ನ.26 ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ

ಕಾರ್ಮಿಕರ ರಾಷ್ಟ್ರೀಯ ಸಮಾವೇಶದ ಕರೆ

ಅಕ್ಟೋಬರ್ 2 ಗಾಂಧೀ ಜಯಂತಿ ದಿನದಂದು ನಡೆದ ಆನ್‍ಲೈನ್‍ ರಾಷ್ಟ್ರೀಯ ಕಾರ್ಮಿಕರ ಸಮಾವೇಶದಲ್ಲಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ರಾಷ್ಟ್ರೀಯ ಒಕ್ಕೂಟಗಳು ಬಿಜೆಪಿ ಸರಕಾರದ ಕಾರ್ಮಿಕ-ವಿರೋಧಿ, ರೈತ-ವಿರೋಧಿ, ಜನ-ವಿರೋಧಿ ಮತ್ತು ರಾಷ್ಟ್ರ-ವಿರೋಧಿ ಧೋರಣೆಗಳ ವಿರುದ್ಧ ನವಂಬರ್ 26, 2020ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸುವುದಾಗಿ ಘೋಷಿಸಿವೆ.

ಕೇಂದ್ರದಲ್ಲಿನ ಮತ್ತು ಕೆಲವು ರಾಜ್ಯಗಳಲ್ಲಿನ ಬಿಜೆಪಿ ಸರಕಾರಗಳು ಕಾರ್ಮಿಕರು, ರೈತರು ಮತ್ತು ಜನಸಾಮಾನ್ಯರ ಮೂಲ ಪ್ರಜಾಸತ್ತಾತ್ಮಕ ಮತ್ತು ಸಂವಿಧಾನಿಕ ಹಕ್ಕುಗಳ ಮೇಲೆ ಆಕ್ರಮಣ ನಡೆಸುತ್ತಿವೆ ಎಂದು ರಾಷ್ಟ್ರೀಯ ಸಮಾವೇಶ ಬಲವಾಗಿ ಖಂಡಿಸಿದೆ. ಖಾಸಗೀಕರಣ, ಕಾರ್ಪೊರೇಟೀಕರಣ, ಎಫ್‍ಡಿಐ ಮುಂತಾದವುಗಳಿಗೆ ರೈಲ್ವೆ, ಕಲ್ಲಿದ್ದಲು, ಬಿಪಿಸಿಎಲ್‍, ಬಿಎಸ್‍ಎನ್‍ಎಲ್‍, ಹಣಕಾಸು ವಲಯ ಮುಂತಾದ ವಿವಿಧ ವಲಯಗಳಲ್ಲಿ ಸಮರಶೀಲ ಪ್ರತಿರೋಧಗಳು ಎದ್ದು ಬರುತ್ತಿವೆ ಎಂದಿರುವ ರಾಷ್ಟ್ರೀಯ ಸಮಾವೇಶ ಉತ್ತರಪ್ರದೆಶಧ ವಿದ್ಯುಚ್ಛಕ್ತಿ ನೌಕರರು, ಕಲ್ಲಿದ್ದಲು ಮತ್ತು ರಕ್ಷಣಾ ವಲಯದ ಹೋರಾಟಗಳಿಗೆ ಬೆಂಬಲವಾಗಿ ನಿರ್ಣಯಗಳನ್ನು ಅಂಗೀಕರಿಸಿತು.

ರಕ್ಷಣಾ ವಲಯದ ಕಾರ್ಮಿಕರ ಮುಷ್ಕರಕ್ಕೆ ಬೆಂಬಲವಾಗಿ ಅಕ್ಟೋಬರ್ 12ರಂದು ದೇಶಾದ್ಯಂತ ಸೌಹಾರ್ದ ಪ್ರತಿಭಟನೆಗಳನ್ನು ನಡೆಸಬೇಕು, ಆಮೇಲೆ ಪತ್ರಿ ವಾರ ಮುಷ್ಕರ ಗೌರವಪೂರ್ಣವಾಗಿ ಇತ್ಯರ್ಥವಾಗು ವರೆಗೆ ಈ ಸೌಹಾರ್ದ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಸಮಾವೇಶ ನಿರ್ಧರಿಸಿತು.

ಸಮಾವೇಶ ರೈತ-ವಿರೋಧಿ ಕಾನೂನುಗಳ ವಿರುದ್ಧ ರೈತರ ಹೋರಾಟಗಳಿಗೆ ಸಂಪೂರ್ಣ ಸೌಹಾರ್ದವನ್ನು ವ್ಯಕ್ತಪಡಿಸಿತು.

ಜಿ.ಸಂಜೀವ ರೆಡ್ಡಿ(ಐಎನ್‍ಟಿಯುಸಿ), ಅಮರಜಿತ್‍ ಕೌರ್(ಎಐಟಿಯುಸಿ), ಹರ್ಬಜನ್‍ ಸಿಂಗ್‍ ಸಿಧು(ಹೆಚ್‍ಎಂಎಸ್‍) ತಪನ್‍ ಸೆನ್‍ (ಸಿಐಟಿಯು) , ಶಂಕರ್‍ ದಾಸ್‍ಗುಪ್ತ (ಎಐಯುಟಿಯುಸಿ), ಜಿ.ದೇವರಾಜನ್‍(ಟಿಯುಸಿಸಿ) , ಸೊಲ್ನಿಯ ಜಾರ್ಜ್( ಎಸ್‍ಇಡಬ್ಲ್ಯುಎ) , ಸಂತೋಷ್‍ ರಾಯ್ (ಎಐಸಿಸಿಟಿಯು) , ಎಂ.ಷಣ್ಮುಗಂ(ಎಲ್‍ಪಿಎಫ್‍) ಮತ್ತು ಶತ್ರುಜಿತ್‍ (ಯುಟಿಯುಸಿ) ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಫೇಸ್‍ಬುಕ್‍ನಲ್ಲಿ ಪ್ರಸಾರವಾದ ಈ ಸಮಾವೇಶದಲ್ಲಿ ವಿವಿಧ ಲಿಂಕ್‍ಗಳ ಮೂಲಕ ಒಂದು ಲಕ್ಷಕ್ಕೂ ಹೆಚ್ಚು  ಕಾರ್ಮಿಕರು ಭಾಗವಹಿಸಿದರು ಎಂದು ಸಮಾವೇಶದ ಸಂಘಟನಾಕಾರರು ಹೇಳಿದ್ದಾರೆ.

ಸಮಾವೇಶ ಈ ಕೆಳಗಿನ ಕಾರ್ಯಕ್ರಮವನ್ನು ಅಂಗೀಕರಿಸಿತು:

  • ಅಕ್ಟೋಬರ್‍ 2020ರಲ್ಲಿ ಜಂಟಿ ರಾಜ್ಯ/ಜಿಲ್ಲಾ/ಕೈಗಾರಿಕಾವಾರು/ ವಲಯ ಮಟ್ಟದ ಸಮಾವೇಶಗಳನ್ನು ನಡೆಸಲಾಗುವುದು(ಸಾಧ್ಯವಾದಲ್ಲಿ ಭೌತಿಕವಾಗಿ, ಇಲ್ಲವಾದಲ್ಲಿ ಅನ್‍ಲೈನ್)
  • ನವಂಬರ್‍ ಮಧ್ಯಭಾಗದ ವರೆಗೆ ಬುಡಮಟ್ಟದ ಕಾರ್ಮಿಕರ ವರೆಗೆ ಈ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಪ್ರಚಾರ
  • 26 ನವಂಬರ್‍ 2020, ಒಂದು ದಿನದ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ. ಈ ಒಂದು ದಿನದ ಮುಷ್ಕರ ಮುಂಬರುವ ಹೆಚ್ಚು ತೀವ್ರವಾದ, ದೀರ್ಘವಾದ ಹೋರಾಟಗಳಿಗೆ ಸಿದ್ಧತೆ.

ಇದರಲ್ಲಿ ಎಲ್ಲ ದುಡಿಯುವ ಜನಗಳೂ ಐಕ್ಯತೆಯಿಂದ ಭಾಗವಹಿಸಬೇಕು ಎಂದು ರಾಷ್ಟ್ರೀಯ ಕಾರ್ಮಿಕರ ಸಮಾವೇಶ ಕರೆ ನೀಡಿದೆ.

 

Donate Janashakthi Media

Leave a Reply

Your email address will not be published. Required fields are marked *