಿ ಭಾಷಣಗಳು ನಡೆಯುತ್ತಿದ್ದರೆ ಒಂದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತೊಂದರಲ್ಲಿ ಧಾರ್ಮಿಕ ಪ್ರವಚನ ನಡೆಯುತ್ತಿತ್ತು. ಒಂದೆರಡು ಕಡೆ ಪುಸ್ತಕದ ಅಂಗಡಿಗಳನ್ನೂ ನಾವು… ದೆಹಲಿಯಿಂದ ಪ್ರವೇಶಪಡೆದ ಗಡಿಯ ಪ್ರಾರಂಬದಲ್ಲೆ ನೂರಾರು ಶೌಚಾಲಯಗಳ ಗಾಡಿಗಳನ್ನು ನಿಲ್ಲಿಸಲಾಗಿತ್ತು ಇವುಗಳನ್ನು ದಿಲ್ಲಿ ಸರ್ಕಾರ ಕಳುಹಿಸಿಕೊಟ್ಟಿದೆ ಎಂದು ಗೊತ್ತಾಯಿತು.
ಇವೆಲ್ಲವುಗಳ ಮಿಶ್ರಣ ಒಂದು ಪರಿಪೂರ್ಣತೆಯನ್ನು ತೋರಿಸುತ್ತಿತ್ತು.

ನಾವು ಪ್ರವೇಶ ಪಡೆದ ಪ್ರಾರಂಭದಲ್ಲೇ ಮೊಹಾಲಿಯಿಂದ ಕಾರಿನಲ್ಲಿ ಬಂದಿದ್ದ ಒಬ್ಬ ರೈತ ತನ್ನ ಕಾರನ್ನೇ ಮನೆಯನ್ನಾಗಿ ಮಾಡಿಕೊಂಡು ಇಲ್ಲಿದ್ದಾರೆ. ಇದು ವಿಶೇಷವೇನಲ್ಲ ಆದರೆ ಅವರು ತಮ್ಮ ಕಾರಿನ ಮುಂದೆ ಕೆಲವರ ಪ್ರತಿಕೃತಿಗಳನ್ನ ಮಾಡಿ (ಬೆದರು ಬೊಂಬೆ) ಅವುಗಳಿಗೆ ಭಾವಚಿತ್ರಗಳನ್ನು ಅಂಟಿಸಿ ಅವರುಗಳ ಕರಾಳ ಮುಖಗಳ ಗುಣಗಾನ ಮಾಡುವ ಬರವಣಿಗೆಗಳನ್ನು ಸ್ವತಃ ಕೈಲ್ಲಿ ಬರೆದು ಬಂದವರಿಗೆಲ್ಲ ಅದನ್ನ ವಿವರಿಸುತ್ತಿದ್ದರು. ಅದರಲ್ಲಿ ನರೇಂದ್ರ ಮೋದಿ, ಅಮಿದ್ ಶಾ, ಯೋಗಿ ಆದಿತ್ಯ, ಕಟ್ಟರ್, ಕಂಗಣ, ಮುಂತಾದವರಿದ್ದರು (ಇವರುಗಳ ಬಗ್ಗೆ ರೈತರು ಹೇಳಿದನ್ನ ಪ್ರತ್ತೇಕವಾಗಿ ವರದಿ ಮಾಡುತ್ತೇನೆ)

ಭವಿಷ್ಯ ಟ್ರ್ಯಾಕ್ಟರ್ ಗಳಲ್ಲಿರುವವರೆಲ್ಲ ಒಂದು ಕಡೆ ಬಂದರೆ ಅವರನ್ನೆಲ್ಲ ಸಮಾವೇಶಗೊಳಿಸಲು ಜಾಗವೇ ಸಾಲುವುದಿಲ್ಲ. ಅದು ದೊಡ್ಡ ಸಂಖ್ಯೆಯಲ್ಲಿ ರೈತರಿದ್ದಾರೆ ಇದು ಲಕ್ಷಗಳ ಗಡಿಗಳನ್ನ ಯಾವತ್ತೋ ದಾಟಿದೆ.

ಒಂದು ಟ್ರ್ಯಾಕ್ಟರ್ ಟೆಂಟ್ ನ ಬಳಿ ಹೋಗಿ ಕೆಲವರನ್ನು ಮಾತನಾಡಿಸಿದೆವು ಅದರಲ್ಲಿ ಕುಳಿತಿದ್ದ ಹಿರಿಯರಿಗೆ 71 ವರ್ಷಗಳು ಅವರು ಈ ಪ್ರತಿಭಟನೆ ಪ್ರಾರಂಭವಾದ ನವೆಂಬರ್ 26 ರಿಂದ ಇಲ್ಲಿದ್ದಾರೆ. ಅವರು ತಮ್ಮ ಕೈಯಲ್ಲಿ ಭಗತ್ ಸಿಂಗ್ ನ ಒಂದು ಪೋಸ್ಟರ್ ಹಿಡಿದಿದ್ದು ಅವರ ಮಾತು ಎಷ್ಟು ಸ್ಪಷ್ಟವಾಗಿತ್ತೆಂದರೆ ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವವರೆಗೂ ನಾವು ಇಲ್ಲಿಂದ ಒಂದಿಚೂ ಹಿಂದೆ ಸರಿಯುವುದಿಲ್ಲ ಬದಲಾಗಿ ಶಾಂತಿಯುತವಾಗಿ ಮುಂದೆ ಹೋಗಲು‌ ಪ್ರಯತ್ನಿಸುತ್ತೇವೆ ಎಂದರು. ನಮ್ಮನ್ನು ಅವರ ಟ್ರ್ಯಾಕ್ಟರ್ ಟೆಂಟ್ ನ ಮನೆಯೊಳಗೆ ಕರೆದು ಗೌರವಿಸಿ ತಿನ್ನಲು ಸಿಹಿಯನ್ನು (ಲಡ್ಡು) ಕೊಟ್ಟರು.
ನಾವು ಇಂದು ಇದ್ದ ಸರಿ ಸುಮಾರು 4-5 ತಾಸುಗಳಲ್ಲಿ ಮಾತನಾಡಿಸಿದವರಲ್ಲಿ ಕನಿಷ್ಟ 5-6 ಜನ ನಾವು ಕರ್ನಾಟಕದವರು ಎಂದಕೂಡಲೇ ಅತ್ಯಂತ ಖುಷಿಪಟ್ಟರು ಮತ್ತು ನಮಗೆ ಕೇಳಿದ ಸಾಮಾನ್ಯ ಪ್ರಶ್ನೆ ಎಂದರೆ ಈ ಹೋರಾಟದ ಬಗ್ಗೆ ಕರ್ನಾಟಕದಲ್ಲಿ ಮಾಧ್ಯಮಗಳು ಸುದ್ದಿ ಮಾಡುತ್ತಿವೆಯಾ? ಮಾಡುತ್ತಿದ್ದರೆ ಏನೆಂದು ಮಾಡುತ್ತಿವೆ ಎಂದು.
ಜೊತೆಗೆ ಅವರ ಮನವಿ ಏನೆಂದರೆ “ಇದು ದೇಶಪ್ರೇಮಿ ಹೋರಾಟ ರೈತರ ಬಗ್ಗೆ ಪ್ರೀತಿ ಇರುವವರು, ಭಾರತದಲ್ಲಿ ಕೃಷಿ‌ ಉಳಿಸಬೇಕು ಎನ್ನುವವರೆಲ್ಲ ಈ ಹೋರಾಟಕ್ಕೆ ಬಂದು ಕೈ ಜೋಡಿಸಿ‌”….ಎಂದರು

 

Donate Janashakthi Media

2 thoughts on “ದೆಹಲಿ ರೈತ ಚಳುವಳಿ ನೇರ ಅನುಭವ – 1 : ಮೋದಿಯವರ ಅಡ್ಡಗೋಡೆಗಳನ್ನು ದಾಟಿದ ದೇಶಪ್ರೇಮಿ ಹೋರಾಟ

Leave a Reply

Your email address will not be published. Required fields are marked *