ಬೆಂಗಳೂರು : ಪ್ರಕರಣ ಒಂದರಲ್ಲಿ ದೂರು ದಾಖಲಿಸದ (ಎಫ್.ಐ.ಆರ್) ಠಾಣಾಧಿಕಾರಿಗೆ ಕರ್ನಾಟಕ ರಾಜ್ಯದ ಹೈಕೋರ್ಟಿನ ಕಲುಬುರುಗಿ ಪೀಠವು ಕಸಗುಡಿಸುವ ಶಿಕ್ಷೆ ವಿಧಿಸಿದೆ ಎಂದು ಮಾಧ್ಯಮಗಳಲ್ಲಿ ವರದಿವಾಗಿದೆ.
ಪುತ್ರ ಕಾಣೆಯಾಗಿದ್ದಾನೆಂದು ಮಹಿಳೆ ನೀಡಿದ ದೂರು ಸ್ವೀಕರಿಸಿ, ಎಫ್‌ಐಆರ್ ದಾಖಲಿಸದೆ ನಿರ್ಲಕ್ಷ್ಯ ತೋರಿದ ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯ ಠಾಣಾಧಿಕಾರಿಗೆ ಹೈಕೋರ್ಟ್, ಕಸ ಗುಡಿಸುವ ಶಿಕ್ಷೆ ವಿಧಿಸಿದೆ. ಕಲಬುರಗಿ ಮಿಣಜಗಿ ತಾಂಡಾದ ಕೂಲಿ ಮಹಿಳೆ ತಾರಾಬಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಫಸ್ ಅರ್ಜಿಯ ಮನವಿ ಆಲಿಸಿದ ನ್ಯಾ.ಎಸ್.ಸುನಿಲ್ ದತ್ ಯಾದವ್ ಮತ್ತು ನ್ಯಾ.ಪಿ.ಕೃಷ್ಣಭಟ್ ಅವರಿದ್ದ ಕಲಬುರಗಿ ಪೀಠ ಈ ಆದೇಶ ನೀಡಿದೆ.
ಈ ದೂರಿಗೆ ಸಂಬಂಧಿಸಿದ “ಮಗ ಸುರೇಶ್ ಕಾಣೆಯಾಗಿರುವ ಬಗ್ಗೆ ದೂರು ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ಕರ್ತವ್ಯ ಲೋಪವಾಗುತ್ತದೆ. ಹಾಗಾಗಿ ಠಾಣಾಧಿಕಾರಿ ಒಂದು ವಾರ ಠಾಣೆಯ ಮುಂಭಾಗದ ರಸ್ತೆಯನ್ನು ಸ್ವಚ್ಚಗೊಳಿಸಬೇಕು,” ಎಂದು ನ್ಯಾಯಪೀಠ ಆದೇಶ ನೀಡಿದೆ.
ಈ ಪ್ರಕರಣದ ತೀರ್ಪು ನಾಗರಿಕ ಸಮಾಜದ ಆರೋಗ್ಯವನ್ನು ಕಾಪಡಲು ತಮ್ಮ ಪ್ರಾಣಗಳನ್ನು ಒತ್ತೆ ಇಟ್ಟು ಸಾಕ್ರಾಂಮಿಕ ಆರೋಗ್ಯಗಳಾದ ಕೋವಿಡ್ 19, ಚಿಕ್ಕನ್‍ಗೂನ್ಯ, ಮಲೇರಿಯಾ, ಗಳಂತಹ ಸಂದರ್ಭಗಳಲ್ಲಿ ಊರಿನ ಕಸಗುಡಿಸುವ ಪೌರಕಾರ್ಮಿಕರಿಗೆ ನೋವು ಅವಮಾನ ಉಂಟುಮಾಡಿದೆ. ಕಸಗುಡಿಸುವುದು ದೇಶದ ಯಾವ ಕಾನೂನಿನಡಿಯಲ್ಲಿ ಶಿಕ್ಷೆ ಎಂದು ಕರ್ನಾಟಕ ರಾಜ್ಯ ಮುನಿಸಿಪಾಲ್ ಕಾರ್ಮಿಕರ ಸಂಘ [ರಿ] ಸಿಐಟಿಯುನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಪ್ರಶ್ನಿಸಿದ್ದಾರೆ.
ಗೌರವಾನ್ವಿತ ನ್ಯಾಯಮೂರ್ತಿಗಳ ಹಾಗು ನ್ಯಾಯಪೀಠದ ಈ ಅಭಿಪ್ರಾಯವು ಒಪ್ಪತಕ್ಕದಲ್ಲ ಎಂದು ಸಂಘವು ಬೇಸರ ವ್ಯಕ್ತಪಡಿಸಿದೆ. ನಾಗರಿಕ ಸಮಾಜ ಮತ್ತು ಸರ್ಕಾರಗಳು ಸ್ವಚತೆಯ ಕೆಲಸ ಹಾಗು ಕೆಲಸಮಾಡುವವರ ಬಗ್ಗೆ ತಾತ್ಸಾರ ಹಾಗು ಕೀಳು ಭಾವನೆ ಹೊಂದಿರುವುದರ ಪ್ರತೀಕವೆ. ಇಂತಹ ಮನಸ್ಸಿತಿಗೆ ಕಾರಣ ಎಂದಿರುವ ಮುನಿಸಿಪಲ್ ಕಾರ್ಮಿಕರ ಸಂಘ , ಊರಿನ ಸ್ವಚತೆ ಮಾಡದೆ ಪೌರ ಕಾರ್ಮಿಕರು ಕೆಲಸ ನಿಲ್ಲಿಸಿದರೆ ಊರೂರು ಕೊಳಕು, ರೋಗ ರುಜಿನಗಳಿಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗಾಗಿ ಈ ಕೆಲಸವು ನಾಗರಿಕ ಸಮಾಜದ ಸ್ವಸ್ಥ ಕಾಪಾಡುವ ಕೆಲಸವಾಗಿದೆ ಎಂದು ಕರ್ನಾಟಕ ರಾಜ್ಯ ಮುನಿಸಿಪಾಲ್ ಕಾರ್ಮಿಕರ ಸಂಘ [ರಿ] ಸಿಐಟಿಯುನ ರಾಜ್ಯಾಧ್ಯಕ್ಷರು ಹರಿಶ್ ನಾಯಕ್ ತಿಳಿಸಿದ್ದಾರೆ.
ರಾಜ್ಯದ ಮುನಿಸಿಪಾಲಿಟಿಗಳಲ್ಲಿ ಕನಿಷ್ಟ ಕೂಲಿ, ರಕ್ಷಣಾ ಸಲಕರಣೆ, 8-12 ತಿಂಗಳುಗಳು ಕಳೆದರು ಸಂಬಳಗಳಿಲ್ಲದೆ ದುಡಿಯುತ್ತಿರುವ ಎಲ್ಲಾ ಮುನಿಸಿಪಲ್ ಕಾರ್ಮಿಕರ ಸಮಸ್ಯೆಗಳತ್ತ ಗಮನ ಹರಿಸಿ ಬಗೆಹರಿಸಲು ಕರ್ನಾಟಕ ರಾಜ್ಯ ಮುನಿಸಿಪಾಲ್ ಕಾರ್ಮಿಕರ ಸಂಘ [ರಿ] ಸಿಐಟಿಯು ರಾಜ್ಯ ಸಮಿತಿ ಒತ್ತಾಯಿಸಿದೆ.
ಪೌರ ಕಾರ್ಮಿಕರನ ಮೇಲೆ ಪೋಲಿಸ್ ಹಲ್ಲೆ – ಖಂಡನೆ
ಬೆಂಗಳೂರಿನಲ್ಲಿ ಕಸದ ಅಟೋಚಾಲಕನ ಮೇಲೆ ಪೋಲಿಸ್ ಇನ್ಸ್‍ಪೇಕ್ಟರ್ ನಡೆಸಿರುವ ಹಲ್ಲೆಯನ್ನು ಕರ್ನಾಟಕ ರಾಜ್ಯ ಮುನಿಸಿಪಾಲ್ ಕಾರ್ಮಿಕರ ಸಂಘ ಸಿಐಟಿಯು ಖಂಡಿಸಿದೆ. ಈ ಹಲ್ಲೆ ನಡೆಸಿರುವ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ.