ಬೆಂಗಳೂರು : ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಬೆಂಗಳೂರಿನ ರಾಜ್ಯ ಮಟ್ಟದ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮನ್ವಯ ಸಮಿತಿ ಕಾರ್ಯಕರ್ತರು ಭಾಗವಹಿಸಿರುವ ಮೂರನೇ ದಿನದ ಅನಿರ್ದಿಷ್ಟಾವಧಿ ಧರಣಿಯನ್ನು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ ಎಸ್ ) ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜು ಉದ್ಘಾಟಿಸಿದರು.
ಇಡೀ ಕೃಷಿ ಉತ್ಪಾದನೆ ಹಾಗೂ ಆಹಾರ ಮಾರುಕಟ್ಟೆಯ ಮೇಲೆ ಕಾರ್ಪೊರೇಟ್ ಕಂಪನಿಗಳು ಹಿಡಿತ ಸಾಧಿಸಲು ಹುನ್ನಾರ ನಡೆಸಿ ಈ ಕಾಯ್ದೆಗಳನ್ನು ಜಾರಿ ಮಾಡಿಸಿಕೊಂಡಿವೆ. ಇದರಿಂದ ಇಡೀ ದೇಶದಲ್ಲಿ ಈಗಾಗಲೇ ಇರುವ ನಿರುದ್ಯೋಗ-ಬಡತನ-ಹಸಿವು ಮತ್ತಷ್ಟು ಹೆಚ್ಚಲಿದೆ. ದೇಶವನ್ನು ಅರಾಜಕ ಪರಿಸ್ಥಿತಿಗೆ ದೂಡುವ ಇಂತಹ ಕಾಯ್ದೆಗಳನ್ನು ರೈತರ ಬಲಿಷ್ಠ ವಿರೋಧದ ನಡುವೆಯೂ ಸಮರ್ಥಿಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಯು.ಬಸವರಾಜು ಅಭಿಪ್ರಾಯ ಪಟ್ಟರು.
ಇಂದಿನ ಪ್ರತಿಭಟನೆ ನೇತೃತ್ವವನ್ನು ಕರ್ನಾಟಕ ಜನಶಕ್ತಿ ಸಂಘಟನೆಯ ಸಿರಿಮನೆ ನಾಗರಾಜ್ ,ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ರಾಮಸ್ವಾಮಿ,ರಾಜ್ಯ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ,ಮುಖಂಡರಾದ ಕೆಂಪೂಗೌಡ,ಹೊಸಕೊಟೆ ಬಸವರಾಜು, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನಿತ್ಯಾನಂದಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ಟಿ ಯಶವಂತ ,ದಲಿತ ಸಂಘರ್ಷ ಸಮನ್ವಯ ಸಮಿತಿ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು,ಮಾವಳ್ಳಿ ಶಂಕರ್, ವಿ ನಾಗರಾಜ್ ಸಮಾಜವಾದಿ ಸಭಾದ ಆಲಿಬಾಬಾ ಮುಂತಾದವರು ವಹಿಸಿದ್ದಾರೆ.