ಹಿಂದುತ್ವ ಸಂವಿಧಾನವಾದ ಮತ್ತು ಪ್ರಜ್ಞಾವಂತರ ನಿಷ್ಕ್ರಿಯತೆ : ಬಿ. ಶ್ರೀಪಾದ ಭಟ್

 

ಸಂವಿಧಾನವನ್ನು ಬದಲಾವಣೆ ಮಾಡದೆಯೇ ಆರೆಸ್ಸಸ್‌ನ ‘ನಿರಂಕುಶ ಪ್ರಭುತ್ವ-ನವ ಉದಾರೀಕರಣ-ಹಿಂದೂ ರಾಷ್ಟ್ರೀಯತೆ’ಯು ಸಂವಿದಾನಬದ್ಧವಾದ ಸಿದ್ಧ್ದಾಂತವಾಗಿ ಬಹುಸಂಖ್ಯಾತರ ಮಿದುಳು ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರಿದೆ. ‘ತಾಂತ್ರಿಕತೆಗೆ ಪ್ರಾಧಾನ್ಯ’ (ಕಾನೂನು ತಾಂತ್ರಿಕತೆಯ ಮೇಲೆ ಅವಲಂಬನೆ. ಉದಾಹರಣೆಗೆ ಸಿಎಎ ಕಾಯಿದೆಯು ಕೇವಲ ವಲಸೆ ಹಿಂದೂಗಳಿಗೆ ಮಾತ್ರವಲ್ಲ, ಜೊತೆಗೆ ಮುಸ್ಲಿಮೇತರ ಅಲ್ಪಸಂಖ್ಯಾತರನ್ನು ಒಳಗೊಂಡಿದೆ), ‘ಒಂದು ದೇಶ ಒಂದು ಸಂವಿಧಾನ’, ‘ನಾವು ಅಲ್ಪಸಂಖ್ಯಾತರು ಬಹುಸಂಖ್ಯಾತರಲ್ಲ’ (ಹಿಂದೂಗಳಾದ ನಾವು ‘ಹಿಂದೂ ರಾಷ್ಟ್ರ’ದಲ್ಲಿ ಅತಂತ್ರರಾಗಿದ್ದೇವೆ, ಈಶಾನ್ಯ ರಾಜ್ಯಗಳು, ಜಮ್ಮು-ಕಾಶ್ಮೀರ, ಪಂಜಾಬ್‌ನಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸಬೇಕು ಎನ್ನುವ ‘ಹಿಂದೂ ಬಲಿಪಶು ಸಿದ್ದಾಂತ) – ಈ ಮೂರು ವಿಚಾರಗಳು ‘ಹಿಂದುತ್ವ ಸಂವಿಧಾನವಾದ’ದ ಮುಖ್ಯ ಗುಣಲಕ್ಷಣಗಳಾಗಿವೆ’

 

  • ಬಿ. ಶ್ರೀಪಾದ ಭಟ್

ಇಂದು ಆರೆಸ್ಸೆಸ್‌ನ ‘ಬ್ರಾಹ್ಮಣ-ಹಿಂದೂ’ ಮತಾಂಧತೆ ಸಿದ್ಧಾಂತವು ಹೆಚ್ಚೂ ಕಡಿಮೆ ತನ್ನ ಗುರಿಯನ್ನು ತಲುಪಿದೆ. ಇನ್ನೇನಿದ್ದರೂ ಶಾಶ್ವತವಾಗಿ ನೆಲೆಗೊಳಿಸುವ ಕೆಲಸವಷ್ಟೆ ಬಾಕಿ ಉಳಿದಿದೆ. ಸಂಘಿಗಳ ಕಳೆದ 80 ವರ್ಶಗಳ ಸತತ ಪ್ರಯತ್ನದ ಶ್ರಮ ಇಂದು ಸಾಮಾಜಿಕವಾಗಿ, ರಾಜಕೀಯವಾಗಿ ಫಲ ಕೊಡಕೊಡಗಿದೆ. ಇನ್ನು ಮುಂದೆ ಸಂಘ ಪರಿವಾರಕ್ಕೆ ಹೆಡ್ಗೇವಾರ್-ಸಾವರ್ಕರ್-ಗೋಳ್ವಲ್ಕರ್ ತ್ರಿಮೂರ್ತಿಗಳ ‘ಹಿಂದೂ-ಬ್ರಾಹ್ಮಣ ಪುನಸ್ಥಾಪನೆ’ಯ ಆ ತೀವ್ರವಾದಿ ನೀತಿಗಳನ್ನು ಪದೇ ಪದೇ ಪ್ರಚಾರ ಮಾಡುವ ಅವಶ್ಯಕತೆಯಿಲ್ಲ. 2014ರಲ್ಲಿ ಮೋದಿ ಆಡಳಿತದ ಚುಕ್ಕಾಣಿ ಹಿಡಿದ ನಂತರ ಯಾವುದೇ ಅಡೆತಡೆಗಳಿಲ್ಲದೆ ಮುಕ್ತವಾಗಿ, ಬಹಿರಂಗವಾಗಿ ಆರೆಸ್ಸಸ್ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಮೋದಿ ಆಡಳಿತ ಕಳೆದ ಆರು ವರ್ಷಗಳಲ್ಲಿ ಮಾರುಕಟ್ಟೆ-ವ್ಯವಸ್ಥೆ-ಪ್ರಭುತ್ವದ ನಡುವೆ ಸಾಧಿಸಿದ ಯಶಸ್ಸಿನ ಪ್ರತಿಫಲವನ್ನು ಆರೆಸ್ಸೆಸ್ ನೇರವಾಗಿ  ಬಾಚಿಕೊಂಡಿದೆ.

ಪ್ರಿಯಾ ಚಾಕೋ ಅವರು “1947 ರಿಂದ 1990ರವರೆಗೆ ಹಿಂದೂ ರಾಷ್ಟ್ರೀಯವಾದದ ಚರ್ಚೆ, ಪ್ರಚಾರವು ವ್ಯಕ್ತಿಗಿಂತ ಸಮಾಜಕ್ಕೆ ಹೆಚ್ಚಿನ ಒತ್ತು ನೀಡಿತು ಮತ್ತು ಆ ಸಂದರ್ಭದಲ್ಲಿ ಪ್ರಭುತ್ವವು ಮಾರುಕಟ್ಟೆಯ ವಿರುದ್ಧ ಸಮಾಜದ ರಕ್ಷಕನಂತೆ ಕೆಲಸ ಮಾಡಿದೆ. ಆಗಿನ ಸಂದರ್ಭದಲ್ಲಿ ಪ್ರಭುತ್ವದ ಈ ದೃಷ್ಟಿಕೋನವು ‘ಹಿಂದೂ’ ಸಮಾಜದ ಪರವಾಗಿ ಹಿಂದೂ ರಾಷ್ಟ್ರೀಯವಾದಿಗಳ ಬೆಂಬಲದ ಗುಂಪುಗಳ ರಕ್ಷಣೆಗೆ ನಿಂತಿದ್ದ ಕಾಂಗ್ರೆಸ್‌ನೊಂದಿಗೆ ಸಾಮ್ಯತೆಯಿತ್ತು. 1990ರ ನಂತರ ಭಾರತದ ಆಡಳಿತಶಾಹಿ ಮತ್ತು ಬಿಜೆಪಿಯನ್ನು ಒಳಗೊಂಡಂತೆ ಎಲೈಟ್ ರಾಜಕಾರಣಿಗಳು ಸಮಾಜದಲ್ಲಿ ಬದಲಾವಣೆ ತರಲು ಪ್ರಭುತ್ವಕ್ಕೆ ಪ್ರಾಶಸ್ತ್ಯ ಕೊಡುವುದರ ಬದಲಿಗೆ ಮಾರುಕಟ್ಟೆಯ ಕಡೆಗೆ ಗಮನ ಕೇಂದ್ರೀಕರಿಸಿದರು. ಆಗ ಆರ್ಥಿಕತೆ ಮತ್ತು ಸಾಮಾಜಿಕ ನೀತಿಗಳಿಗೆ ಸಂಬಂದಿಸಿದಂತೆ ಆರೆಸ್ಸೆಸ್ ಮತ್ತು ಬಿಜೆಪಿ ಪಕ್ಷದ ನಡುವೆ ಹಿಂದೂ ರಾಷ್ಟ್ರೀಯತೆಯ ಸಂಘಟನೆಗೆ ಸಂಬಂದಿಸಿದಂತೆ ಭಿನ್ನತೆ ಹುಟ್ಟಿಕೊಂಡಿತು. ಇಲ್ಲಿ ಆರೆಸ್ಸೆಸ್ ತನ್ನ ಬೆಂಬಲಿತ ನೆಲೆಯನ್ನು ಪ್ರಭುತ್ವ ಮಾತ್ರ ರಕ್ಷಿಸಬಲ್ಲದು ಎಂದು ಪ್ರತಿಪಾದಿಸುತ್ತಿತ್ತು. ಆದರೆ ಬಿಜೆಪಿ ಪಕ್ಷವು ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಓಲೈಸುತ್ತ, ಮಧ್ಯಮ ವರ್ಗ, ನವ ಮಧ್ಯಮವರ್ಗಗಳನ್ನು ‘ಮಾರುಕಟ್ಟೆ ನಾಗರಿಕ’ರೆಂದು ಮರು ಸೃಷ್ಟಿಸಿ ಆರ್ಥಿಕ ಅಬಿವೃದ್ದಿಯನ್ನು ಉತ್ತೇಜಿಸಲು ಹವಣಿಸುತ್ತಿತ್ತು. ಈ ‘ಮಾರುಕಟ್ಟೆ ನಾಗರಿಕರು’ ತಮ್ಮನ್ನು ಉದ್ಯಮಿಗಳು ಮತ್ತು ಗ್ರಾಹಕರು ಎಂದೇ ಬಿಂಬಿಸಿಕೊAಡು ನಾಗರಿಕ ಸೇವೆ ಮತ್ತು ಸಾಮಾಜಿಕ ಬದಲಾವಣೆಗೆ ಪ್ರಭುತ್ವವನ್ನು ನೆಚ್ಚಿ ಕೂಡದೆ ನೇರವಾಗಿ ಮಾರುಕಟ್ಟೆಯನ್ನು ಅವಲಂಬಿಸಿದರು’ ಎಂದು ಬರೆಯುತ್ತಾರೆ.

1999-2004ರ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ‘ಬಂಡವಾಳ ಹಿಂತೆಗೆತ’ ಇಲಾಖೆಯನ್ನೇ ಸೃಷ್ಟಿ ಮಾಡಲಾಗಿತ್ತು.  ಸಾರ್ವಜನಿಕ ಉದ್ದಿಮೆಗಳನ್ನು ಹಂತಹಂತವಾಗಿ ಖಾಸಗೀಕರಣಗೊಳಿಸುವುದು ಈ ಇಲಾಖೆಯ ಉದ್ದೇಶವಾಗಿತ್ತು. 2004ರ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಸ್ವದೇಶಿ, ಗ್ರಾಮ ಕೈಗಾರಿಕೆ ಮುಂತಾದ ಕಲ್ಯಾಣ ರಾಜ್ಯದ ಯೋಜನೆಗಳು ಕಾಣೆಯಾಗಿ ಜಾಗತಿಕ ಮಾರುಕಟ್ಟೆ, ಸ್ಪರ್ಧಾತ್ಮಕ ಜಗತ್ತು, ಸಾರ್ವಜನಿಕ-ಖಾಸಗಿ ಪಾಲುದಾರಿಕೆ, ಸಾಫ್ಟ್ವೇರ್ ರಫ್ತು ಮುಂತಾದ ನವಉದಾರೀಕರಣದ ಎಲ್ಲಾ ಅಂಶಗಳು ಸ್ಥಾನ ಪಡೆದುಕೊಂಡವು. ಮತ್ತು ಆರೆಸ್ಸೆಸ್ ಈ ಬದಲಾವಣೆಯನ್ನು ಶೀಘ್ರವಾಗಿ ಗ್ರಹಿಸಿತು ಮತ್ತು ತನ್ನನ್ನು ಈ ಹೊಸ ಪಲ್ಲಟಗಳಿಗೆ ಒಡ್ಡಿಕೊಳ್ಳತೊಡಗಿತು. ಅದರ ಸ್ವದೇಶಿ ವಾದ, ‘ಭಾರತೀಯ ಮಜ್ದೂರ ಸಂಘ’ದ ಕಾರ್ಮಿಕ ಸಂಘಟನೆ ಎಲ್ಲವೂ ಮೋದಿ-ಶಾ ಆಡಳಿತದ ಈ ‘ಬಕಾಸುರ ಬಂಡವಾಳಶಾಹಿ’ ಕಾಲಘಟ್ಟದ ಅವಶ್ಯಕತೆಗೆ ಅನುಗುಣವಾಗಿ ತಮ್ಮ ಪ್ರಣಾಳಿಕೆಯನ್ನೇ ಬದಲಿಸಿಕೊಂಡವು. ದತ್ತೋಪಂತ ಠೇಂಗಡಿ, ನಾನಾಜಿ ದೇಶಮುಖ್ ಇಂದು ಶತಮಾನೋತ್ಸವದ ಉತ್ಸವಮೂರ್ತಿಯಾಗಿ ಉಳಿದುಕೊಂಡಿದ್ದಾರೆ.

ಇಂದು ಬಿಜೆಪಿಯ ಸರ್ವಾಧಿಕಾರ ಆಡಳಿತವಿದೆ. ಮೋದಿ ಸರಕಾರಕ್ಕೆ ಎರಡನೇ ಬಾರಿಗೆ ಅಧಿಕಾರ ಸಿಕ್ಕಿದೆ. 2014ರ ಹೊತ್ತಿಗಾಗಲೇ ‘ಹಿಂದೂ ರಾಷ್ಟ್ರೀಯವಾದ’ದ ದೃಷ್ಟಿಕೋನವು ಐವತ್ತರ ದಶಕದ ಆರೆಸ್ಸಸ್‌ನ ಸಿದ್ದಾಂತಗಳಿAದ ಸಂಪೂರ್ಣ ಭಿನ್ನವಾಗಿತ್ತು. ‘ಮಾರುಕಟ್ಟೆ ನಾಗರಿಕತೆ’ಯೊಂದಿಗೆ ‘ಹಿಂದೂ ರಾಷ್ಟ್ರೀಯವಾದ’ವು ಹೆಣೆದುಕೊಂಡಿತ್ತು. ಹಿಂದೂ ಬಹುಸಂಖ್ಯಾತವಾದದ ಜೊತೆಗೆ ಗುರುತಿಸಿಕೊಂಡ ನವ ಮಧ್ಯಮವರ್ಗವು ಇದರ ಸಾಂಸ್ಕೃತಿಕ ಚೌಕಟ್ಟನ್ನು ಬದುಕಿನ ಭಾಗವಾಗಿಸಿಕೊಂಡರು. ಇದು ಹಿಂದೂ ದೇಶದ ಕಲ್ಪನೆಯನ್ನು ಬಲಗೊಳಿಸುತ್ತದೆ ಎಂದು ಇವರ ನಂಬಿಕೆಯಾಗಿತ್ತು. ಮಾತ್ರವಲ್ಲ ಮಧ್ಯಮ ಜಾತಿಗಳನ್ನು ಸಹ ಪ್ರಬಾವಿಸತೊಡಗಿದರು.  “ಮಾರುಕಟ್ಟೆ ನಾಗರಿಕತೆ-ಹಿಂದೂ ರಾಷ್ಟ್ರೀಯತೆ’ ತಮಗೆ ಲಾಭ ತಂದುಕೊಡುವುದು ಖಾತ್ರಿಯೆಂದು ಗೊತ್ತಾದ ಕ್ಷಣದಿಂದ ಆರೆಸ್ಸೆಸ್ ತನ್ನ ಕಾರ್ಯತಂತ್ರವನ್ನು ಬದಲಾಯಿಸಿಕೊಂಡಿತು. ಹಿಂದೂ ರಾಷ್ಟççದ ‘ಸಾಂಸ್ಕೃತಿಕ ರಾಷ್ಟ್ರೀಯತೆ’ ಮತ್ತು ‘ನವ ಉದಾರವಾದ’ ಹತ್ತಿರ ಗೆಳೆಯರು ಎಂದು ಕೂಡಲೆ ಗ್ರಹಿಸಿದ ಆರೆಸ್ಸೆಸ್ ಇದನ್ನೇ ಸಾಮಾಜಿಕ ಅಗತ್ಯಗಳು ಎನ್ನುವ ಹೊಸ ಸಿದ್ದಾಂತವನ್ನು ರೂಪಿಸತೊಡಗಿತು. ‘ಜಾಗತೀಕರಣ’ದ ಜೊತೆಜೊತೆಗೆ ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯನ್ನೂ ಬೆರೆಸಬಹುದು ಎಂದು ಅರಿತುಕೊಂಡ ಆರೆಸ್ಸೆಸ್ ಇಂದು ತನ್ನ ಚೀಲದೊಳಗೆ ಈ ತರಹದ ಹಲವಾರು ಸ್ಪೋಟಕ ಬೆಂಕಿ ಉಂಡೆಗಳನ್ನು ತಯಾರಿಸಿಟ್ಟುಕೊಂಡಿದೆ.

ಮಾರುಕಟ್ಟೆ ಚೌಕಟ್ಟಿನ ಮೂಲಕ ಸಮಾಜದೊಂದಿಗೆ ಒಡಬಂಡಿಕೆ ನಡೆಸಲು ಮುನ್ನುಗ್ಗಿದ ಆರೆಸ್ಸೆಸ್ ಗೋಳ್ವಲ್ಕರ್‌ರ ‘ಮುಸ್ಲಿಂ, ಕ್ರಿಶ್ಚಿಯನ್, ಕಮ್ಯುನಿಷ್ಟರು’ ಭಾರತದ ಅಂತರಿಕ ಶತ್ರುಗಳು ಎನ್ನುವ ಮತಾಂಧತೆಗೆ ‘ಭಾರತೀಯ ಸಂಸ್ಕೃತಿ’ಯೆಂಬ ಮುಖವಾಡ ತೊಡಿಸಿ ಅದನ್ನು ‘ಮಾರುಕಟ್ಟೆ ನಾಗರಿಕರು’ ಎಂದು ಪ್ರಚಾರ ಮಾಡತೊಡಗಿತು. ಈ ‘ಮಿಸಾಳ್ ಬಾಜಿ’ಯ ಮೂಲಕ ಸಮಾಜವೆಂದರೆ ಅದು ‘ಹಿಂದೂ ದೇಶ’ ಎನ್ನುವ ಸಿದ್ಧಾಂತವನ್ನು ಬಹುಸಂಖ್ಯಾತರ ಮಿದುಳಿನಲ್ಲಿ ಬಿತ್ತುವಲ್ಲಿ ಸಫಲಗೊಂಡ ಆರೆಸ್ಸೆಸ್‌ನ ಈ ತಂತ್ರಗಾರಿಕೆಯು ಮೋದಿಯವರ ‘ಬಂಡವಾಳಶಾಹಿ ಸಿದ್ದಾಂತ’ದೊಂದಿಗೆ ಹದವಾಗಿ ಬೆರೆತು ಜನಪ್ರಿಯತೆ ಗಳಿಸಿತು. ಈ ಎಲ್ಲಾ ತಂತ್ರಗಾರಿಕೆಯ ಜೊತೆಗೆ ರಾಮಜನ್ಮಭೂಮಿ ಚಳುವಳಿ, ಗುಜರಾತ್ ಹತ್ಯಾಕಾಂಡದ ವೈಭವೀಕರಣದ ಕಾರಣಕ್ಕೆ ಬ್ರಾಹ್ಮಣ, ಬನಿಯಾ ಪಕ್ಷವಾಗಿದ್ದ ಬಿಜೆಪಿಯ ಸಾಮಾಜಿಕ ಬಂಡವಾಳದಲ್ಲಿ ಶೇ.34% ಪ್ರಮಾಣದ ಹಿಂದುಳಿದ ವರ್ಗ, ದಲಿತ, ಆದಿವಾಸಿಗಳು ಸೇರಿಕೊಂಡರು. ಚಿಂತಕರನ್ನು, ಮಾನವ ಹಕ್ಕುಗಳ ಹೋರಾಟಗಾರರನ್ನು ‘ದೇಶ ವಿರೋಧಿಗಳು’ ಎನ್ನುವ ಹೊಸ ದಬ್ಬಾಳಿಕೆಯ ಮೂಲಕ ಬರಖಾಸ್ತು ಮಾಡಲು ‘ನಿರಂಕುಶ ಪ್ರಭುತ್ವ-ನವ ಉದಾರೀಕರಣ-ಹಿಂದೂ ರಾಷ್ಟ್ರೀಯತೆ’ ಎಂಬ ಅಫೀಮು ವೇಗವರ್ಧಕದಂತೆ ಕಾರ್ಯನಿರ್ವಹಿಸಿತು. ಈ ಎಲ್ಲಾ ಘಟನೆಗಳು ಅತ್ಯಂತ ಕ್ಷಿಪ್ರ ಗತಿಯಲ್ಲಿ ಸಂಭವಿಸತೊಡಗಿದ್ದು ಪ್ರಜ್ಞಾವಂತರ ಅರಿವಿಗೆ ಬರಲಿಲ್ಲ ಎಂದೇನಿಲ್ಲ. ಆದರೆ ಆರೆಸ್ಸೆಸ್‌ನ ಮೂಲ ಕಾರ್ಯಸೂಚಿಯಾದ  ‘ಮತಧರ್ಮದ ಏಕಾಕೃತಿ’ಯು ಇಂದು ‘ಮಾರುಕಟ್ಟೆ ನಾಗರಿಕರು’ ಎಂಬುದಾಗಿ ಪುನರುತ್ಪಾದನೆಯಾಗಿರುವುದನ್ನು ಗ್ರಹಿಸಲು ವಿಫಲರಾದರು. ಇವರ ವೈಚಾರಿಕ ಚೌಕಟ್ಟು ದುರ್ಬಲಗೊಂಡಿರುವುದು ಸಹ ಸ್ಪಷ್ಟವಾಗಿ ಗೋಚರಿಸುತ್ತದೆ.

ಪ್ರೊ. ಹಿಲಾಲ್ ಅಹ್ಮದ್ ಅವರು “ಮೋದಿ-ಶಾ ಜೋಡಿಯ ಹಿಂದುತ್ವ ರಾಜಕಾರಣಕ್ಕೆ ಪ್ರತಿರೋಧವಾಗಿ ಪ್ರಜ್ಞಾವಂತರು, ಎಡಪಂಥೀಯ ಚಿಂತಕರು ಅಂಬೇಡ್ಕರ್ ಅವರ ‘ಸಂವಿದಾನಿಕ ನೈತಿಕತೆ’ಯನ್ನು ಉಲ್ಲೇಖಿಸತೊಡಗಿದರು. ಇವರು ಸಂವಿದಾನವನ್ನು ಅಂತಿಮವೆಂದು ಪ್ರತಿಪಾದಿಸುತ್ತಿದ್ದರು. ಆದರೆ ಈ ‘ಹಿಂದುತ್ವ ಸಂವಿಧಾನವಾದ’ವನ್ನು ಅರಿಯಲು ವಿಫಲಗೊಂಡರು. ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ಕಸಿದುಕೊಳ್ಳಲು, ಸಿಎಎ ಕಾಯಿದೆ, ತ್ರಿವಳಿ ತಲಾಖ್, ಗೋ ಹತ್ಯೆ ನಿಷೇಧದಂತಹ ವಿಚಾರಗಳಿಗಾಗಿ ಆರೆಸ್ಸೆಸ್ ಸಂವಿದಾನದ ನೀತಿಸಂಹಿತೆಗಳನ್ನು ಗೌರವಿಸುವುದಾಗಿ ಬಹಿರಂಗವಾಗಿ ಹೇಳಿಕೊಂಡಿದೆ … ..ಇಂದು ಆರೆಸ್ಸೆಸ್ ಸರಸಂಚಾಲಕ ಮೋಹನ್ ಭಾಗವತ್ ಅವರು ‘ನಾವು ಸಂವಿದಾನಕ್ಕೆ ಕಟಿಬದ್ದರೆಂದು’ ಘಂಟಾಘೋಷವಾಗಿ ಹೇಳಿಕೊಂಡಿದ್ದಾರೆ”ಎಂದು ಬರೆಯುತ್ತಾರೆ. ಸಂವಿಧಾನವನ್ನು ಬದಲಾವಣೆ ಮಾಡದೆಯೇ ಆರೆಸ್ಸೆಸ್‌ನ ‘ನಿರಂಕುಶ ಪ್ರಭುತ್ವ-ನವ ಉದಾರೀಕರಣ-ಹಿಂದೂ ರಾಷ್ಟ್ರೀಯತೆ’ಯು ಸಂವಿದಾನಬದ್ಧವಾದ ಸಿದ್ಧ್ದಾಂತವಾಗಿ ಬಹುಸಂಖ್ಯಾತರ ಮಿದುಳು ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರಿದೆ. ಇದೇ ಸಂದರ್ಭದಲ್ಲಿ ಪ್ರಜ್ಞಾವಂತರ ಸೆಕ್ಯುಲರ್, ವೈಚಾರಿಕ ಚೌಕಟ್ಟು ಸಂಪೂರ್ಣ ಶಿಥಿಲಗೊಂಡು ತನ್ನ ನೆಲೆ ಕಳೆದುಕೊಂಡಿದೆ. ಈ ಕಾರಣದಿಂದಾಗಿ   ಇಂದು ಹಿಂದುತ್ವ ರಾಜಕಾರಣವು ಸಂವಿಧಾನ ವಿರೋಧಿ ಸಿದ್ಧಾಂತವಾಗಿದೆ ಎನ್ನುವ ವಾದಕ್ಕೆ ಕವಡೆ ಕಾಸಿನ ಬೆಲೆ ಇಲ್ಲ.

ಹಿಲಾಲ್ ಅಹ್ಮದ್ ಅವರು ‘‘ತಾಂತ್ರಿಕತೆಗೆ ಪ್ರಾಧಾನ್ಯ (ಕಾನೂನು ತಾಂತ್ರಿಕತೆಯ ಮೇಲೆ ಅವಲಂಬನೆ. ಉದಾಹರಣೆಗೆ ಸಿಎಎ ಕಾಯಿದೆಯು ಕೇವಲ ವಲಸೆ ಹಿಂದೂಗಳಿಗೆ ಮಾತ್ರವಲ್ಲ, ಜೊತೆಗೆ ಮುಸ್ಲಿಮೇತರ ಅಲ್ಪಸಂಖ್ಯಾತರನ್ನು ಒಳಗೊಂಡಿದೆ), ‘ಒಂದು ದೇಶ ಒಂದು ಸಂವಿಧಾನ’, ‘ನಾವು ಅಲ್ಪಸಂಖ್ಯಾತರು ಬಹುಸಂಖ್ಯಾತರಲ್ಲ’ (ಹಿಂದೂಗಳಾದ ನಾವು ‘ಹಿಂದೂ ರಾಷ್ಟ್ರ’ದಲ್ಲಿ ಅತಂತ್ರರಾಗಿದ್ದೇವೆ, ಈಶಾನ್ಯ ರಾಜ್ಯಗಳು, ಜಮ್ಮು-ಕಾಶ್ಮೀರ, ಪಂಜಾಬ್‌ನಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸಬೇಕು ಎನ್ನುವ ‘ಹಿಂದೂ ಬಲಿಪಶು ಸಿದ್ದಾಂತ’) – ಈ ಮೂರು ವಿಚಾರಗಳು ‘ಹಿಂದುತ್ವ ಸಂವಿಧಾನವಾದ’ದ ಮುಖ್ಯ ಗುಣಲಕ್ಷಣಗಳಾಗಿವೆ’ಎಂದು ಬರೆಯುತ್ತಾರೆ. ಈ ‘ಹಿಂದುತ್ವ ಸಂವಿಧಾನವಾದ’ದ ಮುಂದುವರೆದ ಭಾಗವಾಗಿ ಬಿಜೆಪಿ ಸರಕಾರವಿರುವ ರಾಜ್ಯಗಳಲ್ಲಿ ಮುಸ್ಲಿಮರನ್ನು ಸಂಪೂರ್ಣವಾಗಿ ಕೀಳಾಗಿ ಪರಿಗಣಿಸುವ ‘ಲವ್ ಜಿಹಾದ್ ಕಾನೂನುಬಾಹಿರ’ ಎನ್ನುವ ಕಾಯಿದೆಯನ್ನು ಜಾರಿಗೊಳಿಸುವ ಎಲ್ಲಾ ಪ್ರಯತ್ನಗಳು ಜಾರಿಯಲ್ಲಿದೆ.

“ಜನರು ಧರ್ಮದ ಕುರಿತಾಗಿ ಕೊನೆಯಿಲ್ಲವೇನೋ ಎಂಬಂತೆ ವಾದಿಸುತ್ತಾರೆ. ಆದರೆ ಅದೇ ಹೊತ್ತಿನಲ್ಲಿ ಯಾರು ಅತ್ಯಂತ ಕಡಿಮೆ ಧರ್ಮನಿಷ್ಠರು ಎಂದು ಸಾಬೀತುಪಡಿಸಲು ಸ್ಪರ್ಧಿಸುತ್ತಿರುವಂತೆ ಕಂಡು ಬರುತ್ತದೆ” ಎಂದು 18ನೆ ಶತಮಾನದ ಫ್ರೆಂಚ್ ರಾಜಕೀಯ ತತ್ವಜ್ಞಾನಿ, ನ್ಯಾಯಾದೀಶ ಮಾಂಟೆಸ್ಕ್ಯು ಹೇಳುತ್ತಾನೆ. ಇಂದು ಮುಸ್ಲಿಂ ಸಮುದಾಯದ ಕುರಿತು ಮಾತನಾಡುವಾಗ ಧರ್ಮವನ್ನು ಎಳೆದು ತಂದು ಅವರಿಗೆ ಗಂಟು ಹಾಕುವ ಬಹುಸಂಖ್ಯಾತ ಭಾರತೀಯರು ಸ್ವತಃ ತಮ್ಮನ್ನು ಕಡಿಮೆ ಧಾರ್ಮಿಕತೆ ಉಳ್ಳವರು ಎಂದು ಪ್ರಚಾರ ಕೊಡಲು ಪ್ರಯತ್ನಿಸುತ್ತಾರೆ. ಇದನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಎನ್ನುವ ಪ್ರಶ್ನೆಗೆ ನಮ್ಮ ಬಳಿ ಉತ್ತರವೇ ಇಲ್ಲ.

… ಮತ್ತು ಮುಂದೇನು ಎನ್ನುವ ಯಕ್ಷಪ್ರಶ್ನೆ

ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹಿಡಿತ ಬಲಗೊಳ್ಳತೊಡಗಿದಂತೆ ರಾಜ್ಯಗಳ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮದೇ ಮಾದರಿಯ ಪ್ರತಿರೋಧ ರಾಜಕಾರಣವನ್ನು ರೂಪಿಸಿಕೊಂಡವು. ‘ಸಾಮಾಜಿಕ-ಸಾಂಸ್ಕೃತಿಕವಾಗಿ ಬಲಪಂಥೀಯ, ಆರ್ಥಿಕವಾಗಿ ಕೊಂಚ ಎಡ’ ಎಂಬ ಹೊಸ ತತ್ವಸಿದ್ದಾಂತವನ್ನು ಅಳವಡಿಸಿಕೊಂಡ ಆಮ್ ಆದ್ಮಿ ಪಕ್ಷವು ಇಂದು ಇತರ ಪ್ರಾದೇಶಿಕ ಪಕ್ಷಗಳಿಗೆ (ಡಿಎಂಕೆ, ಆರ್‌ಜೆಡಿ ಹೊರತುಪಡಿಸಿ) ಮಾದರಿಯಾಗಿದೆ. ಇವು ಬಿಜೆಪಿ ವಿರುದ್ದದ ಹೋರಾಟದಲ್ಲಿ ಕೆಲವೊಮ್ಮೆ ಗೆಲುವು ಸಾಧಿಸಿವೆ ಮತ್ತು ಅನೇಕ ಬಾರಿ ಸೋಲನ್ನು ಉಂಡಿವೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ತನ್ನ ಮೂಲ ಕಾಂಗ್ರೆಸ್ ಸಿದ್ದಾಂತಕ್ಕೆ ಸ್ವಯಂ ಮೋಸ ಮಾಡಿಕೊಂಡಿದೆ. ಯಾವುದೇ ನಿರ್ದಿಷ್ಟ ಬಗೆಯ ಕೇಂದ್ರವಿಲ್ಲದ ಕಾಂಗ್ರೆಸ್ ಪಕ್ಷಕ್ಕೆ ಇಂದು ಒಂದು ದೂರದೃಷ್ಟ್ಟಿ ಇಲ್ಲ, ತಳಮಟ್ಟದಿಂದ ಮೇಲ್ಮಟ್ಟದವರಗೆ ಒಂದು ಸಂವಾದಿಯಾದ ಸಮಗ್ರ ಕಾರ್ಯ ಯೋಜನೆಗಳಿಲ್ಲ. ಪಕ್ಷವಾಗಿ ಅದರ ರಚನೆಯೂ ಬಿರುಕು ಬಿಟ್ಟಿದೆ. ಆರೆಸ್ಸೆಸ್-ಬಿಜೆಪಿ ಜೋಡಿಯು ‘ಹಿಂದುತ್ವ ಮತೀಯವಾದವನ್ನು ಜನಾಂದೋಲನವಾಗಿ ಪರಿವರ್ತನೆಗೊಳಿಸಿಕೊಂಡಿರುವುದು’ ಕಾಂಗ್ರೆಸ್‌ಗೆ ಇಂದಿಗೂ ಒಂದು ಪಾಠವಾದಂತಿಲ್ಲ. ಇದರ ಬದಲಿಗೆ ಆತ್ಮಹತ್ಯಾತ್ಮಕ ಮೃದು ಹಿಂದುತ್ವ ಧೋರಣೆ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಇಂದು ಸಂಜೀವ್ ಭಟ್ ಪರವಾಗಿ ಮಾತನಾಡುತ್ತಿಲ್ಲ, ಸುಳ್ಳು ಆರೋಪಗಳ ಮೇಲೆ ಬಂಧನಕ್ಕೊಳಗಾದ ಖಲೀದ್, ತೇಲ್ತುಂಬ್ಡೆ, ವರವರ ರಾವ್ ಮತ್ತು ಇತರೇ ಸಾಮಾಜಿಕ ಕರ‍್ಯಕರ್ತರು, ನ್ಯಾಯವಾದಿಗಳು, ಮಾನವ ಹಕ್ಕುಗಳ ಹೋರಾಟಗಾರರ ಪರವಾಗಿ ಮಾತನಾಡುತ್ತಿಲ್ಲ. ಮುಸ್ಲಿಮರ ಮೇಲಿನ ದ್ವೇಷ ರಾಜಕಾರಣವನ್ನು ವಿರೋಧಿಸುತ್ತಿಲ್ಲ. ಆದರೆ ತನ್ನ ಈ ಮೃದು ಹಿಂದುತ್ವದ ನೀತಿಯಿಂದ ಜನರ ವಿಶ್ವಾಸವನ್ನೂ ಗಳಿಸುತ್ತಿಲ್ಲ. ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ‘ಹಿಂದೂ ರಾಷ್ಟ್ರೀಯವಾದ’ದ ಪ್ರತಿಪಾದನೆ ಮಾಡಿದ ಕಾಂಗ್ರೆಸ್ ಗಾಂಧಿಯ ‘ಹಿಂದೂ ತತ್ವಸಿದ್ದಾಂತ’ವು ಬಿಜೆಪಿಯ ‘ಹಿಂದುತ್ವ ರಾಜಕಾರಣ’ಕ್ಕಿಂತ ಹೇಗೆ ಬಿನ್ನ ಎಂದು ಸ್ಪಷ್ಟವಾಗಿ ನಿರೂಪಿಸಲು ಸಹ ವಿಫಲಗೊಂಡಿದೆ. ನೆಹರೂ ಸೆಕ್ಯುಲರಿಸಂ ಸಿದ್ಧ್ದಾಂತವು ಕಾಂಗ್ರೆಸ್ ಮತ್ತು ಇತರೇ ಹಿಂದುತ್ವವಾದಿ ರಾಜಕಾರಣದ ನಡುವೆ ಒಂದು ನಿಖರವಾದ ಭಿನ್ನತೆಯನ್ನು ಸೃಷ್ಟಿಸಿತ್ತು. ಆದರೆ ಇಂದು ಕಾಂಗ್ರೆಸ್ ಅದನ್ನು ಉಳಿಸಿಕೊಂಡಿಲ್ಲ. ಬಿಜೆಪಿಯ ‘ಹಿಂದುತ್ವ ಸಂವಿಧಾನವಾದ’ದ ಎದುರು ಅಗತ್ಯವಾದ ‘ಸಿದ್ಧಾಂತ ಮತ್ತು ಕಾರ್ಯತಂತ್ರ’ದ ಸಮತೋಲನ ಸಾಧಿಸಲು ಕಾಂಗ್ರೆಸ್ ವಿಫಲಗೊಂಡಿದೆ. ಒಂದು ಮುಳಗುವ ಹಡಗಿನಂತಿರುವ ಕಾಂಗ್ರೆಸ್ ಪಕ್ಷವು ಇಂದು ಯಾರಿಗೂ ಬೇಕಾಗಿಲ್ಲ. ಬಿಹಾರ್ ಚುನಾವಣೆಯ ಸೋಲಿನ ನಂತರ ಯುಪಿಎ ಮಿತ್ರ ಪಕ್ಷಗಳು ಕಾಂಗ್ರೆಸ್‌ನೊAದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿವೆ.  ಎಲ್ಲರನ್ನೂ ಒಳಗೊಳ್ಳುವ ಒಕ್ಕೂಟ ರಾಜಕಾರಣದ ಪರಿಕಲ್ಪನೆಯನ್ನು ಕಾಂಗ್ರೆಸ್ ಪಕ್ಷವು ಗ್ರಹಿಸುತ್ತಿಲ್ಲ,.

… ಮತ್ತು ಪ್ರಜ್ಞಾವಂತರು ???

1990ರ ದಶಕದಿಂದೀಚೆ ಆರೆಸ್ಸೆಸ್ ಸಮರೋಪಾದಿಯಲ್ಲಿ ಜಾಗತಿಕ/ಪ್ರಾದೇಶಿಕ ಪಲ್ಲಟಗಳನ್ನು ತನ್ನ ತಂತ್ರಗಾರಿಕೆಯಾಗಿ ಪರಿವರ್ತನೆಗೊಳಿಸಿಕೊಳ್ಳುವಲ್ಲಿ ನಿರತವಾಗಿದ್ದಾಗ ಸಾಮಾಜಿಕ ಸಂಘಟನೆಗಳು ಏನು ಮಾಡುತ್ತಿದ್ದವು? ರಚನಾತ್ಮಕ ಕಾರ್ಯಕ್ರಮಗಳ ಕನಸನ್ನು ಬಿತ್ತಲು, ಈ ಜಾಗತೀಕರಣದ ಸಂದರ್ಭದಲ್ಲಿ ನಿಜದ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಜನರ ಮನಸ್ಸಿನಲ್ಲಿ ಅರಳಿಸಲು ಈ ಸಂಘಟನೆಗಳು ವಿಫಲಗೊಂಡವು. ಸಂಘಟನೆಗಳ ಬಳಿ ಆರೆಸ್ಸೆಸ್‌ನ ‘ಸ್ವದೇಶಿ ವಸಾಹತುಶಾಹಿ’ಯ ವಿರುದ್ದ ಯಾವುದೇ ತಂತ್ರಗಳಿರಲಿಲ್ಲ, ‘ಹಿಂದುತ್ವ ಸಂವಿಧಾನವಾದ’ದ ವಿರುದ್ದ ಕಾರ್ಯಯೋಜನೆಗಳಿರಲಿಲ್ಲ. ಕಾಂಗ್ರೆಸ್ ಒಳಗೊಂಡAತೆ ಎಲ್ಲಾ ಪ್ರಾದೇಶಿಕ ಪಕ್ಷಗಳು ‘ಹೊರನೋಟದಲ್ಲಿ ಲಿಬರಲ್, ಮನೋದರ್ಮದಲ್ಲಿ ಫ್ಯೂಡಲ್-ಜಾತಿವಾದಿಗಳು’ ಎಂಬುದರ ಅರಿವಿದ್ದೂ ಸಹ ಪ್ರಗತಿಪರರ ವಾಗ್ವಾದಗಳು ಅರಾಜಕೀಯವಾಗಿದ್ದವು ಮತ್ತು ನಿರ್ವಾತದಲ್ಲಿ ಚಿಂತಿಸಿ ತಮ್ಮೊಳಗೆ ಪ್ರತಿದ್ವಿನಿಸುವಷ್ಟರ ಮಟ್ಟಿಗೆ ಕ್ರಾಂತಿಕಾರಿಯಾಗಿದ್ದವು. ಈ ಹುಸಿತನವನ್ನು ಆರಾಧಿಸಿದ್ದೇವೆ ಎನ್ನುವುದು ಇಂದಿನ ಮೂಲ ಬಿಕ್ಕಟ್ಟು.

ಒಂದು ಉದಾಹರಣೆ ಕೊಡುವುದಾದರೆ ಕೊವಿದ್ ಪೆಂಡಮಿಕ್ ನಂತರ ಇಂದು ಮತ್ತೆ ಎನ್‌ಆರ್‌ಸಿ-ಸಿಎಎ ಸದ್ದು ಮಾಡತೊಡಗಿದೆ. ಆದರೆ ಅದನ್ನು ಈ ಹಿಂದಿನ ರೀತಿ ‘ಹೋರಾಟ-ಸಂಘಟನೆ’ ಮೂಲಕ ಮುಖಾಮುಖಿಯಾಗುತ್ತೇವೆ ಎಂದು ಪೂರ್ವಸಿದ್ಧತೆ, ಮುನ್ನೊಟಗಳಿಲ್ಲದೆ ಬೀದಿಗಿಳಿದರೆ ಅದು ಸೋಲುವುದಕ್ಕೆ ಮುನ್ನುಡಿ ಬರೆದಂತಾಗುತ್ತದೆ. ಅಂಡರ್ಸನ್ ಹೇಳಿದಂತೆ ದೇಶವೆಂಬುದು ಒಂದು ‘ಕಲ್ಪಿತ ಸಮುದಾಯ’.  ಅದೊಂದು ಮನಸ್ಥಿತಿ. ದೇಶಗಳು ರೂಪುಗೊಳ್ಳುತ್ತವೆ ಅಥವಾ ಕಣ್ಮರೆಯಾಗುತ್ತವೆ. ರಾಷ್ಟ್ರೀಯ ಅಸ್ಮಿತೆಯು ಜನಾಂಗೀಯ ಅಸ್ಮಿತೆಯಾಗಿ ರೂಪ ತಾಳುತ್ತದೆ. ಇದು ಅನೇಕ ಸಂಗತಿಗಳ ಮೇಲೆ ನಿರ್ಧರಿತವಾಗುತ್ತದೆ. ಅಚಿನ್ ವನೈಕ್ ಅವರು ‘ಗಮನಾರ್ಹ ಸಂಖ್ಯೆಯ ಜನತೆ ತಮ್ಮನ್ನು ಏಕಾಕೃತಿಯಾಗಿ ಭಾವಿಸಿಕೊಂಡಿರುತ್ತಾರೆ ಮತ್ತು ನಿರ್ದಿಷ್ಟ ವಿಷಯಗಳ ಮೇಲೆ ರಾಜಕೀಯ ನಿಯಂತ್ರಣ ಬಯಸುತ್ತಾರೆ’ ಎಂದು ಹೇಳುತ್ತಾರೆ. ಆರೆಸ್ಸೆಸ್ ಹುಟ್ಟು ಹಾಕಿದ ಈ ಸಂಕೀರ್ಣ ‘ಜನಾಂಗೀಯವಾದ’ದ ‘ಮಾರುಕಟ್ಟೆ ನಾಗರಿಕರು’ ಒಳ ಹರಿವನ್ನು ಅರಿಯದೆ, ಅದಕ್ಕೆ ಸೂಕ್ತ ತಯಾರಿ ಇಲ್ಲದೆ ಬೀದಿ ಹೋರಾಟಕ್ಕೆ ಅಣಿಯಾಗುವುದು ಅರ್ಥಹೀನ. ಈ ಮೂಲಕ ನಾವು ಈಗಾಗಲೇ ಅತಂತ್ರರಾಗಿರುವ, ಅಸಹಾಯಕರಾಗಿರುವ ಮುಸ್ಲಿಂ ಸಮುದಾಯವನ್ನು ಮತ್ತಷ್ಟು ಅಂಚಿಗೆ ತಳ್ಳುತ್ತೇವೆ. ಈ ಬಗೆಯ ಹೋರಾಟಕ್ಕೆ ಭಲೇ ಭಲೇ ಎಂಬಂತಹ ಥಿಯರಿಯನ್ನು ಕಟ್ಟುವುದು ಸುಲಭ. ಆದರೆ ಅದನ್ನು ಪ್ರಯೋಗಕ್ಕಿಳಿಸುವಾಗ ಈ ಹಿಂದಿನ ಅನುಭವಗಳು ಮತ್ತು ಮುಂದೊದಗಬಹುದಾದ ಅಪಾಯಗಳನ್ನು ಗುರುತಿಸದೆ ‘ನಾವು ನಡೆದದ್ದೇ ದಾರಿ’ ಎಂದು ಮುನ್ನುಗ್ಗವುದು ಸಮಸ್ಯಾತ್ಮಕ ನಡೆಯಾಗಿದೆ. ಇದರಿಂದ ಬಹುಸಂಖ್ಯಾತರು ಮತ್ತಷ್ಟು ಒಗ್ಗಟ್ಟಾಗುತ್ತಾರೆ ಮುಖ್ಯವಾಗಿ ‘ಬಲಪಂಥೀಯ ರಾಷ್ಟ್ರೀಯತೆ’ ದೇಶದ ನೀತಿಯಾಗುವುದಕ್ಕೆ ಹಾದಿ ಸುಲಭಗೊಳಿಸಿದಂತಾಗುತ್ತದೆ. ಇದಕ್ಕೂ ಮೊದಲು ದಲಿತ-ಮುಸ್ಲಿಂ ಐಕ್ಯತೆ ಸಾಧಿಸುವುದರ ಕುರಿತು ನಮ್ಮ ಚಿಂತನೆಗಳು, ಕಾರ್ಯ ಯೋಜನೆಗಳನ್ನು ಕೇಂದ್ರಿಕರಿಸುವ ಪ್ರಕ್ರಿಯೆ ಮುಂದಿನ ದಿನಗಳ ರಚನಾತ್ಮಕ ಸಂಘಟನೆಗೆ ಅಗತ್ಯವಾದ ನಡೆಯಾಗಿದೆ.

ಸದ್ಯಕ್ಕೆ ಎಲ್ಲರೂ ಚಣಕಾಲ ಕೂತು ಮೌನದಲ್ಲಿ, ಪಿಸುಮಾತಿನಲ್ಲಿ ಚರ್ಚೆ ಸಂವಾದ ನಡೆಸುವುದು ಮುಖ್ಯ. ಸದ್ಯಕ್ಕೆ ಆಧುನಿಕೋತ್ತರ ಶೈಲಿಯ ಚಮತ್ಕಾರಿಕ ಚಿಂತನೆಗಳನ್ನು ಬದಿಗಿಟ್ಟು  ನಮ್ಮ ಸಾಮಾನ್ಯ ಜ್ಞಾನವನ್ನು ಪುರ‍್ರೂಪಿಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ಆರೆಸ್ಸೆಸ್ ಬಳಿಯಿರುವ ‘ಮಾರುಕಟ್ಟೆ ನಾಗರಿಕರು’ ಎನ್ನುವ ಸಾಂಸ್ಕೃತಿಕ ಸ್ಪೋಟಕವನ್ನು ಪರಿಣಾಮಹೀನಗೊಳಿಸಲು ಅಗತ್ಯವಾದ ‘ಪ್ರತಿ ಸಂಸ್ಕೃತಿ’ಯನ್ನು ಕಟ್ಟುವುದು ಹೇಗೆ ಎಂಬುದರ ಕುರಿತು ಪ್ರಾಮಾಣಿಕವಾಗಿ, ಕಡುನಿಷ್ಟೆಯಿಂದ brainstorming ಮಾಡಿಕೊಂಡರೆ ಮಾತ್ರ ಬಹುಸಂಖ್ಯಾತರು brainwashing ಗೆ ಒಳಗಾಗದಂತೆ ತಡೆಯುವುದಕ್ಕೆ ಒಂದು ಹೊಸ ದಾರಿಯನ್ನು ಗುರುತಿಸಬಹುದು. ಇಲ್ಲದೇ ಹೋದರೆ ನಮ್ಮೆಲ್ಲರ ಆಸ್ತಿತ್ವವೇ ಅಪ್ರಸ್ತುತವಾಗುತ್ತದೆ.

***************

 

 

Donate Janashakthi Media

Leave a Reply

Your email address will not be published. Required fields are marked *