ಹತ್ರಾಸ್ ಪ್ರಕರಣ : ಸುಪ್ರೀಂ ಕೋರ್ಟಿನ ಮೇಲ್ ವಿಚಾರಣೆ ತನಿಖೆಗೆ ಆಗ್ರಹ

ಬೆಂಗಳೂರು :ಉತ್ತರ ಪ್ರದೇಶದ ಹತ್ರಾಸ್ ಪ್ರಕರಣವನ್ನು ಸುಪ್ರೀಂ ಕೋರ್ಟಿನ ಮೇಲ್ವಿಚಾರಣೆಯಲ್ಲಿ ನಿಗಧಿತ ಅವಧಿಯಲ್ಲಿ ತನಿಖೆ ಮಾಡಲು ಮತ್ತು ದಲಿತರು, ಮಹಿಳೆಯರು ಮತ್ತು ಸಾಮಾಜಿಕವಾಗಿ ಹಿಂದುಳಿದವರ ಮೇಲಿನ ದೌರ್ಜನ್ಯಗಳ ತಡೆಯಲು ಕೆ.ಪಿ.ಆರ್.ಎಸ್., ಜೆಎಂಎಸ್, ಸಿಐಟಿಯು, ಎಐಎಡಬ್ಲೂಯು, ಡಿವೈಎಫ್‍ಐ ಸಂಘಟನೆಗಳು ಒತ್ತಾಯಿಸಿವೆ.

ಉತ್ತರಪ್ರದೇಶದ ಹತ್ರಾಸ್ ನ ಮೇಲ್ದಾತಿ ಭೂಮಾಲಕರು 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅವಳನ್ನು ಬರ್ಬರವಾಗಿ ಕೊಲೆ ಮಾಡಿದ್ದು, ಅತ್ಯಂತ ಅಮಾನುಷ ಕೃತ್ಯವಾಗಿದ್ದು ಇಡೀ ದೇಶವನ್ನೇ ಅದು ಬೆಚ್ಚಿಬೀಳುವಂತೆ ಮಾಡಿದೆ. ಈ ಕ್ರೂರ ಕೃತ್ಯದ ವಿರುದ್ಧ ಇಡೀ ದೇಶದಲ್ಲಿ ಜನ ಬೀದಿಗಿಳಿದಿದ್ದಾರೆ. ಆದರೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಮಾತ್ರ ಕನಿಷ್ಠ ಮಾನ ಮರ್ಯಾದೆ ಇಲ್ಲದೆ ಅಪರಾಧಿಗಳಿಗೆ ರಕ್ಷಣೆ ನೀಡುವುದರಲ್ಲಿ ಸಾಕ್ಷಿ ಪುರಾವೆಗಳನ್ನು ನಾಶ ಮಾಡುವುದರಲ್ಲಿ ಮತ್ತು ನೊಂದ ಕುಟುಂಬವನ್ನು ಬೆದರಿಸುವ ಮೇಲಾತಿ ಭೂಮಾಲಕ ಶಕ್ತಿಗಳಿಗೆ ಬಹಿರಂಗ ಬೆಂಬಲ ನೀಡುವುದರಲ್ಲಿ ಮಗ್ನವಾಗಿದೆ.

ದೌರ್ಜನ್ಯಕ್ಕೆ ಒಳಗಾಗಿ ಮೃತಪಟ್ಟ ಯುವತಿ ಬಡ ಕೃಷಿ ಕೂಲಿಕಾರ ದಲಿತ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ. ಈ ಹಿನ್ನಲೆಯಲ್ಲಿ ಆ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲು ಸಂಘಟನೆಗಳು ರಾಜ್ಯದಾದ್ಯಂತ ಜಿಲ್ಲಾಧಿಕಾರಿ ಕಛೇರಿ ಮತ್ತು ತಾಲ್ಲೂಕು ಕಛೇರಿ ಎದುರು ಪ್ರತಿಭನೆಯನ್ನು ನಡೆಸಿವೆ.

ಚಿಕ್ಕಬಳ್ಳಾಪುರ ಜಿಲ್ಲೆ ಯ ಗುಡಿಬಂಡೆ, ಬಳ್ಳಾರಿಯ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕುರುಗೋಡು, ಹೊಸಪೇಟೆ, ರಾಯಚೂರು ಜಿಲ್ಲೆಯ ಮಾನ್ವಿ, ರಾಯಚೂರು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಮುಂಡಗೋಡ, ಹಾಸನ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ ಮುಂತಾದ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿವೆ.

Donate Janashakthi Media

Leave a Reply

Your email address will not be published. Required fields are marked *